
ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಹಾಗೂ ಹಿಟ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಹೊಸ ಚಿತ್ರದ ಚಿತ್ರಕತೆ ಸಂಪೂರ್ಣ ಸಿದ್ಧವಾಗಿದ್ದು, 2027ರಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಜೂನಿಯರ್ ಎನ್‌ಟಿಆರ್ ಸದ್ಯ ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಕಠಿಣ ಡಯಟ್ ಮತ್ತು ಶ್ರಮ ವಹಿಸುತ್ತಿದ್ದು, ಆ ಚಿತ್ರದ ಬಳಿಕ ಈ ಹೊಸ ಯೋಜನೆ ಕೈಗೆತ್ತಿಕೊಳ್ಳಲಿದ್ದಾರೆ. ತಮ್ಮ ಮುಂಬರುವ ‘ಆದರ್ಶ ಕುಟುಂಬಂ’ ಚಿತ್ರದ ಪ್ರಚಾರದ ವೇಳೆ ಜನಪ್ರಿಯ ನಿರೂಪಕಿ ಸುಮಾ ಅವರ ಸಂದರ್ಶನದಲ್ಲಿ ಭಾಗವಹಿಸಿದ್ದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಈ ಬಹುನಿರೀಕ್ಷಿತ ಚಿತ್ರದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಈ ಹಿಂದೆ ಜೂನಿಯರ್ ಎನ್‌ಟಿಆರ್ ಅವರಿಗೆ ‘ಅರವಿಂದ ಸಮೇತ ವೀರ ರಾಘವ’ ಎಂಬ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ್ದ ತ್ರಿವಿಕ್ರಮ್, ಈ ಬಾರಿ ಯುದ್ಧದ ದೇವತೆ ಕಾರ್ತಿಕೇಯ ಅಥವಾ ಮುರುಗನ್ ಸ್ವಾಮಿಯ ಹಿನ್ನೆಲೆಯುಳ್ಳ ರೋಚಕ ಕಥಾಹಂದರವನ್ನು ಸಿದ್ಧಪಡಿಸಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಮುರುಗನ್ ದೇವರ ಆಯುಧದೊಂದಿಗೆ ಡಿಎನ್‌ಎ (DNA) ಚಿತ್ರವೂ ಕಾಣಿಸಿಕೊಂಡಿದ್ದು, ಪೌರಾಣಿಕ ವಿಷಯದ ಜೊತೆಗೆ ಆಧುನಿಕ ವಿಜ್ಞಾನವನ್ನು ಬೆಸೆದುಕೊಂಡಿರುವ ಸುಳಿವು ಸಿಕ್ಕಿದೆ. ಇನ್ನು ಪ್ರಚಾರದಲ್ಲಿರುವ ‘ಗಾಡ್ ಆಫ್ ವಾರ್’ ಎಂಬುದು ಚಿತ್ರದ ಟ್ಯಾಗ್‌ಲೈನ್ ಮಾತ್ರವಾಗಿದ್ದು, ಶೀರ್ಷಿಕೆಯನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿರುವ ನಿರ್ದೇಶಕರು, 2027ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.


More Stories
ದಕ್ಷಿಣದಲ್ಲಿ ಮೂರೇ ಚಿತ್ರ: ನಾನಾ ಪಟೇಕರ್
ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಿಕ್ಕಣ್ಣಗೆ ಕೋರ್ಟ್ ಸಮನ್ಸ್
ಪ್ರೇಮದ ಊರಲಿ ಸಿನಿಮಾದ ನಾಯಕಿಯರ ಹೆಸರಿನ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಮನೋಜ್ ಕುಮಾರ್