
ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ, ಅಪ್ರಾಪ್ತ ವಯಸ್ಕರ ಗರ್ಭಧಾರಣೆ ತಡೆಗೆ ಎಲ್ಲರ ಸಹಕಾರ ಅಗತ್ಯ:
ಹೊಸಪೇಟೆ: ಬಾಲ್ಯವಿವಾಹ ಸಮಾಜಕ್ಕೆ ಅಂಟಿದ ದೊಡ್ಡ ಪಿಡುಗಾಗಿದ್ದು, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ವಿಜಯನಗರ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಸಾರ್ವಜನಿಕರ ಸಹಕಾರ ಹಾಗೂ ವಿವಿಧ ಇಲಾಖೆಗಳ ಸಮನ್ವಯತೆ ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಕ್ಕುಗಳ ಸಬಲೀಕರಣ ಕುರಿತ ಜಿಲ್ಲಾಮಟ್ಟದ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಹಾಗೂ ಕಠಿಣ ಕಾನೂನುಗಳಿದ್ದರೂ ಬಾಲ್ಯವಿವಾಹಗಳು ನಡೆಯುತ್ತಿರುವುದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಕೇವಲ ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಮಾತ್ರ ಗಮನಿಸದೆ, ಅಧಿಕಾರಿಗಳು ಇದನ್ನು ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಾಗಿ ತೆಗೆದುಕೊಂಡು ತಡೆಗಟ್ಟಲು ಮುಂದಾಗಬೇಕು. ಅದರಲ್ಲೂ ಮುಖ್ಯವಾಗಿ ಕೊಟ್ಟೂರು, ಹೂವಿನಹಡಗಲಿ ಹಾಗೂ ಕೂಡ್ಲಿಗಿ ಭಾಗಗಳಲ್ಲಿ ದೀಪಾವಳಿ ಹಬ್ಬದ ನಂತರ ಜನರು ಕೆಲಸಕ್ಕಾಗಿ ಗುಳೆ ಹೋಗುತ್ತಾರೆ. ಈ ಸಂದರ್ಭದಲ್ಲಿ ವೃದ್ಧರ ಆಶ್ರಯದಲ್ಲಿ ಉಳಿಯುವ ಹೆಣ್ಣುಮಕ್ಕಳು ಬಾಲ್ಯವಿವಾಹದಂತಹ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುವುದರಿಂದ, ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ನಿಗಾ ಹಾಗೂ ಜಾಗೃತಿ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಮಲ್ಲೇಶ ದೊಡ್ಡಮನಿ ಅವರು, ಜಾಗೃತಿಯ ನಡುವೆಯೂ ಗ್ರಾಮೀಣ ಭಾಗಗಳಲ್ಲಿ ಬಾಲ್ಯವಿವಾಹ ಹಾಗೂ ಅಪ್ರಾಪ್ತ ವಯಸ್ಕರ ಗರ್ಭಧಾರಣೆ ಪ್ರಕರಣಗಳು ವರದಿಯಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿ ಎಂದರು. ಶಾಲೆಯಿಂದ ಹೊರಗುಳಿಯುವ ಮಕ್ಕಳು ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ತುತ್ತಾಗುತ್ತಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಶಾಲಾ-ಕಾಲೇಜು ಮತ್ತು ಹಳ್ಳಿಗಳಲ್ಲಿ ‘ವಿಜಯ ಪಡೆ’ಯ ಮೂಲಕ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ‘ಗುಡ್ ಟಚ್-ಬ್ಯಾಡ್ ಟಚ್’ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ ಕೆ. ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಾಗಾರದಲ್ಲಿ ಯುನಿಸೆಫ್ ಯೋಜನೆ ಪ್ರಾದೇಶಿಕ ಸಂಯೋಜಕ ಡಾ. ಕೆ. ರಾಘವೇಂದ್ರ ಭಟ್ ಅವರು ಮಕ್ಕಳ ಹಕ್ಕುಗಳ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ಹಾಗೂ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತು ಉಪನ್ಯಾಸ ನೀಡಿದರು. ಸಂಯೋಜಕ ಹರೀಶ್ ಜೋಗಿ ಹಾಗೂ ಸಿಸ್ಟರ್ ದುಲ್ಸಿನ್ ಕ್ರಾಸ್ಟಾ ಅವರು ಮಕ್ಕಳ ರಕ್ಷಣಾ ವ್ಯವಸ್ಥೆಯ ಬಲವರ್ಧನೆ ಮತ್ತು ಮುಂದಿನ ಕ್ರಿಯಾ ಯೋಜನೆಯ ಕುರಿತು ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮುದುಕಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಧೀರ್ ಕುಮಾರ್, ವಿವಿಧ ಇಲಾಖೆಗಳ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕೇತರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಶರಣಪ್ಪ ಜಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


More Stories
ಸಿನಿಮಾಗಳ ಮೂಲಕ ಸಾಮಾಜಿಕ ವಾಸ್ತವಗಳ ಅನಾವರಣ: ಡಾ. ವೆಂಕಟಗಿರಿ ದಳವಾಯಿ
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್