November 1, 2026

Hampi times

Kannada News Portal from Vijayanagara

14 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಅಭಿನಂದನಾ ಸನ್ಮಾನ , ಇಂಗ್ಲಿಷ್‌ ನಡುವೆಯೂ ಕನ್ನಡ ಬಳಕೆ ಹೆಚ್ಚಲಿ: ಸಚಿವ ಕೆ.ಎಸ್. ಬಸವಂತಪ್ಪ

ಹಂಪಿ ಟೈಮ್ಸ್ ಹೊಸಪೇಟೆ:

ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದ್ದು, ಆಧುನಿಕ ತಂತ್ರಜ್ಞಾನದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡವನ್ನು ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಕರೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ದೇಶದಲ್ಲಿಯೇ ಅತಿ ಹೆಚ್ಚು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆ ಕನ್ನಡ ಭಾಷೆಗಿದ್ದು, ಇದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.

ವಿಜಯನಗರ ಸಾಮ್ರಾಜ್ಯ ಭಾರತದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿದ್ದು, ವಿಶ್ವ ಪಾರಂಪರಿಕ ತಾಣವಾದ ಹಂಪಿ ನಮ್ಮ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಸುಮಾರು ನೂರು ವರ್ಷಗಳ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಕನ್ನಡ ಭಾಷಾವಾರು ಪ್ರದೇಶಗಳು ಒಂದಾಗಿ ಕರ್ನಾಟಕ ಏಕೀಕರಣಗೊಂಡವು. ಈ ಹೋರಾಟದಲ್ಲಿ ತ್ಯಾಗ ಮಾಡಿದ ಆಲೂರು ವೆಂಕಟರಾಯರು ಸೇರಿದಂತೆ ಎಲ್ಲ ಮಹನೀಯರು ಹಾಗೂ ಹೋರಾಟಗಾರರನ್ನು ಸ್ಮರಿಸುವುದು ನಮ್ಮ ಕರ್ತವ್ಯ.

1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ಕನ್ನಡ ಭಾಷೆಯ ರಕ್ಷಣೆಗೆ ಆದ್ಯತೆ ನೀಡಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶವಿದೆ ಎಂದರು.

ಪೋಷಕರು ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಬೇಕು. ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡುವುದರ ಜತೆಗೆ ಮಾತೃಭಾಷೆಯ ಮಹತ್ವವನ್ನೂ ತಿಳಿಸಬೇಕು. ಜಿಲ್ಲೆಯಾದ್ಯಂತ ನವೆಂಬರ್ ತಿಂಗಳಿಡೀ ಕನ್ನಡ ಹಬ್ಬದ ವಾತಾವರಣ ನಿರ್ಮಿಸಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಸಹಬಾಳ್ವೆ, ಶಾಂತಿ ಮತ್ತು ಸಮರಸತೆಯಿಂದ ನಾಡಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.


14 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಶಿಲ್ಪಕಲೆ, ಭರತನಾಟ್ಯ, ರಂಗಭೂಮಿ, ಡೊಳ್ಳು ವಾದನ, ಸಮಾಜಸೇವೆ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 14 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಶಿಲ್ಪಕಲಾ ಕ್ಷೇತ್ರ: ಎ. ವಿಶ್ವನಾಥ ಆಚಾರ್ಯ (ಬುಕ್ಕಸಾಗರ ಗ್ರಾಮ, ಹೊಸಪೇಟೆ)
ರಂಗಭೂಮಿ/ನಾಟಕ: ಹರೀಶ್ ಕುಮಾರ್ ಟಿ. (ಕಲ್ಲಹಳ್ಳಿ, ಕೂಡ್ಲಿಗಿ)
ರಂಗಭೂಮಿ ಮತ್ತು ಬಯಲಾಟ: ಎನ್. ಪವಿತ್ರ (ಗೊಲ್ಲರಹಳ್ಳಿ, ಹೊಸಪೇಟೆ)
ಹಿಂದೂಸ್ತಾನಿ ಸಂಗೀತ: ತಿಮ್ಮಣ್ಣ ಭೀಮರಾಯ (ಕಮಲಾಪುರ)
ಸಂಗೀತ ಕ್ಷೇತ್ರ (ಅಂಧ ಕಲಾವಿದರು): ಮಲ್ಲಿಕಾರ್ಜುನ ತುರುವನೂರು (ಹೊಸಪೇಟೆ)
ಡೊಳ್ಳು: ಎನ್. ಬಸವರಾಜ (ಕೊಂಡನಾಯಕನಹಳ್ಳಿ)

ಭರತನಾಟ್ಯ: ಎಂ. ಅಲ್ಲಾಬಕ್ಷ (ಹೊಸಪೇಟೆ)

ಸಮಾಜ ಸೇವೆ ಹಾಗೂ ಸಾಹಿತ್ಯ: ಮೆಟಿ ಕೊಟ್ರಪ್ಪ (ಬಸರಕೋಡು, ಹಗರಬೊಮ್ಮನಹಳ್ಳಿ)
ಸಾಹಿತ್ಯ ಕ್ಷೇತ್ರ: ಕುಂಬಾರ ರವಿ (ಹನುಮನಹಳ್ಳಿ, ಹೊಸಪೇಟೆ) ಹಾಗೂ ಎಂ.ಪಿ.ಎA. ಕೊಟ್ರಯ್ಯ (ಹೂವಿನಹಡಗಲಿ)
ಕ್ರೀಡಾ ಕ್ಷೇತ್ರ: ಅಬ್ದುಲ್ಲಾ (ಹೊಸಪೇಟೆ)
ಬಹುಮುಖ ಕ್ಷೇತ್ರ (ಕಲೆ, ಸಾಹಿತ್ಯ, ರಂಗಭೂಮಿ, ಪರಿಸರ ಸಂರಕ್ಷಣೆ): ಸದ್ಯೋಜಾತ ಶಾಸ್ತ್ರಿ ಹಿರೇಮಠ
ಪರಿಸರ ಸಂರಕ್ಷಣೆ: ಎಂ. ಬೀರಪ್ಪ ಹಾಗೂ ಸಮದ ಕೊಟ್ಟೂರು.

ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು : ಪರೇಡ್ ಕಮಾಂಡರ್ ಗೋವಿಂದ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ ಪೊಲೀಸ್ ಇಲಾಖೆ, ಮಹಿಳಾ ಪೊಲೀಸ್, ಗೃಹರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಶಿಸ್ತಿನಿಂದ ಹೆಜ್ಜೆ ಹಾಕಿ ಗಮನ ಸೆಳೆದರು.
ಬುಕ್ಕಸಾಗರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು “ಹಚ್ಚೇವು ಕನ್ನಡದ ದೀಪ” ಹಾಗೂ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಕನ್ನಡಾಭಿಮಾನ ಮೆರೆದರು. ಚೈತನ್ಯ ಟೆಕ್ನೋ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ‘ಕರುನಾಡೆ ಕೈ ಚಾಚಿದೆ ನೋಡಿ’ ಗೀತೆಗೆ ಆಕರ್ಷಕವಾಗಿ ನೃತ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳ ನೃತ್ಯಕ್ಕೆ ಪ್ರೇಕ್ಷಕರು ಕೂಡ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಶಾಸಕ ಎಚ್.ಆರ್. ಗವಿಯಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅನುಪಮ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪವಿಭಾಗಾಧಿಕಾರಿ ವಿವೇಕಾನಂದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us: