
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಗ್ಯಾಂಗ್ ಮೇಲಿನ ವಿಚಾರಣೆ ತೀವ್ರಗೊಂಡಿದ್ದು, ಪ್ರಕರಣದ ಸಾಕ್ಷಿಯಾಗಿರುವ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರಿಗೆ ಬೆಂಗಳೂರಿನ 59ನೇ ಸಿಎಸ್‌ಎಚ್ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 15ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವಂತೆ ಇಬ್ಬರೂ ನಟರಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಹತ್ಯೆ ನಡೆದ ದಿನದಂದು ಅಂದರೆ 2024ರ ಜೂನ್ 8ರಂದು ಆರ್‌ಆರ್ ನಗರದ ‘ಸ್ಟೋನಿಬ್ರೂಕ್’ ರೆಸ್ಟೋರೆಂಟ್‌ನಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಭಾಗವಹಿಸಿದ್ದರು. ತನಿಖಾಧಿಕಾರಿಗಳು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ನಟ ಚಿಕ್ಕಣ್ಣ ಅವರನ್ನು ದರ್ಶನ್ ವಿರುದ್ಧದ ಪ್ರಮುಖ ಸಾಕ್ಷಿಯನ್ನಾಗಿ ಸೇರಿಸಲಾಗಿದೆ.

ಹತ್ಯೆ ನಡೆಯುವ ಕೆಲವೇ ಗಂಟೆಗಳ ಮೊದಲು ನಟ ದರ್ಶನ್ ಎಲ್ಲಿದ್ದರು, ಯಾರ ಜೊತೆಗಿದ್ದರು ಹಾಗೂ ಅವರ ನಡವಳಿಕೆ ಹೇಗಿತ್ತು ಎಂಬುದನ್ನು ದೃಢೀಕರಿಸಲು ಚಿಕ್ಕಣ್ಣ ಅವರ ಸಾಕ್ಷ್ಯ ಹಾಗೂ ವಿಚಾರಣೆ ಅತ್ಯಂತ ನಿರ್ಣಾಯಕವಾಗಿದೆ. ಈ ಮೊದಲು ತನಿಖಾ ಹಂತದಲ್ಲಿ ಪೊಲೀಸರ ಮುಂದೆ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸಿಆರ್‌ಪಿಸಿ 164ರ ಅಡಿಯಲ್ಲಿ ಚಿಕ್ಕಣ್ಣ ತಮ್ಮ ಸ್ವಯಂಪ್ರೇರಿತ ಹೇಳಿಕೆಯನ್ನು ದಾಖಲಿಸಿದ್ದರು.
ಇದೀಗ ವಿಚಾರಣೆ ಪ್ರಕ್ರಿಯೆ ಆರಂಭವಾಗಿರುವುದರಿಂದ ಕೋರ್ಟ್‌ಗೆ ಹಾಜರಾಗಲು ಸೂಚಿಸಲಾಗಿದ್ದು, ದರ್ಶನ್ ಜೊತೆ ಆಪ್ತ ಒಡನಾಟ ಹೊಂದಿದ್ದ ಚಿಕ್ಕಣ್ಣ ತಮ್ಮ ಮದುವೆಗೆ ದರ್ಶನ್ ಅವರನ್ನು ಆಹ್ವಾನಿಸಿರಲಿಲ್ಲ. ಮತ್ತೊಂದೆಡೆ ದರ್ಶನ್ ಆಪ್ತ ಪ್ರದೋಷ್ ಈಗಾಗಲೇ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದು, ನ್ಯಾಯಾಲಯದಲ್ಲಿ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಯಾವ ರೀತಿಯ ಹೇಳಿಕೆ ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.


More Stories
ದಕ್ಷಿಣದಲ್ಲಿ ಮೂರೇ ಚಿತ್ರ: ನಾನಾ ಪಟೇಕರ್
ಪ್ರೇಮದ ಊರಲಿ ಸಿನಿಮಾದ ನಾಯಕಿಯರ ಹೆಸರಿನ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಮನೋಜ್ ಕುಮಾರ್
ಜೂ.ಎನ್ಟಿಆರ್-ತ್ರಿವಿಕ್ರಮ್ ಸಿನಿಮಾ ಸಜ್ಜು