
ದೇಶದ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಅನ್ನದಾತನ ಬದುಕನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದ್ದು, ಕೃಷಿ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಕ್ಷ ರಾಜಕೀಯವನ್ನು ಬದಿಗಿಟ್ಟು ‘ಟೀಮ್ ಅಗ್ರಿಕಲ್ಚರ್’ ಮನೋಭಾವದಿಂದ ಕೆಲಸ ಮಾಡಬೇಕಿದೆ. ಕೃಷಿ ನೀತಿಗಳು ಮತ್ತು ಯೋಜನೆಗಳು ಕಾಗದಕ್ಕೆ ಮಾತ್ರ ಸೀಮಿತವಾಗದೆ ತಳಮಟ್ಟದ ರೈತನಿಗೆ ನೇರವಾಗಿ ತಲುಪಿದಾಗ ಮಾತ್ರ ಸುಸ್ಥಿರ ಕೃಷಿ ಸಾಧ್ಯ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವತಿಯಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಕೃಷಿ ಸಮ್ಮೇಳನ – ಹಿಂಗಾರು ಅಭಿಯಾನ 2026’ರ ಎರಡನೇ ದಿನದ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಕೃಷಿ, ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಬದಲಾಗಬಹುದು, ಆದರೆ ದೇಶ ಮತ್ತು ರೈತರು ಶಾಶ್ವತ ಎಂದು ಪ್ರತಿಪಾದಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೈಗೊಳ್ಳುವ ಪ್ರತಿಯೊಂದು ನೀತಿ ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದಗಳಲ್ಲಿ ರೈತರ ಹಿತಾಸಕ್ತಿಗೇ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ʻಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆʼ (ಪಿಎಂ-ಆರ್‌ಕೆವಿವೈ) ಅಡಿಯಲ್ಲಿ ಪಶ್ಚಿಮ ಬಂಗಾಳ, ಹರಿಯಾಣ, ಛತ್ತೀಸ್‌ಗಢ, ಕರ್ನಾಟಕ (₹104 ಕೋಟಿ) ಸೇರಿದಂತೆ ಒಟ್ಟು 10 ರಾಜ್ಯಗಳಿಗೆ ₹1200 ಕೋಟಿಗೂ ಅಧಿಕ ಮೌಲ್ಯದ ಆರ್ಥಿಕ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು. ಅಲ್ಲದೆ, ಮುಂಬರುವ ಅಕ್ಟೋಬರ್ 22 ರಿಂದ ನವೆಂಬರ್ 30 ರವರೆಗೆ ಮಣ್ಣಿನ ಫಲವತ್ತತೆ ರಕ್ಷಣೆಗಾಗಿ ರಾಷ್ಟ್ರವ್ಯಾಪಿ ‘ಖೇತ್ ಬಚಾವೋ ಅಭಿಯಾನ’ ನಡೆಸುವುದಾಗಿ ಸಚಿವರು ಪ್ರಕಟಿಸಿದರು. ನಕಲಿ ಬೀಜ-ಗೊಬ್ಬರ ಮಾರಾಟಗಾರರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಶ್ರೀ ರಾಮನಾಥ್ ಠಾಕೂರ್, ಶ್ರೀ ಭಗೀರಥ್ ಚೌಧರಿ, ಕೃಷಿ ಕಾರ್ಯದರ್ಶಿ ಶ್ರೀ ಅತಿಶ್ ಚಂದ್ರ, ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್ ಸೇರಿದಂತೆ ವಿವಿಧ ರಾಜ್ಯಗಳ ಕೃಷಿ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.


More Stories
ಸಮಗ್ರ ಸಾರಿಗೆ ಪ್ರಾಧಿಕಾರ ಸ್ಥಾಪನೆ
ದೇಶದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಕ್ರಾಂತಿ: ಗಂಟೆಗಟ್ಟಲೆ ಪ್ರಯಾಣದ ಅವಧಿ ನಿಮಿಷಗಳಿಗೆ ಕಡಿತ
ರೈತ ಪ್ರಾಣ ಕಾಪಾಡಿದರೆ, ನೇಕಾರ ಮಾನ ಕಾಪಾಡುತ್ತಾನೆ.