October 25, 2026

Hampi times

Kannada News Portal from Vijayanagara

ಹಂಪಿ ಸಂರಕ್ಷಣೆ, ಸ್ಥಳೀಯರನ್ನು ಹೊರಗಿಟ್ಟರೆ ಜೀವಂತ ಪರಂಪರೆ ಉಳಿಯಲ್ಲ ಎಂದ ಐಕೋಮೋಸ್ ತಜ್ಞರು

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ಸಂರಕ್ಷಣೆ ಜತೆಗೆ ಸ್ಥಳೀಯ ಸಮುದಾಯಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಸಮಗ್ರ ಅಭಿವೃದ್ಧಿ ನಿಯಮಾವಳಿಗಳನ್ನು ರೂಪಿಸಬೇಕು ಎಂದು ವಿವಿಧ ವಲಯಗಳ ಪ್ರಮುಖರು ಒಕ್ಕೊರಲಿನಿಂದ ಆಗ್ರಹಿಸಿದರು.

ಯುನೆಸ್ಕೋ (UNESCO) ಹಾಗೂ ಐಕೋಮೋಸ್ (ICOMOS) ಪ್ರತಿನಿಧಿಗಳ ರಿಯಾಕ್ಟಿವ್ ಮಾನಿಟರಿಂಗ್ ಮಿಷನ್ ಭೇಟಿ ಹಿನ್ನೆಲೆಯಲ್ಲಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಭಾನುವಾರ ಹಕ್ಕೊತ್ತಾಯ ಹಾಗೂ ಸಮಾಲೋಚನಾ ಸಭೆ ನಡೆಯಿತು.

ಸಭೆಯಲ್ಲಿ ರೈತರು, ಹೋಂಸ್ಟೇ ಮಾಲೀಕರು, ವರ್ತಕರು, ಪ್ರವಾಸಿ ಮಾರ್ಗದರ್ಶಿಗಳು (ಗೈಡ್ಸ್), ಆಟೋ ಚಾಲಕರ ಸಂಘಟನೆಗಳು, ಮಹಿಳಾ ಸ್ವಸಹಾಯ ಸಂಘಗಳು, ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ ಸಮುದಾಯ, ಹೋಟೆಲ್ ಮಾಲೀಕರು, ಜೆಎಸ್‌ಡಬ್ಲ್ಯೂ ಸಿಎಸ್‌ಆರ್, ವೈನ್ ಅಸೋಸಿಯೇಷನ್, ವಿಜಯನಗರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕಿಷ್ಕಿಂಧಾ ಟ್ರಸ್ಟ್ ಹಾಗೂ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸೇರಿದಂತೆ 22ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡರು.

ಜೀವನೋಪಾಯ ಮತ್ತು ಪ್ರವಾಸೋದ್ಯಮ ಬೆಳವಣಿಗೆ:

ಸಭೆಯಲ್ಲಿ ಮಾತನಾಡಿದ ರೈತ ಪ್ರತಿನಿಧಿಗಳು, “ಈ ಭಾಗದ ಶೇ. 98ರಷ್ಟು ರೈತರು 1 ರಿಂದ 2 ಎಕರೆ ಸಣ್ಣ ಹಿಡುವಳಿದಾರರಾಗಿದ್ದಾರೆ. ವಲಸೆ ತಡೆಯಲು ಮತ್ತು ಪರ್ಯಾಯ ಆದಾಯಕ್ಕಾಗಿ ಕೃಷಿ ಪ್ರವಾಸೋದ್ಯಮ (ಅಗ್ರಿ-ಟೂರಿಸಂ) ಹಾಗೂ ಫಾರ್ಮ್‌ಸ್ಟೇಗಳಿಗೆ ಅನುಮತಿ ಅತ್ಯಗತ್ಯ” ಎಂದು ಒತ್ತಾಯಿಸಿದರು. ಹಂಪಿಯ ವಿಶಿಷ್ಟ ವಾಸ್ತುಶಿಲ್ಪಕ್ಕೆ ಕಾರಣವಾಗಿರುವ ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆಯನ್ನೇ ನೆಚ್ಚಿಕೊಂಡಿರುವ ಸಮುದಾಯಕ್ಕೆ ಸೂಕ್ತ ವೈಜ್ಞಾನಿಕ ನಿಯಮಾವಳಿಗಳೊಂದಿಗೆ ವಿನಾಯಿತಿ ನೀಡಬೇಕು ಎಂದು ಗಣಿಗಾರಿಕೆ ಕಾರ್ಮಿಕರು ಮನವಿ ಮಾಡಿದರು. ಜತೆಗೆ ಮಹಿಳಾ ಸ್ವಸಹಾಯ ಸಂಘಗಳು, ಆಟೋ ಚಾಲಕರು ಮತ್ತು ಗೈಡ್‌ಗಳಿಗೆ ವ್ಯವಸ್ಥಿತ ಜಾಗ ಹಾಗೂ ಸ್ಪಷ್ಟ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಒದಗಿಸುವಂತೆ ಕೋರಲಾಯಿತು.

ಮೂಲಸೌಕರ್ಯ ಮತ್ತು ಪ್ರವಾಸಿ ನಿರ್ವಹಣೆ:

ಹಂಪಿಯ ಅಷ್ಟಾಗಿ ಪರಿಚಿತವಲ್ಲದ ಪುರಾತನ ಸ್ಮಾರಕಗಳು ಹಾಗೂ ದೇವಾಲಯಗಳಿಗೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಕೃಷಿ ಸಂಪರ್ಕ ರಸ್ತೆಗಳ ಸುಧಾರಣೆ, ಪ್ರತ್ಯೇಕ ಆಟೋ ನಿಲ್ದಾಣ, ಹಿರಿಯ ಭಕ್ತರ ಅನುಕೂಲಕ್ಕಾಗಿ ಅಂಜನಾದ್ರಿಗೆ ರೋಪ್‌ವೇ ಮತ್ತು ತುರ್ತು ಚಿಕಿತ್ಸಾ ಘಟಕ, ಕಮಲಾಪುರ ಕೆರೆ ಪುನಶ್ಚೇತನ, ಸುಸಜ್ಜಿತ ಆಸ್ಪತ್ರೆ, ಸ್ವಚ್ಛತಾ ಸೌಲಭ್ಯ ಹಾಗೂ ರಾತ್ರಿ ವೇಳೆ ಸ್ಮಾರಕಗಳ ವೀಕ್ಷಣೆಗೆ ‘ಹಂಪಿ ಬೈ ನೈಟ್’ ಪರಿಕಲ್ಪನೆ ಜಾರಿಗೆ ತರಬೇಕೆಂದು ಪ್ರಸ್ತಾವನೆ ಸಲ್ಲಿಸಲಾಯಿತು.

ತಜ್ಞರ ಅಭಿಮತ:

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಜಂಟಿ ಮಹಾನಿರ್ದೇಶಕರು (JDG) ಮಾತನಾಡಿ, “ಹಂಪಿಯನ್ನು 1986ರಲ್ಲಿ ವಿಶ್ವಪರಂಪರೆ ತಾಣವೆಂದು ಘೋಷಿಸಲಾಗಿದ್ದು, 2006ರಲ್ಲಿ ಮೊದಲ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಪ್ಲಾನ್ (IMP) ಸಿದ್ಧಪಡಿಸಲಾಗಿತ್ತು. 1972ರ ವಿಶ್ವ ಪರಂಪರೆ ಸಮಾವೇಶದ ನಿಯಮಗಳನ್ವಯ ಇದೀಗ ನೂತನ ಐಎಂಪಿ ಸಿದ್ಧಪಡಿಸಲಾಗುತ್ತಿದ್ದು, ಹಂಪಿ ಒಂದು ಜೀವಂತ ಸಾಂಸ್ಕೃತಿಕ ತಾಣವಾಗಿದೆ” ಎಂದು ಸ್ಪಷ್ಟಪಡಿಸಿದರು.

ಯುನೆಸ್ಕೋ ತಜ್ಞ ಪ್ರೊ. ಜಾರ್ಜ್ ಅಬುಂಗು ಮಾತನಾಡಿ, ಅನಿಯಂತ್ರಿತ ಬೆಳವಣಿಗೆ ತಡೆಯಲು ನಿಯಮಗಳು ಅಗತ್ಯ ನಿಜ. ಆದರೆ ಆ ನಿಯಮಗಳು ಸ್ಥಳೀಯ ಜನರನ್ನು ಸಬಲೀಕರಣಗೊಳಿಸುವಂತಿರಬೇಕು ಎಂದರು.

ಐಕೋಮೋಸ್ ತಜ್ಞ ಪ್ರೊ. ಇಚಿತಾ ಶಿಮೊಡ ಮಾತನಾಡಿ, ಸ್ಥಳೀಯ ಜನರ ಸುಸ್ಥಿರ ಆರ್ಥಿಕ ಬೆಳವಣಿಗೆಯಿಂದ ಮಾತ್ರ ಜಾಗತಿಕ ಮಹತ್ವದ ಪರಂಪರೆಯನ್ನು ಕಾಪಾಡಲು ಸಾಧ್ಯ. ಜಾಗತಿಕ ಅನುಭವಗಳ ಪ್ರಕಾರ ಸ್ಥಳೀಯ ಸಮುದಾಯಗಳನ್ನು ಹೊರಗಿಟ್ಟರೆ ಅದು ನಿರ್ಜೀವ ಪರಂಪರೆಯಾಗುತ್ತದೆ. ಆದ್ದರಿಂದ ಎಲ್ಲರನ್ನೂ ಒಳಗೊಂಡ ನೀತಿ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಜಿಲ್ಲಾಧಿಕಾರಿ ಭರವಸೆ:

ವಿಜಯನಗರ ಜಿಲ್ಲಾಧಿಕಾರಿಗಳು ಮಾತನಾಡಿ, “ಸಭೆಯಲ್ಲಿ ವ್ಯಕ್ತವಾದ ಎಲ್ಲ ಸಲಹೆ-ಸೂಚನೆಗಳನ್ನು ಕ್ರೋಡೀಕರಿಸಿ ಹಂಪಿ ಅಭಿವೃದ್ಧಿ ಪ್ರಾಧಿಕಾರ (HWHAMA), ಎಎಸ್‌ಐ, ಯುನೆಸ್ಕೋ ಮತ್ತು ಐಕೋಮೋಸ್‌ಗೆ ಸಲ್ಲಿಸಲಾಗುವುದು. ಪರಂಪರೆ ರಕ್ಷಣೆ ಮತ್ತು ಸ್ಥಳೀಯರ ಬದುಕಿನ ನಡುವೆ ಸಮತೋಲನ ಕಾಯ್ದುಕೊಂಡು ನೂತನ ಸಮಗ್ರ ನಿರ್ವಹಣಾ ಯೋಜನೆಯಲ್ಲಿ (IMP) ಇವುಗಳನ್ನು ಅಳವಡಿಸಿಕೊಳ್ಳಲಾಗುವುದು” ಎಂದು ಭರವಸೆ ನೀಡಿದರು.

Please follow and like us: