ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪದ ಹಾತಿ ಪರ್ವತ್ ಬೆಟ್ಟಗಳಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಕರ್ನಾಟಕದ ಪ್ರಯಾಣಿಕರು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಬದರಿನಾಥ ಧಾಮದಿಂದ ಡೆಹ್ರಾಡೂನ್‌ನ ಸಹಸ್ರಧಾರಾ ಹೆಲಿಪ್ಯಾಡ್ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್, ಚಾಯ್ ಗ್ರಾಮದ ಮೇಲ್ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸೇರಿ ಎಲ್ಲ ಆರೂ ಜನರು ಮೃತಪಟ್ಟಿದ್ದು, ಪ್ರಯಾಣಿಕರೆಲ್ಲರೂ ಕರ್ನಾಟಕದ ಮೂಲದವರು ಎಂದು ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಇಲಾಖೆಯ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ತಿಳಿಸಿದ್ದಾರೆ.

ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಹೆಲಿಕಾಪ್ಟರ್‌ನಿಂದ ಹೊಗೆ ಬರುತ್ತಿದ್ದುದು ಹಾಗೂ ಅದು ತೀವ್ರ ವೇಗವಾಗಿ ಕೆಳಗೆ ಧಾವಿಸುತ್ತಿರುವುದನ್ನು ಸೇನಾ ಸಿಗ್ನಲ್ ಕೇಂದ್ರದ ಸಿಬ್ಬಂದಿ ಗಮನಿಸಿ ಮಾಹಿತಿ ರವಾನಿಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತೀಯ ಸೇನೆ, ಐಟಿಬಿಪಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಹಾಗೂ ಸ್ಥಳೀಯ ಜಿಲ್ಲಾಡಳಿತದ ರಕ್ಷಣಾ ತಂಡಗಳು ದುರ್ಗಮ ಬೆಟ್ಟ ಪ್ರದೇಶಕ್ಕೆ ಧಾವಿಸಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಿವೆ.
ಘಟನೆಗೆ ರಾಜ್ಯಪಾಲ ಡಾ. ಧಾಲ್ ಸಿಂಗ್ ಬಿಸೆನ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತೀವ್ರ ಶೋಕ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಮುಖ್ಯಮಂತ್ರಿ ಧಾಮಿ ಅವರು ದುರಂತದ ನಿಖರ ಕಾರಣ ತಿಳಿಯಲು ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.


More Stories
ಬಂಗಾಳಕೊಲ್ಲಿಯಲ್ಲಿ ‘ಅರ್ನಬ್’ ಆರ್ಭಟ
ಹಂಪಿ ಸಂರಕ್ಷಣೆ, ಸ್ಥಳೀಯರನ್ನು ಹೊರಗಿಟ್ಟರೆ ಜೀವಂತ ಪರಂಪರೆ ಉಳಿಯಲ್ಲ ಎಂದ ಐಕೋಮೋಸ್ ತಜ್ಞರು
ಸಮಗ್ರ ಸಾರಿಗೆ ಪ್ರಾಧಿಕಾರ ಸ್ಥಾಪನೆ