September 22, 2026

Hampi times

Kannada News Portal from Vijayanagara

ಏಷ್ಯನ್ ಗೇಮ್ಸ್: ಭಾರತ ವನಿತೆಯರಿಗೆ ಬಂಗಾರದ ಗರಿ

https://youtu.be/NHc6OMSu0K4?si=SI_K4goOPEgwo6h2

ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 147 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದೆ.

ಜಪಾನ್‌ನ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಬಿರುಸಿನ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 11.2 ಓವರ್‌ಗಳಲ್ಲಿ 99 ರನ್‌ಗಳ ಜತೆಯಾಟವಾಡಿತು. ಶಫಾಲಿ ವರ್ಮಾ 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 48 ರನ್ ಗಳಿಸಿ ಔಟಾದರು.

ಲಂಕಾ ಬೌಲರ್‌ಗಳ ವಿರುದ್ಧ ಸಿಡಿದೆದ್ದ ಉಪನಾಯಕಿ ಸ್ಮೃತಿ ಮಂಧಾನ ಕೇವಲ 45 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 79 ರನ್ ಚಚ್ಚಿದರು. ಬಳಿಕ ಕ್ರೀಸ್‌ಗಿಳಿದ ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಘೋಷ್ ಕೇವಲ 22 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ ಅಜೇಯ 49 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 19 ರನ್ ಗಳಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 216 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

217 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 15.4 ಓವರ್‌ಗಳಲ್ಲಿ ಕೇವಲ 69 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 147 ರನ್‌ಗಳ ಅಂತರದ ಅಮೋಘ ಗೆಲುವಿನೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿತು. ಶ್ರೀಲಂಕಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಬಾಂಗ್ಲಾದೇಶವನ್ನು ಮಣಿಸಿದ ಪಾಕಿಸ್ತಾನ ಕಂಚಿನ ಪದಕ ತನ್ನದಾಗಿಸಿಕೊಂಡಿತು.

 

  • ಭಾರತ: 216/3 (20 ಓವರ್)

  • ಶ್ರೀಲಂಕಾ: 69/10 (15.4 ಓವರ್)

ಭಾರತ (ಪ್ಲೇಯಿಂಗ್ XI): ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಗುಣಲನ್ ಕಮಲಿನಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಶ್ರೀ ಚರಣಿ, ನಂದನಿ ಶರ್ಮಾ, ಕ್ರಾಂತಿ ಗೌಡ್.

ಶ್ರೀಲಂಕಾ (ಪ್ಲೇಯಿಂಗ್ XI): ಇಮೇಶಾ ದುಲಾನಿ, ಚಾಮರಿ ಅಥಾಪತ್ತು (ನಾಯಕಿ), ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ಹನ್ಸಿಮಾ ಕರುಣಾರತ್ನೆ, ಕೌಶಾನಿ ನುತ್ಯಂಗನಾ (ವಿಕೆಟ್ ಕೀಪರ್), ಮಿಥಾಲಿ ಅಯೋಧ್ಯಾ, ಕಾವ್ಯಾ ಕವಿಂದಿ, ಚಾಮುಡಿ ಪ್ರಬೋದಾ, ಸುಗಂದಿಕಾ ಕುಮಾರಿ.

ಚಿತ್ರ ಕೃಪೆ: ಬಿಸಿಸಿಐ

Please follow and like us:

 

 

Translate »
[t4b-ticker]