September 22, 2026

Hampi times

Kannada News Portal from Vijayanagara

ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ

https://youtu.be/NHc6OMSu0K4?si=SI_K4goOPEgwo6h2

ಬೆಂಗಳೂರು: ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅತ್ಯಾಧುನಿಕ ತಂತ್ರಜ್ಞಾನವನ್ನು ಮುಟ್ಟಿಸಿ, ಅವರನ್ನು ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜುಗೊಳಿಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅನಿವಾರ್ಯವಾಗಿದೆ. ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಗತಿ ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗದೆ ಹಳ್ಳಿಗಳಿಗೂ ತಲುಪಿದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಕಿಯೋನಿಕ್ಸ್ ಸಂಸ್ಥೆಯ 50ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಿಯೋನಿಕ್ಸ್ ಸಂಸ್ಥೆಯು ಎಐ ಆಧಾರಿತ ‘ಕಿಯೋ’ ಕಂಪ್ಯೂಟರ್‌ಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಒದಗಿಸಲು ಮುಂದಾಗಿರುವುದು ಅತ್ಯಂತ ಶ್ಲಾಘನೀಯ. ರಾಜ್ಯವನ್ನು ಭವಿಷ್ಯದ ಎಐ ಯುಗಕ್ಕೆ ಸಜ್ಜುಗೊಳಿಸಲು ಇಂತಹ ಪ್ರಯತ್ನಗಳು ಮುನ್ನುಡಿ ಬರೆಯಲಿವೆ ಎಂದರು. ತಮ್ಮ ಶಾಲಾ ದಿನಗಳಲ್ಲಿ ಡಿ. ದೇವರಾಜ ಅರಸು, ವೀರಪ್ಪ ಮೊಯ್ಲಿ ಹಾಗೂ ಎಸ್.ಎಂ. ಕೃಷ್ಣ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಕಿಯೋನಿಕ್ಸ್ ಸಂಸ್ಥೆ ಇಂದು ಸುವರ್ಣ ಸಂಭ್ರಮ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸ್ಮರಿಸಿದರು.

ರಾಜ್ಯದಲ್ಲಿ ಪ್ರಸ್ತುತ 30 ಸಾವಿರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯುತ್ತಿದ್ದು, ತೇರ್ಗಡೆಯಾದವರಿಗೂ ನಿರೀಕ್ಷಿತ ವೇತನ ಸಿಗುತ್ತಿಲ್ಲ. ಇದನ್ನು ಹೋಗಲಾಡಿಸಲು ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ ಪಠ್ಯಕ್ರಮವನ್ನು ಉದ್ಯಮ ಆಧಾರಿತವಾಗಿ ಪರಿವರ್ತಿಸಬೇಕಿದೆ.

 

ವಿದೇಶಗಳಲ್ಲಿ ಕೇವಲ ಪದವಿಗಿಂತ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯವನ್ನಷ್ಟೇ ಪರಿಗಣಿಸಲಾಗುತ್ತಿದೆ. ನಮ್ಮ ಯುವಕರು ಉದ್ಯೋಗಿಗಳಾಗುವ ಬದಲು ಉದ್ಯೋಗದಾತರಾಗಬೇಕು ಎಂದು ಕರೆ ನೀಡಿದ ಅವರು, ಸಂಸ್ಥೆಯ ಭವಿಷ್ಯದ ಬೆಳವಣಿಗೆಗೆ ಅಗತ್ಯವಿರುವ ಜಾಗ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ತಂತ್ರಜ್ಞಾನವನ್ನು ಆಡಳಿತ ಸುಧಾರಣೆಗೂ ಬಳಸಿಕೊಳ್ಳಲಾಗುತ್ತಿದ್ದು, ಬೆಂಗಳೂರಿನ 40 ಲಕ್ಷ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ದಾಖಲೆಗಳನ್ನು ಸಿದ್ಧಪಡಿಸಿ, ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮನೆ ಮನೆಗೆ ತಲುಪಿಸಲಾಗುವುದು. ಅಲ್ಲದೆ, ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಲ್ಲಿ ಹುಬ್ಬಳ್ಳಿ, ಶಿವಮೊಗ್ಗ, ಕಲಬುರ್ಗಿ ಹಾಗೂ ಮಂಗಳೂರಿನಂತಹ ನಗರಗಳಿಗೂ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಐಟಿ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ ಬರೋಬ್ಬರಿ 26 ಲಕ್ಷ ವೃತ್ತಿಪರರಿದ್ದಾರೆ ಎಂದು ನಗರದ ಬೆಳವಣಿಗೆಯನ್ನು ಪ್ರಶಂಸಿಸಿದ ಅವರು, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ಏರ್‌ಪೋರ್ಟ್ ರಸ್ತೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಯುಪಿಎ ಸರ್ಕಾರ ನೀಡಿದ ಕೊಡುಗೆಯನ್ನು ಉಲ್ಲೇಖಿಸಿದರು. ಅಲ್ಲದೆ, ಕಿಯೋನಿಕ್ಸ್‌ನ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಾಳಿಗ ಅವರ ಪುತ್ಥಳಿ ನಿರ್ಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಸಂಸ್ಥೆಯ 50 ವರ್ಷಗಳ ತಂತ್ರಜ್ಞಾನ ಪಯಣವನ್ನು ಕೊಂಡಾಡಿದರು.

 

Please follow and like us: