January 15, 2026

Hampi times

Kannada News Portal from Vijayanagara

ಏಳಿ ಎದ್ದೇಳಿ ಗುರಿ ಮುಟ್ಟುವ ತನಕವೂ ನಿಲ್ಲದಿರೀ

https://youtu.be/NHc6OMSu0K4?si=SI_K4goOPEgwo6h2

 

ರೇಷ್ಮಾ ಶೆಟ್ಟಿ
————————–
ನಮ್ಮ ಮಾತೃಭೂಮಿ ಭಾರತ ಹೆಸರೇ ಹೇಳುವಂತೆ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ರಾಷ್ಟ್ರಾ.ಈ ಪುಣ್ಯಭೂಮಿ ಅದೆಷ್ಟೋ ಮಹಾಪುರುಷರ ಜನ್ಮಭೂಮಿ ಕರ್ಮಭೂಮಿ ಧರ್ಮಭೂಮಿ ಮೋಕ್ಷಭೂಮಿ.ಭಾರತದಲ್ಲಿ ಜನ್ಮವಿತ್ತ ದಿವ್ಯ ಚೇತನ ಸ್ವಾಮಿ ವಿವೇಕಾನಂದರು.ಪ್ರಕೃತ ವರ್ಷ ವಿವೇಕಾನಂದರ 163ನೇ ಜಯಂತಿಯ ಸುಪರ್ವ ಈ ಸಂದರ್ಭದಲ್ಲಿ ವಿವೇಕಾನಂದರ ಜೀವನಪಥ ಸಾಧನಾರಥ ಮತ್ತು ಆದರ್ಶ ಮೂರ್ತವಾಗಿ ವಿವೇಕಾನಂದರನ್ನು ಸ್ಮರಿಸುವುದು ಅರ್ಥಪೂರ್ಣವಷ್ಟೇ ಅಲ್ಲ ಅತ್ಯಂತ ಪ್ರಸ್ತುತವೂ ಹೌದು.
ಭಾರತದ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ಭುವನೇಶ್ವರೀ ದೇವಿ ಮತ್ತು ವಿಶ್ವನಾಥ ದತ್ತ ದಂಪತಿಗಳಿಗೆ ಜನಿಸಿದ ನರೇಂದ್ರನಾಥ ದತ್ತ ಎಂಬ ಬಾಲಕ ಮುಂದೆ ವಿಶ್ವಮಾನ್ಯ ವೀರಸನ್ಯಾಸಿ ಸ್ವಾಮಿ ವಿವೇಕಾನಂದರಾಗಿ ರೂಪುಗೊಂಡ ಪರಿ ಅದ್ವಿತೀಯ.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಸುಸಂಸ್ಕೃತ ಕೌಟುಂಬಿಕ ಹಿನ್ನಲೆ ನರೇಂದ್ರನಾಥ ದತ್ತರಲ್ಲಿ ಉನ್ನತ ಜೀವನಮೌಲ್ಯಗಳು ಮತ್ತು ಉದಾತ್ತ ಚರಿತೆಗಳನ್ನು ಮುನ್ನೆಲೆಯಲ್ಲಿ ನೆಲೆಸುವಂತೆ ಮಾಡಿದ್ದವು. ಹಿಂದೆ ಗುರು ಇದ್ದ ಮುಂದೆ ಗುರಿ ಇತ್ತು ಸಾಗುತ್ತಿತ್ತು ಧೀರರ ದಂಡು.ಶಿವಾಜಿಗೆ ಸಮರ್ಥ ರಾಮದಾಸರಿದ್ದಂತೆ ಹರಿಹರ ಬುಕ್ಕರಿಗೆ ವಿದ್ಯಾರಣ್ಯರಿದ್ದಂತೆ ಸ್ವಾಮಿ ವಿವೇಕಾನಂದರೆಂಬ ಶುದ್ಧ ಮೃತ್ತಿಕೆಯನ್ನು ಸುಂದರ ಸುಸಂಸ್ಕೃತ ಮೂರ್ತಿಯಾಗಿ ರೂಪುಗೊಳಿಸಿದರು.
ಸ್ವಾಮಿ ವಿವೇಕಾನಂದರು ತಮ್ಮ ಜೀವಿತಾವಧಿಯ ಕೇವಲ 36ವರ್ಷ 5ತಿಂಗಳು 22ದಿನಗಳಲ್ಲಿ ವಿಶ್ವಕ್ಕೆ ನೀಡಿದ ಕೊಡುಗೆಯನ್ನು ಅಕ್ಷರಗಳಲ್ಲಿ ಬರೆದಿಡುವುದು ಸಮುದ್ರಕ್ಕೆ ತಡೆ ಹಾಕಿದಂತೆ ವಿಫಲಯತ್ನವಾಗುತ್ತದೆ.ರವೀಂದ್ರನಾಥ ಠಾಗೋರರು ರೋಮೈರೋಲಾರಿಗೆ ಭಾರತದ ಆಧ್ಯಾತ್ಮವನ್ನು ಅರಿಯಬೇಕಾದರೆ ವಿವೇಕಾನಂದರನ್ನು ಅರ್ಥಮಾಡಿಕೊಳ್ಳಿ ಅವರಲ್ಲಿ ಎಲ್ಲಾವೂ ಇತ್ಯಾತ್ಮಕವಾಗಿದೆ.ನೇತ್ಯಾತ್ಮಕವಾದದ್ದು ಯಾವುದೋ ಇಲ್ಲ ಎಂದು ಹೇಳಿದ ಮಾತೇ ಸಾಕ್ಷಿ.ವಿವೇಕಾನಂದರು ನ್ಯೂಯಾರ್ಕ್ನ ಲ್ಲಿರುವಾಗ ನನ್ನ ಸಹೋದರ ಸಹೋದರಿಯರೇ ಎಂದು ವಿಶ್ವಕ್ಕೆ ವಸುದೈವ ಕುಟುಂಬಕಮ್ ಎಂಬ ಉದಾತ್ತ ಧ್ಯೇಯವನ್ನು ನೀಡಿದರು.ಲೇಖಕ ರೊಮೇರೋಲಾರವರು ವಿವೇಕಾನಂದರ ಕುರಿತು ಬರೆದ ಹೊತ್ತಿಗೆಗಳು ಯುರೋಪಿನಲ್ಲಿವೆ.ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾ ಬರೆದ ನಾ ಕಂಡಂತೆ ನನ್ನ ಗುರುದೇವ ಕೃತಿ ವಿವೇಕಾನಂದರ ಬದುಕಿನ ಅನೇಕ ಆಯಾಮಗಳನ್ನು ಸ್ಥೂಲವಾಗಿ ತೆರೆದಿಡುವ ಕೃತಿ.
ಸ್ವಾಮಿ ವಿವೇಕಾನಂದರು ವಿಚಾರ ವೈವಿಧ್ಯತೆಯಿಂದ ಸ್ಪೂರ್ತಿದಾಯಕ ವಾಣಿಯಿಂದ ತೇಜಸ್ಸಿನಿಂದ ಜಗತ್ತನ್ನೇ ಅಲುಗಾಡಿಸುವ ಅಧ್ಭುತ ಶಕ್ತಿಯಿಂದ ಜನರನ್ನು ಎಚ್ಚರಗೊಳಿಸಿ ನವಚಿಂತನೆಯನ್ನು ರೂಪಿಸಿದ ಮಹಾಮೇಧಾವಿ ಪುರುಷ ಅವರಾಡಿದ ಪ್ರತಿಯೊಂದು ಮಾತು ಇಂದಿಗೂ ಸಿಡಿಲುಗುಡುಗುಗಳಂತೆ ಭೋರ್ಗರೆಯುತ್ತ ಪುಟಪುಟಗಳಿಂದ ಹೊರಹೊಮ್ಮುತ್ತಿದೆ.ಅದಮ್ಯ ಉತ್ಸಾಹ ಕಾರ್ಯಪ್ರವಣತೆ ನಿಸ್ವಾರ್ಥ ತ್ಯಾಗ ಮನೋಭಾವವನ್ನು ದೇಶದಾದ್ಯಂತ ಪಸರಿಸಿದ ಕೀರ್ತೀ ವಿವೇಕಾನಂದರದು.ಏಳಿ ಎದ್ದೇಳಿ ಗುರಿ ಮುಟ್ಟುವ ತನಕವೂ ನಿಲ್ಲದಿರಿ ಇಂದಿಗೂ ಈ ನುಡಿ ನಮ್ಮನ್ನ ಬಡಿದೆಬ್ಬಿಸುತ್ತದೆ.ಅವರ ಹಿತನುಡಿ ಅನೇಕರ ಜೀವನಹಾದಿಯ ಬೆಳದಿಂಗಳಾಗಿವೆ.
Please follow and like us:

 

 

 

 

 

 

Translate »
[t4b-ticker]
error: Content is protected !!