February 20, 2026

Hampi times

Kannada News Portal from Vijayanagara

ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್‌ ಹೊಸಪೇಟೆ 

ನವಕಾಲದ ಯುವ ಕವಿಗಳು ಜನಸಾಮಾನ್ಯರ ಬದುಕು ಮತ್ತು ಬವಣೆಗಳಿಗೆ ಧ್ವನಿಯಾಗಬೇಕು. ಸಾಹಿತ್ಯ ಪರಂಪರೆಯಲ್ಲಿ ಸರಿಯಾಗಿ ದಾಖಲಾಗದ, ಬೀದಿಯಲ್ಲಿರುವ ಕೂಲಿ ಕಾರ್ಮಿಕರ ಜೀವನವನ್ನು ಕವಿತೆಗಳ ಮೂಲಕ ಅಭಿವ್ಯಕ್ತಪಡಿಸಬೇಕು ಎಂದು ಹಿರಿಯ ಸಾಹಿತಿ ಎ.ಎಂ. ಮದರಿ ಯುವ ಕವಿಗಳಿಗೆ ಸಲಹೆ ನೀಡಿದರು.

ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಭಾನುವಾರ ನಡೆದ ಯುವಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. “ಕವಿತೆ ಹಾಗೂ ಕಾವ್ಯ ರಚನೆಗೆ ಅರ್ಥಗರ್ಭಿತ ಭಾಷೆ, ಶೈಲಿ ಮತ್ತು ಆಕೃತಿ ಬಹಳ ಮುಖ್ಯ. ಯುವ ಕವಿಗಳು ಇವುಗಳನ್ನು ನಿರ್ಲಕ್ಷಿಸಬಾರದು. ಹಳೆಗನ್ನಡ, ವಚನ, ತತ್ವಪದ, ಜಾನಪದ, ದಾಸವಾಣಿ ಹಾಗೂ ನವೋದಯ ಸಾಹಿತ್ಯ  ಯುವ ಕವಿಗಳಿಗೆ ದಿಕ್ಸೂಚಿಯಾಗಿವೆ. ಕೇವಲ ವಿದ್ವಾಂಸರು ಬಳಸುವ ತಾಂತ್ರಿಕ ಪದಗಳಿಂದ ಸಾಹಿತ್ಯ ಸೃಷ್ಟಿಯಾಗುವುದಿಲ್ಲ; ಬದಲಿಗೆ ಸಾಮಾನ್ಯ ಜನರ ಬದುಕಿನ ನೋವು-ನಲಿವುಗಳನ್ನು ಒಳಗೊಂಡ ವಾಸ್ತವದ ಹಾದಿಯೇ ನಿಜವಾದ ಸಾಹಿತ್ಯ,” ಎಂದರು.

 

ಭಟ್ಟಂಗಿತನ ಬೇಡ, ಸ್ವಾಭಿಮಾನಿಗಳಾಗಿರಿ: ಕವಿಗಳು ಮತ್ತು ಕಲಾವಿದರು ಅಧಿಕಾರಸ್ಥರನ್ನು ಓಲೈಸುವ ಭಟ್ಟಂಗಿಗಳಾಗಬಾರದು. ಸ್ವಾಭಿಮಾನಿಗಳಾಗಿದ್ದುಕೊಂಡು ಅಧಿಕಾರಸ್ಥರ ತಪ್ಪುಗಳನ್ನು ಪ್ರಶ್ನಿಸುವ ನೈತಿಕತೆ ಬೆಳೆಸಿಕೊಳ್ಳಬೇಕು. ಕೇವಲ ಪದಗಳ ಸ್ತುತಿಗಿಂತ ಜೀವನದ ಅನುಭವಗಳಿಗೆ ಜೀವಂತಿಕೆ ನೀಡುವ ಕವಿತೆಗಳನ್ನು ರಚಿಸಬೇಕು. ಇಂದಿನ ಕೆಲವು ಕವಿತೆಗಳು ಜನರ ಬದುಕನ್ನು ಚಿತ್ರಿಸುವ ಬದಲು, ಅವರ ಬದುಕನ್ನೇ ಅಂತ್ಯಗೊಳಿಸುವಂತೆ ಭಾಸವಾಗುತ್ತಿರುವುದು ವಿಷಾದನೀಯ ಎಂದರು.

ಇತಿಹಾಸ ಮತ್ತು ವರ್ತಮಾನದ ಸಂವಾದ: ಈ ಕವಿಗೋಷ್ಠಿಯಲ್ಲಿ 38 ಯುವ ಸಾಹಿತಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ವಿಜಯನಗರ ಸಾಮ್ರಾಜ್ಯದ ಇತಿಹಾಸ, ಪ್ರಚಲಿತ ರಾಜಕೀಯ, ಧರ್ಮ ಸಂಘರ್ಷ, ತಂದೆಯ ಪ್ರೀತಿ ಹಾಗೂ ಸ್ತ್ರೀ ಸಂವೇದನೆಯುಳ್ಳ ಕವಿತೆಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು. ‘ಮುಗಿಲ ಹಕ್ಕಿ’ ಕಾವ್ಯನಾಮದ ಮೈಲಾರಪ್ಪ ಬೂದಿಹಾಳ ಅವರು ತಮ್ಮ ‘ಬಟ್ಟೆ ಮತ್ತು ಧರ್ಮ’ ಕವಿತೆಯ ಮೂಲಕ ಬಣ್ಣಗಳಿಗೆ ಧರ್ಮದ ಲೇಪನ ಹಚ್ಚುತ್ತಿರುವ ಸಮಾಜದಲ್ಲಿ ನೇಕಾರನ ಹಸಿವಿನ ಬದುಕನ್ನು ಬಿಂಬಿಸಿದರು.

ಬರಹಗಾರ ಹಾಗೂ ವಕೀಲ ಅಯ್ಯಣ್ಣ ನಾಯಕ ಪಾಮನಕಲ್ಲೂರು ಅವರು ‘ಚುನಾವಣೆ ಬಂತಣ್ಣಾ’ ಕವನದ ಮೂಲಕ ಚುನಾವಣಾ ಆಮಿಷಗಳ ಬಗ್ಗೆ ಮತದಾರರನ್ನು ಎಚ್ಚರಿಸಿದರು. ವಿದ್ಯಾರ್ಥಿನಿ ಬಿ.ಎಂ. ಪ್ರಿಯಾಂಕಾ ರೈತರ ಬವಣೆ ಹಾಗೂ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದರೆ, ಶೇಖ್ ಮೊಹಮ್ಮದ್ ಷಾಜಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಮನಮುಟ್ಟುವಂತೆ ಕವನ ವಾಚಿಸಿದರು. ಡಾ. ಅನಸೂಯ ವೈ.ಟಿ., ಶ್ವೇತಾ ಬಾಳಿ ಮತ್ತು ರೇಣುಕಾ ಹೆಳವರ್ ಅವರು ಸ್ತ್ರೀ ಸಂವೇದನೆ ಹಾಗೂ ಸಾಮಾಜಿಕ ವಾಸ್ತವಗಳ ಕುರಿತು ಕವಿತೆಗಳನ್ನು ಪ್ರಸ್ತುತಪಡಿಸಿದರು.

ಗೋಷ್ಠಿಯ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ವಹಿಸಿದ್ದರು. ವೇದಿಕೆಯಲ್ಲಿ ಕೂಡ್ಲಗಿ ತಹಶೀಲ್ದಾರ್ ನೇತ್ರಾವತಿ, ಸಾಹಿತಿ ಡಾ. ಚನ್ನಬಸಪ್ಪ ಚಿಲ್ಕರಾಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Please follow and like us:

 

 

 

 

 

 

Translate »
[t4b-ticker]
error: Content is protected !!