February 24, 2026

Hampi times

Kannada News Portal from Vijayanagara

ಸಾಹಿತ್ಯ, ವೈಚಾರಿಕತೆ ಹಾಗೂ ಆಡಳಿತದ ತ್ರಿವೇಣಿ ಸಂಗಮಕ್ಕೆ ‘ನಾಡೋಜ’ ಗೌರವ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್‌ ಹೊಸಪೇಟೆ

ಸಮಾಜದ ಬೌದ್ಧಿಕ ಬೆಳವಣಿಗೆಗೆ ಶ್ರಮಿಸುವ ವಿದ್ವಾಂಸರನ್ನು, ವೈಚಾರಿಕ ಪ್ರಜ್ಞೆ ಮೂಡಿಸುವ ಚಿಂತಕರನ್ನು ಹಾಗೂ ಪಾರದರ್ಶಕತೆಯ ಆಡಳಿತ ನೀಡುವ ದಕ್ಷರನ್ನು ಗುರುತಿಸಿ ಗೌರವಿಸುವುದು ಸದೃಢ ಸಮಾಜದ ನಿರ್ಮಾಣಕ್ಕೆ ಅತ್ಯಗತ್ಯವಾಗಿದೆ. ಅಂತಹ ಮೌಲಿಕ ಪರಂಪರೆಯನ್ನು ಮುಂದುವರಿಸಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವು ತನ್ನ 34ನೇ ನುಡಿಹಬ್ಬದ ಪ್ರಯುಕ್ತ ನೀಡಲಾಗುವ ಪ್ರತಿಷ್ಠಿತ ‘ನಾಡೋಜ’ ಗೌರವ ಪದವಿಗೆ ಈ ಬಾರಿ ಮೂವರು ಗಣ್ಯರನ್ನು ಆಯ್ಕೆ ಮಾಡಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಈ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಶತಾಯುಷಿ ವಿದ್ವಾಂಸ ಪ್ರೊ. ಸಿ. ಮಹಾದೇವಪ್ಪ, ಪ್ರಖ್ಯಾತ ಮಾರ್ಕ್‌ವಾದಿ ಚಿಂತಕ ಡಾ. ಜಿ. ರಾಮಕೃಷ್ಣ ಹಾಗೂ ದಕ್ಷ ಆಡಳಿತಗಾರ ಡಾ. ಎಚ್.ಸಿ. ಸತ್ಯನ್ ಅವರು ಈ ಬಾರಿ ನಾಡೋಜ ಪುರಸ್ಕಾರಕ್ಕೆ ಭಾಜನರಾದ ಸಾಧಕರು.

 

ಸಾಹಿತ್ಯ ಲೋಕದ ದ್ರುವತಾರೆ ಪ್ರೊ. ಸಿ. ಮಹಾದೇವಪ್ಪ: ಕನ್ನಡದ ಪ್ರಕಾಂಡ ಪಂಡಿತರಾದ 104 ವರ್ಷ ವಯಸ್ಸಿನ ಪ್ರೊ. ಸಿ.ಮಹಾದೇವಪ್ಪ ಅವರು ಓಲೆಗರಿಗಳ ಸಂಶೋಧನೆ ಮತ್ತು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರು. ಸೋಸಲೆಯಲ್ಲಿ ಜನಿಸಿದ ಇವರು, ಮೈಸೂರಿನ ಓರಿಯಂಟಲ್ ಲೈಬ್ರರಿಯಿಂದ ಹಿಡಿದು ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಳಗನ್ನಡ, ವಚನ ಸಾಹಿತ್ಯ ಮತ್ತು ಅನುವಾದ ಸಾಹಿತ್ಯದಲ್ಲಿ ಇವರ ಪಾಂಡಿತ್ಯ ಅಪಾರ. ವಿಶೇಷವೆಂದರೆ, 70ನೇ ವಯಸ್ಸಿನಲ್ಲಿ ಕಂಪ್ಯೂಟರ್ ಕಲಿತು ತಮ್ಮ ಕೃತಿಗಳನ್ನು ತಾವೇ ಸಿದ್ಧಪಡಿಸಿದ ಇವರು, 101ನೇ ವಯಸ್ಸಿನಲ್ಲೂ ‘ಏಕೋತ್ತರ ಶತಸ್ಥಲ’ ಎಂಬ ಕೃತಿಯನ್ನು ಪ್ರಕಟಿಸಿ ಯುವಜನತೆಗೆ ಮಾದರಿಯಾಗಿದ್ದಾರೆ.

ವೈಚಾರಿಕ ಚಿಂತಕ ಡಾ. ಜಿ. ರಾಮಕೃಷ್ಣ: ಮಾರ್ಕ್‌ವಾದಿ ಚಿಂತಕ ಹಾಗೂ ಶಿಕ್ಷಣತಜ್ಞರಾದ ಡಾ. ಜಿ. ರಾಮಕೃಷ್ಣ ಅವರು ಕನ್ನಡದ ವೈಚಾರಿಕ ಮತ್ತು ವೈಜ್ಞಾನಿಕ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದವರು. ಸಿರಾ ತಾಲ್ಲೂಕಿನ ಹಾಲೇನಹಳ್ಳಿಯವರಾದ ಇವರು ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಘನ ಪಾಂಡಿತ್ಯ ಹೊಂದಿದ್ದಾರೆ. ‘ಹೊಸತು’ ಪತ್ರಿಕೆಯ ಸಂಪಾದಕರಾಗಿ, ಅನೇಕ ಮೌಲಿಕ ಕೃತಿಗಳ ಕರ್ತೃವಾಗಿ ಇವರು ಸಲ್ಲಿಸಿದ ಸೇವೆ ಅನನ್ಯ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವಕ್ಕೂ ಪಾತ್ರರಾಗಿರುವ ಇವರ ವಿದ್ವತ್ತನ್ನು ಪರಿಗಣಿಸಿ ನಾಡೋಜ ಗೌರವ ನೀಡಲಾಗುತ್ತಿದೆ.

ಪಾರದರ್ಶಕತೆಯ ಹರಿಕಾರ ಡಾ. ಎಚ್.ಸಿ. ಸತ್ಯನ್: ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತರಾದ ಡಾ. ಎಚ್.ಸಿ. ಸತ್ಯನ್ ಅವರು ತಮ್ಮ ದಕ್ಷ ಆಡಳಿತ ಮತ್ತು ಸಾಮಾಜಿಕ ಕಳಕಳಿಯಿಂದ ಗುರುತಿಸಿಕೊಂಡವರು. ಹಾಸನದಲ್ಲಿ ಜನಿಸಿದ ಇವರು ಸಾರಿಗೆ ಇಲಾಖೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದು, ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 2.12 ಕೋಟಿ ರೂ. ದಂಡ ವಿಧಿಸುವ ಮೂಲಕ ದೇಶದಲ್ಲೇ ದಾಖಲೆ ಬರೆದಿದ್ದ ಇವರು, ರಸ್ತೆ ಸುರಕ್ಷತೆ ಮತ್ತು ಬಡವರಿಗೆ ಚಾಲನಾ ತರಬೇತಿ ನೀಡುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಆಡಳಿತಾತ್ಮಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ.

Please follow and like us:

 

 

 

 

 

 

Translate »
[t4b-ticker]
error: Content is protected !!