January 15, 2026

Hampi times

Kannada News Portal from Vijayanagara

ಸಮಾಜ ಸುಧಾರಣೆಯ ಯುಗಪುರುಷ – ಸ್ವಾಮಿ ವಿವೇಕಾನಂದರು

https://youtu.be/NHc6OMSu0K4?si=SI_K4goOPEgwo6h2

 

” ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಿದ ಮೇಲೆ ನನ್ನ ತಾಯ್ನಾಡಿನ ಬಗ್ಗೆ ನನಗಿದ್ದ ಪ್ರೇಮ ಸಾವಿರ ಪಟ್ಟು ಹೆಚ್ಚಾಯಿತು. ”
ಮಹಾತ್ಮ ಗಾಂಧೀಜಿ

” ನೀವು ಭಾರತವನ್ನು ಅರಿಯಬೇಕೆಂದಿದ್ದರೆ, ವಿವೇಕಾನಂದರ ಲೇಖನ ಭಾಷಣಗಳನ್ನು ಅಧ್ಯಯನ ಮಾಡಿ  ”
ರವೀಂದ್ರನಾಥ ಟ್ಯಾಗೋರ್

ವಿಶ್ವದಲ್ಲೇ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ ಭಾರತ. ಇಂತಹ ನಾಡಿನಲ್ಲಿ ಕಾಲಕಾಲಕ್ಕೆ ಅವತರಿಸಿದ ಮಹನೀಯರು ಅನೇಕರು. ಅವರುಗಳಲ್ಲಿ ಸಂತ ಮಹಾಂತರು, ಯೋಗಿಗಳು, ಆಧ್ಯಾತ್ಮಿಕ ಮಹಾಪುರುಷರು, ಸಾಮಾಜಿಕ ಸುಧಾರಕರು, ಹಾಗೂ ಧಾರ್ಮಿಕ ಸುಧಾರಕರು ಪ್ರಮುಖರು. ಅಂತಹ ಮಹನೀಯರ ಸಾಲಿನಲ್ಲಿ ಮೇಲ್ಪಂಕಿಯಲ್ಲಿರುವ ಪ್ರಪಂಚದ ಮಹಾನ್ ಮೇಧಾವಿ,ಭಾರತ ದೇಶ ಕಂಡ ಧೀರ ಸನ್ಯಾಸಿ, ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ಸ್ವಾಮಿ ವಿವೇಕಾನಂದರು ಅಗ್ರಗಣ್ಯರು.

ಭಾರತದ ಮಹಾ ಚೇತನ, ಯುವ ನಾಯಕರ ಆಶಾಕಿರಣ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಮಾರ್ಗ ಸೂಚಿಸಿದ ಸುಧಾರಕ, ನೋವುಂಡ ಸಮುದಾಯಗಳ ಹಿತ ರಕ್ಷಣೆಗಾಗಿ ಹೋರಾಡಿದ ಆಪ್ತರಕ್ಷಕ, ಅಧರ್ಮ ಅನೀತಿಯನ್ನು ವಿರೋಧಿಸಿದ ವಿವೇಚನಾಕಾರ, ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಬೇರು ಬಿಟ್ಟಿರುವ ಸಾಮಾಜಿಕ ಪಿಡುಗುಗಳ ವಿರುದ್ಧವಾಗಿ ಜನರಲ್ಲಿ ಅರಿವನ್ನು, ಜಾಗೃತಿಯನ್ನು ಮೂಡಿಸಿ ಆತ್ಮಭಿಮಾನವನ್ನು ಅರಳಿಸಿ, ಅಂಧಕಾರದಲ್ಲಿ ತೊಳದಾಡುತ್ತಿದ್ದವರಿಗೆ ಬೆಳಕಿನ ದಾರಿಯನ್ನು ಸೂಚಿಸಿದ ದಿಕ್ಸೂಚಕ ಶ್ರೀ ಸ್ವಾಮಿ ವಿವೇಕಾನಂದರು.

ಭಾರತದ ವೇದಾಂತ ಮತ್ತು ಯೋಗದ ಕಡೆಗೆ ಪಾಶ್ಚಾತ್ಯ ಜಗತ್ತು ಕಣ್ಣು ತೆರೆದು ನೋಡುವಂತೆ ಮಾಡಿದ ಯುಗ ಪ್ರವರ್ತಕರಾದ ಪೂರ್ತಿಯುತ ವಾಗ್ಮಿಯಾದ ವಿವೇಕಾನಂದರು ಪ್ರತಿಷ್ಠಿತ ಕೌಟುಂಬಿಕ ಪರಿವಾರದಲ್ಲಿ ಜನಿಸಿ ಭೋಗ ಜೀವನ ಬದಿಗೊತ್ತಿ ಹಿಂದೂ ಧರ್ಮದ ರಕ್ಷಣೆಗಾಗಿ, ಭಾರತದ ಸ್ವಾತಂತ್ರ್ಯಕ್ಕಾಗಿ ಬದುಕನ್ನೇ ಪರೋಕ್ಷವಾಗಿ ಸಮರ್ಪಿಸಿದ ರಾಷ್ಟ್ರೀಯತೆಯ ಪಿತಾಮಹರಿವರು. ನೀರಸ ವಾಗಿದ್ದ ಯುವ ನಾಯಕರ ನರನಾಡಿಗಳಿಗೆ ಚೈತನ್ಯದ ಚಿಲುಮೆಯಾದ ದಿವ್ಯ ಜ್ಯೋತಿ ಸ್ವಾಮಿ ವಿವೇಕಾನಂದರು. ಇವರ ಮೂಲ ಹೆಸರು ನರೇಂದ್ರನಾಥ ದತ್ತ 1863ರ ಜನವರಿ 12ರಂದು ಕೊಲ್ಕೊತ್ತಾದ ಶ್ರೀಮಂತ ಕುಟುಂಬ ಒಂದರಲ್ಲಿ ಜನಿಸಿದರು. ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿ ಇವರ ಆದರ್ಶ ಸುಸಂಸ್ಕೃತ  ತಂದೆ ತಾಯಿಗಳು. ತಮ್ಮ ಬಾಲ್ಯದಲ್ಲಿಯೇ ನರೇಂದ್ರ ಸದೃಢ ದೇಹ,ಪ್ರಕರ ಧೀಶಕ್ತಿ ಹೊಂದಿದ್ದರು. ಗಣಿತ ಇತಿಹಾಸ ತತ್ವಶಾಸ್ತ್ರ ನ್ಯಾಯಶಾಸ್ತ್ರ, ಅಧ್ಯಯನ ಮಾಡಿದರು. ತಮ್ಮ 18ನೇ ವಯಸ್ಸಿನಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿ ಮಾಡಿದರು. ಶ್ರೀ ಗುರುವಿನ ಪ್ರೀತಿಯುಕ್ತ ಮಾರ್ಗದರ್ಶನದಲ್ಲಿ ನರೇಂದ್ರ ಒಬ್ಬ ಆಧ್ಯಾತ್ಮಿಕ ಜ್ಯೋತಿಯಾಗಿ ಪ್ರಕಾಶಿಸಿದರು.

ಸ್ವಾಮಿ ವಿವೇಕಾನಂದರಿಗೆ ನಮ್ಮ ದೇಶದ ಯುವಶಕ್ತಿಯಲ್ಲಿ ಅಪಾರವಾದ ನಂಬಿಕೆ ಇತ್ತು. ಯುವಕರನ್ನು ಸಿಂಹದ ಮರಿಗಳು ಎಂದು ಕರೆಯುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಅವರಲ್ಲಿ ಸದ್ದುಗುಣಗಳನ್ನು ಬೆಳೆಸಿದರೆ ಮುಂದೆ ಸಚಾರಿತ್ರವುಳ್ಳ ಪ್ರಜ್ಞಾವಂತ ಪ್ರಜೆಗಳಾಗಿ ದೇಶದ ಪ್ರಗತಿಗೆ ಕಾರಣರಾಗುತ್ತಾರೆಂಬ ಮನೋಭಾವ ಹೊಂದಿದ್ದರು. ಭಾರತದ ಯುವ ಜನಾಂಗದ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದಿದ್ದ ವಿವೇಕಾನಂದರು ಯಾವುದೇ ಗುರಿಯನ್ನು ಸಾಧಿಸಬೇಕಾದರೆ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢನಾಗಿಯು ಇರಬೇಕೆಂಬ ನಿಲುವು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಯುವಕರಿಗೆ ನೀವು ಕಬ್ಬಿಣದಂತಹ ಮಾಂಸ ಖಂಡಗಳು ಹಾಗೂ ಉಕ್ಕಿನಂತಹ ನರಗಳನ್ನು ಬೆಳೆಸಿಕೊಳ್ಳಬೇಕು, ಜೀವನದಲ್ಲಿ ಉತ್ತಮ ಗುರಿಯನ್ನು ಇಟ್ಟುಕೊಳ್ಳಿ ಎಂದು ಹುರಿದುಂಬಿಸುತ್ತ ” ಎಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ (ಉತ್ತಿಷ್ಠಿತ,ಜಾಗೃತ,ಪ್ರಾಪ್ತ್ಯ ವರಾನ್ನಿಭೋಧತ ) ಹೇಳಿ ಜಾಗೃತರಾಗಿ, ಗುರಿಯನ್ನು ಮುಟ್ಟುವವರೆಗೆ ನಿಲ್ಲಬೇಡಿ, ಯುವಕರೇ ನಿರ್ಭಹಿತರಾಗಿ ಶ್ರೇಷ್ಠ ಕಾರ್ಯ ಸಾಧಿಸಿ.ನಮ್ಮಲ್ಲಿರುವ ಭಯವೇ ನಮಗೆ ಸಾವು, ಧೈರ್ಯವೇ  ನಮ್ಮ ಜೀವನ ಹಾಗೂ ಶಕ್ತಿ ಎಂದು ಪ್ರೇರೇಪಿಸುತ್ತಾ  ” ನನಗೆ ನೂರಾರು ಜನ ನಿರುತ್ಸಾಹಿಗಳು ಬೇಡ, ಕೆಲವೇ ಕೆಲವು ಜನ ಉತ್ಸಾಹ ಶೀಲ ಯುವಕರನ್ನು ನೀಡಿ ಅವರಿಂದಲೇ ಭವ್ಯ ಭಾರತವನ್ನು ಕಟ್ಟುತ್ತೇನೆ ಎದ್ದು ನಿಂತು ಹೋರಾಡಿ, ಎಂದಿಗೂ ಒಂದು ಹೆಜ್ಜೆಯನ್ನು ಹಿಂದೆ ಇಡಬೇಡಿ ಇದೇ ಆದರ್ಶ ಎಂಬ ದಿವ್ಯ ಸಂದೇಶಗಳನ್ನು ಚಲನ ರಹಿತರಾದ ಭಾರತೀಯರಲ್ಲಿ ಬಡೆದೆಬ್ಬಿಸುವ ಮೂಲಕ ಸ್ವಸ್ಥ ಸಮಾಜ ಸ್ಥಾಪನೆಗೆ ಮೂಲ ಹರಿಕಾರರಾದರು.

 

ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಧರ್ಮ ಸಮ್ಮೇಳನವೊಂದನ್ನು ಆಯೋಜಿಸಲಾಗುತ್ತದೆ ಎಂಬ ಸುದ್ದಿಯನ್ನು ಸ್ವಾಮಿ ವಿವೇಕಾನಂದರು ತಮ್ಮ ಭಾರತ ಸಂಚಾರದ ಅವಧಿಯಲ್ಲಿ ಕೇಳಿದರು. ತಮ್ಮ ಗುರುವಿನ ಸಂದೇಶಗಳನ್ನು ಹಿಂದುಸ್ಥಾನದ ಸಂಸ್ಕೃತಿ ಪರಂಪರೆಯನ್ನು  ಜಗತ್ತಿಗೆ ನಿವೇದಿಸಲು ಈ ಸಮ್ಮೇಳನ ಸರಿಯಾದ ವೇದಿಕೆಯಾಗುವುದೆಂದು ಅವರಿಗೆ ಅನಿಸಿತು. ಆದ್ದರಿಂದ ಅವರು ಅಮೆರಿಕಕ್ಕೆ ಹೋಗಲು ನಿರ್ಧರಿಸಿದರು. ಆ ಸಮ್ಮೇಳನದಲ್ಲಿ ವಿವೇಕಾನಂದರು ಮಾತನಾಡುತ್ತಾ ಆರಂಭಿಸಿದ ಎರಡು ಶಬ್ದಗಳೆಂದರೆ “ನನ್ನ ಸಹೋದರ ಸಹೋದರಿಯರೇ” ಎಂಬುದು. ಆ ಎರಡು ಶಬ್ದಗಳು ಹಾಗೂ ಅವರ ಸ್ಪೂರ್ತಿಯುತ ಭಾಷಣ ಸ್ಮರಿಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಅವರು ಭಾಷಣದಲ್ಲಿ ಮಾತನಾಡುತ್ತಾ, ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು ಪುಣ್ಯಭೂಮಿ ಎಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ ಅದು ನನ್ನ ಭಾರತ ಮಾತ್ರ. ಜಗತ್ತಿನಲ್ಲಿ ಜ್ಞಾನವು ಮೊಟ್ಟಮೊದಲು ಉದಯಿಸಿದ್ದು ಈ ನನ್ನ ಪುರಾತನ ಭೂಮಿಯಲ್ಲಿಯೇ. ‘ನನಗೆ ಹೆಮ್ಮೆ ಇದೆ. ವಿಶ್ವಕ್ಕೆ ಸಹ ಬಾಳ್ವೆ, ಸಹೋದರತೆಯನ್ನು ಕಲಿಸಿದ ಮಾತೃ ರಾಷ್ಟ್ರ ನನ್ನದು, ಸರ್ವಧರ್ಮಗಳನ್ನು ಗೌರವಿಸಿ ಅನೇಕಾನೇಕ ನಿರಾಶ್ರಿತರಿಗೆ ನೆಲೆ, ನಿವಾಸವಾದ ಮಾತೃಭೂಮಿ ನನ್ನದು. ಯಹೂದಿಗಳ ಪವಿತ್ರ ದೇಗುಲವನ್ನು ರೋಮನ್ನರು ನಾಶಪಡಿಸಿ ಮೇಲರಗಿದಾಗ ಯಹೂದಿಗಳಿಗೆ ಆಶ್ರಯವಾಗಿದ್ದು ಹಿಂದುಸ್ತಾನ. ಹೀಗಾಗಿ ಭಾರತದ ಮಣ್ಣೇ ನನಗೆ ಪವಿತ್ರ. ಅದರ ಗಾಳಿಯೇ ನನಗೆ ಪವಿತ್ರ. ಅದೇ ನನ್ನ ತೀರ್ಥಕ್ಷೇತ್ರ. ಆ ದೇವರೇ ನನ್ನ ದೇವರು ಎಂದು ಅಭಿಪ್ರಾಯ ಪಡುತ್ತಾ ಭಾರತ ದೇಶವನ್ನು ಪ್ರಗತಿಯ ಹಾದಿಯಲ್ಲಿ ಕೊಂಡಯ್ಯಬೇಕು, ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಬೇಕು, ಸಮಸ್ತ ಜನತೆಯಲ್ಲಿ ರಾಷ್ಟ್ರಾಭಿಮಾನದ ಸ್ವಭಾವಗಳನ್ನು ಬಿತ್ತ ಬೇಕಿದೆ ಎಂದು ಜಾಗೃತ ರನ್ನಾಗಿಸಿದರು

ಭಾರತದ ಪ್ರತಿ ದೇಗುಲದಲ್ಲೂ ಪ್ರತಿ ಪ್ರಾರ್ಥನೆಯ ಕೊನೆಗೂ ನಾವು “ಸರ್ವೇ ಜನ ಸುಖಿನೋ ಭವಂತು ” ಎನ್ನುತ್ತೇವೆ ಅಂತಹ ಮನೋಭಾವ ನನ್ನ ಮಾತೃಭೂಮಿಯಲ್ಲಿದೆ. ಸರ್ವರಿಗೂ ಸುಖವಾಗಲಿ, ಒಳ್ಳೆಯದಾಗಲಿ ಎಂದು ಆಶಿಸುವ ರಾಷ್ಟ್ರ ಹಿಂದುಸ್ತಾನ. ನನ್ನ ಧರ್ಮ ಎಂದಿಗೂ ಖಡ್ಗವನ್ನು ಝಳಫಲಿಸಲಿಲ್ಲ, ರಕ್ತಪಾತ ಮಾಡಲಿಲ್ಲ, ಅದರ ಬಾಯಿಂದ ಯಾವಾಗಲೂ ಆಶೀರ್ವಾದ ಪ್ರೀತಿ ಶಾಂತಿ ಸಹಾನುಭೂತಿಯ ವಾಣಿಗಳೇ ಬರುತ್ತಿದ್ದವು .ಅದು ಎಂದೂ ಧರ್ಮವನ್ನು ಒತ್ತಾಯದಿಂದ ಏರಲಿಲ್ಲ. ಮತಾಂತರಿಸಿದ ಉದಾಹರಣೆಗಳಂತೂ ಇಲ್ಲವೇ ಇಲ್ಲ. ಅಂತಹ ಧರ್ಮ ನನ್ನದು. ನಾನೊಬ್ಬ ಹಿಂದು, ಅದು ನನ್ನ ಹೆಮ್ಮೆ. ಹೀಗೆ ಹಿಂದೂ ಧರ್ಮದ ತಿರುಳನ್ನು ಅರ್ಥಗರ್ಭಿತವಾಗಿ ಅತ್ಯಂತ ಸರಳವಾಗಿ, ಮೌಲ್ಯಯುತವಾಗಿ ಜಾಗೃತ ರನ್ನಾಗಿಸುತ್ತ,ಹಸಿದ ಹೊಟ್ಟೆಗೆ ಅನ್ನವನ್ನು ಕೊಡುವುದೇ ನನ್ನ ಪ್ರಕಾರ ಧರ್ಮ. ಯಾವ ಧರ್ಮ ಹಸಿದ ಹೊಟ್ಟೆಗೆ ಆಹಾರವನ್ನು ನೀಡುವುದಿಲ್ಲವೋ, ವಿಧವೆಯರ ಕಣ್ಣೀರನ್ನು ಒರೆಸುವುದಿಲ್ಲವೋ ಅಂತಹ ಧರ್ಮದಲ್ಲಿ ನನಗೆ ವಿಶ್ವಾಸವಿಲ್ಲ’ ಎಂಬ ವಿವೇಕಾನಂದರ ಮನೋಭಾವಗಳು ಅವರ ಸಾಮಾಜಿಕ ಕಳಕಳಿಯನ್ನು ಶೋಷಿತರ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸುತ್ತವೆ.

ಸಮಾಜದಲ್ಲಿನ ಜಾತಿ ಪದ್ಧತಿ, ಅಂಧ ಆಚರಣೆಗಳು, ಅರ್ಥಹೀನ ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿದ ವಿವೇಕಾನಂದರು ಈ ಲಕ್ಷಣಗಳೇ ಸಮಾಜದ ಹಿನ್ನೆಡೆಗೆ ಕಾರಣವಾಗಿದ್ದು, ಜನತೆಯ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಇಂತಹ ಮಾರಕ ಸ್ವಭಾವಗಳು ನಿರ್ನಾಮವಾಗಬೇಕು. ಸಮಾಜದಲ್ಲಿ ಪುರುಷರಿಗಿರುವ ಹಕ್ಕುಗಳಂತೆ ಸ್ತ್ರೀಯರಿಗೂ ಸಹ ಇರಬೇಕೆಂಬ ಸಮಾನತೆಯ ತತ್ವ  ಹೇಳುತ್ತಾ, ಯಾವ ಸಮಾಜ ಸ್ತ್ರೀಯರನ್ನು ಗೌರವಿಸುತ್ತದೆಯೋ ಅದು ಸಮೃದ್ಧಿಯಾಗುತ್ತದೆ ಎಂಬ ಮನೋಧೋರಣೆ ವಿವೇಕಾನಂದರದಾಗಿತ್ತು.

ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ಕಂಡು ಬಂದಿರುವ ಮೂಲಭೂತ ಸಮಸ್ಯೆ ಎಂದರೆ ಅನಕ್ಷರತೆ ಹಾಗೂ ಶಿಕ್ಷಣದ ಕೊರತೆ. ಇದರಿಂದಾಗಿಯೇ ಸಮಾಜದಲ್ಲಿ ಜ್ವಲಂತ ಸಮಸ್ಯೆಗಳು ಉಲ್ಬಣವಾಗಿವೆ. ಸರ್ವರಿಗೂ ಶಿಕ್ಷಣ ಕೊಡುವುದೇ ಭಾರತದ ಹಲವು ಸಮಸ್ಯೆಗಳ ನಿವಾರಣೆಗೆ ಮೂಲ ಸಾಧನ ಎಂದರು. ವಿದ್ಯಾರ್ಥಿಯಲ್ಲಿರುವ ಆಂತರಿಕ ಶಕ್ತಿಯನ್ನು ಹೊರ ತರುವುದೇ ಶಿಕ್ಷಣ. ಈ ಮುಖಾಂತರ ಜ್ಞಾನ ಪ್ರಸಾರವನ್ನು ಮಾಡಿ ನಮ್ಮ ಅಜ್ಞಾನವನ್ನು ಹೋಗಲಾಡಿಸುವ ಏಕೈಕ ಮಾರ್ಗ ಶಿಕ್ಷಣ ಎಂದರು. “ಯಾವ ವಿದ್ಯಾವಂತ ವ್ಯಕ್ತಿ, ತಾನು ಉತ್ತಮವಾದ ಶಿಕ್ಷಣವನ್ನು ಪಡೆದು, ಬಡವರಿಗಾಗಿ, ದೀನ ದಲಿತರಿಗಾಗಿ, ಅವಿದ್ಯಾವಂತರಿಗೆ ಅಜ್ಞಾನದ ಕೂಪದಿಂದ ಮೇಲೆತ್ತಲು ಸ್ವಲ್ಪವೂ ಶ್ರಮಿಸುವುದಿಲ್ಲವೋ ಅಂತವನನ್ನು ನಾನು ದುರಾತ್ಮ ಎನ್ನುತ್ತೇನೆ. ಇತರರಿಗೆ ಜ್ಞಾನಪ್ರಸಾರನ ಮಾಡದಿರುವುದು ಪಾಪ ಮಾಡಿದಂತೆ ” ಎಂದು ತಿಳಿ ಹೇಳಿದರು. ಶತಶತಮಾನಗಳಿಂದ ಶೋಷಣೆ ಹಾಗೂ ಸಾಮಾಜಿಕ ತುಳಿತದಿಂದಾಗಿ ಬಡ ಜನರು, ಅದರಲ್ಲೂ ಕೆಲ ಜಾತಿಗೆ ಸೇರಿದವರು ತಮ್ಮ ಆತ್ಮ ಗೌರವವನ್ನು ಆಶೋತ್ತರಗಳನ್ನು ಮುನ್ನಡೆ ಸಾಧಿಸುವ ಪ್ರವೃತ್ತಿಗಳನ್ನು ಕಳೆದುಕೊಂಡಿದ್ದರು. ಆದ್ದರಿಂದ ಅವರಲ್ಲಿ ಶ್ರದ್ಧೆಯನ್ನು ತುಂಬುವ ಒಂದು ಶಕ್ತಿಯುತವಾದ ಸಂದೇಶ ಅವರಿಗೆ ಬೇಕಾಗಿತ್ತು. ವಿವೇಕಾನಂದರು ವೇದಾಂತದಲ್ಲಿ ಈ ಸಂದೇಶವನ್ನು ಕಂಡುಕೊಂಡರು. ಸಾಮಾನ್ಯ ಜನತೆಯ ಉದ್ಧಾರವಾಗಬೇಕಿದ್ದರೆ ಅವರಿಗೆ ಲೌಕಿಕ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣ ಎರಡನ್ನು ನೀಡುವುದು ಅವಶ್ಯವೆಂದರು. ” ಬಡವರ ಪಾಲನ್ನು ಕಸಿದುಕೊಂಡು ಶ್ರೀಮಂತರಾದವರ ವರ್ಗ ಇಂಚಿತ್ತಾದರೂ ಅವರ ಏಳಿಗೆಗೆ ಶ್ರಮಿಸದಿದ್ದರೆ ಅಂತವರು ಪಾಪಿಷ್ಟರು, ನನ್ನ ಮನಸ್ಸು ದೀನದಲಿತರ ಪರವಾಗಿ ಮಿಡಿಯುತ್ತದೆ. ಬಡ ಜನತೆಯಲ್ಲಿಯೇ ದೇವರ ಸಾಕ್ಷಾತ್ಕಾರವನ್ನು ಪಡೆಯಬೇಕು ಎನ್ನುತ್ತಾ “ದರಿದ್ರ ದೇವೋಭವ ” (ಬಡವರು ನಿಮ್ಮ ದೇವರಾಗಲಿ) ಎಂಬ ಮಂತ್ರ ಉಪದೇಶಿಸಿದರು.ರಾಮಕೃಷ್ಣ ಮಿಷನ್ ಮುಖಾಂತರ ಶೈಕ್ಷಣಿಕ ಸೌಲಭ್ಯ, ವೈದ್ಯಕೀಯ ಸೇವೆ, ಸಾಮಾಜಿಕ ಸೇವೆ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡರು.

ಸ್ವಾಮಿ ವಿವೇಕಾನಂದ ರನ್ನು ಕುರಿತು ಸುಭಾಷ್ ಚಂದ್ರ ಬೋಸ್ ರವರು ಈ ರೀತಿಯಾಗಿ ಹೇಳುತ್ತಾರೆ “Modern India is Vivekananda’s creation” ಎಂತಲೂ “Undoubtedly he   is the father of Indian nationalism’ ಎಂದು ಹೇಳುತ್ತಾರೆ.

ಪಾಶ್ಚಾತ್ಯ ಚಿಂತಕರೊಬ್ಬರು ಹೇಳುವಂತೆ ” ಎಲ್ಲಿಯವರೆಗೆ ಭಾರತ ವಿವೇಕಾನಂದರನ್ನು, ಅವರ ತತ್ವಗಳನ್ನು ನಿರ್ಲಕ್ಷಿಸುವುದೋ, ಅಲ್ಲಿಯವರೆಗೆ ಜಗತ್ತಿನಲ್ಲಿ ಭಾರತ ತಲೆಯೆತ್ತಿ ನಿಲ್ಲಲಾರದು  “. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಭಾರತೀಯ ವಿವೇಕಾನಂದರ ಆದರ್ಶ ಚಿಂತನೆ, ರಾಷ್ಟ್ರಾಭಿಮಾನ, ಸೇವಾ ಮನೋಭಾವ, ಕ್ರಿಯಾಶೀಲ ವ್ಯಕ್ತಿತ್ವ ಅರಿಯುವುದು, ಅಳವಡಿಸಿಕೊಳ್ಳುವುದು ಅವಶ್ಯಕತೆ ಹಾಗೂ ಅನಿವಾರ್ಯವಾಗಿದೆ. ಇಂದು ನಮ್ಮ ನಾಡಿನ ಲಕ್ಷಾಂತರ ಮನೆಗಳಲ್ಲಿ ಅವರ ಭಾವಚಿತ್ರ, ಸಾಹಿತ್ಯ, ಚಿಂತನಗೋಷ್ಠಿ, ಭಜನೆ, ಉಪನ್ಯಾಸ ಮುಂತಾದವುಗಳ ಮೂಲಕ ಸ್ವಾಮಿ ವಿವೇಕಾನಂದರು ಜೀವಂತವಾಗಿದ್ದಾರೆ. ಹೀಗಾಗಿ ನಮ್ಮ ಪಾಲಿಗೆ ಸ್ವಾಮಿ ವಿವೇಕಾನಂದರು ಚಿರಂಜೀವಿ! ಅಮರ ! ಅಮರ ! ಅಮರ !!!.

ಗಿರಿಯಪ್ಪ ಜೋಗಣ್ಣವರ
ಇತಿಹಾಸ ಉಪನ್ಯಾಸಕರು
ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಪೇಟೆ.

Please follow and like us:

 

 

 

 

 

 

Translate »
[t4b-ticker]
error: Content is protected !!