https://youtu.be/NHc6OMSu0K4?si=SI_K4goOPEgwo6h2

ಮಧ್ಯರಾತ್ರಿಯ ಮೌನವನ್ನು ಚೀರಿ ಆಕಾಶದಲ್ಲಿ ಗರ್ಜಿಸುತ್ತಿದ್ದ ಜಾಗ್ವಾರ್ ಯುದ್ಧ ವಿಮಾನ…ಆ ಯಂತ್ರದ ಕಾಕ್ಪಿಟ್‌ನಲ್ಲಿ ಕುಳಿತಿದ್ದವರು ಒಬ್ಬ ಯುವತಿ.ಅವಳ ಕಣ್ಣುಗಳಲ್ಲಿ ಭಯವಿಲ್ಲ; ಕನಸಿನ ಹೊಳಪು ಮಾತ್ರ.ಅವಳ ಹೃದಯದಲ್ಲಿ ಒಂದು ಮಂತ್ರ. ಅದುವೇ “ರಾಷ್ಟ್ರಸೇವೆಗೆಲಿಂಗವಿಲ್ಲ”.
ಇದನ್ನೂ ಓದಿ: ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಆ ಯುವತಿಯೇಫ್ಯ್ಲಂಗ್ ಆಫೀಸರ್ ತನುಷ್ಕಾ ಸಿಂಗ್. ಇದು ಕೇವಲ ಒಂದು ಮಹಿಳೆಯ ಯಶೋಗಾಥೆಯಲ್ಲ. ಇದು ಸಾವಿರಾರು ಯುವತಿಯರ ಕನಸುಗಳಿಗೆ ರೆಕ್ಕೆ ನೀಡಿದ ಕಥೆ. ಸೈನಿಕನ ಮನೆಯಲ್ಲೊಂದು ಹೊಸ ಕನಸಾಗಿ ಜನ್ಮತಾಳಿದ ಮಗು ಈಕೆ. ಉತ್ತರ ಪ್ರದೇಶದಲ್ಲಿ ೨೦೦೧ ರಂದು ತನುಷ್ಕಾ ಸಿಂಗ್ ಜನಿಸಿದ್ದು ಸೈನಿಕ ಪರಂಪರೆಯ ಕುಟುಂಬದಲ್ಲಿ. ಅಜ್ಜ ಕ್ಯಾಪ್ಟನ್ ಡಿ.ಬಿ. ಸಿಂಗ್. ದೇಶಕ್ಕಾಗಿ ಹೋರಾಡಿದ ಯೋಧ. ತಂದೆ ಲೆಫ್ಟಿನೆಂಟ್ ಕರ್ನಲ್ ಅಜಯ್ ಪ್ರತಾಪ್ ಸಿಂಗ್. ಅವರು ಶಿಸ್ತು, ತ್ಯಾಗ, ದೇಶಪ್ರೇಮದ ಜೀವಂತಮಾದರಿ.
ಮನೆಯ ಗೋಡೆಗಳಲ್ಲಿ ಪದಕಗಳ ಹೊಳಪು, ಕಥೆಗಳಲ್ಲಿ ಯುದ್ಧಭೂಮಿಯ ನೆನಪುಗಳು. ಅಂತಹ ಮನೆಯ ಮಗಳಲ್ಲಿ ದೇಶಸೇವೆಯ ಬೀಜ ಬಿತ್ತದೇ ಇರಲಾರದು. ೨೦೦೭ರಲ್ಲಿ ಕುಟುಂಬ ಮಂಗಳೂರಿಗೆ ಬಂದಾಗ, ಹೊಸ ಊರು, ಹೊಸ ಜೀವನ. ಆದರೆ ಕನಸು ಮಾತ್ರ ಹಳೆಯದೇ; ದೇಶಕ್ಕಾಗಿ ಏನಾದರೂ ಮಾಡಬೇಕು.
“ಸೇನೆಯಲ್ಲೇನಾ?” ಎಂಬ ಪ್ರಶ್ನೆಗೆ ಆಕಾಶವೇ ಉತ್ತರ. ಎಲ್ಲರೂ ಅಂದುಕೊಂಡಿದ್ದು. “ಅವಳು ತಂದೆಯಂತೆ ಸೇನೆಗೆ ಸೇರುತ್ತಾಳೆ” ಎಂದು. ತನುಷ್ಕಾಳ ಮನಸ್ಸಿನಲ್ಲಿ ಇನ್ನೊಂದು ಪ್ರಶ್ನೆ ಮೂಡಿತ್ತು:“ನಾನು ನೆಲದಲ್ಲಿ ನಡೆಯಬೇಕಾ? ಅಥವಾ ಆಕಾಶದಲ್ಲಿ ಹಾರಬೇಕಾ?”ವಿಮಾನಗಳ ಗರ್ಜನೆ, ರೆಕ್ಕೆಗಳ ಚಲನೆ, ತಂತ್ರಜ್ಞಾನದ ಮಾಯೆ, ಆಕಾಶವೇ ಅವಳನ್ನು ಕರೆಯುತ್ತಿತ್ತು. ಮುಂದಿನ ೧೦ ವರ್ಷಗಳಲ್ಲಿ ನಾನು ವಿಮಾನದಲ್ಲಿ ಹಾರಾಡಬೇಕು. ಅದು ಈ ದೇಶಸೇವೆಯ ಸಲುವಾಗಿ. ಹೀಗೆ ಸಂಕಲ್ಪ ಮಾಡಿ ಅದನ್ನು ನನಸಾಗಿಸಿಕೊಂಡವಳು ಈಕೆ.
ಮಂಗಳೂರಿನ ಸುರತ್ಕಲ್‌ನ dPS mrpl ಶಾಲೆಯಲ್ಲಿ ಓದುತ್ತಿದ್ದ ಆ ಹುಡುಗಿ,ನಂತರ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿAಗ್ ಆಯ್ಕೆ ಮಾಡಿಕೊಂಡಳು.ಏಕೆಂದರೆ ಕನಸಿಗೆ ಕೇವಲ ಧೈರ್ಯವಷ್ಟೇ ಸಾಲದು; ಅದಕ್ಕೆ ಜ್ಞಾನವೂ ಬೇಕು ಎಂಬುದು ಅವಳಿಗೆ ಗೊತ್ತಿತ್ತು.
ಪ್ರೇರಣೆಯಿಂದ ಸಂಕಲ್ಪದವರೆಗೆ : ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್‌ಗಳಾದಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್ ಅವರ ಕಥೆಗಳುತನುಷ್ಕಾಳ ಹೃದಯದಲ್ಲಿ ಬೆಂಕಿ ಹಚ್ಚಿದವು.“ಅವರು ಸಾಧ್ಯವಾದರೆ, ನಾನು ಏಕೆ ಸಾಧ್ಯವಾಗಬಾರದು?”ಎಂಬ ಪ್ರಶ್ನೆಯೇ ಅವಳ ಜೀವನದ ತಿರುವಾಯಿತು.

ತೆಲಂಗಾಣದ ದುಂಡಿಗಲ್‌ನ ಭಾರತೀಯ ವಾಯುಪಡೆ ಅಕಾಡೆಮಿಯಲ್ಲಿ ಆರಂಭವಾಯಿತು ನಿಜವಾದ ಪರೀಕ್ಷೆ: ಕಠಿಣ ತರಬೇತಿ… ಕಠಿಣ ನಿರ್ಧಾರ… ಆದರೆ ಅಚಲ ನಂಬಿಕೆ. ವಾಯುಪಡೆಯ ತರಬೇತಿ ಎಂದರೆ ಕನಸಿನ ಹಾರಾಟವಲ್ಲ. ಅದು ಬೆವರಿನ, ನೋವಿನ, ಸೋಲಿನ ಎದುರು ನಿಂತು ಗೆಲ್ಲುವ ಯುದ್ಧ. HTT-40 ಮತ್ತು Pilatus PC-7 ಮೊದಲ ಹಾರಾಟದ ಪಾಠ. Hawk MK 132 ಯುದ್ಧಕ್ಕೆ ಸಿದ್ಧಗೊಳಿಸುವ ಹಂತ ಮತ್ತು ಕೊನೆಗೆ…ಜಾಗ್ವಾರ್ ಫೈಟರ್ ಜೆಟ್ ಪ್ರತಿಷ್ಠೆಯ ಶಿಖರ.
ದೈಹಿಕ ಶ್ರಮ, ಮಾನಸಿಕ ಒತ್ತಡ, ನಿರಂತರ ಪರೀಕ್ಷೆಗಳು: ಪುರುಷ ಪ್ರಧಾನ ಕ್ಷೇತ್ರದಲ್ಲಿ“ನೀನು ಮಾಡಬಲ್ಲೆಯಾ?” ಎಂಬ ಮೌನ ಪ್ರಶ್ನೆಗಳು. ಆದರೆ ತನುಷ್ಕಾ ಪ್ರತಿದಿನ ಒಂದೇ ಉತ್ತರ ನೀಡಿದರು. ಕಾರ್ಯದಿಂದ.
ಇತಿಹಾಸ ಬರೆಯಲಾದ ಕ್ಷಣ : ಆ ದಿನ ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಾಯಿತು.ಜಾಗ್ವಾರ್ ಫೈಟರ್ ಜೆಟ್ ಸ್ಕ್ವಾಡ್ರನ್ಗೆ ಖಾಯಂ ಆಗಿ ನೇಮಕಗೊಂಡ ಮೊದಲ ಮಹಿಳಾ ಪೈಲಟ್ ಎಂಬ ಗೌರವ ತನುಷ್ಕಾ ಸಿಂಗ್ ಅವರಿಗೆ ಲಭಿಸಿತು.
ಇದು ಪದವಿಯಲ್ಲ. ಇದು ಸಂದೇಶ: “ಯುದ್ಧ ಭೂಮಿಯ ಮುಂಚೂಣಿಯಲ್ಲೂ ಮಹಿಳೆ ನಿಲ್ಲಬಲ್ಲಳು.”“ಆಕಾಶವೂ ಮಹಿಳೆಯ ಕನಸಿಗೆ ಮಿತಿ ಅಲ್ಲ.”ಕುಟುಂಬದ ಕಣ್ಣುಗಳಲ್ಲಿ ಹೆಮ್ಮೆ, ದೇಶದ ಹೃದಯದಲ್ಲಿ ಆಸೆ. “ಇಡೀ ದೇಶವೇ ಅವಳ ಮೇಲೆ ಹೆಮ್ಮೆ ಪಡುತ್ತದೆ”ಎಂದು ಅಜ್ಜ ಕ್ಯಾಪ್ಟನ್ ಡಿ.ಬಿ. ಸಿಂಗ್ ಹೇಳಿದಾಗ,ಅದು ಕೇವಲ ಅಜ್ಜನ ಮಾತಲ್ಲ; ಒಂದು ರಾಷ್ಟ್ರದ ಭಾವನೆ.
ಇಂದಿರಾನಗರದ ಮನೆಗೆ ಬರುತ್ತಿದ್ದ ಶುಭಾಶಯಗಳುಒಂದು ವಿಷಯ ಹೇಳುತ್ತಿದ್ದವು. ಈ ಸಾಧನೆ ಒಬ್ಬರದಲ್ಲ, ಎಲ್ಲರದು. ಇಂದಿನ ಯುವತಿಯರೇ… ಈ ಕಥೆ ನಿಮ್ಮದೂ ಹೌದು. ನೀವು ಹಳ್ಳಿಯಲ್ಲಿ ಹುಟ್ಟಿರಬಹುದು. ಸಾಮಾನ್ಯ ಕುಟುಂಬದಿಂದ ಬಂದಿರಬಹುದು. ಸಮಾಜ ನಿಮ್ಮ ಮುಂದೆ ಸಾವಿರ “ಆದರೆ”ಗಳನ್ನು ಇಟ್ಟಿರಬಹುದು.
ಆದರೆ ತನುಷ್ಕಾ ಸಿಂಗ್ ಹೇಳಿಕೊಟ್ಟ ಪಾಠ ಒಂದೇ:ಕನಸು ಕಾಣಲು ಅನುಮತಿ ಕೇಳಬೇಡಿ. ನಿಮ್ಮ ಸಾಮರ್ಥ್ಯವನ್ನು ನೀವು ತೀರ್ಮಾನಿಸಿ. ಲಿಂಗವಲ್ಲ, ಸಂಕಲ್ಪ ನಿಮ್ಮ ಗುರುತು. ನೀವು ಶಿಕ್ಷಕಿ ಆಗಬಹುದು. ವಿಜ್ಞಾನಿಯಾಗಬಹುದು.ಅಧಿಕಾರಿಯಾಗಬಹುದು. ಅಥವಾ… ಆಕಾಶದಲ್ಲಿ ಹಾರುವ ಯೋಧರಾಗಬಹುದು. ಕನಸಿಗೆ ದಿಕ್ಕು ಕೊಡಿ.ಶ್ರಮಕ್ಕೆ ಬೆಲೆ ಕೊಡಿ.ಮತ್ತು ನಿಮ್ಮದೇ ಆದ ಇತಿಹಾಸ ಬರೆಯಿರಿ.ನ ಏಕೆಂದರೆ, ಆಕಾಶವೂ ಇಂದು ಮಹಿಳೆಯ ಕನಸಿಗೆ ಜಾಗ ಕೊಡುತ್ತಿದೆ.
— ಡಾ. ಪ್ರಸನ್ನದೇವರ ಮಠ ಅನಿಲಕುಮಾರ್, ಮಾಗಳ





More Stories
ಸಮಾಜ ಸುಧಾರಣೆಯ ಯುಗಪುರುಷ – ಸ್ವಾಮಿ ವಿವೇಕಾನಂದರು
ಏಳಿ ಎದ್ದೇಳಿ ಗುರಿ ಮುಟ್ಟುವ ತನಕವೂ ನಿಲ್ಲದಿರೀ
ಜಾನಪದ ಲೋಕದ ಗಾರುಡಿಗ ಡಾ.ಚಂದ್ರಶೇಖರ