February 9, 2026

Hampi times

Kannada News Portal from Vijayanagara

ಗುಡೇಕೋಟೆ ಇದು ಬರೀ ಊರಲ್ಲ, ಬದುಕಿನ ನೆನಪಿನ ಬುತ್ತಿಯನ್ನು ಹೊತ್ತೊಯ್ಯುವ ತೇರು

https://youtu.be/NHc6OMSu0K4?si=SI_K4goOPEgwo6h2

 

ನಕ್ಷೆಯಲ್ಲಿ ಒಂದು ಚುಕ್ಕೆಯಂತೆ ಕಂಡು ಬರುವ ನಮ್ಮ ಊರು ಬರೀ ಊರಲ್ಲ, ಅದು ನಮ್ಮ ಬದುಕಿನ ನೆನಪಿನ ಬುತ್ತಿಯನ್ನು ಹೊತ್ತೊಯ್ಯುವ ತೇರು.
ನಾವು ನೆಲೆ ನಿಂತ ನೆಲದ ಚರಿತ್ರೆಯನ್ನೊಮ್ಮೆ ನೋಡಿದರೆ ಎಲ್ಲಿಂದೆಲ್ಲಿಗೋ ಸಾಗಿಬಿಡುತ್ತೇವೆ. ಪೌರಾಣಿಕ ಕಾಲದಿಂದಲೂ ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಅನೇಕ ಪಟ್ಟಣಗಳನ್ನು ನಾವು ನೋಡಬಹುದು. ಅದರಂತೆಯೇ ಪ್ರಾಚೀನ ಕಾಲದಿಂದಲೂ ಮಾನವ ನೆಲೆಯ ಕರುಹುಗಳನ್ನು ತನ್ನೊಡಲಿನಲ್ಲಿ ಅಡಗಿಸಿಟ್ಟುಕೊಂಡಿರುವ ಮತ್ತು ಈಗಲೂ ಅಸ್ತಿತ್ವದಲ್ಲಿರುವ ಗ್ರಾಮವೇ ಗುಡೇಕೋಟೆ.

ಪ್ರತೀ ಊರಿನ ಹೆಸರಿನ ಹಿಂದೆ ಒಂದು ಕಾರಣವಿರುತ್ತದೆ, ಉದಾಹರಣೆಗೆ ಹೇಳುವುದಾದರೆ, ಸೋಮವಾರಪೇಟೆ ಎಂಬ ಹೆಸರು ಬರಲು ಇಲ್ಲಿ ನಡೆಯುತ್ತಿದ್ದ ವಾರದ ಸಂತೆ ಮುಖ್ಯ ಕಾರಣ. ಹಾಗೆಯೇ ಕಾಡಿನ ನಡುವೆ ಇರುವ ಊರು ಬನವಾಸಿ. ಅದೇರೀತಿ ಗುಡ್ಡಗಳ ನಡುವಿನ ಊರು ಗುಡೇಕೋಟೆ, ಗುಡಿಗಳು ಮತ್ತು ಕೋಟೆ ಇರುವ ಊರು ಗುಡೇಕೋಟೆ ಎಂದಾಗಿದೆ. ಕೈಫಿಯತ್ತುಗಳಲ್ಲಿ ಇದರ ಉಲ್ಲೇಖವಿದೆ.

ಜಾನಪದರು ಹೇಳುವಂತೆ ಗುಡೇಕೋಟೆಯ ಪ್ರಾಚೀನ ಹೆಸರು ಬಾಣಾಸುರ ಪಟ್ಟಣ ಎಂದಾಗಿತ್ತು. ಅದಕ್ಕೊಂದು ಕಥೆಯಿದೆ, ಈ ಹಿಂದೆ ಬಾಣಾಸುರ ಎಂಬ ಅಸುರನೊಬ್ಬ ಈ ಪಟ್ಟಣವನ್ನು ಆಳುತ್ತಿದ್ದ, ಅವನು ಶಿವ ಪಾರ್ವತಿಯರ ಪರಮ ಭಕ್ತನಾಗಿದ್ದ, ತಪಸ್ಸನ್ನಾಚರಿಸಿ ಶಿವಪಾರ್ವತಿಯರ ದರ್ಶನ ಪಡೆದು ನೀವು ಇಲ್ಲಿಯೇ ನೆಲೆನಿಂತು ನಮ್ಮ ಪಟ್ಟಣವನ್ನು ಕಾಯಬೇಕೆಂದು ಬಾಣಾಸುರ ಕೇಳಿದಾಗ, ಶಿವಪಾರ್ವತಿ ಭಕ್ತನ ಕೋರಿಕೆಯನ್ನು ಮನ್ನಿಸಿ ಈ ಪಟ್ಟಣವನ್ನು ಕಾಯುತ್ತಾ ಇಲ್ಲಿಯೇ ನೆಲೆನಿಂತರಂತೆ, ಇದಕ್ಕೆ ಸಾಕ್ಷಿಯೆಂಬಂತೆ ಈಗಲೂ ಊರ ಹೊರಗೆ ಶಿವ ಪಾರ್ವತಿ ದೇವಸ್ಥಾನವಿದೆ. ಮತ್ತೊಂದು ಐತಿಹ್ಯದಂತೆ ಗುಡೇಕೋಟೆಯು ಗಡಿಯಾಂಕ ಭೀಮನ ಪಟ್ಟಣ ವೆಂದು ಕರೆಯಲ್ಪಟ್ಟಿದೆ. ಈ ಎಲ್ಲಾ ಹೆಸರುಗಳೊಂದಿಗೆ ಗುರುತಿಸಿಕೊಂಡಿರುವ ಗುಡೇಕೋಟೆಯ ಚರಿತ್ರೆ ಹಲವು ಸಂಗತಿಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ. ಇಲ್ಲಿನ ಗವಿ ಬಂಡೆಗಲ್ಲಿನ ಮೇಲೆ ದೊರೆತ ಕೆಂಪು ಬಣ್ಣದ ರೇಖಾಚಿತ್ರಗಳು ತನ್ನದೇ ಇತಿಹಾಸ ಹೇಳುತ್ತವೆ. ಕೆಂಪು ಬಣ್ಣದಲ್ಲಿ ಬಿಡಿಸಲಾದ ರೇಖಾ ಚಿತ್ರಗಳನ್ನು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಭಾಷೆಯಲ್ಲಿ ‘ಶಿಲಾ ವರ್ಣಚಿತ್ರಗಳು’ (Rock Paintings) ಅಥವಾ ‘ಪಿಕೋಗ್ರಾಫ್‌ಗಳು’ ಎಂದು ಕರೆಯಲಾಗುತ್ತದೆ. ಇವು ಮಾನವನ ವಿಕಾಸ ಮತ್ತು ಸಂಸ್ಕೃತಿಯ ಆರಂಭಿಕ ಹಂತದ ದಾಖಲೆಗಳಾಗಿವೆ.

ಇವುಗಳ ಇತಿಹಾಸ ಎಷ್ಟು ಹಳೆಯದೆಂದು ನೋಡಿದಾಗ ಈ ಚಿತ್ರಗಳು ಹೆಚ್ಚಾಗಿ ನವಶಿಲಾಯುಗ (Neolithic) ಮತ್ತು ಕಬ್ಬಿಣದ ಯುಗಕ್ಕೆ (Iron Age) ಸೇರಿದವುಗಳಾಗಿವೆ. ಅಂದರೆ ಸರಿಸುಮಾರು 3,000 ದಿಂದ 5,000 ವರ್ಷಗಳಷ್ಟು ಹಳೆಯವು. ಕೆಲವು ಸಂದರ್ಭಗಳಲ್ಲಿ ಇವು ಇನ್ನೂ ಹಳೆಯದಾದ ಮಧ್ಯಶಿಲಾಯುಗಕ್ಕೂ (Mesolithic) ಸೇರಿರಬಹುದು. ಕೆಂಪು ಬಣ್ಣ ಎಲ್ಲಿಂದ ಬಂತು ಎಂದು ಪರಿಶೀಲಿಸಿದರೆ ಕೆಂಪು ಬಣ್ಣದ ಚಿತ್ರಗಳನ್ನು ಬಿಡಿಸಲು ನೈಸರ್ಗಿಕವಾಗಿ ಸಿಗುವ ‘ಹೆಮಟೈಟ್’ (Hematite) ಎಂಬ ಕಬ್ಬಿಣದ ಅದಿರು ಅಥವಾ ಕೆಮ್ಮಣ್ಣನ್ನು (Red Ochre) ಬಳಸಲಾಗುತ್ತಿತ್ತು.  ಅದಿರನ್ನು ಪುಡಿ ಮಾಡಿ, ಅದಕ್ಕೆ ಪ್ರಾಣಿಗಳ ಕೊಬ್ಬು, ಗಿಡದ ಲೋಳೆ ಅಥವಾ ನೀರನ್ನು ಬೆರೆಸಿ ಬಣ್ಣ ತಯಾರಿಸುತ್ತಿದ್ದರು. ಈ ಬಣ್ಣವು ಬಂಡೆಯ ಮೇಲ್ಪದರದೊಂದಿಗೆ ರಾಸಾಯನಿಕವಾಗಿ ಬೆರೆತು ಹೋಗುವುದರಿಂದ, ಸಾವಿರಾರು ವರ್ಷಗಳ ಬಿಸಿಲು-ಮಳೆಯ ನಂತರವೂ ಇಂದಿಗೂ ಅಳಿಸಿ ಹೋಗದೆ ಉಳಿದಿವೆ. ಈ ರೇಖಾ ಚಿತ್ರಗಳು ಅಂದಿನ ಕಾಲದ ಜನರ ಬದುಕಿನ ಕನ್ನಡಿಯಾಗಿವೆ.

ಪ್ರಮುಖವಾಗಿ ಹಸುಗಳು, ಗೂಳಿಗಳು (ಹಂಪ್ಡ್ ಬುಲ್), ಜಿಂಕೆಗಳು, ಆನೆಗಳು ಮತ್ತು ಕುದುರೆಗಳು,ಮಾನವ ಆಕೃತಿಗಳು,ಬೇಟೆಯಾಡುತ್ತಿರುವ ಮನುಷ್ಯರು, ಗುಂಪು ನೃತ್ಯ ಮಾಡುತ್ತಿರುವ ಚಿತ್ರಗಳು ಅಥವಾ ಯುದ್ಧದ ದೃಶ್ಯಗಳು,ಜ್ಯಾಮಿತೀಯ ಚಿತ್ರಗಳು, ವೃತ್ತಗಳು, ಚೌಕಗಳು ಮತ್ತು ರೇಖೆಗಳ ಮೂಲಕ ಯಾವುದೋ ಸಂಕೇತಗಳನ್ನು ದಾಖಲಿಸಿರುವುದನ್ನು ಕಾಣಬಹುದು. ಇದರಂತೆಯೇ ಮತ್ತೊಂದು ವಿಸ್ಮಯ ವನ್ನು ನಾವಿಲ್ಲಿ ಕಾಣಬಹುದು. ಅದುವೇ ಕಂಡಿಕೋಣೆ ಸಮಾಧಿ.
ಸ್ಥಳೀಯರು ಹೇಳುವಂತೆ ಕಾಗೇಗೂಡು ಅಥವಾ ಕಂಡಿಕೋಣೆ ಸಮಾಧಿ ಬೃಹತ್ ಶಿಲಾಯುಗಕ್ಕೆ ಸೇರಿದೆ. ಬೃಹತ್ ಶಿಲಾಯುಗದಲ್ಲಿ ಮೃತ ವ್ಯಕ್ತಿಗಳ ನೆನಪಿಗಾಗಿ ಅಥವಾ ಅವರ ಶವಗಳನ್ನು ಹೂತು ಅದರ ಮೇಲೆ ದೊಡ್ಡ ದೊಡ್ಡ ಶಿಲೆಗಳನ್ನು ಬಳಸಿ ನಿರ್ಮಿಸುತ್ತಿದ್ದ ಸಮಾಧಿಗಳನ್ನು ‘ಡೋಲ್ಮನ್’ ಅಥವಾ ಕಂಡಿಕೋಣೆ ಸಮಾಧಿ/ ಕಾಗೇಗೂಡು ಎನ್ನಲಾಗುತ್ತದೆ.

 

ಕಾಗೇಗೂಡು ಹೆಸರು ಬರಲು ಕಾರಣ ಈ ಸಮಾಧಿಗಳು ನೋಡಲು ಪುಟ್ಟ ಕಲ್ಲಿನ ಮನೆಯಂತೆ ಇರುತ್ತವೆ. ಇವುಗಳ ಒಳಗೆ ಕಾಗೆಗಳು ಅಥವಾ ಹಕ್ಕಿಗಳು ಗೂಡು ಕಟ್ಟಿಕೊಳ್ಳಲು ಯೋಗ್ಯವಾದ ಜಾಗದಂತೆ ಕಾಣುವುದರಿಂದ ಅಥವಾ ಸ್ಥಳೀಯ ಜಾನಪದ ನಂಬಿಕೆಗಳ ಪ್ರಕಾರ ಇವುಗಳನ್ನು ‘ಕಾಗೇಗೂಡು’ ಅಥವಾ ‘ಪಾಂಡವರ ಕಲ್ಲು’ ಎಂದು ಕರೆಯಲಾಗುತ್ತದೆ. ಬೃಹತ್ ಬಂಡೆಯ ಕೆಳಗೆ ಚಿತ್ರಿಸಲಾದ ಕೆಂಪು ಬಣ್ಣದ ಚಿತ್ರಗಳು ಮಾನವನ ಪ್ರಾಚೀನ ಇತಿಹಾಸ ಸಾರುತ್ತವೆ. ಹೀಗೆಯೇ ಇತಿಹಾಸ ಪುಟಗಳನ್ನು ಕೆದಕಿದರೆ ಮತ್ತಷ್ಟು ವಿಷಯಗಳು ತಿಳಿದುಬರುತ್ತವೆ. ಈ ಪ್ರದೇಶವು ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತೆಂಬುದಕ್ಕೆ ಇಲ್ಲಿಂದ ಸ್ವಲ್ಪವೇ ದೂರದಲ್ಲಿರುವ ಜಟಿಂಗ ರಾಮೇಶ್ವರ, ಅಶೋಕ ಸಿದ್ದಾಪುರದಲ್ಲಿ ದೊರೆತ ಶಾಸನಗಳು ಸಾಕ್ಷಿಯಾಗಿವೆ. ಈ ಭಾಗದ ಸುತ್ತಮುತ್ತಲ ಪ್ರದೇಶದಲ್ಲಿ ದೊರೆತ ಕೆಲ ಅವಶೇಷಗಳು ಈ ಪ್ರದೇಶವು ಶಾತವಾಹನರು ,ಕದಂಬರು , ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತೆಂಬುದನ್ನು ತಿಳಿಸುತ್ತವೆ.

ವಿಜಯನಗರ ಅರಸರ ಕಾಲದಲ್ಲಿ ಗುಡೆಕೋಟೆ ಒಂದು ಪ್ರಾಂತ್ಯ ವಾಗಿ ಪಾಳೆಗಾರರ ಆಳ್ವಿಕೆಗೆ ಒಳಪಟ್ಟಿತ್ತು . ನಂತರದ ದಿನಗಳಲ್ಲಿ ಹೈದರಾಲಿ , ಟಿಪ್ಪು ,ಪಾಳೆಗಾರರು ,ಬ್ರಿಟಿಷರು ಹಾಗೂ ಮೈಸೂರು ಸಂಸ್ಥಾನಕ್ಕೆ ಗುಡೆಕೋಟೆ ಸೇರಿದ್ದಿತು.
ಗುಡೇಕೋಟೆಯು ಒಂದು ಗಿರಿ ದುರ್ಗವಾಗಿದ್ದು ಪಾಳೆಗಾರರ ಕಾಲದಲ್ಲಿ ಕೋಟೆಯು ಇನ್ನಷ್ಟು ಬಲಿಷ್ಠವಾಗಿ ನಿರ್ಮಾಣವಾಯಿತು ಎಂದು ತಿಳಿದು ಬರುತ್ತದೆ.  ಪ್ರಸಿದ್ಧ ಭೂವಿಜ್ಞಾನಿ ರಾಬರ್ಟ್ ಬ್ರೂಸ್ ಫ್ಲೂಟ್ ದಕ್ಷಿಣ ಭಾರತದಲ್ಲಿಯೇ ಇನ್ನೆಲ್ಲಿಯೂ ಇಷ್ಟು ಬೃಹತ್ ಗಾತ್ರದ ಕಲ್ಲುಗಳನ್ನೊಟ್ಟಿ ಕಟ್ಟಿದ ಕಟ್ಟಡ ಇಲ್ಲ ಎಂದು ಉದ್ಗಾರ ತೆಗೆದಿದ್ದಾನೆ. ಗುಡೆಕೋಟೆಯ ಉತ್ತರಕ್ಕಿರುವ ದೊರೆಗಳ ಗುಡ್ಡದಲ್ಲಿ ಈ ಹಿಂದೆ ಜನ ವಸತಿಯಿತ್ತೆಂದು ತಿಳಿಸುವ ಹಲವು ಸಾಕ್ಷಿಗಳಿವೆ.

ಇಲ್ಲಿನ ತಣ್ಣೀರ ಬಾವಿ , ಓಕಳಿ ಹೊಂಡ, ಆನೆ ಹೊಂಡ , ರಾಗಿ ಕಣಜ , ಬಿಸಿಲು ಬಾವಿ, ತುಪ್ಪದ ಕಣಜ, ಕೋಟೆ, ಬುರುಜು, ಅರಮನೆಯ ಅವಶೇಷಗಳನ್ನು ಈಗಲೂ ಕಾಣಬಹುದು. ರಾಗಿಯನ್ನು ಸಂಗ್ರಹಿಸಲು ಬಳಸುತ್ತಿದ್ದ ರಾಗಿ ಕಣಜವು 60 ಅಡಿ ಉದ್ದ 25 ಅಡಿ ಅಗಲ 10 ಅಡಿ ಎತ್ತರವಿದೆ. ಗಾರೆ ಮತ್ತು ಸುಟ್ಟ ಇಟ್ಟಿಗೆಗಳಿಂದ ಇದು ನಿರ್ಮಿತವಾಗಿದೆ. ಇಲ್ಲಿಂದ ಉತ್ತರಕ್ಕೆ ಸ್ವಲ್ಪ ದೂರ ನಡೆದರೆ ತುಪ್ಪದ ಕಣಜ ಕಾಣಬಹುದು. ಬೃಹದಾಕಾರದ ಬಂಡೆಯ ಮೇಲೆ ಬಂಡೆಯನ್ನು ಕೊರೆದು ತುಪ್ಪದ ಕಣಜವನ್ನು ನಿರ್ಮಿಸಿದ್ದು ತುಪ್ಪದ ಕಣಜವಿರುವ ಸ್ಥಳ ತಲುಪಲು ಸಾಹಸ ಪಡಬೇಕು. ಈಗಲೂ ಇದು ಸುಸ್ಥಿತಿಯಲ್ಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಗುಡೆಕೋಟೆಯು ಒಂದು ವಿಸ್ಮಯದ ತವರು . ಇಲ್ಲಿನ ಚೌಳೇಶ್ವರ ದೇವಾಲಯ 13ನೇ ಶತಮಾನಕ್ಕೆ ಸೇರಿದ್ದು ಇಲ್ಲಿ ಸುಸ್ಥಿತಿಯಲ್ಲಿರುವ ಪ್ರಾಚೀನ ದೇವಾಲಯಗಳಲ್ಲೊಂದಾಗಿದೆ. ಹಾಗೆಯೇ ಒಂದೇ ಶಿಲೆಯಲ್ಲಿ ಶಿವನ ತೊಡೆಯ ಮೇಲೆ ಕುಳಿತಿರುವ ಪಾರ್ವತಿಯ ಮೂರ್ತಿ ಅತ್ಯಂತ ವಿಶೇಷವಾದುದಾಗಿದೆ.

ಇಲ್ಲಿನ ವಿರಕ್ತಮಠ , ಏಣಿ ಈರಪ್ಪನ ಮಠ , ಬೃಹತ್ ನಾಗರ ಕಲ್ಲುಗಳು ,ಏಣಿ ಈರಪ್ಪನ ಬಾವಿ ,ಆಂಜನೇಯನ ಗುಡಿ ,ಕಂಡಿಕೋಣೆ ಸಮಾಧಿ ಇವುಗಳೆಲ್ಲವೂ ಇತಿಹಾಸ ಸಂಶೋಧಕರನ್ನು ಕೈಬೀಸಿ ಕರೆಯುತ್ತಿವೆ. ಎಷ್ಯಾದ ಎರಡನೇ ಕರಡಿಧಾಮವು ಇಲ್ಲಿಯೇ ಇದೆ. ಇಷ್ಟೆಲ್ಲಾ ಇತಿಹಾಸ ಹೊಂದಿರುವ ಗುಡೆಕೋಟೆಯು ಚಿತ್ರದುರ್ಗದ ವೀರ ಮದಕರಿ ನಾಯಕನ ಹೆಂಡತಿಯಾದ ಭೀಮವ್ವ ನಾಗತಿ ಯ ತವರುಮನೆ ಹಾಗೆಯೇ ವೀರ ವನಿತೆ ಒನಕೆ ಓಬವ್ವಳ ತವರೂರು . ಇಲ್ಲಿನ ನೆಲದಲ್ಲಿ ಹುಟ್ಟಿ ಬೆಳೆದ ಓಬವ್ವಳ ಸ್ಮರಣಾರ್ಥವಾಗಿ ಪ್ರತಿ ವರ್ಷ ರಾಜ್ಯ ಸರ್ಕಾರದಿಂದ ಒನಕೆ ಓಬವ್ವ ಉತ್ಸವ ಆಚರಿಸುವಲ್ಲಿ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್.ಎನ್.ಟಿ ರವರ ಪಾತ್ರ ಮಹತ್ವದ್ದಾಗಿದೆ. ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಹಾಗೂ ಸ್ಥಳೀಯರ ಸಹಕಾರದಿಂದ ಉತ್ಸವವು ಅದ್ದೂರಿಯಾಗಿ ನಡೆಯುತ್ತಿದೆ. ಸ್ಥಳೀಯ ಕಲಾ ಪ್ರಕಾರಗಳು ಮತ್ತು ಸಾಹಿತ್ಯ-ಸಂಗೀತಕ್ಕೆ ಉತ್ತಮ ವೇದಿಕೆಯಾಗಿದೆ. ಉತ್ಸವದಲ್ಲಿ ಸಡೆಯುವ ವಿಚಾರ ಸಂಕಿರಣದಲ್ಲಿ ವಿದ್ವಾಂಸರಿಂದ ಮಹತ್ವದ ವಿಷಯಗಳು ಬೆಳಕಿಗೆ ಬಂದಿವೆ. ಒನಕೆ ಓಬವ್ವ ಉತ್ಸವವು ಸ್ಥಳೀಯರಿಂದ ಪುಟ್ಟದಾಗಿ 2023 ರಲ್ಲಿ ಪ್ರಾರಂಭವಾದಗ ಅದು ಗುಡೇಕೋಟೆ ಉತ್ಸವವೆಂದು ಗುರುತಿಸಿಕೊಂಡಿತ್ತು. ನಂತರ ಶಾಸಕರ ಕಳಕಳಿಯಿಂದ ಗುಡೇಕೋಟೆ ಉತ್ಸವ 2024 ರಲ್ಲಿ ರಾಜ್ಯ ಸರ್ಕಾರದಿಂದ 30ಲಕ್ಷ ಅನುದಾನ ಪಡೆದು ಕಾರ್ಯಕ್ರಮ ಸಂಭ್ರಮದಿಂದ ಜರುಗಿತು, ಧೈರ್ಯ ಶೌರ್ಯದ ಪ್ರತೀಕವಾಗಿರುವ ವೀರನಾರಿ ಓಬವ್ವಳ ನೆನಪಿಗೆ 2025 ರ ಫೆಬ್ರವರಿಯಲ್ಲಿ ನಡೆದ ಉತ್ಸವವು ಒನಕೆ ಓಬವ್ವ ಉತ್ಸವವಾಗಿ ಬದಲಾಯಿತು. 2026 ರ ಜನವರಿ 31 ಮತ್ತು ಫೆಬ್ರವರಿ 1 ರಂದು ನಡೆಯುತ್ತಿರುವ ಒನಕೆ ಓಬವ್ವ ಉತ್ಸವಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿ ಉತ್ಸವದ ಮೆರಗನ್ನು ಹೆಚ್ಚಿಸಿದೆ.

ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ಈ ಉತ್ಸವವು ಈ ಸಂಚಲನವನ್ನುಂಟುಮಾಡುತ್ತಿದೆ. ಮುಂದಿನ ದಿನಮಾನಗಳಲ್ಲಿ ಒನಕೆ ಓಬವ್ವ ಉತ್ಸವವು ಇನ್ನೂ ಉನ್ನತಮಟ್ಟಕ್ಕೇರಿ ಪ್ರವಾಸೋದ್ಯಮವನ್ನಾಕರ್ಷಿಸಿ ಜನರ ಬದುಕನ್ನು ಹಸನುಗೊಳಿಸುವ ನಿರೀಕ್ಷೆಯಲ್ಲಿ ಈ ಕಾರ್ಯಕ್ರಮ ಸಾಗುತ್ತಿರುವುದು ಜನರಲ್ಲಿ ಸಂತಸವನ್ನುಂಟು ಮಾಡಿದೆ.

– ನಾಗರಾಜ ಕೊಟ್ರಪ್ಪನವರ್
ಉಪನ್ಯಾಸಕರು. ಕೂಡ್ಲಿಗಿ

Please follow and like us:

 

 

 

 

 

 

Translate »
[t4b-ticker]
error: Content is protected !!