https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ಐತಿಹಾಸಿಕ ವಿಜಯನಗರದ ವೈಭವವನ್ನು ಸಾರುವ ‘ಹಂಪಿ ಉತ್ಸವ – 2026’ ರ ಅಂಗವಾಗಿ ನಗರದ ವಿಜಯನಗರ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಗಾಳಿಪಟ ಉತ್ಸವಕ್ಕೆ ಶಾಸಕ ಹೆಚ್.ಆರ್. ಗವಿಯಪ್ಪ ಅದ್ಧೂರಿ ಚಾಲನೆ ನೀಡಿದರು. ಸಮಾಜಕ್ಕೆ ಪರಂಪರೆಯ ಉಳಿವಿನ ಸಂದೇಶ ಸಾರುವ ಈ ಕಲಾತ್ಮಕ ಉತ್ಸವವು ಪ್ರವಾಸಿಗರ ಹಾಗೂ ಸ್ಥಳೀಯರ ಕಣ್ಮನ ಸೆಳೆಯಿತು.
ಇದನ್ನೂ ಓದಿ: ಹಂಪಿ ಉತ್ಸವ ನಾಡ ಹಬ್ಬವಿದ್ದಂತೆ ವಿಜೃಂಭಣೆಯ ವಿನೂತನ ಉತ್ಸವ ಆಚರಣೆಗೆ ಸಿದ್ದರಾಗಿ: ಸಚಿವ ಜಮೀರ್ ಅಹ್ಮದ್ ಖಾನ್

ಮುಂಜಾನೆಯಿಂದಲೇ ಮೈದಾನದಲ್ಲಿ ನೂರಾರು ಗಾಳಿಪಟ ಪ್ರೇಮಿಗಳು ಜಮಾಯಿಸಿದ್ದು, ಆಕಾಶದಲ್ಲಿ ವಿವಿಧ ವಿನ್ಯಾಸದ ಬಣ್ಣ ಬಣ್ಣದ ಗಾಳಿಪಟಗಳು ಪೈಪೋಟಿಗೆ ಬಿದ್ದಂತೆ ಹಾರಾಡಿದವು. ವಿಶೇಷವಾಗಿ ಕುದುರೆಯ ಆಕಾರದ ಬೃಹತ್ ಗಾಳಿಪಟ ಆಕಾಶದಲ್ಲಿ ವಿಜಯನಗರದ ಅಶ್ವದಳವೇ ಸಾಗುತ್ತಿರುವಂತೆ ಭಾಸವಾಯಿತು.

ಬೆಂಗಳೂರಿನ ಕೈಟ್ ಕ್ಲಬ್ ಸೇರಿದಂತೆ ಪಂಜಾಬ್, ಗುಜರಾತ್, ಓರಿಸ್ಸಾ ಹಾಗೂ ಆಂಧ್ರಪ್ರದೇಶದ ಗಾಳಿಪಟ ಪಟುಗಳು ಹಾರಿಸಿದ ಹತ್ತಾರು ಅಡಿ ಉದ್ದದ ಕೆಂಪು ಬಣ್ಣದ ಆಕ್ಟೋಪಸ್, ಚಿರತೆ ಹಾಗೂ ಮಂಗನ ಆಕೃತಿಯ ಗಾಳಿಪಟಗಳು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿದವು. ‘ವಸುದೈವ ಕುಟುಂಬಂ’ ಸಂದೇಶ ಹೊತ್ತ ತ್ರಿವರ್ಣ ಗಾಳಿಪಟಗಳು ಜನರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿದರೆ, ‘I ❤️ HAMPI’ ಬರಹದ ಪಟವು ಹಂಪಿಯ ಪರಂಪರೆಯ ಮೇಲಿರುವ ಗೌರವವನ್ನು ಸಾರಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾ ಆಡಳಿತದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಉಪವಿಭಾಗಾಧಿಕಾರಿ ವಿವೇಕ್, ನಗರಸಭೆಯ ಅಧ್ಯಕ್ಷ ರೂಪೇಶ್ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರ ಸಭೆ ಆಯುಕ್ತ ಶಿವಕುಮಾರ್ ಹಾಗೂ ಬೆಂಗಳೂರಿನ ಕೈಟ್ ಕ್ಲಬ್‌ನ ವಿ.ಕೆ. ರಾವ್ ಇತರರಿದ್ದರು.





More Stories
ವಸಂತ ವೈಭವ: ರಕ್ಕಸರ ಅಬ್ಬರ, ಹಾಸ್ಯದ ದರ್ಬಾರ್
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ
ಕಾಂಗ್ರೆಸ್ ಅಪಪ್ರಚಾರಕ್ಕೆ ಬಣವಿಕಲ್ ಕೆ. ನಾಗರಾಜ್ ಆಕ್ರೋಶ