February 9, 2026

Hampi times

Kannada News Portal from Vijayanagara

ಒನಕೆ ಓಬವ್ವ.. ಅಸಾಮಾನ್ಯ ಸಾಹಸಿ ಮಹಿಳೆ

https://youtu.be/NHc6OMSu0K4?si=SI_K4goOPEgwo6h2

 

ಚಿತ್ರದುರ್ಗದ ಕೋಟಿಯನ್ನು ನಾಯಕರು ಆಳುತ್ತಿದ್ದ ಕಾಲ. ಚಿತ್ರದುರ್ಗದ ಮಹಾರಾಜರಲ್ಲಿಯೇ ಅತ್ಯಂತ ಹೆಸರಾದ ಮದಕರಿ ನಾಯಕನ ಶೌರ್ಯ, ಧೈರ್ಯ ಹಾಗೂ ಪ್ರಜಾ ಪ್ರೇಮಕ್ಕೆ ಹೆಸರುವಾಸಿಯಾಗಿದ್ದ. ಹೇಗಾದರೂ ಮಾಡಿ ಚಿತ್ರದುರ್ಗದ ದುರ್ಗಮ ಕೋಟೆಯನ್ನು ವಶಪಡಿಸಿಕೊಳ್ಳಬೇಕು ಎಂಬ ಮೈಸೂರಿನ ಅರಸ ಹೈದರಾಲಿಯ ಆಸೆ ಸಾಧ್ಯವಾಗಲಿಲ್ಲ ಇದು ಆತನನ್ನು ಒಳಗೊಳಗೆ ಕುದಿಯುವಂತೆ ಮಾಡಿತ್ತು.

 

ಚಿತ್ರದುರ್ಗದ ಕೋಟೆಯು ಅಗಾಧವಾದ ಕಲ್ಲನ್ನು ಕಟೆದು ನಿರ್ಮಿಸಲಾಗಿದ್ದು ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿತ್ತು. ಶತ್ರುಗಳು ದಾಳಿ ಮಾಡಿದರೂ ಕೂಡ ಹಲವಾರು ದಿನಗಳ ಕಾಲ ಕೋಟೆಯ ಬಾಗಿಲನ್ನು ಹಾಕಿ ತನ್ನ ರಾಜ್ಯದ ಜನತೆಯನ್ನು ಹಲವಾರು ದಿನಗಳ ಕಾಲ ರಕ್ಷಿಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಅದು ಹೊಂದಿತ್ತು.
ಮದಕರಿ ನಾಯಕನ ಜನಪರ ಚಟುವಟಿಕೆಗಳು, ಜನಾನುರಾಗ ವರ್ಣಿಸಲು ಅಸದಳ. ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ… ಮದಕರಿ ನಾಯಕ ಓರ್ವ ರಾಜ ಮಾತ್ರನಲ್ಲ ಆತ ಓರ್ವ ಜೀವಂತ ಆಪ್ತ ನಂಟ. ಚಿತ್ರದುರ್ಗ ಮತ್ತು ಮದಕರಿ ನಾಯಕ ಇವೆರಡರ ಕೊಂಡಿ ಅತ್ಯಂತ ಅನನ್ಯವಾದದು ಎಂಬ ಅಭಿಮಾನ ಇಲ್ಲಿನ ಜನರಿಗೆ.
 ಅಂತಹ ಊರಿನಲ್ಲಿ ಗುಡೆಕೋಟೆ ಗ್ರಾಮದಿಂದ ವಲಸೆ ಬಂದ ಚೆಲುವಾದಿ ಮನೆತನದ ದೊಡ್ಡ ಹನುಮಪ್ಪ ಎಂಬ ವ್ಯಕ್ತಿ ಅಂದಿನ ದೊರೆಗಳ ಅಚ್ಚುಮೆಚ್ಚಿನ ಆಪ್ತ ಸೇವಕ ಹಾಗೂ ಕಹಳೆ ಊದುವ ವ್ಯಕ್ತಿಯಾಗಿದ್ದ.
ಸಾಮಾನ್ಯ ದಿನಗಳಲ್ಲಿ ರಣಕಹಳೆಯವರಾಗಿಯು ಯುದ್ಧದ ಸಮಯದಲ್ಲಿ ಯೋಧರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಇವರು ಏಕ ವರ್ಣಾತ್ಮಕ ವೈದಿಕರು. ಕುದುರೆ ನರಸಿಂಹಸ್ವಾಮಿ ಹಾಗೂ ಲಕ್ಷ್ಮಿ ದೇವರುಗಳ ಆರಾಧಕರು. ಈತನ ಕಾರ್ಯನಿಷ್ಟೆ, ಸ್ವಾಮಿ ಭಕ್ತಿ, ಪ್ರಾಮಾಣಿಕತೆಯನ್ನು ಪರಿಗಣಿಸಿ ಚಿತ್ರದುರ್ಗ ಸಂಸ್ಥಾನದ ಗುಪ್ತ ವಿಚಾರಗಳ ಚರ್ಚೆಯಲ್ಲಿ ಭಾಗವಹಿಸಲು ಅವರಿಗೆ ಅನುಮತಿ ನೀಡುತ್ತಿದ್ದರು.
ತಮ್ಮ ಸಾಮಂತ ರಾಜ್ಯವಾದ ಗುಡೆಕೋಟೆ ಸಂಸ್ಥಾನದ ರಾಜಕೀಯ ಸ್ಥಿತಿ ಗತಿಗಳನ್ನು ಅರಿಯಲು ದೊಡ್ಡ ಹನುಮಪ್ಪನಿಗೆ ಓಲೆಯನ್ನು ನೀಡಿ ಗುಡೇಕೋಟೆಗೆ ಕಳುಹಿಸಿದಾಗ ಅಲ್ಲಿ ತನ್ನ ಸಂಬಂಧಿಯಾದ ಚನ್ನಪ್ಪಯ್ಯನ ಮನೆಗೆ ದೊಡ್ಡ ಹನುಮಪ್ಪನವರು ಭೇಟಿ ನೀಡಿದರು.
ಚನ್ನಪ್ಪನವರಿಗೆ ಕುದುರೆಪ್ಪ, ತಿಮ್ಮಣ್ಣ ಮತ್ತು ಓಬವ್ವ ಎಂಬ ಮೂರು ಜನ ಮಕ್ಕಳಿದ್ದರು. ಹೆಸರಿಗೆ ತಕ್ಕಂತೆ ಉತ್ತಮ ಗುಣ ಸ್ವಭಾವವನ್ನು ಹೊಂದಿದ್ದ ರೂಪ ಯೌವ್ವನದಲ್ಲಿ ಮಿಗಿಲಾಗಿದ್ದ ಚನ್ನಪ್ಪಯ್ಯನ ಮಗಳು ಓಬವ್ವನೇ ನಮ್ಮ ವೀರ ವನಿತೆ ಓಬವ್ವನಾಗಿ ಮುಂದೆ ಚರಿತ್ರೆಯಲ್ಲಿ ದಾಖಲಾದ ಈ ಕಥೆಯ ನಾಯಕಿ.
ಓಬವ್ವನನ್ನು ಕಂಡು ತನ್ನ ಮಗ ಮುದ್ದು ಹನುಮನಿಗೆ ಆಕೆಯನ್ನು ವಿವಾಹ ಮಾಡಿಕೊಳ್ಳುವ ಪ್ರಸ್ತಾಪವನ್ನು ಮಾಡಿದರು. ಇದಕ್ಕೆ ಸಂತಸದಿಂದ ಕಹಳೆ ಚೆನ್ನಪ್ಪಯ್ಯ ಒಪ್ಪಿದರು. ನಂತರ ಗುರು ಹಿರಿಯರ ಸಮ್ಮುಖದಲ್ಲಿ ಎಲ್ಲಾ ಮಾತುಕತೆಗಳು ನಡೆದು 1683 ವೃಷ ಸಂವತ್ಸರದ ವೈಶಾಖ ಶುದ್ದ ಪಂಚಮಿಯಂದು ಚಿತ್ರದುರ್ಗದಲ್ಲಿ ಓಬವ್ವ ಮತ್ತು ಮುದ್ದ ಹನುಮಪ್ಪರ ವಿವಾಹವಾಯಿತು.
ನಯ, ವಿನಯ, ಸಂಯಮ ಪ್ರೀತಿ ಹಾಗೂ ಆದರಗಳಿಂದ ಗಂಡನ ಮನೆಯಲ್ಲಿ ಉತ್ತಮ ಗೃಹಿಣಿಯಾಗಿ ಓಬವ್ವ ನಡೆಯಲಾರಂಭಿಸಿದಳು. ಅವರ ದಾಂಪತ್ಯಕ್ಕೆ ಒಂದು ಗಂಡು ಮಗುವಾಯಿತು. ತನ್ನ ತಂದೆಯ ವಯಸ್ಸು ಹೆಚ್ಚಾಗಿ ದೇಹದ ಶಕ್ತಿ ಕ್ಷೀಣಿಸುತ್ತಾ ಬಂದಾಗ ತಂದೆಯ ಸ್ಥಾನದಲ್ಲಿ ಮುದ್ದ ಹನುಮಪ್ಪನು ಕಾರ್ಯನಿರ್ವಹಿಸಲು ನೇಮಕಗೊಂಡನು.
 ಕಹಳೆ ಬತೇರಿಯ ಕಾರ್ಯ ಎಂದರೆ ಮೂರು ಹರದಾರಿ ದೂರದಿಂದ ಬರುವ ಶತ್ರುಗಳ ಚಲನೆಯನ್ನು ಬೆಟ್ಟದ ಎತ್ತರವಾದ ಸ್ಥಳದ ಮೇಲಿನಿಂದ ಗುರುತಿಸುವುದು ಹಾಗೂ ಸದಾ ಸನ್ನದ್ಧವಾಗಿರುತ್ತಿದ್ದ ಸೈನಿಕರಿಗೆ ಶತ್ರುಗಳ ಆಗಮನದ ದಿಕ್ಕನ್ನು ತೋರಿಸುತ್ತಾ ಮುನ್ಸೂಚನೆಯನ್ನು ನೀಡುವುದು ಇವರ ಕೆಲಸವಾಗಿತ್ತು.
ಮದಕರಿ ನಾಯಕರು ರಾಜನೀತಿಯನ್ನು ಅರಿತ ಗುರುಲಿಂಗ ಜಂಗಮರಲ್ಲಿ ಅನನ್ಯ ಭಕ್ತಿಭಾವವುಳ್ಳವರಾಗಿದ್ದು 50 ಸಾವಿರ ಯೋಧರ ಸೇನಾ ಬಲ ಸಾಕಷ್ಟು ಆನೆ, ಒಂಟೆ, ಕುದುರೆಗಳನ್ನು ರಕ್ಷಿಸಿಕೊಂಡು ಅಪಾರ ಜನಪ್ರಿಯತೆಯನ್ನು ಗಳಿಸಿದ ರಾಜನಾಗಿದ್ದರು.
ಕರ್ನಾಟಕದ ಹಳೆಯ ಅನೇಕ ಪಾಳೇದಾರರನ್ನು ಸೋಲಿಸಿ ತನ್ನ ಅಧೀನ ಮಾಡಿಕೊಂಡಿದ್ದ ಹೈದರಾಲಿಯು ಮದಕರಿ ನಾಯಕನ ಜನಪ್ರಿಯತೆಗೆ ಅಸೂಯೆ ಪಟ್ಟು ಒಂದೆರಡು ಬಾರಿ ಚಿತ್ರದುರ್ಗದ ಕೋಟೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿ ಸೋತು ಹೋಗಿದ್ದನು.
ಇದೀಗ ಮತ್ತೊಂದು ಬಾರಿ ಹೇಗಾದರೂ ಮಾಡಿ ಚಿತ್ರದುರ್ಗದ ಕೋಟೆಯನ್ನು ಆಕ್ರಮಿಸಿಕೊಳ್ಳಲೇಬೇಕು ಎಂಬ ಹೈದರಾಲಿಯ ಸಂಚನ್ನು ಅರಿತಿದ್ದ ಮದಕರಿ ನಾಯಕ ತನ್ನ ನಗರದ ಏಳು ಸುತ್ತಿನ ಕೋಟೆಯ ಬಾಗಿಲುಗಳನ್ನು ಭದ್ರಪಡಿಸಲು ಅಪ್ಪಣೆ ಮಾಡಿ ಸರ್ಪಗಾವಲು ಇರಿಸಿದನು. ಉಳಿದ ಗಿಡ್ಡ ಬಾಗಿಲುಗಳು ಜನರ ಕಾರ್ಯ ಚಟುವಟಿಕೆಗಳಿಗೆ ಕೋಟೆಯಲ್ಲಿದ್ದ ಕಾರಣ ಅವರಿಗೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ.
ಇದು ಗೊತ್ತಿಲ್ಲದ ಹೈದರಾಲಿ ಚಿತ್ರದುರ್ಗದ ಕೋಟೆಗೆ ಬರುವ ಆಹಾರ ಸಾಮಗ್ರಿಗಳನ್ನು ತಡೆಹಿಡಿದನು. ಹತ್ತಾರು ವರ್ಷಗಳಿಗೆ ಆಗುವಷ್ಟು ಆಹಾರ ಸಾಮಗ್ರಿ ತುಂಬಿದ ಉಗ್ರಾಣ ಭೀಕರ ಕ್ಷಾಮದಕಾಲದಲ್ಲಿಯೂ ಕೂಡ ಬತ್ತದಿರುವ ಸಿಹಿ ನೀರಿನ ಕೊಳಗಳು ಚಿತ್ರದುರ್ಗದ ಕೋಟೆಯಲ್ಲಿ ಇದ್ದು ಪುರ ಜನರು ನಿರ್ಭಯವಾಗಿ ಓಡಾಡಿಕೊಂಡಿರುವುದನ್ನು ಕಂಡು ಹೈದರಾಲಿಗೆ ಅಸಹನೆ ಹೆಚ್ಚಾಗಿತ್ತು.
ಕೋಟೆಯ ಅತ್ಯಂತ ಸುಭದ್ರವಾದ ಕಲ್ಲಿನ ಗೋಡೆಯನ್ನು ಫಿರಂಗಿಯಿಂದ ಉಡಾಯಿಸಲು ಹೈದರಾಲಿಯು ಮಾಡಿದ ಪ್ರಯತ್ನ ಕೂಡ ನಿಷ್ಪಲವಾಗಿದ್ದು ಆತನ ಅಸಹನೆಯನ್ನು ಮತ್ತಷ್ಟು ಹೆಚ್ಚಿಸಿತ್ತು.ಆದರೂ ಛಲ ಬಿಡದೆ ತನ್ನ ಗುಪ್ತಚಾರರ ಮೂಲಕ ಕೋಟಿಗೆ ಇರುವ ಗುಪ್ತ ದ್ವಾರಗಳನ್ನು ಹುಡುಕುವ ಪ್ರಯತ್ನವನ್ನು ಹೈದರಾಲಿಯು ಮುಂದುವರೆಸಿದನು.
ಅದೊಂದು ದಿನ ಗುಪ್ತಚಾರರು ಮೊಸರು ಮಾರುವ ಹೆಣ್ಣುಮಗಳನ್ನು ಸೂಕ್ಷ್ಮವಾಗಿ ಹಿಂಬಾಲಿಸಿದಾಗ ಕೋಟೆಯ ಒಂದು ಬದಿಯಲ್ಲಿ ಕಳ್ಳಗಿಂಡಿ ಇರುವುದು ಪತ್ತೆಯಾಯಿತು. ಇದನ್ನು ಅರಿತ ನಂತರ ಹೈದರಾಲಿಯ ಸೈನಿಕರ ಪಡೆಯೇ ಈ ಕಳ್ಳ ಗಿಂಡಿಯ ಮೂಲಕ ಒಳನುಸುಳಲು ಯೋಜನೆಯನ್ನು ಹಾಕಿತು.
ಅದೊಂದು ದಿನ ತನ್ನ ಕೆಲಸದಲ್ಲಿ ನಿರತನಾಗಿದ್ದ ಮುದ್ದ ಹನುಮಪ್ಪನಿಗೆ ಅಡುಗೆ ತಯಾರಾದ ಮೇಲೆ ಆತನ ಪತ್ನಿ ಓಬವ್ವ ಮಧ್ಯಾಹ್ನದ ಊಟಕ್ಕೆ ಕೂಗಿ ಕರೆದಳು. ಮತ್ತೊಂದು ಬಾರಿ ಇಡೀ ಕೋಟೆಯ ಸುತ್ತಲಿನ ಕಣ್ಣಳತೆಯ ಎಲ್ಲ ಭಾಗವನ್ನು ಸೂಕ್ಷ್ಮವಾಗಿ ಅವಲೋಕಿಸಿ ಯಾವುದೇ ತೊಂದರೆ ಇಲ್ಲ ಎಂದು ಯೋಚಿಸಿ ಮುದ್ದ ಹನುಮಪ್ಪ ಊಟಕ್ಕೆ ಮನೆಗೆ ಬಂದನು. ಆತನಿಗೆ ಊಟವನ್ನು ನೀಡಿ ಕೊಟ್ಟ ಪತ್ನಿ ಕುಡಿಯಲು ನೀರಿಡಲು ನೋಡಿದಾಗ ನೀರಿನ ಗಡಿಗೆಯಲ್ಲಿನ ನೀರು ತಳದಲ್ಲಿ ಇರುವುದನ್ನು ಗಮನಿಸಿದಳು. ಕೂಡಲೇ ಪತಿಗೆ ಹೇಳಿ ಹತ್ತಿರದಲ್ಲಿ ಇದ್ದ ಕೊಳದಲ್ಲಿ ನೀರನ್ನು ತರಲು ಆಕೆ ಮನೆಯಿಂದ ಹೊರಗೆ ಧಾವಿಸಿದಳು. ಇನ್ನೇನು ನೀರನ್ನು ತುಂಬಿ ಮನೆಯ ಬಳಿ ಸಾರುವಾಗ ಆಕೆಗೆ ಕೋಟೆಯ ಆಚೆಯ ಬದಿಯಲ್ಲಿ ಸೈನಿಕರ ಗುಸು ಗುಸು ಶಬ್ದ ಕೇಳಲಾರಂಭಿಸಿತು.
ಅಲ್ಲಿಯೇ ಇದ್ದ ದೊಡ್ಡ ಬಂಡೆಯ ಹಿಂದೆ ಅವಿತು ನಿಂತು ನೋಡಿದಾಗ ಹೈದರಾಲಿಯ ಸೈನಿಕರು ಒಬ್ಬೊಬ್ಬರಾಗಿ ಕಳ್ಳ ಗಿಂಡಿಯ ಮೂಲಕ ಒಳಗೆ ನುಸುಳುವ ಪ್ರಯತ್ನ ಮಾಡುತ್ತಿರುವುದು ಆಕೆಗೆ ಕಾಣಿಸಿತು.
ಕೂಡಲೇ ಎಚ್ಚೆತ್ತು ಆಕೆ ತನ್ನ ಪತಿಗೆ ಈ ವಿಷಯವನ್ನು ಅರುಹಲು ಮನೆಗೆ ಧಾವಿಸಿ ಬಂದಾಗ ಪತಿ ಇನ್ನೂ ಊಟ ಮಾಡುತ್ತಿರುವುದನ್ನು ಕಂಡು ಒಂದು ಕ್ಷಣ ಯೋಚಿಸಿದಳು. ಊಟಕ್ಕೆ ಕುಳಿತ ಪತಿಯನ್ನು ಎಚ್ಚರಿಸುವುದಕ್ಕಿಂತ ತಾನೇ ಹೋಗಿ ಆ ಸೈನಿಕರನ್ನು ತಡೆಯಬೇಕು ಎಂಬ ನಿರ್ಧಾರಕ್ಕೆ ಬಂದ ಆಕೆಗೆ ಅಲ್ಲಿಯೇ ಇದ್ದ ಒನಕೆ ಕಣ್ಣಿಗೆ ಬಿತ್ತು.
 ಕೂಡಲೇ ಕಾರ್ಯ ಪ್ರವೃತ್ತಳಾದ ಆಕೆ ತನ್ನ ಸೀರೆಯನ್ನು ವೀರಗಚ್ಛೆಯಂತೆ ಸೊಂಟದ ಹಿಂಬದಿಗೆ ಸಿಕ್ಕಿಸಿ ಆ ಒನಕೆಯನ್ನು ಹಿಡಿದು ಕಳ್ಳಗಿಂಡಿಯ ಬಳಿ ಧಾವಿಸಿದಳು.
ಆಗ ತಾನೆ ಒಳಗೆ ನುಸುಳಿದ ಹೈದರಾಲಿಯ ಸೈನಿಕ ಇನ್ನೇನು ತಲೆಯನ್ನು ಮೇಲೆತ್ತಬೇಕು ಎಂಬಷ್ಟರಲ್ಲಿ ಓಬವ್ವ ಆತನ ತಲೆಯ ಮೇಲೆ ಒನಕೆಯಿಂದ ಜೋರಾಗಿ ಬಾರಿಸಿದಳು. ಕೂಡಲೇ ಉಸಿರು ಚೆಲ್ಲಿದ ಸೈನಿಕನ ಕಾಲುಗಳನ್ನು ಹಿಡಿದು ದರದರನೇ ಎಳೆದು ತಂದು ಆತನನ್ನು ಮತ್ತೆ ನುಸುಳಿ ಬರುವ ಸೈನಿಕರ ಕಣ್ಣಿಗೆ ಬೀಳದಂತೆ ಒಂದೆಡೆ ಮರೆಯಾಗಿಸಿದಳು . ಹೀಗೆ ಒಬ್ಬೊಬ್ಬರಾಗಿ ಒಳನುಸುಳಿದ ಸೈನಿಕರನ್ನು ಆಕೆ ಒನಕೆಯಿಂದ ಒಂದೇ ಏಟಿಗೆ ಜೀವ ಹೋಗುವಂತೆ ಬಡಿದು ಅವರ ಹೆಣಗಳನ್ನು ಒಂದೆಡೆ ಪೇರಿಸತೊಡಗಿದಳು.
ಊಟವಾಗಿ ನೀರು ಕುಡಿದ ಮುದ್ದ ಹನುಮಪ್ಪ ಕಣ್ಣಿಗೆ ಕಾಣಿಸದೆ ಹೋದ ಪತ್ನಿಯನ್ನು ಹುಡುಕುತ್ತಾ ಹೊರಗೆ ಬಂದ. ಮನೆಯಿಂದ ತುಸುದೂರ ನಡೆದು ಬಂದಾಗ ಆತನಿಗೆ ಕಳ್ಳ ಗಿಂಡಿಯ ಬಳಿ ರಣಚಂಡಿಯಂತೆ ವೈರಿಗಳನ್ನು ತುಂಡಾಡುತ್ತಿದ್ದ ಓಬವ್ವ ಕಂಡಳು. ಒನಕೆಯಿಂದ ಬಡಿದಾಗ ಸಿಡಿದ ರಕ್ತ ಆಕೆಯ ಬಟ್ಟೆಗಳನ್ನು ಕೆಂಪಾಗಿಸಿದರೆ ಮುಖ ರೋಷದಿಂದ ಕೆಂಪಾಗಿತ್ತು.
ಇನ್ನೇನು ಪತ್ನಿಯನ್ನು ನೋಡಿ ಗಾಬರಿಯಿಂದ ಆತ ಕೂಗಬೇಕು ಎಂಬಷ್ಟರಲ್ಲಿ ತಲೆಯೆತ್ತಿ ನೋಡಿದ ಆಕೆ
ಹೈದರಾಲಿಯ ಸೈನಿಕರು ನಮ್ಮ ಕೋಟೆಯನ್ನು ಮುತ್ತಿದ್ದಾರೆ…ಕೂಡಲೇ ಓಡಿ ಹೋಗಿ ಕಹಳೆಯನ್ನು ಊದಿ ನಮ್ಮ ಸೈನಿಕರನ್ನು ಎಚ್ಚರಿಸಿ ಎಂದು ಜೋರಾಗಿ ಕೂಗಿ ಹೇಳಿದಳು. ಪತ್ನಿ ಹೇಳಿದ್ದು ಸರಿ ಎಂದು ತೋರಿದಾಗ ಮುದ್ದ ಹನುಮಪ್ಪ ಕೂಡಲೇ ಕೋಟೆಯ ಬತೇರಿಯ ಕಡೆ ಓಡುತ್ತಾ ಹೋದನು. ತನ್ನ ರಣಕಹಳೆಯನ್ನು ಜೋರಾಗಿ ಊದುತ್ತಾ ಚಿತ್ರದುರ್ಗದ ಸೈನಿಕರಿಗೆ ಶತ್ರುಗಳ ಇರುವಿನ ಸುಳಿವನ್ನು ತಿಳಿಸಿದನು. ಕೋಟೆಯ ಎಲ್ಲಾ ಭಾಗದಿಂದಲೂ ಸನ್ನದ್ಧರಾದ
ಸೈನಿಕರು ಶತ್ರುಗಳನ್ನು ಎದುರಿಸಲು ಓಡೋಡಿ ಬಂದರು.
ಇಷ್ಟರಲ್ಲಾಗಲೇ ಕಳ್ಳಗಿಂಡಿಯಿಂದ ನುಸುಳಿ ಬಂದ ಹೈದರಾಲಿಯ ಓರ್ವ ಸೈನಿಕ ಹಿಂದಿನಿಂದ ಬಂದು ಓಬವ್ವನಿಗೆ ಖಡ್ಗದಿಂದ ಇರಿದನು. ಅಪಾರ ಯಾತನೆಯಾಗುತ್ತಿದ್ದರೂ ಕೂಡ ತನ್ನ ಸೈನಿಕರನ್ನು ಹುರಿದುಂಬಿಸುತ್ತಿದ್ದ ಓಬವ್ವನ ದೇಹದಿಂದ ರಕ್ತ ಧಾರೆಯಾಗಿ ಸುರಿಯುತ್ತಿದ್ದರೂ ಆಕೆ ರೋಷ ಮತ್ತು ಆವೇಶಗಳಿಂದ ತಪ್ತಳಾಗಿ ಸೈನಿಕರ ರುಂಡವನ್ನು
 ಚಂಡಾಡುತ್ತಿದ್ದಳು. ವಿಷಯವು ಬಾಯಿಂದ ಬಾಯಿಗೆ ಹರಡಿ ಮದಕರಿ ನಾಯಕರಿಗೆ ಮುಟ್ಟಿ ಅವರು ಕೂಡ ಸ್ಥಳಕ್ಕೆ ಧಾವಿಸಿ ಬಂದು ನೋಡಿ ಕೇವಲ ಒಂದು ಮಗುವಿನ ತಾಯಿಯಾಗಿದ್ದ ಓಬವ್ವ ಇಂದು ಇಡೀ ದುರ್ಗದ ಕೋಟೆಯನ್ನು ಶತ್ರು ಸೈನಿಕರಿಂದ ರಕ್ಷಿಸಿ ದುರ್ಗದ ತಾಯಿಯಾದಳು ಎಂದು ಭಾವೋದ್ವೇಗದಿಂದ ಘೋಷಿಸಿದರು.
 ಸಾಕಷ್ಟು ಗಂಟೆಗಳ ಕಾಲ ಶತ್ರುಗಳನ್ನು ಒಳಬರದಂತೆ ತಡೆದ ಓಬವ್ವ ನಂತರ ಬಸವಳಿದು ಎಚ್ಚರ ತಪ್ಪಿದಳು.
ಇದೀಗ ಆಕೆಯನ್ನು ಅರಮನೆಗೆ ಕರೆತಂದು ಶೈತ್ಯ ಉಪಚಾರವನ್ನು ಮಾಡಿದ ಸುಮಾರು ಮೂರು ಗಂಟೆಗಳ ನಂತರ ಎಚ್ಚರಗೊಂಡಳು. ಚಿತ್ರದುರ್ಗದಲ್ಲಿ ಆಕೆಯ ಹೆಸರು ಪ್ರತಿ ಮನೆಗಳಲ್ಲಿ ಸಂಭ್ರಮದಿಂದ ಉಚ್ಚರಿಸುವಂತಾಯಿತು.ಖುದ್ದು ಮಹಾರಾಜರೇ ಆಕೆಯನ್ನು ಗೌರವದಿಂದ ಸನ್ಮಾನಿಸಿ ಚಿತ್ರದುರ್ಗದ ಜನತೆಯ ಪಾಲಿನ ದೇವತೆ ಆಕೆ ಎಂದು ಹಾಡಿ ಹೊಗಳಿದರು. ಆಕೆಗೆ ಏನು ಬೇಕು? ಎಂದು ಕೇಳಿದಾಗ ತನ್ನ ಮನೆತನದವರ ಪಾಲಿನ ಕುಲ ದೇವತೆಯಾಗಿ ಕಾರ್ಯನಿರ್ವಹಿಸಿದ ತನ್ನ ಕುಟುಂಬದವರಿಗೆ ಶುಭ ಮುಹೂರ್ತದಲ್ಲಿ ವೀಳಯವನ್ನು ನೀಡಬೇಕು ಎಂದು ಕೇಳಿಕೊಂಡಳು. ಓಬವ್ವನ ಬೇಡಿಕೆಯಿಂದ ರಾಜ, ಮಂತ್ರಿಗಳು ಹಾಗೂ ಗುರುಲಿಂಗ ಜಂಗಮರು ತಲೆದೂಗಿದರು. ರಾಜಾ ಮದಕರಿ ನಾಯಕರು ಓಬವ್ವನ ಪ್ರತಿ ಬೇಡಿಕೆಯನ್ನು ನಡೆಸಿಕೊಡುವುದಾಗಿ ತಾಮ್ರಪಟಗಳಲ್ಲಿ ಶಿಲಾಶಾಸನಗಳಲ್ಲಿ ಬರೆಸಿದರು.
ಅಂತೆಯೇ ಮಹಾರಾಜರು ಸ್ವಯಂ ಪ್ರೇರಣೆಯಿಂದ ಚಿತ್ರದುರ್ಗದಲ್ಲಿರುವ ಅಗಸನ ಕಲ್ಲು ಗ್ರಾಮವನ್ನು ಆಕೆಯ ಕುಟುಂಬಕ್ಕೆ ಜಹಗೀರಾಗಿ ನೀಡಿದರು. ಇಡೀ ಊರಿನಲ್ಲಿ ಆಕೆಯನ್ನು ಮೆರವಣಿಗೆ ಮಾಡಿ ಪಟ್ಟೆ ಪೀತಾಂಬರಗಳನ್ನು ಉಡಿಸಿ ಉಡಿ ತುಂಬಿದರು.
ಆಕೆಯ ಶೌರ್ಯದ ನೆನಪಿಗಾಗಿ ಕ್ರಿಸ್ತಶಕ 1799 ರಲ್ಲಿ ಚಿತ್ರದುರ್ಗದ ಕೋಟೆಗೆ ಮತ್ತೊಂದು ಸುತ್ತು ಕೋಟೆಯನ್ನು ಕಟ್ಟಿಸಿ ಅದರ ಒಂದು ಬಾಗಿಲಿಗೆ ಒನಕೆ ಕಿಂಡಿ ಬಾಗಿಲು ಎಂದು ಹೆಸರಿಟ್ಟರು. ಓಬವ್ವನ ಪ್ರತಿಮೆಯನ್ನು ಕರಿಯ ಕಲ್ಲಿನಲ್ಲಿ ಕೆತ್ತಿಸಿ ಕಳ್ಳಗೆಂಡಿಯ ಹತ್ತಿರ ಪೂರ್ವಾಭಿಮುಖವಾಗಿ ಸ್ಥಾಪಿಸಿದರು. ಮುಂದೆ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಾಗ ಈ ಪ್ರತಿಮೆಯು ಜಕ್ಕಮ್ಮಾಗಿ ಕೇವಲ ಪಾದಗಳು ಮಾತ್ರ ಉಳಿದಿದ್ದು ಈಗ ಅವು ಕೂಡ ಮಾಯವಾಗಿವೆ.
ವೀರಾವೇಷದಿಂದ ಹೈದರಾಲಿಯ ಸೈನಿಕರನ್ನು ನಾಶಗೊಳಿಸಿದ ಓಬವ್ವನ ಮನಸ್ಸಿನ ಮೇಲೆ ಈ ಘಟನೆ ಬಹಳಷ್ಟು ಪರಿಣಾಮವನ್ನು ಬೀರಿ ಆಕೆಯಲ್ಲಿ ಖಿನ್ನತೆ ಕಾಡತೊಡಗಿತು. ಬರಬರುತ್ತಾ ಜೀವನದಲ್ಲಿ ಜಿಗುಪ್ಸೆಯನ್ನು ಅನುಭವಿಸಿದ ಆಕೆ ಅನ್ನ ನೀರನ್ನು ತೊರೆದು 1769ರ ಸೆಪ್ಟೆಂಬರ್ ತಿಂಗಳಿನಲ್ಲಿ ದೈವಾಧೀನಳಾದಳು.
 ಓಬವ್ವನ ಅಕಾಲಿಕ ಮರಣಕ್ಕೆ ಸಂತಾಪವನ್ನು ಸೂಚಿಸಿದ ದೊರೆಗಳು ರಾಜ ಮರ್ಯಾದೆಯಿಂದ ಆಕೆಯ ಅಂತಿಮ ಯಾತ್ರೆಯನ್ನು ಪೂರೈಸಿ ಬೆಟ್ಟದ ಮೇಲಿರುವ ತಣ್ಣೀರು ಚಿಲುಮೆಯ ಪೂರ್ವಕ್ಕೆ ಆಕೆಯ ಸಮಾಧಿಯನ್ನು ಮಾಡಿದರು… ನಂತರ ಆ ಸಮಾಧಿಯ ಮೇಲೆ ಚಿಕ್ಕ ಮಂಟಪವನ್ನು ಕಟ್ಟಿದರು. ಓಬವ್ವ ಕೇವಲ ತನ್ನ ಪತಿ ಮುದ್ದ ಹನುಮಪ್ಪ ಮತ್ತು ಏಕೈಕ ಪುತ್ರ ಆನೆಪ್ಪನನ್ನು ಮಾತ್ರ ಬಿಟ್ಟು ಹೋಗಲಿಲ್ಲ ಅಪಾರ ಸಂಖ್ಯೆಯ ದುರ್ಗದ ಮಕ್ಕಳು ಆಕೆಯ ಅಗಲಿಕೆಯಿಂದ ಅನಾಥರಾಗಿದ್ದರು.
ಮುಂದೆ ಆಕೆಯ ಮರಣದ ನಂತರ ಮದಕರಿ ನಾಯಕರು ಕಾಶಿಯಿಂದ ಒಂದು ದೇವರ ಪೆಟ್ಟಿಗೆಯನ್ನು ತರಿಸಿ ಅದರೊಳಗೆ ಒಂದು ಪುಟ್ಟ ಮೂರ್ತಿಯನ್ನು ತಯಾರಿಸಿ ಪವಿತ್ರ ಗಂಗಾಜಲ ದೀಕ್ಷಾಭಿಷೇಕ ಮಾಡಿಸಿ ಶ್ರೀ ವೀರವನಿತೆ ಒನಕೆ ಓಬವ್ವ ದೇವತೆ ಎಂಬ ನಾಮಾಂಕಿತದಿಂದ ಚಿತ್ರದುರ್ಗಕ್ಕೆ ತಂದು ಅದನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಿದರು. ಇನ್ನೇನು ಆ ವಿಗ್ರಹಕ್ಕೆ ದೇಗುಲವನ್ನು ಕಟ್ಟಬೇಕು ಎಂಬಷ್ಟರಲ್ಲಿ ಹಲವಾರು ದಾಳಿಗಳು ನಡೆದು ಆ ಕಾರ್ಯ ಅಲ್ಲಿಗೆ ನಿಂತು ಹೋಯಿತು.
 ಇತಿಹಾಸದಲ್ಲಿ ಓರ್ವ ಸಾಮಾನ್ಯ ಮಹಿಳೆ ತನ್ನ ಧೈರ್ಯ ಸಾಹಸ ಮತ್ತು ಕರ್ತವ್ಯ ಪ್ರಜ್ಞೆಯ ಕಾರಣದಿಂದ ಅಸಾಮಾನ್ಯ ವೀರ ಮಹಿಳೆಯಾಗಿ ಗುರುತಿಸಿಕೊಂಡ ಓಬವ್ವ ಅಜರಾಮರವಾಗಿದ್ದಾಳೆ…. ಆಕೆಗೆ ಹಾಗೂ ಆಕೆಯ ಅಪ್ರತಿಮ ಶೌರ್ಯಕ್ಕೆ ನಮೋ ನಮಃ
 ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ
Please follow and like us:

 

 

 

 

 

 

Translate »
[t4b-ticker]
error: Content is protected !!