https://youtu.be/NHc6OMSu0K4?si=SI_K4goOPEgwo6h2
ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ….ಜಯ ನಿಮ್ಮದೇ….
ಎಸ್. ಎಸ್. ಎಲ್. ಸಿ. ಪರೀಕ್ಷೆಯ ಯಶಸ್ಸಿನ ಗುಟ್ಟು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೇ….. ನಿಮಗೆ ಶುಭವಾಗಲಿ…..
ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳೇ…. ನಿಮಗೆ ಶುಭವಾಗಲಿ ನೀವು ಈಗಾಗಲೇ ಚೆನ್ನಾಗಿ ಓದಿದ್ದೀರಾ ಮತ್ತು ಹೆಚ್ಚಿನ ಅಭ್ಯಾಸವನ್ನು ಸಹ ಮಾಡಿದ್ದೀರಾ ಶಿಕ್ಷಕರು ತರಗತಿಯಲ್ಲಿ ಪಾಠಗಳನ್ನು ಮುಗಿಸಿದ್ದಾರೆ ಅಲ್ಲವೇ…. ಎರಡು ಮೂರು ಸರಣಿ ಪರೀಕ್ಷೆ ಬರೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದೀರಾ… ಇಲಾಖೆ ಮತ್ತು ಅಧಿಕಾರಿಗಳು ನಿಮಗೆ ಫೋನಿನ ಕಾರ್ಯಕ್ರಮ…ರಸಪ್ರಶ್ನೆ ಆಗಿರಬಹುದು… ಮನೆ ಭೇಟಿಯಾಗಿರಬಹುದು…, ಗುಂಪು ಅಧ್ಯಯನ ಇರಬಹುದು…..ಪಾಸಿಂಗ್ ಪ್ಯಾಕೇಜ್ ಆಗಿರಬಹುದು…ಸ್ಕೋರಿಂಗ್ ಪ್ಯಾಕೇಜ್ ಆಗಿರಬಹುದು…. ಇತ್ಯಾದಿ ರಚನಾತ್ಮಕ ಕ್ರಿಯೆಗಳಿಗೆ ಚಾಲನೆ ನೀಡಿ ನಿಮಗೆ ಧೈರ್ಯ ತುಂಬುವ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದ್ದಾರೆ…. ಹಾಗೆಯೇ ಟಿವಿಯಲ್ಲಿ ಪತ್ರಿಕೆಗಳಲ್ಲಿ ಪ್ರಸಾರವಾಗುವ ಪಾಠಗಳನ್ನು ನೀವು ವೀಕ್ಷಣೆ ಮಾಡಿರುವಿರಿ ಅನೇಕ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಬಿಡಿಸಿದ್ದೀರಾ….ಸಕಲಶಸ್ತ್ರಗಳನ್ನು ಸಿದ್ಧಪಡಿಸಿಕೊಂಡು ಯುದ್ಧ ಭೂಮಿಯಲ್ಲಿ ಗೆಲ್ಲಬೇಕು ಎಂಬ ಬಯಕೆಯೊಂದಿಗೆ….ಸಜ್ಜಾಗಿರುವ ಸೈನಿಕರಂತೆ ನೀವು ರೆಡಿಯಾಗಿದ್ದೀರಾ…. ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವ ಮಾತು ನಿಮ್ಮದಲ್ಲ ಅಲ್ಲವೇ ಮಕ್ಕಳೆ…..? ಹಾಗಾದರೆ ಬನ್ನಿ ಪರೀಕ್ಷೆಯ ಯಶಸ್ಸಿನ ಗುಟ್ಟನ್ನು ನಾವು ಈ ಕೆಳಗಿನ ರೀತಿ ನೋಡುತ್ತಾ ಹೋಗೋಣ…..
1 ಮಕ್ಕಳೇ ಆತ್ಮವಿಶ್ವಾಸವಿರಲಿ
ವಿದ್ಯಾರ್ಥಿಗಳೇ ಪರೀಕ್ಷೆ… ಪರೀಕ್ಷೆ…ಎಂಬ ಭಯಾನ…? ಭಯ ನಿಮ್ಮನ್ನು ಕಾಡುತ್ತಿದೆಯಾ….? ಭಯವನ್ನು ಈಗಲೇ ಬಿಟ್ಟುಬಿಡಿ ಭಯ ಬೇಡ ಪರೀಕ್ಷೆಯನ್ನು ಒಂದು ಹಬ್ಬದಂತೆ ಸಂಭ್ರಮಿಸಿ . ಭಯ..ಆತಂಕ…ಅಂಜಿಕೆ… ಅಳುಕು.. ನಿಮ್ಮ ಹತ್ತಿರಾನು ಸುಳಿಯದೆ ಹೋಗುತ್ತದೆ ಇತರ ಪರೀಕ್ಷೆಯಂತೆ ಇದು ಒಂದು ಪರೀಕ್ಷೆ ಅಷ್ಟೇ… ನಾನು ಪರೀಕ್ಷೆ ಬರೆದೆ ಬರೆಯುತ್ತೇನೆ ಅದರಲ್ಲಿ ಯಶಸ್ಸು ಕಾಣುತ್ತೇನೆ ಎಂಬ ವಿಶ್ವಾಸವಿರಲಿ ಭಯ ಬಿಟ್ಟು ಸಂತೋಷದಿಂದ ಪರೀಕ್ಷೆಯನ್ನು ಎದುರಿಸಿ..ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಅಂಕಗಳು ನಿಮಗೆ ಬಂದೇ ಬರುತ್ತದೆ…ಮಾನಸಿಕವಾಗಿ ಸದೃಢರಾಗಿ…ಹೇಗಂದರೆ ನೀವು ಆಟವಾಡುವಾಗ ನಾನು ಗೆಲ್ಲಬೇಕಾ ಎಂಬ ಆಶಯದಿಂದ ಆಟ ಆಡುತ್ತೀರೋ… ಹಾಗೆ ನಾನು ಪರೀಕ್ಷೆಯನ್ನು ಬರೆಯುತ್ತೇನೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದೆ ತೀರುತ್ತೇನೆ… ಎಂಬ ಆಶಯದಿಂದ ಪರೀಕ್ಷೆಯನ್ನ ಬರೆಯಿರಿ ಯಶಸ್ಸು ನಿಮ್ಮದಾಗುತ್ತದೆ ಆದರೆ ಕಠಿಣ ಪರಿಶ್ರಮ ಅತ್ಯಗತ್ಯ.
2. ಓದು. ಸ್ಮರಣೆ. ಬರವಣಿಗೆ
ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಗುಟ್ಟು ಎಂದರೆ ಓದು.ಸ್ಮರಣೆ. ಬರವಣಿಗೆ.ಯಾವ ವಿದ್ಯಾರ್ಥಿಯು ಈ ಮೂರು ಅಂಶಗಳನ್ನು ತನ್ನಲ್ಲಿ ಅಳವಡಿಸಿಕೊಂಡು ನಡೆಯುತ್ತಾನೋ ಪರೀಕ್ಷೆ ಎಂಬ ಯುದ್ಧವನ್ನು ಸುಲಭವಾಗಿ ಜಯಿಸಿ ವಿಜಯನಾಗುತ್ತಾನೆ.. ಹೆಚ್ಚಿನ ಅಂಕಗಳು ನಿರೀಕ್ಷೆ ಮಾಡುವ ವಿದ್ಯಾರ್ಥಿಗಳು ಈ ಮೂರು ಅಂಶಗಳನ್ನು ಮನದಲ್ಲಿಟ್ಟುಕೊಂಡು ಓದಬೇಕು…ಹಳೆಯ ಟಾಪರ್ ವಿದ್ಯಾರ್ಥಿಗಳನ್ನು ನೀವು ಕೇಳಿ ನೋಡಿ ಅವರು ಹೇಳುವುದು ಒಂದೇ….ಓದು.. ಸ್ಮರಣೆ…ನಂತರ ಬರವಣಿಗೆ ಈ ಗುಟ್ಟನ್ನು ತಿಳಿದಿರತಕ್ಕಂತಹ ವಿದ್ಯಾರ್ಥಿಗಳು ಯಶಸ್ಸು ಅನ್ನುವುದು ಅವರ ಕೈಯಲ್ಲಿದ್ದಂತೆ..ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಿ ಅದನ್ನು ಸ್ಮರಣೆ ಮಾಡಿ ನಂತರ ಬರೆಯುವುದನ್ನು ಪಾಲಿಸಬೇಕು…
3. ಯಶಸ್ಸಿನ ವೇಳಾಪಟ್ಟಿ
ಯಶಸ್ಸಿನ ವೇಳಾಪಟ್ಟಿ ಎಂದರೆ..ಯಶಸ್ಸನ್ನ ಗೆದ್ದ…ಹಾಗೆ ಅಂದರೆ ನಾವು ಮಾಡುವ ಕೆಲಸಗಳನ್ನು ಯಾವ ಯಾವ ಸಮಯದಲ್ಲಿ ಮಾಡಬೇಕು ಎಂದು ತೀರ್ಮಾನ ಮಾಡುವುದೇ ವೇಳಾಪಟ್ಟಿ…ಈ ವೇಳಾಪಟ್ಟಿ ಎನ್ನುವುದು ವಿದ್ಯಾರ್ಥಿಗಳ ಜೀವನದ ಬಹು ಮುಖ್ಯ ಅಂಶ ಯಾರು ಸರಿಯಾದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅದರಂತೆಯೇ ನಡೆಯುತ್ತಾರೋ ಅವರ ಯಶಸ್ಸು ಕಟ್ಟಿಟ್ಟ ಬುತ್ತಿ…..ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಯು ಯಾವ ಯಾವ ಸಮಯದಲ್ಲಿ ಯಾವ ಯಾವ ವಿಷಯಗಳನ್ನ ಓದಬೇಕು ಬರೆಯಬೇಕು ಎಂದು ಸಮಯವನ್ನು ಭಾಗ ಮಾಡಿ ಆ ಸಮಯವನ್ನು ಅದಕ್ಕೆ ಮೀಸಲಿಟ್ಟು ಕಾರ್ಯಗತ ಮಾಡುತ್ತಾರೋ ಆ ವಿದ್ಯಾರ್ಥಿಗಳು ನಿರೀಕ್ಷೆ ಮೀರಿದ ಅಂಕಗಳನ್ನ ಪಡೆಯಲು ಸಾಧ್ಯ…ವೇಳಾಪಟ್ಟಿ ಎನ್ನುವುದು ನಮ್ಮ ಜೀವನದ ಶಿಸ್ತು..ಸಮಯ ಪಾಲನೆ….ವ್ಯಕ್ತಿತ್ವ….ಗೌರವವನ್ನು ಹೆಚ್ಚಿಸುವಂಥದ್ದು ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಸರಿಯಾದ ವೇಳಾಪಟ್ಟಿಯನ್ನು ಹಾಕಿಕೊಂಡು ಪರೀಕ್ಷೆ ಎಂಬ ಯುದ್ಧಕ್ಕೆ ತಯಾರಾಗಬೇಕು..
4. ಕಲಿತದ್ದನ್ನ ಪುನಃ ಬರೆಯಿರಿ
10 ಸಾರಿ ಓದುವುದಕ್ಕಿಂತ ಒಂದು ಸಾರಿ ಬರೆದರೆ ಲೇಸು ಎಂಬ ಮಾತಿನಂತೆ ….. ಮಕ್ಕಳೇ… ಪರೀಕ್ಷಾ ಸಮಯದಲ್ಲಿ ಕಲಿತದ್ದನ್ನು ಪುನಹ ಬರೆಯುವುದು ನಿಮಗೆ ಶೇಕಡ 80ರಷ್ಟು ಯಶಸ್ಸನ್ನು ನೀಡುತ್ತದೆ ಪ್ರತಿದಿನ ವಿಷಯವಾರು ಅಭ್ಯಾಸ ಮಾಡಿದ್ದು… ಓದಿದ್ದನ್ನು… ನೀವು ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳು ಬೇಕು..ಇದು ನಿಮ್ಮ ನೆನಪಿನ ಶಕ್ತಿಯಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ ಇದು ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರಿ ಇದು ನಿಮಗೆ ಹೆಚ್ಚಿನ ನೆನಪಿನ ಶಕ್ತಿಯನ್ನು ಒದಗಿಸಿಕೊಡುತ್ತದೆ….
5.ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಿ
ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಮಾಡುವುದು ವಿದ್ಯಾರ್ಥಿಗಳ ಆಧ್ಯ ಕರ್ತವ್ಯ….ಪ್ರತಿ ವಿಷಯ ದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಈ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಅಭ್ಯಾಸ ಮಾಡಿ..ಇದು ನಿಮ್ಮನ್ನು ಪರೀಕ್ಷೆಗೆ ಮಾನಸಿಕವಾಗಿ ಸಿದ್ದಗೊಳಿಸುತ್ತದೆ.ಯಾವ ರೀತಿಯ ಪ್ರಶ್ನೆಗಳು ಬರುತ್ತವೆ..ಹಳೇ ಪ್ರಶ್ನೆಗಳು ಎಷ್ಟು ಬಾರಿ ಪುನರಾವರ್ತನೆಯಾಗಿದೆ.ಪ್ರಶ್ನೆ ಪತ್ರಿಕೆಯ ಮಾದರಿ ಹೇಗಿರುತ್ತದೆ,ಎಂದು ತಿಳಿಯುತ್ತದೆ
6. ಹೋಲಿಕೆ ಮಾಡಿಕೊಳ್ಳಬೇಡಿ
ವಿದ್ಯಾರ್ಥಿಗಳೇ…..ನಿಮ್ಮ ದೊಡ್ಡ ದೌರ್ಬಲ್ಯವೆಂದರೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳುವುದು….ಪ್ರತಿಯೊಬ್ಬ ವಿದ್ಯಾರ್ಥಿಗೂ ನಿಮ್ಮದೇ ಆದ ಸಾಮರ್ಥ್ಯ ನಿಮ್ಮಲ್ಲಿ ಇರುತ್ತದೆ ಅದನ್ನ ನೀವು ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೇ….ಅದನ್ನು ಬಿಟ್ಟು ಹಿಂಜರಿಕೆ ಭಾವನೆಯಿಂದ ಬೇರೆಯವರನ್ನು ನೋಡಿ ಅವರಿಗೆ ಹೋಲಿಕೆ ಮಾಡಿದರೆ ನಿಮ್ಮ ಯಶಸ್ಸು ಶೂನ್ಯವಾಗುತ್ತದೆ…..ನಾನು ಪ್ರತಿಭಾವಂತ ವಿದ್ಯಾರ್ಥಿ ಎನ್ನುವ ಮನೋಭಾವನೆಯನ್ನು ನಿಮ್ಮಲ್ಲಿ ನೀವು ರೂಡಿಸಿಕೊಳ್ಳಿ ಆಗ ಯಶಸ್ಸು ನಿಮ್ಮದಾಗುತ್ತದೆ.
7. ಪ್ರಮುಖ ಅಂಶಗಳನ್ನು ಟಿಪ್ಪಣಿ ಮಾಡಿ
ವಿದ್ಯಾರ್ಥಿ ಜೀವನದ ಯಶಸ್ಸಿನ ಗುಟ್ಟು ಎಂದರೆ ಅದು ಪ್ರಮುಖ ಅಂಶಗಳನ್ನು ಟಿಪ್ಪಣಿ ಮಾಡುವುದು…
ಯಾವ ವಿದ್ಯಾರ್ಥಿ ಈ ವಿಧಾನವನ್ನು ಪಾಲಿಸುತ್ತಾನೋ…ಅವನು ವಿದ್ಯಾರ್ಥಿ ಜೀವನವನ್ನು ಸುಲಭವಾಗಿ…ಯಶಸ್ವಿಯಾಗಿ…ಮುಗಿಸುತ್ತಾನೆ..ಎಂತಹ ಪರೀಕ್ಷೆಗೂ ಜಗ್ಗದೆ ಯಶಸ್ಸನ್ನು ಕಾಣುತ್ತಾನೆ.ಅದೇ ರೀತಿ ನೀವುಗಳು ಪ್ರತಿ ವಿಷಯವಾರು ಮೊದಲು ವಿಷಯಕ್ಕೆ ಸಂಬಂಧಿಸಿದಂತೆ ಅಂಶಗಳನ್ನು ಪಟ್ಟಿ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ನಂತರ ಆ ಅಂಶಗಳನ್ನು ನೋಡಿದ ತಕ್ಷಣ ನಿಮ್ಮ ಮೆದುಳಿನಲ್ಲಿ ಆ ವಿಷಯದ ವಿವರಣೆ ಬರಬೇಕು
8. ನಿಮ್ಮಧೈರ್ಯವೇ… ನಿಮ್ಮ ಯಶಸ್ಸಿನ ಹಾದಿ
ಮಕ್ಕಳೇ…. ಪರೀಕ್ಷೆ ಎಂಬ ಮಾನಸಿಕ ಭೂತದ ಭಯ ಬೇಡ. ಇದು ಹಲವು ಪರೀಕ್ಷೆಯ ತರ ಇದು ಒಂದು ಪರೀಕ್ಷೆ ಎಂದು ಭಾವಿಸಿ , ಇಂತಹ ಅನೇಕ ಪರೀಕ್ಷೆಗಳನ್ನು ಎದುರಿಸಿದ್ದೀರಿ,..ಇದು ಅಂತಿಮ ಪರೀಕ್ಷೆಯು ಅಲ್ಲ…..ಮೊದಲ ಪರೀಕ್ಷೆಯು ಅಲ್ಲ…. ಇಷ್ಟು ದಿವಸ ಶಾಲೆಯಲ್ಲಿ ನಿಮ್ಮ ಶಿಕ್ಷಕರ ಎದುರು ಕುಳಿತು ಪರೀಕ್ಷೆ ಬರೆಯುತ್ತಿದ್ದೀರಿ…..ಇಲ್ಲಿ ಬೇರೆ ಶಾಲೆಯ ಶಿಕ್ಷಕರ ಎದುರು ಕುಳಿತು ಪರೀಕ್ಷೆ ಬರೆಯುವಿರಿ ಅಷ್ಟೇ…ಪರೀಕ್ಷೆಗೆ ಚೆನ್ನಾಗಿ ತಯಾರಿ ಮಾಡಿಕೊಂಡು ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಪರೀಕ್ಷಾ ಸಮಯದಲ್ಲಿ ನಿಮಗೆ ಆತ್ಮವಿಶ್ವಾಸ ಮರುಳಿಸುವ.. ದೇವರನ್ನಾಗಲಿ..ವ್ಯಕ್ತಿಯನ್ನಾಗಿ… ಶಕ್ತಿಯನ್ನಾಗಲಿ…ಮನದಲ್ಲಿ ನೆನೆಯಿರಿ ಧೈರ್ಯವು ತಾನೆ ಬರುತ್ತದೆ…..
9. ಆರೋಗ್ಯದ ಕಡೆ ಗಮನವಿರಲಿ
ಆರೋಗ್ಯವೇ ಮಹಾಭಾಗ್ಯ…ಆರೋಗ್ಯ ಹೊಂದಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ…..ಎಂಬಂತೆ ಪರೀಕ್ಷೆ ತಯಾರಿ ಮಾಡುವಾಗ ಆರೋಗ್ಯದ ಬಗ್ಗೆ ನಿರ್ಲಕ್ಷೆ ಬೇಡ…ತುಂಬಾ ನಿದ್ದೆಗೆಟ್ಟು…ಊಟ ಬಿಟ್ಟು….ಓದಬೇಡಿ…ಊಟ ನಿದ್ದೆ ಬಹಳ ಮುಖ್ಯ.,ಪರೀಕ್ಷಾ ಸಮಯದಲ್ಲಿ ಹೊರಗಿನ ತಿಂಡಿ ಜಂಕ್ ಫುಡ್ ಬೇಡ…. ಮಿತವಾಗಿ ಆಹಾರ ಸೇವನೆ ಇರಲಿ ಮನೆ ಊಟದ ಕಡೆ ಹೆಚ್ಚು ಗಮನ ಒಲವು ಇರಲಿ…ನೀರನ್ನು ಚೆನ್ನಾಗಿ ಕುಡಿಯಿರಿ ಮೊಳಕೆ ಕಾಳುಗಳು ಹಸಿ ತರಕಾರಿಗಳು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ……
10. ಉತ್ತರ ಹೀಗೆ ಇರಲಿ
ವಿದ್ಯಾರ್ಥಿಗಳೇ….ಉತ್ತರವನ್ನು ಬರೆಯುವ ಮೊದಲು ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಿ…. ಅರ್ಥವಾಗದಿದ್ದರೆ ಎರಡು ಮೂರು ಬಾರಿ ಪ್ರಶ್ನೆಯನ್ನು ಓದಿರಿ… ನಂತರ ಉತ್ತರ ಬರೆಯಲು ಪ್ರಾರಂಭಿಸಿ ಮೊದಲು ನಿಮಗೆ ಬರುವಂತ ಉತ್ತರಗಳ ಪ್ರಶ್ನೆಗಳಿದ್ದರೆ ಅದನ್ನು ಮೊದಲು ಬರೆಯಿರಿ….ಆಗ ನಿಮಗೆ ಹೆಚ್ಚಿನ ಆತ್ಮವಿಶ್ವಾಸ ಬರುವುದು ಪ್ರಶ್ನೆಗೆ ತಕ್ಕಂತೆ ಅಗತ್ಯವಿರುವ ಉತ್ತರಗಳನ್ನ ಬರೆಯಿರಿ …. ಉತ್ತರ ಹಾಳೆಯನ್ನು ಬಹಳಷ್ಟು ನೀಟಾಗಿ ಇರಲಿ..,ಮೊದಲ ಪುಟದಿಂದ ಕೊನೆಯ ಪುಟದ ವರೆಗೆ ಅಕ್ಷರಗಳು ಒಂದೇ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಿ…..ಅಂಕಗಳಿಗೆ ತಕ್ಕಂತೆ ಉತ್ತರಗಳನ್ನ ಬರೆಯಿರಿ …ಉತ್ತರಗಳು ಎಲ್ಲಾ ಹಂತಗಳನ್ನ ಒಳಗೊಂಡಿರಲಿ….
11. ಧ್ಯಾನ.ವ್ಯಾಯಾಮ. ಆಟಗಳು.
ವಿದ್ಯಾರ್ಥಿಗಳೇ ನಿಮ್ಮ ಸರ್ವತೋಮುಖ ಬೆಳವಣಿಗೆಯಲ್ಲಿ ಧ್ಯಾನ.. ವ್ಯಾಯಾಮ.. ಆಟಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ.ಯಾರು ಕ್ರಮಬದ್ಧವಾದ ಧ್ಯಾನ ವ್ಯಾಯಾಮ ಆಟಗಳಲ್ಲಿ ಪಾಲ್ಗೊಳ್ಳುತ್ತಿರೋ ಅವರ ಆರೋಗ್ಯವು ಸಹ ಚೆನ್ನಾಗಿರುತ್ತದೆ ಮತ್ತು ನಿಮ್ಮ ನೆನಪಿನ ಶಕ್ತಿಯು ಸಹ ಹೆಚ್ಚಾಗುತ್ತದೆ… ಸದೃಢ ಶರೀರದಲ್ಲಿ ಸದೃಢ ಮನಸ್ಸನ್ನು ನಿರ್ಮಾಣ ಮಾಡುತ್ತದೆ.. ಮನಸ್ಸಿನಲ್ಲಿ ಶಾಂತತೆ..ಮುಖದಲ್ಲಿ ಕಳೆ.. ಉತ್ತಮ ಆರೋಗ್ಯ ಸ್ಥಿತಿ ಎಲ್ಲವನ್ನು ಸಹ ನೀಡುತ್ತದೆ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಧ್ಯಾನ ವ್ಯಾಯಾಮ ಆಟಗಳನ್ನು ಪಾಲ್ಗೊಳ್ಳುವುದರಿಂದ ನಿಮ್ಮ ಪರೀಕ್ಷೆಯ ಯಶಸ್ಸಿನಲ್ಲಿ ಮತ್ತು ಅತಿ ಹೆಚ್ಚು ಅಂಕಗಳಿಸುವಲ್ಲಿ ಇವುಗಳ ಪಾತ್ರ ಮಹತ್ವದ ಆಗಿದೆ….ಇದನ್ನು ಅನುಸರಿಸಿದವರು ಶಿಸ್ತಿನ ಜೀವನವನ್ನು ನಡೆಸುತ್ತೀರಾ ಎಲ್ಲಾ ಮಕ್ಕಳು ಮಾಡುತ್ತೀರ ತಾನೇ…?
12. ಪೋಷಕರ ಪಾತ್ರ
ಮಕ್ಕಳ ಪರೀಕ್ಷಾ ಸಮಯದಲ್ಲಿ ಪೋಷಕರ ಪಾತ್ರ ಬಹಳ ಮಹತ್ವದಾಗಿದೆ
1.ಈ ಸಮಯದಲ್ಲಿ ಮಕ್ಕಳಿಗೆ ಹೆಚ್ಚಿನ ಒತ್ತಡವನ್ನ ನೀಡಬಾರದು .
2.ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮಾತುಗಳನ್ನು ಆಡಬೇಕು
3.ಪರೀಕ್ಷಾ ತಯಾರಿ ಓದಿನ ಬಗ್ಗೆ ಮಕ್ಕಳಲ್ಲಿ ಚರ್ಚೆ ಮಾಡಬೇಕು
4.ಮಕ್ಕಳಿಗೆ ಈ ಸಮಯದಲ್ಲಿ ಒಳ್ಳೆಯ ಆಹಾರ. ಆರೋಗ್ಯ. ಅವರ ಕುಂದು ಕೊರತೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು
5.ಮನೆಯಲ್ಲಿ ಒಳ್ಳೆಯ ಕಲಿಕಾ ವಾತಾವರಣವನ್ನು ಸೃಷ್ಟಿ ಮಾಡುವ ಕಾರ್ಯ ಪೋಷಕರದ್ದಾಗಿದೆ.
6.ಟಿವಿ.ಮೊಬೈಲ್. ಇಂಟರ್ನೆಟ್ ಸೌಲಭ್ಯವನ್ನು ಆದಷ್ಟು ಮಕ್ಕಳಿಂದ ದೂರವಿರುವಂತೆ ನೋಡಿಕೊಳ್ಳಬೇಕು.
7.ಅವರ ಓದಿಗೆ ಸಹಾಯವಾಗುವ ಪಾಟುಪಕರಣಗಳನ್ನು ಒದಗಿಸಿ ಕೊಡುವುದು ಪೋಷಕರ ಕಾರ್ಯವಾಗಿದೆ.
8.ಮಕ್ಕಳಿಗೆ ಗರಿಷ್ಠ ಅಂಕಗಳನ್ನು ತೆಗೆಯಬೇಕು ಎನ್ನುವ ಒತ್ತಡ ಹಾಕಬಾರದು.
9.ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಮಾತನಾಡಬಾರದು
10. ಈ ಸಮಯದಲ್ಲಿ ಮಕ್ಕಳನ್ನು ಬಯ್ಯುವುದಾಗಲಿ ಹೊಡೆಯುವುದಾಗಲಿ , ಹೀಯಾಳಿಸುವುದಾಗಲಿ ಮಾಡಬಾರದು
11. ಆದಷ್ಟು ಅವರಿಗೆ ಬೇರೆ ಕೆಲಸಗಳ ಜವಾಬ್ದಾರಿಯನ್ನ ನೀಡಲೇಬಾರದು…
12. ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರುವುದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು
ಇದು ಪೋಷಕರು ನಿರ್ವಹಿಸತಕ್ಕಂತಹ ಜವಾಬ್ದಾರಿ….
13. ಶಿಕ್ಷಕರ ಪಾತ್ರ
ಮುಂದೆ ಗುರಿ ಇರಬೇಕು…ಹಿಂದೆ ಗುರು ಇರಬೇಕು ಎನ್ನುವ ಮಾತಿನಂತೆ….ಪರೀಕ್ಷೆ ಎಂಬ ಯುದ್ಧವನ್ನು ವಿದ್ಯಾರ್ಥಿಗಳು ಗೆಲ್ಲುವುದಕ್ಕೆ ಗುರುವಿನ ಪಾತ್ರ ಬಹಳ ಮಹತ್ವದ ಆಗಿದೆ….
ಶಿಕ್ಷಕರಿಗೆ ವಿದ್ಯಾರ್ಥಿಗಳ ಸಾಮರ್ಥ್ಯದ ಬಗ್ಗೆ ತಿಳಿದಿರುತ್ತದೆ….
1.ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು
2. ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಇರುವ ಭಯ ಗೊಂದಲಗಳನ್ನ ತರಗತಿ ಕೊಠಡಿಯಲ್ಲಿ ಬಗೆಹರಿಸಬೇಕು….
3. ಮಕ್ಕಳು ಓದುವ ಕಡೆ ಗಮನಹರಿಸಿ ಅವರಿಗೆ ಪರೀಕ್ಷಾ ದೃಷ್ಟಿಯಿಂದ..ಹಳೆ ಪ್ರಶ್ನೆ ಪತ್ರಿಕೆ ಬಿಡಿಸುವುದು..,ಸಂಭಾವನೀಯ ಪ್ರಶ್ನೆಗಳ ಪಟ್ಟಿ…. ವಿಷಯವಾರು ಪ್ರಶ್ನೆ ಮಾಲಿಕೆ……ಪಾಠ ಪುನರಾವರ್ತನೆ….ಕಿರು ಪರೀಕ್ಷೆಗಳು…ಪೂರ್ವ ಸಿದ್ಧತಾ ಪರೀಕ್ಷೆಗಳು……ಪ್ರಶ್ನೋತ್ತರ ಚಟುವಟಿಕೆಗಳು…..ಇನ್ನೂ ಹೆಚ್ಚು ಹೆಚ್ಚಿನ ಚಟುವಟಿಕೆಗಳನ್ನ ಮಾಡಿಸಬೇಕು….ಮುಖ್ಯವಾಗಿ ಅಂದವಾದ ಬರವಣಿಗೆಯ ವಿಧಾನಗಳನ್ನು ತಿಳಿಸಬೇಕು…. ಇದು ಶಿಕ್ಷಕರು ಮಾಡುವಂತಹ ಕಾರ್ಯಗಳು…..
14. ಪರೀಕ್ಷಾ ದಿನದಂದು ಅನುಸರಿಸುವ ಮುಖ್ಯ ಕ್ರಮಗಳು
ಪರೀಕ್ಷೆ ದಿನ ಬಂದೇ ಬಿಟ್ಟಿತು ಎಷ್ಟು ಅಭ್ಯಾಸ ಮಾಡಿದೆ ಎನ್ನುವುದಕ್ಕಿಂತ ಹೇಗೆ ಪರೀಕ್ಷೆ ಬರೆಯಬೇಕು ಎನ್ನುವುದು ಬಹು ಮುಖ್ಯವಾದದ್ದು ಹೀಗಾಗಿ ಪರೀಕ್ಷೆಯ ದಿನ ಒಂದಿಷ್ಟು ಸಿದ್ಧತೆಯಾಗುವುದು ಅಗತ್ಯ
1. ಪರೀಕ್ಷೆ ಯಾವ ದಿನ ಯಾವ ವಿಷಯ ಇದೆ ಎಂದು ಖಚಿತಪಡಿಸಿಕೊಳ್ಳಿ ವೇಳಾಪಟ್ಟಿ ಗಮನಿಸಿ
2. ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮೊದಲು ಓದು ನಿಲ್ಲಿಸಿ
3. ಅರ್ಧ ಗಂಟೆ ಮೊದಲು ಪರೀಕ್ಷಾ ಕೇಂದ್ರ ತಲುಪಿ
4. ಹಿತಮಿತ ಆಹಾರ ಸೇವಿಸಿ
5. ಶುಭ್ರ ಹಿತಕರವಾದ ಬಟ್ಟೆ ಧರಿಸಿ
6. ಲೇಖನ ಸಾಮಗ್ರಿ ಗಳನ್ನು ಅಂತಿಮವಾಗಿ ಚೆಕ್ ಮಾಡಿಕೊಳ್ಳಿ
7. ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಒಮ್ಮೆ ಏನಾದರು ಬರಹ ಸ್ಲಿಪ್ ಇದ್ದರೆ ಚೆಕ್ ಮಾಡಿ ತೆಗೆದು ಹಾಕಿ ಬಿಡಿ
8. ಒತ್ತಡ ದುಗುಡ ಆತಂಕ ಭಯ ಬೇಡ ರಿಲಾಕ್ಸ್ ಆಗಿರಿ
9. ಪರೀಕ್ಷಾ ಕೊಠಡಿ ಪ್ರವೇಶಿಸಿದ ಮೇಲೆ ಯಾರೊಂದಿಗೂ ಮಾತಿಗೆಳಿಯಬೇಡಿ
10. ಕುಳಿತ ಹಾಸನ ಸಂಖ್ಯೆ,ಪ್ರವೇಶ ಸಂಖ್ಯೆ 2 ಒಂದೇ ಎಂದು ಖಚಿತಪಡಿಸಿಕೊಳ್ಳಿ
11. ತಮ್ಮ ಸ್ಥಳದಲ್ಲಿ ಕುಳಿತು ನಂತರ ಒಂದೆರಡು ನಿಮಿಷ ಧ್ಯಾನ ಮಾಡಿ ದೀರ್ಘವಾಗಿ ಉಸಿರಾಡಿ
12. ಕೊಠಡಿ ಮೇಲ್ವಿಚಾರಕರಿಗೆ ನಿಮ್ಮ ಅಗತ್ಯ ಮಾಹಿತಿ ನೀಡಿ
13. ಉತ್ತರ ಪತ್ರಿಕೆಯು ಬರೆಯಲು ಯೋಗ್ಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ
14. ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಪೂರ್ಣ ಓದಿಕೊಳ್ಳಿರಿ
15. ಪ್ರತಿ ಉತ್ತರಕ್ಕೂ ಅಂದಾಜು ಸಮಯ ನಿಗದಿ ಪಡಿಸಿಕೊಳ್ಳಿ
16. ಉತ್ತರ ಪತ್ರಿಕೆಯ ಸೂಕ್ತ ಸ್ಥಳದಲ್ಲಿ ನೋಂದಣಿ ಸಂಖ್ಯೆ ಅಗತ್ಯ ಮಾಹಿತಿ ತುಂಬಿರಿ
17. ಅಂಕಗಳಿಗೆ ತಕ್ಕಂತೆ ಉತ್ತರ ಬರೆಯಿರಿ ವೃತ ಸಮಯವನ್ನು ವ್ಯರ್ಥ ಮಾಡಬೇಡಿ
18. ಕೊನೆಯ 10 ನಿಮಿಷ ಇರುವಾಗಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ , ಉತ್ತರ ಪತ್ರಿಕೆಯನ್ನು ಮೊದಲಿನಿಂದ ಮತ್ತೊಮ್ಮೆ ಪರಿಶೀಲಿಸಿ
19. ಪರೀಕ್ಷೆ ಮುಗಿದ ಮೇಲೆ ಚರ್ಚೆ ಬೇಡ
20. ಕಾಡು ಹರಟೆ ಬೇಡ ಮುಂದಿನ ವಿಷಯದ ಬಗ್ಗೆ ಗಮನ ಹರಿಸಿ
15. ಕೊನೆಯ ಮಾತು
ಪ್ರಿಯ ವಿದ್ಯಾರ್ಥಿಗಳೇ…..ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಸ್ ಎಸ್ ಎಲ್ ಸಿ ಎಂಬ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ಅತಿ ಹೆಚ್ಚು ಅಂಕಗಳನ್ನ ಗಳಿಸಲು ಈ ಮೇಲಿನ ಎಲ್ಲಾ ಅಂಶಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಕೊನೆಯದಾಗಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಕಠಿಣ ಪರಿಶ್ರಮವನ್ನು ಹಾಕಲೇಬೇಕು…ಮಕ್ಕಳೇ… ನಿಮಗೆ ಶುಭವಾಗಲಿ……
ನಿನ್ನ ಏಳಿಗೆಗೆ ನೀನೇ ಶಿಲ್ಪಿ
- ಡಾ ಪ್ರಸನ್ನ ನಾಡಿಗರ್
9900550684
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ