https://youtu.be/NHc6OMSu0K4?si=SI_K4goOPEgwo6h2

ನವದೆಹಲಿ: ರಾಜ್ಯದ ಯುವಜನತೆಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಕರ್ನಾಟಕದ ಆರ್ಥಿಕತೆಯನ್ನು ವಿಶ್ವದ ಬಲಿಷ್ಠ ಶಕ್ತಿಗಳೊಂದಿಗೆ ಜೋಡಿಸುವುದು ಇಂದಿನ ಸಮಾಜದ ಅತ್ಯಗತ್ಯವಾಗಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬ ಕನ್ನಡಿಗನ ಬದುಕಿನಲ್ಲಿ ಸಮೃದ್ಧಿ ತರುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಕರ್ನಾಟಕದ ರಾಮದುರ್ಗದ ಕೋಟೆಯ ಪುನಃಶ್ಚೇತನ
ನವದೆಹಲಿಯಲ್ಲಿ ಶುಕ್ರವಾರ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ‘ಬ್ರಿಡ್ಜ್ ಟು ಬೆಂಗಳೂರು’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕವು ಕೇವಲ ಬಂಡವಾಳ ಹೂಡಿಕೆಗೆ ಸೀಮಿತವಾಗದೆ, ಜಾಗತಿಕ ಪಾಲುದಾರಿಕೆಯ ಮೂಲಕ ನಾವೀನ್ಯತೆಯನ್ನು ಮೈಗೂಡಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಪರಿಷ್ಕೃತ ಉಪಕ್ರಮ (ಜಿಐಎ 2.0) ಅನ್ನು ಅನಾವರಣಗೊಳಿಸಿದರು.

ಭಾರತದ ಸಿಲಿಕಾನ್ ವ್ಯಾಲಿ ಎಂದೇ ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಬೆಂಗಳೂರು ಸಮಗ್ರ ನಾವೀನ್ಯತಾ ಪರಿಸರ ವ್ಯವಸ್ಥೆಯಾಗಿ ವಿಕಸನಗೊಂಡಿದೆ. ರಾಜ್ಯವು 16,000 ಸ್ಟಾಟ್ಟ್ ಅಪ್ ಗಳಿಗೆ ನೆಲೆಯಾಗಿದ್ದು, ಭಾರತದ ಸ್ಟಾರ್ಟ್ ಅಪ್ ಕೇಂದ್ರವಾಗಿದೆ. ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಸುಮಾರು ಮೂರನೇ ಒಂದು ಭಾಗ, ಅಂದರೆ 550 ಕ್ಕೂ ಹೆಚ್ಚು GCC ಗಳನ್ನು ಹೊಂದಿದೆ. ಅತ್ಯಾಧುನಿಕ ನಾವೀನ್ಯತೆ ಮತ್ತು ಪ್ರತಿಭೆಯನ್ನು ಪೋಷಿಸುವ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಬೃಹತ್ ಜಾಲವನ್ನೇ ಬೆಂಗಳೂರು ಹೊಂದಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಿಂದ ಹಿಡಿದು ಅಂತರಿಕ್ಷಯಾನ, ಅರೆವಾಹಕಗಳು, ಬಾಹ್ಯಾಕಾಶ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಸಂಶೋಧನೆಯವರೆಗೆ ಕರ್ನಾಟಕವು ತಾಂತ್ರಿಕ ಪರಿವರ್ತನೆಯಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ. ನಮ್ಮ ರಾಜ್ಯದಲ್ಲಿ ನಾವೀನ್ಯತೆ ಕೇವಲ ಆರ್ಥಿಕ ಚಟುವಟಿಕೆಯಲ್ಲ, ಅದು ಒಂದು ಜೀವನ ವಿಧಾನವಾಗಿದೆ.
ಕೌಶಲ್ಯಯುತ ಯುವಜನ, ವಿಶ್ವ ದರ್ಜೆಯ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ಬಲಿಷ್ಠ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ, ತಡೆರಹಿತ ಜಾಗತಿಕ ಸಂಪರ್ಕ ಮತ್ತು ಎಲ್ಲರನ್ನೂ ಒಳಗೊಂಡ ಸಾಮಾಜಿಕ ವಾತಾವರಣ ನಮ್ಮ ಸಾಮರ್ಥ್ಯ ಎಂದರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರು ಕೇವಲ ಭೇಟಿ ನೀಡುವ ನಗರವಲ್ಲ, ಅದು ಭವಿಷ್ಯವನ್ನು ರೂಪಿಸುವ ತಾಣ ಎಂದು ಬಣ್ಣಿಸಿದರು. ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕವು ದೀರ್ಘಾವಧಿಯ ಮತ್ತು ನಿರ್ದಿಷ್ಟ ಫಲಿತಾಂಶ ಆಧಾರಿತ ಪಾಲುದಾರಿಕೆಗಳ ಹುಡುಕಾಟದಲ್ಲಿದೆ ಎಂದು ಪ್ರತಿಪಾದಿಸಿದರು. ಈ ಐತಿಹಾಸಿಕ ಸಂವಾದದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ, ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಗೂ ಸ್ವಿಟ್ಜರ್ಲೆಂಡ್, ಜಪಾನ್, ಜರ್ಮನಿ ಸೇರಿದಂತೆ 80ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಪಾಲ್ಗೊಂಡು ಕರ್ನಾಟಕದ ಕ್ರಮಗಳನ್ನು ಶ್ಲಾಘಿಸಿದರು.



More Stories
ಹಾರ್ಮುಜ್ ಜಲಸಂಧಿ ಮುಕ್ತ
ಅಮಂಡಾ ನವೇನ್ ಧೀಮಂತ ಹೋರಾಟ
ಜಗ ಮೆಚ್ಚಿದ ಪೊಲೀಸ್