https://youtu.be/NHc6OMSu0K4?si=SI_K4goOPEgwo6h2

ಮೇ 21ಕ್ಕೆ ಬೃಹತ್ ಪ್ರತಿಭಟನೆ | ನೀಟ್ ಅಕ್ರಮಕ್ಕೆ ತೀವ್ರ ಆಕ್ರೋಶ
ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಖಂಡನೆ | ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ
ಹೊಸಪೇಟೆ: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಅಕ್ರಮ ತಡೆಗೆ ಕಠಿಣ ಕಾನೂನು ರೂಪಿಸಬೇಕು ಹಾಗೂ ದಿನನಿತ್ಯದ ಸಾಮಗ್ರಿಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಮೇ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಭೀಮನಾಯ್ಕ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ವಿಜಯನಗರ (ಹೊಸಪೇಟೆ) ವಿಧಾನಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಇಂತಹ ಅಕ್ರಮಗಳು ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುತ್ತಿದ್ದು, ತನ್ನದಲ್ಲದ ತಪ್ಪಿಗೆ ಯುವಜನತೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ. ಈ ಹಗರಣದ ಹಿಂದೆ ಇರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಅವರು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಧೃತಿಗೆಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು, ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂದರು. ಇದೇ ವೇಳೆ ಕೇಂದ್ರದ ಜನವಿರೋಧಿ ನಿಲುವುಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಬೃಹತ್ ಪ್ರತಿಭಟನೆಯಲ್ಲಿ ಕ್ಷೇತ್ರದ ಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೊಸಪೇಟೆ ಯುವ ಕಾಂಗ್ರೆಸ್ ಅಧ್ಯಕ್ಷ ಹರೂನ್ ಶೇಖ್, ಪಕ್ಷದ ಬಲವರ್ಧನೆಗಾಗಿ ಯುವ ಕಾರ್ಯಕರ್ತರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಪಕ್ಷದ ತತ್ವ ಹಾಗೂ ಸಿದ್ಧಾಂತಗಳನ್ನು ಯುವಜನರಿಗೆ ತಲುಪಿಸುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಅಬು ತಾಯರ್, ಉಪಾಧ್ಯಕ್ಷ ನಾಗರಾಜ್ ಬಡಲಡಿಕಿ, ಹೊಸಪೇಟೆ ಬ್ಲಾಕ್ ಅಧ್ಯಕ್ಷ ಪ್ರದೀಪ್, ಕಮಲಾಪುರ ಬ್ಲಾಕ್ ಅಧ್ಯಕ್ಷ ಗೌಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಶೇಖ್, ಲೀಗಲ್ ಸೆಲ್ ಅಧ್ಯಕ್ಷ ಅಜಾದ್ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾ ಅಧ್ಯಕ್ಷ ಗಣೇಶ್ ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.



More Stories
ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ
ಜಿಲ್ಲಾವಾರು ಉಸ್ತುವಾರಿ ಸಚಿವರ ನೇಮಕ, ಯಾರು ಯಾವ ಜಿಲ್ಲೆಗೆ ಗೊತ್ತಾ?
ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್