https://youtu.be/NHc6OMSu0K4?si=SI_K4goOPEgwo6h2

ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಕ್ಕರೆ, ಅವರು ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಛಲ ಬಿಡದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಬಲ್ಲರು ಎಂಬುದಕ್ಕೆ ಬಸವನಾಡಿನ ಈ ಯುವಕನೇ ಸಾಕ್ಷಿ.
ಬಸವನಬಾಗೇವಾಡಿ: ಭಾರತದ ಮೂಲ ಮಟ್ಟದ ಕ್ರಿಕೆಟ್‌ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗುವ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ಟೆನ್ನಿಸ್ ಬಾಲ್ ಟಿ-೧೦ ಕ್ರಿಕೆಟ್ ಲೀಗ್‌ನ ೩ನೇ ಸೀಸನ್‌ಗೆ ಪಟ್ಟಣದ ಪ್ರತಿಭಾನ್ವಿತ ಆಟಗಾರ ಮಹ್ಮದ್ ಸಲೀಂ ಶಹಾಪೂರ ಆಯ್ಕೆಯಾಗುವ ಮೂಲಕ ಬಸವ ನಾಡಿಗೆ ಕೀರ್ತಿ ತಂದಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ಬರುವ ವರ್ಷ ಜನವರಿ ೯ರಿಂದ ಫೆಬ್ರವರಿ ೬ರವರೆಗೆ ಈ ಪಂದ್ಯಾವಳಿ ನಡೆಯಲಿದೆ. ಸುಮಾರು ೪೪ ಲಕ್ಷ ಆಟಗಾರರು ನೋಂದಾಯಿಸಿಕೊಂಡಿದ್ದ ಈ ಬೃಹತ್ ಲೀಗ್‌ನಲ್ಲಿ ಅಂತಿಮವಾಗಿ ಆಯ್ಕೆಯಾದ ೪೦೦ ಆಟಗಾರರ ಪಟ್ಟಿಯಲ್ಲಿ ಮಹ್ಮದ್ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ರಾಜ್ಯದಿಂದ ಆಯ್ಕೆಯಾದ ಮೂವರು ಆಟಗಾರರಲ್ಲಿ ಇವರೂ ಒಬ್ಬರಾಗಿದ್ದಾರೆ.

ಬದುಕು ಮತ್ತು ಸಾಧನೆ: ೩೧ ವರ್ಷದ ಮಹ್ಮದ್ ಸಲೀಂ ಅವರದು ಹೋರಾಟದ ಬದುಕು. ೮ನೇ ತರಗತಿಯಲ್ಲಿದ್ದಾಗ ತಂದೆಯನ್ನು ಹಾಗೂ ೧೦ ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡ ಇವರು, ತಮ್ಮ ಮಾವಂದಿರಾದ ಅಸ್ಲಂ ಹಾಗೂ ಶಿರಾಜ್ ಅವರ ಆಸರೆಯಲ್ಲಿ ಬೆಳೆದರು. ಕೇವಲ ಪಿಯುಸಿವರೆಗೆ ಓದಿದರೂ, ಕ್ರಿಕೆಟ್ ಮೇಲಿನ ಆಸಕ್ತಿ ಇವರನ್ನು ಈ ಎತ್ತರಕ್ಕೆ ಬೆಳೆಸಿದೆ. ಕಳೆದ ೧೫ ವರ್ಷಗಳಿಂದ ನಿತ್ಯ ಎರಡು ಗಂಟೆಗಳ ಕಾಲ ಕಠಿಣ ತರಬೇತಿಯಲ್ಲಿ ತೊಡಗಿದ್ದಾರೆ.
ಕ್ರಿಕೆಟ್ ಪಯಣ: ಹುಬ್ಬಳ್ಳಿಯಲ್ಲಿ ನಡೆದ ಕೆಪಿಎಲ್‌ನಲ್ಲಿ ‘ಬೆಸ್ಟ್ ಬಾಲರ್’ ಪುರಸ್ಕಾರ ಹಾಗೂ ಹಲವಾರು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ. ಸ್ಥಳೀಯ ಆಲ್ ಅಮೀನ್ ಮತ್ತು ವಿಜಯಪುರ ತಂಡಗಳಲ್ಲದೆ ಕೇರಳ, ಮಹಾರಾಷ್ಟ್ರ, ಗುಜರಾತ್, ಕೋಲ್ಕತ್ತಾ, ಒಡಿಶಾ, ಗೋವಾ ಸೇರಿದಂತೆ ನೆರೆ ರಾಜ್ಯಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗದ ಇವರು, ಆಂಧ್ರಪ್ರದೇಶದ ಆಟಗಾರರಾದ ವಂಶಿ, ಸತ್ಯ, ಶಾನ್ ಮುಲ್ಲಾ, ಅಬೂಬಕರ್ ಹಾಗೂ ವಿಜಯಪುರದ ಹಿರಿಯ ತರಬೇತುದಾರ ರಫೀಕ್ ತಾಳಿಕೋಟೆ ಅವರ ಆಟ ಮತ್ತು ಮಾರ್ಗದರ್ಶನವನ್ನು ನೋಡಿಯೇ ಕಲಿತಿದ್ದಾರೆ. ಕಳೆದ ಎರಡು ವರ್ಷಗಳಿಂದ ಲೀಗ್‌ಗೆ ಸೇರಬೇಕೆಂಬ ಇವರ ಕನಸು ಈ ಬಾರಿ ನನಸಾಗಿದೆ.
ವಿಶೇಷ ವರದಿ: ಗುರುರಾಜ ಬ. ಕನ್ನೂರ





More Stories
ಗುಡೇಕೋಟೆ ಇದು ಬರೀ ಊರಲ್ಲ, ಬದುಕಿನ ನೆನಪಿನ ಬುತ್ತಿಯನ್ನು ಹೊತ್ತೊಯ್ಯುವ ತೇರು
ಗೋವಾದಲ್ಲಿ ಶಿಕ್ಷಕರಿಗೆ ಅಂತರರಾಜ್ಯ ಕಲಾ ತರಬೇತಿ
ಎಲ್ಲರ, ಎಲ್ಲ ಕಾಲದ ಬೇಂದ್ರೆ :130ನೇ ಜನ್ಮದಿನ