https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ಮಹಿಳೆಯರಿಗೆ ಸಾಮಾಜಿಕ, ರಾಜಕೀಯ ಹಕ್ಕುಗಳನ್ನು ಒದಗಿಸುವಲ್ಲಿ ಡಾ.ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಹಾಗೂ ಡಾ.ಬಾಬು ಜಗಜೀವನರಾಮ್ ಅವರು ದೇಶದ ಆಹಾರ ಕೊರತೆಯ ಸಂದರ್ಭದಲ್ಲಿ ಸಮರ್ಥ ಆಡಳಿತಗಾರರಾಗಿ ದೇಶವನ್ನು ಯಶಸ್ವಿಯಾಗಿ ನಿಭಾಯಿಸಿದ ಮಹಾನ್ ವ್ಯಕ್ತಿ ಎಂದು ಜನಪರ ಹೋರಾಟಗಾರರು, ಸಂಘಟಕ ಮಾವಳ್ಳಿ ಶಂಕರ್ ಹೇಳಿದರು.
ಕವಿವಿಯ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಭುವನ ವಿಜಯ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ಡಾ. ಬಾಬು ಜಗಜೀವನರಾಂ ಜಯಂತಿ ನಿಮಿತ್ತ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ೧೧ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಳ ಸಮುದಾಯಗಳಿಗೆ ಶಿಕ್ಷಣ ನೀಡುವಲ್ಲಿ ಜ್ಯೋತಿಬಾ ಫುಲೆ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಶರಣರ ತತ್ವಗಳು ಅವಿಭಾಜ್ಯವಾಗಿದ್ದು, ಇವುಗಳು ಇಂದಿಗೂ ಪ್ರಸ್ತುತ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಭೂಮಿಯು ಸಮಾನವಾಗಿ ಹಂಚಿಕೆ ಆಗಬೇಕು, ಕೈಗಾರಿಕೆಗಳ ಮೇಲೆ ಪ್ರಭುತ್ವದ ಸ್ವಾಧೀನ ಹಾಗೂ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕನಸು ಕಂಡಿದ್ದರು. ಆದರೆ ಆ ಕನಸುಗಳು ಇಂದಿಗೂ ನನಸಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ನಡೆಸುವುದು ಕಷ್ಟಕರವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂವಿಧಾನದ ಪೂರ್ವಪೀಠಿಕೆಯಲ್ಲಿನ ಮೌಲ್ಯಗಳು ಪ್ರಾಯೋಗಿಕವಾಗಿ ಜಾರಿಯಾಗುತ್ತಿಲ್ಲವೆಂದೂ ಅಭಿಪ್ರಾಯಪಟ್ಟರು. ಸಮಾಜಮುಖಿ ವೃತ್ತಿಗಳನ್ನು ಕೀಳಾಗಿ ಕಾಣುವ ಮನೋಭಾವ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ತಳ ಸಮುದಾಯಗಳ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳ ಪ್ರಮಾಣ ಇತ್ತೀಚೆಗೆ ಹೆಚ್ಚುತ್ತಿರುವುದನ್ನೂ ಅವರು ಖಂಡಿಸಿದರು.
ಕವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಭಾರತದ ಬದಲಾವಣೆಗೆ ಈ ಮಹಾನ್ ವ್ಯಕ್ತಿಗಳು ತಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿ ಕೊಂಡಿದ್ದಾರೆ. ಇಂತಹ ಮಹನೀಯರ ಕೊಡುಗೆಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವೆಂದು ಅಭಿಪ್ರಾ ಯಪಟ್ಟರು.
ಅಂಬೇಡ್ಕರ್ ಅವರ ಕುರಿತು ೧೧ ಕೃತಿ ಗಳನ್ನು ಪ್ರಸಾರಾಂಗದಿಂದ ಪ್ರಕಟಿಸುವ ಮೂಲಕ ಜಯಂತಿಯನ್ನು ಅರ್ಥಪೂರ್ಣ ಆಚರಿಸಲಾಗು ತ್ತಿದೆ. ಪ್ರತಿದಿನವೂ ಇಂತಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು ಮತ್ತು ಅವರ ಚಿಂತನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು ಎಂದರು.
ದಲಿತ ಸಂಸ್ಕೃತಿ ಪೀಠದ ಸಂಚಾಲಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಕವಿವಿ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಸಾರಾಂಗದ ನಿರ್ದೇಶಕ ಡಾ.ಪಿ.ಮಹಾದೇವಯ್ಯ, ಕಾರ್ಯಕಾರಿ ಸಮಿತಿ ಸದಸ್ಯ ಬಣ್ಣದಮನೆ ಸೋಮಶೇಖರ್ ಶ್ರೇಯಸ್ ವಿ.ಎಸ್ ಮತ್ತು ಡಾ. ನರಸಿಂಹರಾಜು ಹೆಚ್.ಸಿ, ಡಾ.ಮಣಿಕಂಠ ಅಂಗಳ, ಅಕ್ಕಿ ಮಲ್ಲಿಕಾ ರ್ಜುನ ಜನಪರ ಹೋರಾಟಗಾರರು ಡಾ. ಜಾಣಗೆರೆ ವೆಂಕಟರಾಮಯ್ಯ ಇತರರಿದ್ದರು.



More Stories
ನಿಯಮ ಉಲ್ಲಂಘಿಸಿದರೆ ಕಠಿಣ ದಂಡ
ಕನಕಗಿರಿ ಉತ್ಸವದ ಸಿದ್ಧತೆ ವೇಗಗೊಳಿಸಿ : ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ
ಕಸಾಪ ಸಂಸ್ಥಾಪನಾ ದಿನಾಚರಣೆ ಸಂಭ್ರಮ