December 14, 2024

Hampi times

Kannada News Portal from Vijayanagara

ಶ್ರೀ ಜಂಭುನಾಥಸ್ವಾಮಿ ರಥೋತ್ಸವದ ಗಾಲಿಗೆ ಸಿಲುಕಿ ರಾಮು ಸಾವು

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:
ನಗರದ ದಕ್ಷಿಣ ದಿಕ್ಕಿನಲ್ಲಿರುವ ಲೋಹಾದ್ರಿ ಬೆಟ್ಟದ ಶ್ರೀಜಂಬುನಾಥಸ್ವಾಮಿ ರಥೋತ್ಸವ ಭಾನುವಾರ ಸಂಜೆ ಸಾವಿರಾರು ಭಕ್ತ ಸಮೂಹದೊಂದಿಗೆ ಜರುಗಿದ್ದು, ರಥೋತ್ಸವಕ್ಕೆ ಸನ್ನಿ ಹಾಕುವ ಸಂದರ್ಭದಲ್ಲಿ ಹೊಸಪೇಟೆ 35ನೇ ವಾರ್ಡ್‌ನ  ತೇರು ಕಟ್ಟುವ ಚಿತ್ರಗಾರ ರಾಮು(45) ಎಂಬಾತ ರಥದ ಗಾಲಿ ಕೆಳಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ಜರುಗಿದೆ.

ಗುಡ್ಡದ ಮೇಲಿನ ದೇವಸ್ಥಾನದ ಮುಂಭಾಗದಲ್ಲಿ ಸಿಮೆಂಟ್ ಕಾಂಕ್ರಿಟ್ ನೆಲ ಹಾಸಿನ ಆವರಣದಲ್ಲಿಯೇ ಸಾವಿರಾರು ಭಕ್ತರು ಐತಿಹಾಸಿಕ ಶ್ರೀ ಜಂಬುನಾಥಸ್ವಾಮಿ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಎಳೆಯುವ ಸಂದರ್ಭದಲ್ಲಿ, ಸನ್ನೆ ಹಾಕುವ ವ್ಯಕ್ತಿಯೋರ್ವ ರಥದ ಗಾಲಿಗೆ ಆಕಸ್ಮಿಕವಾಗಿ ಸಿಲುಕಿ ಮೃತಪಟ್ಟಿರುವುದು ಭಕ್ತ ಸಮೂಹದಲ್ಲಿ ದುಃಖಮಡುಗಟ್ಟಿದೆ.
ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಕ್ಲಿನಿಕ್, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಗಾಲಿಗೆ ಸಿಲುಕಿದ್ದ ವ್ಯಕ್ತಿಯನ್ನು ಕೂಡಲೇ ನಗರದ ನೂರು ಹಾಸಿಗೆ ಅಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ತರಲಾಯಿತು. ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ವೈದ್ಯಾಧಿಕಾರಿ ಶಂಕರನಾಯ್ಕ ತಿಳಿಸಿದ್ದಾರೆ.

ರಥೋತ್ಸವ ಎಳೆಯುವ ಸಂದರ್ಭದಲ್ಲಿ ತೇರಿಗೆ ದೂರದಿಂದಲೇ ಫಲ ಎಸೆದು ಭಕ್ತಿ ಸೇವೆ ಸಲ್ಲಿಸಬೇಕೆಂದು ಪೊಲೀಸರು ಜನರನ್ನು ದೂರ ಸರಿಸಿದರೂ, ಭಕ್ತರು ತಾಮುಂದು ನಾಮುಂದು ಎಂದು ರಥದ ಹತ್ತಿರ ಬರಲು ನೂಕಾಟ ತಳ್ಳಾಟ ನಡೆಸುತ್ತಾರೆ. ಪೊಲೀಸರು ಮತ್ತು ದೇವಸ್ಥಾನ ಸಮಿತಿಯವರ ಸಲಹೆ ಸೂಚನೆಗಳನ್ನು ಎಲ್ಲಾ ರಥೋತ್ಸವಗಳಲ್ಲಿ ಭಕ್ತರು ಪಾಲಿಸಿದರೆ ಇಂತಹ ದುರ್ಘಟನೆಗಳನ್ನು ತಪ್ಪಿಸಬಹುದಾಗಿದೆ ಎಂಬುದು ಪ್ರಜ್ಞಾವಂತರ ಅಭಿಮತವಾಗಿದೆ.

 

 

ಜಾಹೀರಾತು
error: Content is protected !!