ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಕಲ್ಯಾಣ ಯೋಜನೆಗಳು ಹಾಗೂ ಜನಪರ ಉಪಕ್ರಮಗಳ ಅಧಿಕೃತ ಮಾಹಿತಿಯು ಸಮಾಜದ ಕಟ್ಟಕಡೆಯ ಅರ್ಹ ಫಲಾನುಭವಿಗೂ ತಲುಪುವಂತಾಗಲು ಡಿಜಿಟಲ್ ಮಾಧ್ಯಮವನ್ನು ಅತ್ಯಂತ ಸಮರ್ಥವಾಗಿ ಮತ್ತು ವ್ಯಾಪಕವಾಗಿ ಬಳಸಿಕೊಳ್ಳಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಚಂಚಲ್ ಕುಮಾರ್ ಪ್ರತಿಪಾದಿಸಿದರು.
ಇಲ್ಲಿನ ರಾಜ್ಯ ಸಚಿವಾಲಯದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆ ನಡೆಸಿದ ಚಂಚಲ್ ಕುಮಾರ್ ಅವರು, ರಾಜ್ಯದ ಮಾಧ್ಯಮ, ಸೃಜನಶೀಲ ಹಾಗೂ ಮನರಂಜನಾ ವಲಯವನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸುವ ಮತ್ತು ಸಾಂಸ್ಥಿಕ ಸಾಮರ್ಥ್ಯ ಹೆಚ್ಚಿಸುವ ಕುರಿತು ವಿಸ್ತೃತ ಚರ್ಚೆ ನಡೆಸಿದರು.


ಪ್ರಮುಖವಾಗಿ, ಮುಂಬರುವ ‘ವೇವ್ಸ್ ೨೦೨೭’ (WAVES – ವಿಶ್ವ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ) ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಸೃಜನಶೀಲ ಪ್ರತಿಭೆಗಳು ಹಾಗೂ ಉದ್ಯಮ ಬಂಡವಾಳ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲು ಪ್ರತ್ಯೇಕ ರಾಜ್ಯ ಪೆವಿಲಿಯನ್ ಸ್ಥಾಪಿಸುವುದು, ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್–ಸೀಸನ್ 2’ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನು ಗರಿಷ್ಠ ಮಟ್ಟದಲ್ಲಿ ತೊಡಗಿಸಿಕೊಳ್ಳುವುದು ಮತ್ತು ವೇವ್ ಎಕ್ಸ್ ಮೂಲಕ ಕರ್ನಾಟಕದ ನವೋದ್ಯಮಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಒದಗಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

ಇದೇ ಸಂದರ್ಭದಲ್ಲಿ, ಪ್ರಾದೇಶಿಕ ಭಾಷಾ ಚಿತ್ರಗಳ ಬೆಳವಣಿಗೆಗೆ ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಕಡಿಮೆ ವೆಚ್ಚದ ಚಿತ್ರಮಂದಿರಗಳ ನಿರ್ಮಾಣಕ್ಕೆ ಉತ್ತೇಜನ ನೀಡುವುದು, ಕೇಬಲ್ ಆಪರೇಟರ್‌ಗಳಿಗೆ ಪಾರದರ್ಶಕ ‘ರೈಟ್ ಆಫ್ ವೇ’ ನಿಯಮಾವಳಿ ರೂಪಿಸುವುದು, ಪ್ರೆಸ್ ಸೇವಾ ಪೋರ್ಟಲ್‌ನಲ್ಲಿ ಪತ್ರಿಕಾ ನೋಂದಣಿ ಅರ್ಜಿಗಳ ತ್ವರಿತ ವಿಲೇವಾರಿ ಮತ್ತು ಐಐಎಂಸಿ ಸಹಯೋಗದಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಆಧುನಿಕ ತರಬೇತಿ ನೀಡುವ ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ನಂತರ, ಬೆಂಗಳೂರಿನ ಆಕಾಶವಾಣಿ ಭವನದಲ್ಲಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಕೃಷ್ಣ ಕುಮಾರ್ ನಿರಾಲಾ ಅವರ ಸಮ್ಮುಖದಲ್ಲಿ ಕೇಂದ್ರ ಮಾಧ್ಯಮ ಘಟಕಗಳ ಮುಖ್ಯಸ್ಥರ ಸಭೆ ನಡೆಸಿದ ಕಾರ್ಯದರ್ಶಿಗಳು, ಬದಲಾಗುತ್ತಿರುವ ಮಾಹಿತಿ ಯುಗದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಹೊಸ ಆಲೋಚನೆ ಹಾಗೂ ವೇಗ ತರಲು ಯುವ ಪ್ರತಿಭೆಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


More Stories
ಹಂಪಿ ಸಂರಕ್ಷಣೆ, ಸ್ಥಳೀಯರನ್ನು ಹೊರಗಿಟ್ಟರೆ ಜೀವಂತ ಪರಂಪರೆ ಉಳಿಯಲ್ಲ ಎಂದ ಐಕೋಮೋಸ್ ತಜ್ಞರು
ಕಳಬೇಡ-ಕೊಲಬೇಡ ಜನಗೀತೆಯಾಗಲಿ : ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ಕುಶಲಕರ್ಮಿಗಳಿಗೆ ಮಾರುಕಟ್ಟೆ ವೇದಿಕೆ, ಶಿಲ್ಪ ಸಮಾಗಮ ಪ್ರದರ್ಶನ