‘ಕಳಬೇಡ ಕೊಲಬೇಡ’ ವಚನವನ್ನು ನಾಡಿನ ಜನಗೀತೆಯನ್ನಾಗಿ ಘೋಷಿಸಲು ಸರ್ಕಾರಕ್ಕೆ ಹಕ್ಕೊತ್ತಾಯ
ಚಿತ್ರದುರ್ಗ: ಜಗತ್ತಿಗೆ ನೈತಿಕ ಮತ್ತು ಸದಾಚಾರದ ದಾರಿ ತೋರಿದ ಜಗಜ್ಯೋತಿ ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ’ ಎಂಬ ಸಪ್ತಶೀಲಗಳ ವಚನವನ್ನು ಕರ್ನಾಟಕದ ಅಧಿಕೃತ ‘ಜನಗೀತೆ’ಯನ್ನಾಗಿ ಘೋಷಿಸಬೇಕು ಎಂದು ನೆಲಮೂಲ ಸಂಸ್ಕೃತಿಯ ಚಿಂತಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಪ್ರತಿಪಾದಿಸಿದರು.
ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ, ಬಸವ ಮೀಡಿಯಾ ಹಾಗೂ ಬಸವಪರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದ ನಾಲ್ಕನೇ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಎಂ.ಎಂ. ಕಲಬುರ್ಗಿ ನಂತರದ ಲಿಂಗಾಯತ ಧರ್ಮ: ಸಾಧ್ಯತೆಗಳು ಮತ್ತು ಸವಾಲುಗಳು’ ವಿಷಯ ಕುರಿತು ವಿಚಾರ ಮಂಡಿಸಿದ ಅವರು, ರಾಷ್ಟ್ರಕ್ಕೆ ‘ಜನಗಣಮನ’ ಮತ್ತು ‘ವಂದೇ ಮಾತರಂ’, ರಾಜ್ಯಕ್ಕೆ ‘ಜಯ ಭಾರತ ಜನನಿಯ ತನುಜಾತೆ’ ಹಾಗೂ ರೈತರ ಶ್ರಮವನ್ನು ಸಾರುವ ‘ಉಳುವ ಯೋಗಿಯ ನೋಡಲ್ಲಿ’ ಗೀತೆಗಳಿರುವಂತೆ, ಜನರ ನಿತ್ಯಜೀವನದ ನೈತಿಕ ಮೌಲ್ಯಗಳನ್ನು ಪ್ರತಿನಿಧಿಸುವ ಬಸವಣ್ಣನವರ ವಚನವೇ ಜನಗೀತೆಯಾಗಬೇಕು ಎಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು. ಸಭೆಯು ಈ ಪ್ರಸ್ತಾವಕ್ಕೆ ಸರ್ವಾನುಮತದ ಅನುಮೋದನೆ ನೀಡಿತು.
ಬಸವಣ್ಣನವರ ಲಿಂಗಾಯತ ಧರ್ಮವು ಪ್ರಕೃತಿಧರ್ಮ, ಮಾನವಧರ್ಮ ಹಾಗೂ ಜಾತ್ಯತೀತ ಧರ್ಮವಾಗಿದೆ. ವೈದಿಕ ಪರಂಪರೆಯು ವೇದಗಳನ್ನು ಧರ್ಮದ ಮೂಲವೆಂದು ಹೇಳಿದರೆ, ಶರಣರು ‘ದಯವೇ ಧರ್ಮದ ಮೂಲ’ ಎಂದು ಸಾರಿದರು. ಬಸವಣ್ಣನವರು ಮಾದಾರ ಚೆನ್ನಯ್ಯನವರನ್ನು ತಂದೆಯೆಂದು ಗೌರವಿಸಿದ್ದು ಹಾಗೂ ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿದ್ದು ಮನುಸ್ಮೃತಿಯ ವರ್ಣಶ್ರೇಷ್ಠತೆಗೆ ನೀಡಿದ ಪ್ರಬಲ ಪ್ರತಿರೋಧವಾಗಿತ್ತು ಎಂದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಅಸಮಾನತೆಯನ್ನು ಪ್ರಶ್ನಿಸಿ ತೋರಿದ ನಿಲುವೇ ನಿಜವಾದ ‘ಕನಕ ಪ್ರಜ್ಞೆ’. ಬುದ್ಧನ ಸಂಘದ ಸಮಾನತೆಯ ಆಶಯ, ಬಸವಣ್ಣನವರ ಅನುಭವ ಮಂಟಪದ ಸಂವಾದ ಪರಂಪರೆ ಹಾಗೂ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ದೃಷ್ಟಿಕೋನದ ನಡುವೆ ಮಾನವ ಘನತೆಯ ಅವಿನಾಭಾವ ಸಂಬಂಧವಿದೆ. ವಚನಗಳು ಕೇವಲ ಪೂಜಿಸುವುದಕ್ಕಲ್ಲ, ಬದುಕಿನಲ್ಲಿ ಆಚರಿಸುವುದಕ್ಕೆ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಶ್ರೀ ಬಸವನಾಗಿದೇವ ಶರಣರು ಮಾತನಾಡಿ, ಬಸವಣ್ಣನವರ ‘ಕಳಬೇಡ ಕೊಲಬೇಡ’ ವಚನವನ್ನು ಜನಗೀತೆಯನ್ನಾಗಿ ಮಾಡುವ ಕುರಿತ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ವೀರಣ್ಣ ರಾಜೂರ, ವಿದ್ವಾಂಸರಾದ ಡಾ. ಸಿ.ಕೆ. ನಾವಲಗಿ, ಡಾ. ಸಣ್ಣವೀರಪ್ಪ ದೊಡ್ಡಮನಿ, ಡಾ. ಅಕ್ಕಿ ಬಸವೇಶ ಹಾಗೂ ಡಾ. ಟಿ.ಎಚ್. ಬಸವರಾಜ್ ಉಪಸ್ಥಿತರಿದ್ದರು.












More Stories
ಕುಶಲಕರ್ಮಿಗಳಿಗೆ ಮಾರುಕಟ್ಟೆ ವೇದಿಕೆ, ಶಿಲ್ಪ ಸಮಾಗಮ ಪ್ರದರ್ಶನ
ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೆ ರೈತರ ಮನೆಯಲ್ಲಿ ನಿಮ್ಮ ಫೋಟೋ ಹಾಕ್ತಾರೆ: ಶಾಸಕ ಎಚ್.ಆರ್.ಗವಿಯಪ್ಪ ಮನೆ ಎದುರು ರೈತರ ನುಡಿ
ಕೆಪಿಎಸ್ಸಿ ಹಗರಣ ಬಿಜೆಪಿಯ ಕೂಸು, ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ: ಸಿಎಂ ಡಿ ಕೆ ಶಿವಕುಮಾರ್