October 30, 2026

Hampi times

Kannada News Portal from Vijayanagara

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡಿಗರ ಏಕೀಕರಣ ಹೋರಾಟ

ಕರ್ನಾಟಕದ ಅರಸರು ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತವನ್ನೇ ಆಳುವುದರ ಮೂಲಕ ತಮ್ಮ ಕಲೆ, ಸಾಹಿತ್ಯ,  ಸಂಸ್ಕೃತಿಯನ್ನು ಪಸರಿಸಿದ್ದಲ್ಲದೆ ಉತ್ತರದವರೆಗೂ ವಿಸ್ತರಿಸಿದ್ದರು. ಅದಕ್ಕೆ ಇಂದು ಸಿಗುತ್ತಿರುವ ಶಿಲಾಶಾಸನಗಳೇ ಸಾಕ್ಷಿ. ಆದರೆ 1799 ರಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಮರಣ ಹೊಂದಿದ ನಂತರ ಮೈಸೂರು ಸಾಮ್ರಾಜ್ಯವು ತ್ರಿಪಕ್ಷಿಯ ಒಪ್ಪಂದದಂತೆ ಮರಾಠರು, ನಿಜಾಮರು, ಬ್ರಿಟಿಷರ ಹಾಗೂ  ಉಳಿದ ಸ್ವಲ್ಪ ಭಾಗ ಮೈಸೂರು ಸಂಸ್ಥಾನಗಳಲ್ಲಿ ಹರಿದು ಹಂಚಿಹೋಯಿತು. ಕನ್ನಡಿಗರು ಅಕ್ಷರಶ: ತಾವಿದ್ದಲ್ಲಿಯೇ ಪರಕೀಯರಾದರು.

ಕಾರಣ ಬಾಂಬೆ ಪ್ರಾಂತ್ಯದಲ್ಲಿ ಮರಾಠಿ, ನಿಜಾಮರ  ಪ್ರಾಂತದಲ್ಲಿ ಉರ್ದು ಮತ್ತು ತೆಲುಗು, ಮದ್ರಾಸ್ ಪ್ರಾಂತಗಳಲ್ಲಿ ತಮಿಳು ಹೀಗೆ ಕನ್ನಡಿಗರು ಆಯಾ ಪ್ರದೇಶಗಳ ಭಾಷಿಗರ ದೌರ್ಜನ್ಯಕ್ಕೆ  ಆಯಾ ಭಾಷೆಯ ಪ್ರಭಾವಕ್ಕೆ ಒಳಗಾಗಿ ತಮ್ಮತನವನ್ನೇ ಮರೆತರು. 20 ಚಿಕ್ಕ ಚಿಕ್ಕ ಸಂಸ್ಥಾಸಲ್ಲಿ ಹಂಚಿ ಹೋಗಿದ್ದ ಕನ್ನಡಿಗರು ತಮ್ಮ ಮೂಲವನ್ನೇ ಮರೆತು ಹೋಗಿದ್ದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಸ್ವಾತಂತ್ರ್ಯದ ಕಿಚ್ಚಿನ ಜೊತೆಗೆ ಪ್ರಾದೇಶಿಕ ಅಭಿಮಾನವನ್ನೂ ಬೆಳೆಸಿತು.

ಆಗ ಬಾಂಬೆ ಪ್ರಾಂತದಲ್ಲಿ ಶಿಕ್ಷಣಾಧಿಕಾರಿಯಾಗಿದ್ದ ಡೆಪುಟಿ ಚೆನ್ನಬಸಪ್ಪನವರು ಕೇವಲ 30 ಇದ್ದ ಕನ್ನಡ ಶಾಲೆಗಳನ್ನು ತಮ್ಮ ಅಧಿಕಾರವಧಿಯಲ್ಲಿ 632ಕ್ಕೆ ವಿಸ್ತರಿಸುವುದರ ಮೂಲಕ ಶಿಕ್ಷಕರಿಗೆ ತರಬೇತಿಯನ್ನು ಕೊಟ್ಟು ಕನ್ನಡ ಭಾಷೆಯ ಉಳಿವಿಗಾಗಿ ಬೆಳವಣಿಗೆಗಾಗಿ ಅವಿರತ್ನ ಶ್ರಮಿಸಿದರು. ಇವರು ಮಾಡಿದ ಕನ್ನಡ ತಾಯಿಯ ಸೇವೆ ಅವಿಸ್ಮರಣೆಯವಾದದ್ದು. ತಮ್ಮ ಉದ್ದೇಶ ಏನೇ ಇದ್ದರೂ ಕ್ರಿಶ್ಚಿಯನ್ ಮಿಷನರಿಗಳು ಬಾಂಬೆ ಪ್ರಾಂತ್ಯದಲ್ಲಿ ಭಾಷಲ್ ಮಿಷನ್ ಕನ್ನಡ ಶಾಲೆಗಳನ್ನು, ದಕ್ಷಿಣ ಕರ್ನಾಟಕದಲ್ಲಿ ವೇಸ್ಲಾರಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣವದವು.

ಮುಂದೆ ರಾಮಚಂದ್ರಪ್ಪ ಹನುಮಂತಪ್ಪ ದೇಶಪಾಂಡೆ ಮತ್ತು ಅವರ ಸಮಾನ ಮನಸ್ಕರ ಮಹತ್ವಕಾಂಕ್ಷೆಯ ಕೂಸಾದ ಹಾಗೂ ಹತ್ತನೇ ಚಾಮರಾಜ ಒಡೆಯರ ಉದಾರ ದೇನಣಿಗೆಯಿಂದ 1890ರಲ್ಲಿ ಸ್ಥಾಪನೆಯಾದ “ಕರ್ನಾಟಕ ವಿದ್ಯಾವರ್ಧಕ ಸಂಘ”ವು ಕನ್ನಡದ ಅನೇಕ ಮಹನೀಯರ ಅಪ್ರಕಟಿತ ಕೃತಿಯನ್ನು ಪ್ರಕಟಿಸುವುದರ ಮೂಲಕ ಕರ್ನಾಟಕದ ಸಾಹಿತ್ಯ ಚರಿತ್ರೆಯನ್ನು ಪುನರುಜ್ಜೀವನಗೊಳಿಸಿತು. ಹಾಗೆಯೇ ಕರ್ನಾಟಕ ಏಕೀಕರಣ ಹೋರಾತದ ಬೀಜವನ್ನು ವಿದ್ಯಾವಂತ ಯುವಕರಲ್ಲಿ ಬಿತ್ತಿತ್ತು.

ಕನ್ನಡದ ಕುಲ ಪುರೋಹಿತರಾದ ಆಲೂರು ವೆಂಕಟರಾಯರು ತಮ್ಮ “ಕರ್ನಾಟಕದ ಗತವೈಭವ” ಕೃತಿಯಲ್ಲಿ ಕರ್ನಾಟಕದ ಐತಿಹಾಸಿಕ ಚರಿತ್ರೆ ಮೂಲಕ ಕನ್ನಡಿಗರ ಶೌರ್ಯ ಹಾಗೂ ದೇಶಕ್ಕೆ ನೀಡಿದ ಕೊಡುಗೆಗಳನ್ನು ಒತ್ತಿ ಹೇಳಿದರು ಹಾಗೂ ಏಕೀಕರಣದ ಅವಶ್ಯಕತೆಯನ್ನು ಘಟ್ಟಿಧ್ವನಿಯಲ್ಲಿ ವಿವರಿಸಿ ಹೇಳಿದರು. ಇವರ ಸಂಪಾದಕತ್ತಲ್ಲಿ ಮೂಡಿಬಂದ ವಾಗ್ಭೂಷಣ ಮಾಸಪತ್ರಿಕೆಯು ಏಕೀಕರಣದ ಚಿಂತನೆಗಳನ್ನು ಸರಣಿ  ಲೇಖನಗಳ ಮೂಲಕ ಪ್ರಕಟಿಸಿತು. ಈ ಕೆಲಸವನ್ನು ಸತತ 23 ವರ್ಷಗಳ ಕಾಲ ಮಾಡಿತು. ಇದರ ಜೊತೆಗೆ ಅನೇಕ ದಿನಪತ್ರಿಕೆಗಳು,  ವಾರ ಪತ್ರಿಕೆ ಗಳು, ಮಾಸಪತ್ರಿಕೆಗಳು ಏಕೀಕರಣದ ಜಾಗೃತಿ ಮೂಡಿಸಿದವು.

ಇದು ವಿದ್ಯಾವಂತರಲ್ಲಿ ಏಕೀಕರಣದ ಮಹತ್ವವನ್ನು ಮತ್ತಷ್ಟು ಗಾಢವಾಗಿಸಿತು. ಸರ್. ಎಮ್. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಅರಸರ ಮುಂದಾಲೋಚನೆಯಿಂದ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅನೇಕ ಮಹಾನ್ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿ ಹೊರತoದಿತು. “ಕನ್ನಡ ನುಡಿ “ಪತ್ರಿಕೆಯ ಮೂಲಕ ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ಒತ್ತಿ ಹೇಳಿತು. ಪ್ರತಿ ವರ್ಷ ನಡೆಸುವ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದಲ್ಲಿ ಏಕೀಕರಣವೆ ಮೊದಲ ಅಧ್ಯತೆ ವಿಷಯವಾಗಿತ್ತು. ಹೀಗೆ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಭಾರತದಲ್ಲಿ  ಕನ್ನಡಿಗರು  ಒಂದಾಗುವುದರ ಮಹತ್ವವನ್ನು ಸಾರಿತು. ಇದಕ್ಕೆ ಅನೇಕ ಪತ್ರಿಕೆಗಳು ಸಹಕಾರ ನೀಡಿದವು. 1920ರಲ್ಲಿ ನಾಗಪುರದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ “ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ” ಅಸ್ತಿತ್ವಕ್ಕೆ ಬಂದ ನಂತರ ಕರ್ನಾಟಕ ಏಕೀಕರಣವು ಕೇವಲ ಸಾಹಿತಿಗಳ ಮಧ್ಯದಲ್ಲಿದ್ದದ್ದು ರಾಜಕಾರಣಿಗಳ ಮೂಲಕ ಜನಸಾಮಾನ್ಯರ ಪಾಲ್ಗೊಳ್ಳುವಿಕೆಗೆ ಕಾರಣವಾಯಿತು.

ಏಕೀಕರಣದ ಮಹತ್ವವನ್ನು ಅರಿತು ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಕನ್ನಡಿಗರು ಒಂದಾಗುವುದರ ಬಗ್ಗೆ ಹೋರಾಡಲು ಮುಂದಾದರು. 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವು ಉಯಲುಗೋಳು ನಾರಾಯಣರವರು ರಚಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಗೀತೆಯು ಏಕೀಕರಣದ ಮಹತ್ವವನ್ನು ಸಹೇಳುವುದರ ಮೂಲಕ ಭಾಷಾವಾರು ಪ್ರಾಂತದ ಮಹತ್ವವನ್ನು ಸಾರಿತು. ಇದರ ಮಹತ್ವವನ್ನು ಅರಿತ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯದ ನಂತರ ಭಾಷಾವಾರು ಪ್ರಾಂತಗಳು ರಚನೆಯಾಗಿ ಅದರಲ್ಲಿ ಕನ್ನಡಿಗರ ರಾಜ್ಯವೊಂದು ಉದಯಿಸಿದರೆ ನನಗೆ ಸಂತೋಷವಾಗುತ್ತದೆ ಎಂದು ಹೇಳಿದರು. 1928ರ ನೆಹರು ವರದಿಯು ಭಾಷಾವಾರು ಪ್ರಾಂತ್ಯಕ್ಕೆ ಬೆಂಬಲ ನೀಡಿದ್ದಲ್ಲದೆ ಸೈಮನ್ ಕಮಿಷನ್ ಸಹ ಭಾಷಾವಾರು ಪ್ರಾಂತಕ್ಕೆ ಬೆಂಬಲಿಸಿತು.

1931 ರಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಬೆನಗಲ್  ಶ್ಯಾಮರಾವ್ ಹಾಗೂ ಮಿರ್ಜಾ ಇಸ್ಮಾಯಿಲ್ಲರು ಸ್ವಾತಂತ್ರ್ಯದ ನಂತರ ಕನ್ನಡಿಗರಿಗೊಂದು ಪ್ರತ್ಯೇಕ ರಾಜ್ಯಬೇಕೆಂದು ಒತ್ತಾಯಿಸಿದರು. ಬಾಂಬೆ ಪ್ರಾಂತ್ಯದಲ್ಲಿ ಶಾಸಕರಾಗಿದ್ದ ಅಂಧಾನಪ್ಪ ದೊಡ್ಡಮೇಟಿಯವರು ಬಾಂಬೆ ಶಾಸನಸಭೆಯಲ್ಲಿ ಕನ್ನಡಿಗರಿಗೆ ಪ್ರತ್ಯೇಕವಾದ ರಾಜ್ಯ ಅಸ್ತಿತ್ವಕ್ಕೆ ಬರಬೇಕೆಂದು ಒತ್ತಾಯಿಸಿದರು. ಕುವೆಂಪು, ದ. ರಾ. ಬೇಂದ್ರೆ, ಬಿ ಎಂ ಶ್ರೀ ಮುಂತಾದವರ ಗೀತೆಗಳು ಏಕೀಕರಣ ವನ್ನು ಪ್ರೆರೇಪಿಸಿದವು.  ಬೆನಗಲ್ ಶ್ಯಾಮರಾಯರ ಪ್ರಚೋದನಾತ್ಮಕ ಭಾಷಣಗಳು ಯುವಕರನ್ನು ಏಕೀಕರಣ ದ ಕಡೆ ಸೆಳೆದವು. ನಾಡಿನ ಸಂಯುಕ್ತ ಕರ್ನಾಟಕ ಕರ್ಮವೀರ, ವೀರಕೇಸರಿ ಮುಂತಾದ ಹತ್ತಾರು ಪತ್ರಿಕೆಗಳು ಕೈಜೋಡಿಸಿದವು. ಹತ್ತಕ್ಕಿಂತ ಹೆಚ್ಚು ರಾಜಕೀಯ ಸಮ್ಮೇಳನಗಳು ಜರುಗಿದವು. ನೂರಾರು ಕನ್ನಡದ ಮೇರು ವ್ಯಕ್ತಿತ್ವಗಳು ಇದಕ್ಕಾಗಿ ದುಡಿದವು.  ಸ್ವತಂತ್ರ ಕೊಡಲು ಆಗಮಿಸಿದ ಕ್ಯಾಬಿನೆಟ್ ನಿಯೋಗವು ಭಾಷಾವಾರು ಪ್ರಾಂತಗಳ ರಚನೆಯನ್ನು ವಿರೋಧಿಸಿತು. ಸ್ವಾತಂತ್ರ್ಯದ ನಂತರ ರಾಜ್ಯಗಳ ರಚನೆಗಾಗಿ ರಚನೆಯಾದ ದಾರ್ ಸಮಿತಿ. ಜೆವಿಪಿ ಸಮಿತಿ ಭಾರತದ ಒಕ್ಕೂಟಕ್ಕೆ ಭಾಷವಾರು ರಾಜ್ಯಗಳು ರಾಷ್ಟ್ರಿಯ ಐಕ್ಯತೆಗೆ ಮಾರಕ ಎಂದು ಭಾಷವಾರು ರಾಜ್ಯಗಳ ಬೇಡಿಕೆಯನ್ನು ನಿರಾಕರಿಸಿದವು. ಆದರೆ ಆಂಧ್ರಪ್ರದೇಶದಲ್ಲಿ ಪೊಟ್ಟಿ ಶ್ರೀರಾಮುಲು ತೆಲುಗು ರಾಜ್ಯಕ್ಕಾಗಿ 58 ದಿನಗಳವರೆಗೆ ಉಪವಾಸ ಸತ್ಯಾಗ್ರಹ ಮಾಡಿ ಮರಣ ಹೊಂದಿದ ನಂತರ ಗಲಬೆಯನ್ನು ನಿಯಂತ್ರಿಸಲಾಗದೆ ತೆಲಗು ಮಾತನಾಡುವವರಿಗಾಗಿ  1953 ರಲ್ಲಿ ಪ್ರತ್ಯೇಕ ಆಂದ್ರವನ್ನು ರಚನೆ ಮಾಡಲಾಯಿತು. ಇದರಿಂದ ಪ್ರೇರಣೆಗೊಂಡ ಇತರ ರಾಜ್ಯದವರು ತಮ್ಮ ಹೋರಾಟವನ್ನು ತೀವ್ರಗೊಳಿಸಿದರು. ಕರ್ನಾಟಕದಲ್ಲಿ ಅಂದಾನಪ್ಪ ದೊಡ್ಡಮೇಟಿಯರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು.

ಇದರಿಂದ ಫಜಲ್ ಅಲಿ ಆಯೋಗ ರಚನೆಯಾಗಿ  ಭಾಷಾವಾರು ಪ್ರಾಂತಗಳು ರಚನೆಯಾದರೂ ಭಾರತದ ಒಕ್ಕೂಟದ ಐಕ್ಯತೆಗೆ ಧಕ್ಕೆ ತರುವಂತಿಲ್ಲ ಎಂಬ ಸಂದೇಶ  ಮುಂದಿಟ್ಟು  ಭಾಷಾವಾರು ಪ್ರಾಂತಗಳ ರಚನೆಗೆ  ಒಪ್ಪಿತು. ಇದರಿಂದಾಗಿ ಸಂವಿಧಾನಕ್ಕೆ ಏಳನೇ ತಿದ್ದುಪಡಿ ತರುವುದರ ಮೂಲಕ 1956 ರಲ್ಲಿ ರಾಜ್ಯ ಪುನರ್ ವಿಂಗಡಣಾ ಆಯೋಗವನ್ನು ರಚಿಸಿ 1956 ನವಂಬರ್ 01 ರಂದು ಭಾರತದಲ್ಲಿ 14 ರಾಜ್ಯಗಳು 6 ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು. ಅದರಲ್ಲಿ ಮೈಸೂರು ರಾಜ್ಯವೂ ಒಂದು. ಈ ಮೊದಲು ಅಸ್ತಿತ್ವದಲ್ಲಿದ್ದ  ಮೈಸೂರು ಪ್ರಾಂತಕ್ಕೆ ಬಾಂಬೆ ಪ್ರಾಂತ್ಯದಲ್ಲಿನ ಆಗಿನ ಬೆಳಗಾವಿ, ಬಿಜಾಪುರ, ಧಾರವಾಡ, ಉತ್ತರ ಕನ್ನಡವನ್ನು, ಹೈದರಾಬಾದ್ ಪ್ರಾಂತ್ಯದಿಂದ ಬೀದರ್,  ಕಲಬುರ್ಗಿ,  ರಾಯಚೂರನ್ನು ಸ್ವತಂತ್ರ ಪ್ರಾಂತ್ಯಗಳಿಂದ ಬಳ್ಳಾರಿ ಹಾಗೂ ಕೊಡಗನ್ನು ಮೈಸೂರು ರಾಜ್ಯಕ್ಕೆ ಸೇರಿಸಿಕೊಳ್ಳಲಾಯಿತು.

ಹೀಗೆ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು 1956 ನವಂಬರ್ 1 ರಂದು ಏಕೀಕೃತಗೊಳಿಸಲಾಯಿತು . ಈ ಏಕೀಕೃತಗೊಂಡ ಕರ್ನಾಟಕದಲ್ಲಿ 19 ಜಿಲ್ಲೆಗಳು ರಚನೆಯಾದವು. ಈ ಏಕೀಕೃತಗೊಂಡ  ವಿಶಾಲ ಮೈಸೂರ ರಾಜ್ಯಕ್ಕೆ ಎಸ್. ನಿಜಲಿಂಗಪ್ಪನವರು ಪ್ರಥಮ ಮುಖ್ಯಮಂತ್ರಿಯಾದರು. ಜಯಚಚಾಮರಾಜೇಂದ್ರ ಒಡೆಯರು ರಾಜ್ಯಪಾಲರಾದರು. ಆದರೂ ಕನ್ನಡ ಮಾತನಾಡುವ ಜನರ ಅನೇಕ ಪ್ರದೇಶಗಳು ಬೇರೆ ಬೇರೆ ರಾಜ್ಯಗಳಲ್ಲಿ ಹಾಗೆ ಉಳಿದವು. ಮಹಾರಾಷ್ಟ್ರದಲ್ಲಿ ಸೊಲ್ಲಾಪುರ,ಆಂಧ್ರದಲ್ಲಿ ಅನಂತಪುರ ರಾಯದುರ್ಗ ಕೇರಳದಲ್ಲಿ ಕಾಸರಗೋಡು ಹೀಗೆ ಅನೇಕ ಕನ್ನಡಿಗರ ಪ್ರದೇಶಗಳು ಅಲ್ಲಿಯೇ ಉಳಿದವು.ಈ ಹೋರಾಟ ಇನ್ನು ಜೀವಂತವಾಗಿದೆ. “ಮೈಸೂರು ರಾಜ್ಯ “ಎಂಬ ಹೆಸರಲ್ಲಿ ಇಡೀ ಕನ್ನಡಿಗರು ಒಟ್ಟಾಗಿದ್ದು ಬುದ್ಧಿಜೀವಿಗಳಲ್ಲಿ ಸಾಹಿತಿಗಳಲ್ಲಿ ಅಸಮಾಧಾನವನ್ನು ಉಂಟು ಮಾಡಿತು.

ಮೈಸೂರ್ ರಾಜ್ಯ ಎಂಬುದು ಕನ್ನಡಿಗರ ಭಾಷೆಯನ್ನು ಪ್ರತಿನಿಧಿಸುವುದಿಲ್ಲ. ಮೈಸೂರ್ ರಾಜ್ಯದಲ್ಲಿ ಈಗಾಗಲೇ ಬೇರೊಂದು ಪ್ರಾಂತ್ಯದಲ್ಲಿ ಗುರುತಿಸಿಕೊಂಡಿದ್ದ ಕನ್ನಡಿಗರು ಮೈಸೂರು ರಾಜ್ಯದ ಹೆಸರಲ್ಲಿ ಗುರುತಿಸಿಕೊಳ್ಳಲು ಇಷ್ಟಪಡಲಿಲ್ಲ. ಈ  ಅಸಮಾಧಾನ ಪದೇಪದೇ ಹೊರಹೊಮ್ಮುತ್ತಿತ್ತು. ಇದರ ಆಕ್ರೋಶಗಳನ್ನು ಎದುರಿಸಿದ ಆಗಿನ ಮುಖ್ಯಮಂತ್ರಿಯಾದ ಡಿ ದೇವರಾಜ ಅರಸ್ ಅವರು 1973 ನವೆಂಬರ್ 1 ರಂದು ಹಂಪಿಯಲ್ಲಿ ಮೈಸೂರು ರಾಜ್ಯವನ್ನು” ಕರ್ನಾಟಕ ರಾಜ್ಯ” ಎಂದು ಪುನರ್ ನಾಮಕರಣ ಮಾಡಿದರು. ಹೀಗೆ ನಮ್ಮ ಹೆಮ್ಮೆಯ ಸ್ವಾಭಿಮಾನದ ಕರ್ನಾಟಕ ರಾಜ್ಯವು ಅಸ್ತಿತ್ವಕ್ಕೆ ಬಂತು.
ನಮ್ಮ ಕರ್ನಾಟಕದ ಏಕೀಕರವು ಭಾರತದ ಸ್ವಾತಂತ್ರ್ಯ ಹೋರಾಟದಷ್ಟೇ ಮಹತ್ತರವಾದುದು. ಇದಕ್ಕಾಗಿ ಸಾವಿರಾರು ಜನರು ರಕ್ತ ಹರಿಸದೆ ಇದ್ದರೂ ಬೆವರು ಹರಿಸಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆಗಾಗಿ ಹಗಲಿರುಳು ದುಡಿದಿದ್ದಾರೆ. ಅವರೆಲ್ಲರ ಪರಿಶ್ರಮದ ಫಲವಾಗಿ ಹೆಸರಾಯಿತು ಕರ್ನಾಟಕ. ನಮ್ಮ ಉಸಿರಾಗಲಿ ಕನ್ನಡ. ಜೈ ಕರ್ನಾಟಕ ಮಾತೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ರಮೇಶ.ಪಿ  ಶಿಕ್ಷಕರು

Please follow and like us: