November 27, 2026

Hampi times

Kannada News Portal from Vijayanagara

ಈ ನಿನ್ನ ಮನಸೇ ಮಾನಸ ಸರೋವರ…. ಸಂಡೂರು

ಕೆಲವು ಸಿನಿಮಾಗಳು ಕೇವಲ ತೆರೆಮೇಲೆ ಮೂಡಿ ಮರೆಯಾಗುವುದಿಲ್ಲ. ಅವು ಚಿತ್ರಿಕರಣಗೊಂಡ ನೆಲದೊಂದಿಗೆ, ಅಲ್ಲಿನ ಪ್ರಕೃತಿಯೊಂದಿಗೆ, ಅಲ್ಲಿನ ಜನರ ನೆನಪುಗಳೊಂದಿಗೆ ಬೆರೆತುಹೋಗುತ್ತವೆ. ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ‘ಮಾನಸ ಸರೋವರ’ ಅಂತಹ ಅಪರೂಪದ ಚಿತ್ರ. 1982ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶ್ರೀನಾಥ್, ಪದ್ಮಾವಾಸಂತಿ ಮತ್ತು ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಚಿತ್ರದ ಬಹುಪಾಲು ಚಿತ್ರೀಕರಣ ಬಳ್ಳಾರಿ ಜಿಲ್ಲೆಯ ಸಂಡೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿತ್ತು.

ಇಂದು ‘ಮಾನಸ ಸರೋವರ’ವನ್ನು ನೆನಪಿಸಿಕೊಂಡಾಗ ಮೊದಲು ಕಣ್ಣ ಮುಂದೆ ಬರುವುದು ಕಥೆಯಷ್ಟೇ ಅಲ್ಲ; ಸಂಡೂರಿನ ಹಸಿರು ಬೆಟ್ಟಗಳು, ಕಣಿವೆಗಳು, ನಿಸರ್ಗದ ನಿಶ್ಶಬ್ದತೆ ಮತ್ತು ಗಣಿಗಾರಿಕೆಯ ಕೆಂಪು ಮಣ್ಣಿನ ನಡುವೆ ಪುಟ್ಟಣ್ಣ ಸೆರೆಹಿಡಿದ ಭಾವನೆಗಳು. ಬಯಲುಸೀಮೆಯ ಮಧ್ಯೆ ಮಲೆನಾಡಿನ ಸೊಬಗನ್ನು ಹೊತ್ತು ನಿಂತಿದ್ದ ಸಂಡೂರು, ಪುಟ್ಟಣ್ಣನ ಕ್ಯಾಮೆರಾದಲ್ಲಿ ಮತ್ತೊಂದು ಲೋಕವಾಗಿ ಕಾಣಿಸಿಕೊಂಡಿತ್ತು.

ಪುಟ್ಟಣ್ಣ ಕಣಗಾಲ್ ಎಂದರೆ ಕನ್ನಡ ಚಿತ್ರರಂಗದೊಳಗೆ ಪ್ರೇಕ್ಷಕರ ಮನಸ್ಸಿನ ಆಳವನ್ನು ಶೋಧಿಸಿದ ನಿರ್ದೇಶಕ. ಅವರ ಸಿನಿಮಾಗಳಲ್ಲಿ ಪ್ರೀತಿ ಕೇವಲ ಸಂತೋಷವಲ್ಲ; ಅದು ನೋವು, ನಿರೀಕ್ಷೆ, ಅಸಹಾಯಕತೆ, ಭ್ರಮೆ ಮತ್ತು ಬದುಕಿನ ಸಂಕೀರ್ಣತೆಯನ್ನೂ ಹೊತ್ತಿರುತ್ತದೆ. ‘ಮಾನಸ ಸರೋವರ’ ಕೂಡ ಮಾನವ ಮನಸ್ಸಿನ ಇಂತಹ ಸೂಕ್ಷ್ಮ ಪದರಗಳನ್ನು ತೆರೆದಿಡುವ ಚಿತ್ರ.

ಚಿತ್ರದ ಕಥೆಯಲ್ಲಿ ಮಧ್ಯವಯಸ್ಕ ಮನೋವೈದ್ಯನೊಬ್ಬ ದಾರಿತಪ್ಪಿದ, ಮಾನಸಿಕವಾಗಿ ಅಸ್ವಸ್ಥಳಾದ ಯುವತಿಯನ್ನು ಕಂಡು ಆಕೆಗೆ ಆಶ್ರಯ ನೀಡಿ, ಚಿಕಿತ್ಸೆಯ ಮೂಲಕ ಸಹಜ ಬದುಕಿಗೆ ಮರಳಿಸಲು ಪ್ರಯತ್ನಿಸುತ್ತಾನೆ. ಮುಂದೆ ಸಂಬಂಧಗಳು ಸಂಕೀರ್ಣಗೊಳ್ಳುತ್ತವೆ. ಪ್ರೀತಿ, ಸೌಮ್ಯಭಾವ, ಆಂತರಿಕ ಸಂಘರ್ಷ ಮತ್ತು ಮಾನಸಿಕ ತಲ್ಲಣಗಳು ಕಥೆಯನ್ನು ದುರಂತದತ್ತ ಕೊಂಡೊಯ್ಯುತ್ತವೆ. ಆದರೆ ಈ ಕಥೆಯನ್ನು ಸಂಡೂರಿನ ಪ್ರಕೃತಿಯ ನಡುವೆ ಹೇಳಿದಾಗ ಅದರ ಭಾವತೀವ್ರತೆ ಇನ್ನಷ್ಟು ಹೆಚ್ಚಾಗುತ್ತದೆ.

ಸಂಡೂರಿನ ಬೆಟ್ಟಗಳು ಪಾತ್ರಗಳ ಮೌನಕ್ಕೆ ಸಾಕ್ಷಿಯಾಗಿದ್ದವು. ದೂರದ ಬೆಟ್ಟಗಳ ನಡುವೆ ಸಾಗುವ ದೃಶ್ಯಗಳಲ್ಲಿ ಪಾತ್ರಗಳ ಮನಸ್ಸಿನ ಏಕಾಂತವೂ ಕಾಣಿಸುತ್ತಿತ್ತು. ಪ್ರಕೃತಿಯ ಸೌಂದರ್ಯ ಮತ್ತು ಮಾನವ ಮನಸ್ಸಿನ ಅಶಾಂತಿಯನ್ನು ಒಂದೇ ಫ್ರೇಮ್‌ನಲ್ಲಿ ಹಿಡಿದಿಡುವ ಪುಟ್ಟಣ್ಣನ ಕಲಾತ್ಮಕತೆ ಇಲ್ಲಿಯೇ ಎದ್ದು ಕಾಣುತ್ತದೆ. ಚಿತ್ರದ ಹಾಡುಗಳಿಗೂ ಸಂಡೂರಿನ ಪರಿಸರವೇ ಜೀವ ತುಂಬಿತು. ‘ಮಾನಸ ಸರೋವರ… ನೀ ನನ್ನ ಮನಸೆ ಮಾನಸ ಸರೋವರ’ ಎಂಬ ಗೀತೆಯ ದೃಶ್ಯೀಕರಣ ಸಂಡೂರಿನ ರಮಣೀಯ ಪರಿಸರದ, ಅದೇ ರೀತಿ ಜಿ.ಎಸ್. ಶಿವರುದ್ರಪ್ಪ ಅವರ ‘ವೇದಾಂತಿ ಹೇಳಿದನು… ಹೊನ್ನೆಲ್ಲ ಮಣ್ಣು ಮಣ್ಣು, ಕವಿಯೊಬ್ಬ ಹಾಡಿದನು… ಮಣ್ಣೆಲ್ಲ ಹೊನ್ನು ಹೊನ್ನು’ ನೀನೇ ಸಾಕಿದ ಗಿಣಿ…. ನನ್ನ ಮುದ್ದಿನ ಗಿಣಿ, ಚಂದ ಚಂದ ಸಂಗಾತಿ ನೋಟವೇ ಚೆಂದ, ಹಾಡು ಹಳೆಯದಾದರೇನು? ಭಾವ ನವ ನವೀನ .. ಹಾಡುಗಳನ್ನ ಕೇಳಿದಷ್ಟು ಆಸೆ ಹೆಚ್ಚಾಗುತ್ತದೆ.

ಇಲ್ಲಿ ಒಂದು ವಿಚಿತ್ರವಾದ ವಿಧಿಯ ಆಟವಿದೆ. ಒಂದೆಡೆ ಪುಟ್ಟಣ್ಣನ ಕ್ಯಾಮೆರಾ ಸಂಡೂರಿನ ಪ್ರಕೃತಿಯ ಸೌಂದರ್ಯವನ್ನು ಶಾಶ್ವತಗೊಳಿಸಿತು. ಮತ್ತೊಂದೆಡೆ, ಕಾಲಕ್ರಮೇಣ ಗಣಿಗಾರಿಕೆ ಆ ಪ್ರಕೃತಿಯ ಮೇಲೆ ಬೀರಿದ ಪರಿಣಾಮ ಸಂಡೂರಿನ ರೂಪವನ್ನೇ ಬದಲಿಸಿತು. ಹಿಂದೆ ಕ್ಯಾಮೆರಾದಲ್ಲಿ ಹಸಿರಾಗಿ, ಸುಂದರವಾಗಿ ಕಾಣುತ್ತಿದ್ದ ಕೆಲವು ಪ್ರದೇಶಗಳು ನಂತರ ಗಣಿಗಾರಿಕೆಯ ಧೂಳು ಮತ್ತು ಬದಲಾದ ಭೂದೃಶ್ಯದ ಸಾಕ್ಷಿಗಳಾದವು.

ಈ ಕಾರಣದಿಂದ ‘ಮಾನಸ ಸರೋವರ’ ಇಂದು ಕೇವಲ ಸಿನಿಮಾ ಅಲ್ಲ; ಸಂಡೂರಿನ ಹಳೆಯ ಪ್ರಕೃತಿ ಸೌಂದರ್ಯದ ದೃಶ್ಯ ದಾಖಲೆಯಂತೆಯೂ ಕಾಣುತ್ತದೆ. ಚಿತ್ರದ ಸಂಗೀತಕ್ಕೂ ವಿಶೇಷ ಸ್ಥಾನವಿದೆ. ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರ ಸಂಗೀತವು ಹಾಡುಗಳ ಅಲಂಕಾರವಾಗಿ ಮಾತ್ರ ಉಳಿಯದೆ, ಪಾತ್ರಗಳ ಮನಸ್ಥಿತಿಯನ್ನು ಪ್ರೇಕ್ಷಕರಿಗೆ ತಲುಪಿಸುವ ಮತ್ತೊಂದು ಭಾಷೆಯಾಯಿತು. ಶ್ರೀನಾಥ್ ಅವರ ಅಭಿನಯವೂ ಚಿತ್ರದ ಪ್ರಮುಖ ಆಕರ್ಷಣೆ. ಪದ್ಮಾವಾಸಂತಿ ನಿರ್ವಹಿಸಿದ ಪಾತ್ರ ಮಾನಸಿಕ ಅಸ್ಥಿರತೆ, ಪ್ರೀತಿ ಮತ್ತು ಅಸಹಾಯಕತೆಯ ನಡುವೆ ಸಿಲುಕಿಕೊಂಡ ಹೆಣ್ಣಿನ ಸಂಕೀರ್ಣ ಮನಸ್ಥಿತಿಯನ್ನು ತೆರೆದಿಡುತ್ತದೆ. ಈ ಪಾತ್ರಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಗೌರವ ದೊರೆತಿತ್ತು.

ಪುಟ್ಟಣ್ಣನ ವೈಯಕ್ತಿಕ ಬದುಕಿನ ನೋವುಗಳ ನೆರಳು ಕೂಡ ಈ ಚಿತ್ರದ ಭಾವಲೋಕದೊಂದಿಗೆ ಸಂಬಂಧಿಸಿದೆ ಎಂಬ ಅಭಿಪ್ರಾಯಗಳು ಚಿತ್ರರಂಗದ ಬರಹಗಳಲ್ಲಿ ಕಾಣುತ್ತವೆ. ಆದರೆ ಅದನ್ನು ಕೇವಲ ಆತ್ಮಕಥನದ ದೃಷ್ಟಿಯಿಂದ ನೋಡುವುದಕ್ಕಿಂತ, ತನ್ನೊಳಗಿನ ನೋವನ್ನು ಕಲೆಯಾಗಿ ಪರಿವರ್ತಿಸಿದ ನಿರ್ದೇಶಕನ ಸೃಜನಶೀಲತೆ ಎಂದು ನೋಡುವುದು ಹೆಚ್ಚು ಸೂಕ್ತ. ‘ಮಾನಸ ಸರೋವರ’ ನಿರ್ಮಾಣವಾದ ಕಾಲದಲ್ಲಿ ಕನ್ನಡ ಸಿನಿಮಾಗಳು ಕಥೆ, ಸಾಹಿತ್ಯ ಮತ್ತು ಮಾನವ ಸಂಬಂಧಗಳ ಆಳವನ್ನು ಹೊಸ ರೀತಿಯಲ್ಲಿ ಅನ್ವೇಷಿಸುತ್ತಿದ್ದವು. ಪುಟ್ಟಣ್ಣ ಕಣಗಾಲ್ ಆ ಪರಂಪರೆಯ ಅತ್ಯಂತ ಪ್ರಭಾವಶಾಲಿ ನಿರ್ದೇಶಕರಲ್ಲಿ ಒಬ್ಬರು. ಅವರ ಸಿನಿಮಾಗಳಲ್ಲಿ ಮಹಿಳೆಯರ ಮನಸ್ಸು, ಸಮಾಜದ ಒತ್ತಡ, ಪ್ರೀತಿ ಮತ್ತು ಸಂಬಂಧಗಳ ಸಂಕೀರ್ಣತೆ ಪದೇಪದೇ ಕೇಂದ್ರವಾಗುತ್ತಿದ್ದವು. ‘ಮಾನಸ ಸರೋವರ’ವೂ ಅದೇ ಪರಂಪರೆಯ ಪ್ರಮುಖ ಕೊಂಡಿ.

ಕ್ಯಾಮೆರಾ ಮುಂದೆ ನಿಂತ ಕಲಾವಿದರು ಬದಲಾಗಿದ್ದಾರೆ. ಚಿತ್ರತಂಡದ ಅನೇಕರು ನಮ್ಮ ನಡುವೆ ಇಲ್ಲ. ಪುಟ್ಟಣ್ಣ ಕಣಗಾಲ್ ಅವರೇ 1985ರಲ್ಲಿ ಅಗಲಿದರು. ಆದರೆ ಅವರ ಕ್ಯಾಮೆರಾ ಸಂಡೂರಿನ ಕೆಲವು ಕ್ಷಣಗಳನ್ನು ಕಾಲದೊಳಗೆ ಬಂಧಿಸಿಟ್ಟಿದೆ.
ಆದ್ದರಿಂದಲೇ ‘ಮಾನಸ ಸರೋವರ’ವನ್ನು ಮತ್ತೊಮ್ಮೆ ನೋಡಿದಾಗ ಸಂಡೂರಿನ ಜನರಿಗೆ ಅದು ವಿಭಿನ್ನ ಅನುಭವ ನೀಡಬಹುದು. ತೆರೆಯ ಮೇಲೆ ಕಾಣುವ ಬೆಟ್ಟವನ್ನು ನೋಡಿದಾಗ—“ಇದು ನಮ್ಮ ಸಂಡೂರು” ಎನ್ನುವ ಹೆಮ್ಮೆ ಮೂಡುತ್ತದೆ.
ಹಳೆಯ ದೃಶ್ಯಗಳಲ್ಲಿ ಕಾಣುವ ಹಸಿರನ್ನು ನೋಡಿದಾಗ—“ನಮ್ಮ ನೆಲ ಹೀಗಿತ್ತು” ಎನ್ನುವ ನೆನಪು ಕಾಡುತ್ತದೆ.

ಮತ್ತು ‘ಮಾನಸ ಸರೋವರ’ ಎಂಬ ಹೆಸರು ಕೇಳಿದಾಗ, ಅದು ಕೇವಲ ಒಂದು ಸಿನಿಮಾದ ಹೆಸರಾಗಿ ಉಳಿಯುವುದಿಲ್ಲ. ಸಂಡೂರಿನ ಪ್ರಕೃತಿ, ಪುಟ್ಟಣ್ಣ ಕಣಗಾಲ್ ಅವರ ಕಲಾತ್ಮಕ ದೃಷ್ಟಿ ಮತ್ತು ಕನ್ನಡ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ— ಎಲ್ಲಾ ಒಂದಾಗಿ ಬೆರೆತ ನೆನಪಿನ ಸರೋವರವಾಗಿ ಉಳಿಯುತ್ತದೆ.

ಆರ್. ಶಿವರಾಮ ಸಂಡೂರು

Please follow and like us: