October 12, 2026

Hampi times

Kannada News Portal from Vijayanagara

ಭಾರತ-ಸ್ವಿಟ್ಜರ್ಲೆಂಡ್ ದ್ವಿಪಕ್ಷೀಯ ಮಾತುಕತೆ: ಹಲವು ಪ್ರಮುಖ ಒಪ್ಪಂದಗಳಿಗೆ ಅಂಕಿತ

ನವದೆಹಲಿ: ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಸಾರಿಗೆ ತಂತ್ರಜ್ಞಾನ, ಚಲನಶೀಲತೆ (ಮೊಬಿಲಿಟಿ ಸಿಸ್ಟಮ್ಸ್) ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳು ನಡೆದಿವೆ. ಮೂರು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಸ್ವಿಟ್ಜರ್ಲೆಂಡ್ ಅಧ್ಯಕ್ಷ ಗೈ ಪಾರ್ಮೆಲಿನ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡುವೆ ಸೋಮವಾರ ಹೈದರಾಬಾದ್ ಹೌಸ್‌ನಲ್ಲಿ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯ ನಂತರ ಈ ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸ್ವಿಸ್ ನ್ಯಾಷನಲ್ ಸೈನ್ಸ್ ಫೌಂಡೇಶನ್ ನಡುವೆ ಆಶಯ ಪತ್ರ (ಲೆಟರ್ ಆಫ್ ಇಂಟೆಂಟ್) ವಿನಿಮಯಗೊಂಡಿದೆ. ಹಾಗೆಯೇ, ನಾವೀನ್ಯತೆ, ತಂತ್ರಜ್ಞಾನ ವರ್ಗಾವಣೆ ಮತ್ತು ಉದ್ಯಮಶೀಲತೆ ಉತ್ತೇಜಿಸಲು ಜ್ಯೂರಿಚ್ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ ಜಂಟಿ ಸಹಭಾಗಿತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ.

ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಸ್ವಿಸ್ ಅಧ್ಯಕ್ಷರ ಬದ್ಧತೆಯನ್ನು ಶ್ಲಾಘಿಸಿದರು. ಭಾರತ ಹಾಗೂ ಯುರೋಪಿಯನ್ ಮುಕ್ತ ವ್ಯಾಪಾರ ಒಕ್ಕೂಟ (ಇಎಫ್‌ಟಿಎ) ನಡುವಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದಡಿ ಮುಂಬರುವ 15 ವರ್ಷಗಳಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಆಕರ್ಷಿಸುವ ಹಾಗೂ 10 ಲಕ್ಷ ನೇರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಈ ಒಪ್ಪಂದದಿಂದಾಗಿ ಭಾರತೀಯ ಕೃಷಿ ಉತ್ಪನ್ನಗಳು, ಔಷಧಗಳು ಹಾಗೂ ಜವಳಿ ರಫ್ತಿಗೆ ಸ್ವಿಸ್ ಮಾರುಕಟ್ಟೆ ವಿಸ್ತಾರಗೊಳ್ಳಲಿದ್ದು, ಭಾರತದಲ್ಲಿ ಜೈವಿಕ ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಪರಿಸರ ಸ್ನೇಹಿ ಸುಸ್ಥಿರ ಕ್ಷೇತ್ರಗಳಿಗೆ ಸ್ವಿಸ್ ಬಂಡವಾಳ ಹರಿದು ಬರಲಿದೆ ಎಂದರು. ಇದೇ ವೇಳೆ ರಕ್ಷಣಾ ಉತ್ಪಾದನೆ, ಮಿಲಿಟರಿ ವಿನಿಮಯ ಹಾಗೂ ಪರಮಾಣು ಇಂಧನ ಕ್ಷೇತ್ರಗಳಲ್ಲೂ ಸಹಕಾರ ವಿಸ್ತರಿಸಲು ಉಭಯ ನಾಯಕರು ಸಮ್ಮತಿಸಿದ್ದಾರೆ.

ಇದಕ್ಕೂ ಮುನ್ನ ಬೆಳಿಗ್ಗೆ ನವದೆಹಲಿಗೆ ಆಗಮಿಸಿದ ಅಧ್ಯಕ್ಷ ಗೈ ಪಾರ್ಮೆಲಿನ್ ಅವರಿಗೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ತ್ರಿವಿಧ ಪಡೆಗಳ ಗೌರವ ರಕ್ಷೆಯೊಂದಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಬಳಿಕ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಸಹ ಸ್ವಿಸ್ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿರುವ ಸ್ವಿಸ್ ಅಧ್ಯಕ್ಷರು, ಅವರ ಗೌರವಾರ್ಥ ಏರ್ಪಡಿಸಿರುವ ಅಧಿಕೃತ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.

Please follow and like us: