
ಪಾಕಿಸ್ತಾನ ತನ್ನ ಸೈನಿಕರನ್ನು ವೇಷಮರೆಸಿ ಭಾರತದ ಗಡಿಯೊಳಗೆ ನುಗ್ಗಿಸಿ, ದೊಡ್ಡ ಮಟ್ಟದಲ್ಲಿ ಸೈನ್ಯ ಜಮಾಯಿಸಿ 1965ರ ಸೆಪ್ಟೆಂಬರ್ 5ರಂದು ಭಾರತದ ಮೇಲೆ ಯುದ್ಧ ಸಾರಿತು. ಭಾರತ ಈ ಸಮಸ್ಯೆಯನ್ನು ಎದುರಿಸುತ್ತಿರುವಾಗಲೇ, ಚೀನಾ ತನ್ನ ಪ್ರದೇಶದಲ್ಲಿ ಭಾರತದ ಸೈನ್ಯವು ಸಲಕರಣೆಗಳನ್ನು ಸ್ಥಾಪಿಸಿದೆ ಎಂದು ಆರೋಪಿಸಿ ಸೆಪ್ಟೆಂಬರ್ 17ರಂದು ಬೆಳಿಗ್ಗೆ ಪತ್ರ ಬರೆಯಿತು. ಅಲ್ಲದೆ, ಮಧ್ಯರಾತ್ರಿಯೊಳಗೆ ಅವನ್ನು ತೆರವುಗೊಳಿಸದಿದ್ದರೆ ತಕ್ಕ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿತು.
ಅಂದು ಭಾರತದ ಪ್ರಧಾನಿ ಹುದ್ದೆಯಲ್ಲಿದ್ದ ತೆಳ್ಳನೆ, ಕುಳ್ಳನೆ ಹಾಗೂ ಮೃದುಸ್ವಭಾವದ ಸಾತ್ವಿಕ ವ್ಯಕ್ತಿ ಇವರೇನು ಮಾಡಬಲ್ಲರು ಎಂಬ ನೆರೆರಾಷ್ಟ್ರಗಳ ಧೋರಣೆ ಒಂದಡೆಯಾದರೆ, ಇಂತಹ ಬಿಕ್ಕಟ್ಟನ್ನು ಭಾರತ ಹೇಗೆ ನಿಭಾಯಿಸುತ್ತದೆ ಎಂದು ಇಡೀ ಪ್ರಪಂಚವೇ ಕಾತುರದಿಂದ ಕಾಯುತ್ತಿತ್ತು. ಇದಕ್ಕೆ ಉತ್ತರವಾಗಿ ಭಾರತದ ಸೈನ್ಯವು ಲಾಹೋರ್‌ವರೆಗೆ ನುಗ್ಗಿ ಕೇವಲ 18 ದಿನಗಳಲ್ಲಿ ಪಾಕಿಸ್ತಾನದ ಸೈನ್ಯದ ಬೆನ್ನುಮುರ오ತು. ಈ ಹಿಂದೆ ಯುದ್ಧವಾದಾಗಲೂ ಪಾಕ್ ಸೈನ್ಯವು ಅಂತರರಾಷ್ಟ್ರೀಯ ಗಡಿ ದಾಟಿ ಒಳಗೆ ನುಗ್ಗಿತ್ತು; ಆದರೆ ಪ್ರಧಾನಿ ನೆಹರು ಅವರು ಪ್ರತಿದಾಳಿಗೆ ಸಂಪೂರ್ಣ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ಹಿಂದಕ್ಕೆ ಹೋಗಬಹುದೆಂಬ ನಂಬಿಕೆಯಿತ್ತು. ನೆಹರು ಅವರು 17 ವರ್ಷಗಳಲ್ಲಿ ಮಾಡದಿದ್ದ ದಿಟ್ಟ ನಿರ್ಧಾರವನ್ನು ಶಾಸ್ತ್ರಿಗಳು ಕೈಗೊಂಡು ಪಾಕಿಸ್ತಾನದ ದುಸ್ಸಾಹಸಕ್ಕೆ ತಕ್ಕೇಟು ನೀಡಿದರು.
ಭಾರತದ ಭೂಸೇನೆ ಮತ್ತು ವಾಯುಸೇನೆ ಕಾರ್ಯಪ್ರವೃತ್ತವಾಗಿ, ಗಡಿ ದಾಟಿಬಂದ ಪಾಕ್ ಸೈನ್ಯವನ್ನು ಬೆನ್ನಟ್ಟಿ ಲಾಹೋರ್ ಪಟ್ಟಣದವರೆಗೂ ಹೋಗಿ ಹಿಮ್ಮೆಟ್ಟಿಸಿದವು. ಭಾರತದ ಸೈನ್ಯವು 1965ರ ಸೆಪ್ಟೆಂಬರ್ 23ರಂದು ವಿಜಯ ಸಾಧಿಸಿತು. ಈ ಸಂದರ್ಭದಲ್ಲಿ ಶಾಸ್ತ್ರಿಗಳು, “ಭಾರತ ಶಾಂತಿಪ್ರಿಯ ದೇಶ, ನೆರೆಹೊರೆಯ ರಾಷ್ಟ್ರಗಳೊಡನೆ ಸದಾ ಸ್ನೇಹ ಬಯಸುತ್ತದೆ. ಆದರೆ ಯಾರಾದರೂ ಅನ್ಯಾಯದಿಂದ ದುರಾಕ್ರಮಣ ಮಾಡಿದರೆ ಸರಿಯಾದ ಉತ್ತರ ನೀಡಲು ಸದಾ ಮುಂದಿರುತ್ತದೆ. ಬಲ ಪ್ರಯೋಗವನ್ನು ಬಲದಿಂದಲೇ ಎದುರಿಸುತ್ತೇವೆ, ಶತ್ರುವಿಗೆ ಬುದ್ಧಿ ಕಲಿಸುತ್ತೇವೆ” ಎಂದು ದಿಟ್ಟ ಸಂದೇಶ ಸಾರಿದರು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಯೋಧರಿಗೆ ‘ಜೈ ಜವಾನ್’ ಎಂದು ಮುಕ್ತ ಮನಸ್ಸಿನಿಂದ ಪ್ರಶಂಸಿಸುವುದರ ಜೊತೆಗೆ, ರಾಷ್ಟ್ರದ ಬೆನ್ನೆಲುಬಾದ ರೈತರನ್ನು ‘ಜೈ ಕಿಸಾನ್’ ಎಂದೂ ಸ್ಮರಿಸಿದರು. ಇವರು ನೀಡಿದ “ಜೈ ಜವಾನ್, ಜೈ ಕಿಸಾನ್” ಘೋಷವಾಕ್ಯ ಇಂದಿಗೂ ನಾಡಿನಲ್ಲಿ ಅಚ್ಚಳಿದು ಉಳಿದಿದೆ.
ಒಂದು ಕಡೆ ಪಾಕಿಸ್ತಾನಕ್ಕೆ ಬಂದೂಕಿನಿಂದ ಉತ್ತರಿಸಿದರೆ, ಮತ್ತೊಂದಡೆ ಚೀನಾ ಬೆದರಿಕೆ ಪತ್ರಕ್ಕೆ ತಮ್ಮ ವಿವೇಚನಾಯುಕ್ತ ಮಾತಿನಿಂದಲೇ ತಿರುಗೇಟು ನೀಡಿದರು. “ಭಾರತದ ಸೈನಿಕರು ಗಡಿ ದಾಟಿ ಚೀನಾದೊಳಗೆ ಹೋಗಿಲ್ಲ. ಆದರೆ ನಮ್ಮ ಸೈನಿಕರು ಅಲ್ಲಿಯೇ ಇದ್ದು ಸಲಕರಣೆ ಸ್ಥಾಪಿಸಿದ್ದಾರೆ ಎಂದು ಚೀನಾ ಆರೋಪಿಸುತ್ತಿದೆ. ಈಗ ಅವನ್ನು ತೆಗೆದುಹಾಕಲು ನಮ್ಮ ಸೈನಿಕರು ಹೋದರೆ ಗಡಿ ಉಲ್ಲಂಘನೆ ಮಾಡಿದಂತಾಗುವುದಿಲ್ಲವೇ? ಅವರ ಪ್ರದೇಶದಲ್ಲಿ ಸಲಕರಣೆಗಳಿರುವುದು ನಿಜವಾಗಿದ್ದರೆ ಅವರೇ ತೆಗೆದುಹಾಕಬಹುದಲ್ಲ?” ಎಂದು ಸಂಸತ್ತಿನಲ್ಲಿ ಅವರು ನೀಡಿದ ತಾರ್ಕಿಕ ಉತ್ತರಕ್ಕೆ ಚೀನಾ ಸುಣ್ಣವಾಗಿತ್ತು.
ಇಂತಹ ಧೀಮಂತ ವ್ಯಕ್ತಿ ಯಾರೆಂದು ನೋಡುವುದಾದರೆ, ಅವರು ಶಾರದಾ ಪ್ರಸಾದ್ ಮತ್ತು ರಾಮದುಲಾರಿ ದೇವಿ ದಂಪತಿಗಳ ಪುತ್ರ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ. ಇವರು 1904ರ ಅಕ್ಟೋಬರ್ 2ರಂದು ಅಜ್ಜನ ಊರಾದ ಮುಘಲ್ ಸರಾಯ್‌ನಲ್ಲಿ ಜನಿಸಿದರು. ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೇ ಇವರು ಜನಿಸಿದ್ದು ವಿಶೇಷ ಕಾಕತಾಳೀಯ.

ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಅತ್ಯಂತ ಸಮೀಪವಾಗಿ ನಿಲ್ಲುವ ವ್ಯಕ್ತಿತ್ವ ಎಂದರೆ ಲಾಲ್ ಬಹದ್ದೂರ್ ಶಾಸ್ತ್ರಿ. ಗಾಂಧೀಜಿಯವರಂತೆ ಸತ್ಯ, ನ್ಯಾಯ, ಪ್ರಾಮಾಣಿಕತೆ, ನೈತಿಕತೆ, ಸರಳತೆ ಮತ್ತು ಶಾಂತಿಗೆ ಅವರು ಪ್ರಸಿದ್ಧರಾಗಿದ್ದರು. 1954ರಲ್ಲಿ ರೈಲ್ವೆ ಸಚಿವರಾಗಿದ್ದಾಗ ಆಂಧ್ರಪ್ರದೇಶದ ಅರಿಯಲೂರು ಪ್ರದೇಶದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 144 ಜನರು ಅಸುನೀಗಿದರು. ಈ ಅಪಘಾತಕ್ಕೆ ನೇರವಾಗಿ ತಾವು ಕಾರಣರಲ್ಲದಿದ್ದರೂ, ಅದರ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಉನ್ನತ ಮಾನವತಾವಾದಿ ಹಾಗೂ ಆದರ್ಶ ವ್ಯಕ್ತಿ ಎನಿಸಿಕೊಂಡರು.
1964ರ ಅಕ್ರೋಬರ್‌ನಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಎರಡನೇ ಸಮ್ಮೇಳನದಲ್ಲಿ ವಿಶ್ವ ಶಾಂತಿಗಾಗಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ, ಗಡಿ ಸಮಸ್ಯೆಗಳ ಶಾಂತಿಯುತ ಪರಿಹಾರ, ವಿದೇಶಿ ದಬ್ಬಾಳಿಕೆ ವಿರೋಧ ಹಾಗೂ ಹಿಂದುಳಿದ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಗೆ ಅಂತರರಾಷ್ಟ್ರೀಯ ಸಹಕಾರ ಸೇರಿದಂತೆ ಐದು ಸೂತ್ರಗಳನ್ನು ಮಂಡಿಸಿದರು. ಮುಂದೆ ಇವು ‘ಶಾಸ್ತ್ರಿ ಸೂತ್ರಗಳು’ ಎಂದೇ ಪ್ರಸಿದ್ಧಿಯಾದವು.
ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ ಪ್ರಧಾನಿ ಹುದ್ದೆಗೆ ಏರಿದ್ದರೂ ಶಾಸ್ತ್ರಿಗಳು ತಮ್ಮ ಸರಳತೆಯನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಅವರಿಗಾಗಿ ಸ್ವಂತ ಮನೆಯೂ ಇರಲಿಲ್ಲ; ನಿಧನದ ನಂತರ ಅವರ ಕುಟುಂಬ ಬಾಡಿಗೆ ಮನೆಯನ್ನೇ ಆಶ್ರಯಿಸಿತ್ತು. ಇಂದು ದೇಶಸೇವೆ ಎಂದು ಬಾಯಿಮಾತಿನಲ್ಲಿ ಹೇಳುವ ರಾಜಕಾರಣಿಗಳ ನಡುವೆ ಶಾಸ್ತ್ರಿಯವರ ಬದುಕು ನಿಜಕ್ಕೂ ಒಂದು ಆದರ್ಶ ನಿದರ್ಶನವಾಗಿದೆ.
ರಾಷ್ಟ್ರದ ಪ್ರಧಾನಿ ಮತ್ತು ಮಂತ್ರಿಗಳು ಪ್ರಾಮಾಣಿಕರಾಗಿರಬೇಕು, ಭ್ರಷ್ಟರಾಗಿರಬಾರದು. ಅದಕ್ಕಿಂತ ಮುಖ್ಯವಾಗಿ ದೇಶದ ಆಡಳಿತ ನಡೆಸುವವರು ಮೃದುಸ್ವಭಾವದವರು, ಸರಳ ಜೀವನ ನಡೆಸುವವರು ಹಾಗೂ ದಕ್ಷ ಆಡಳಿತಗಾರರಾಗಿರಬೇಕು. ಎಂತಹದೇ ಕಠಿಣ ಸನ್ನಿವೇಶಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಧೈರ್ಯವಂತರಾಗಿರಬೇಕು. ಆಕಾರದಲ್ಲಿ ಚಿಕ್ಕವರಾಗಿದ್ದರೂ ಪಾಕಿಸ್ತಾನದ ಆಕ್ರಮಣ ಮತ್ತು ಚೀನಾ ಬೆದರಿಕೆಯನ್ನು ಎದುರಿಸಿ ಕೆಚ್ಚದೆ ತೋರಿದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಹ ನಾಯಕರು ನಮಗೆ ಇಂದಿಗೂ ಅತ್ಯಂತ ಅವಶ್ಯಕವಾಗಿದ್ದಾರೆ.
— ಡಾ. ಕಿಚಿಡಿ ಚನ್ನಪ್ಪ, ಸಹ-ಪ್ರಾಧ್ಯಾಪಕರು, ಥಿಯೋಸಾಫಿಕಲ್ ಮಹಿಳಾ ಕಾಲೇಜು, ಹೊಸಪೇಟೆ.


More Stories
ಕೆಲಸದವಳು “ಅಮ್ಮಾ ನಾಳೆ ಬರಲ್ಲ”: ಒಂದೇ ಮಾತಿಗೆ ತಲೆಕೆಳಗಾಯ್ತು ಇಡೀ ಸಂಸಾರ! : ನಂದಿನಿ ಸನಬಾಳ
ಈ ನಿನ್ನ ಮನಸೇ ಮಾನಸ ಸರೋವರ…. ಸಂಡೂರು
ಹಿಮಾಲಯದ ಎಂಜಿನಿಯರಿಂಗ್ ಅದ್ಭುತ ಅಟಲ್ ಸುರಂಗ