October 12, 2026

Hampi times

Kannada News Portal from Vijayanagara

ಸರಳತೆ ಮತ್ತು ಪ್ರಾಮಾಣಿಕತೆಯ ಪ್ರತಿರೂಪವೇ ಲಾಲ್ ಬಹದ್ದೂರ್ ಶಾಸ್ತ್ರಿ

ಅಧಿಕಾರವೆಂಬುದು ಕೆಲವರಿಗೆ ಪ್ರತಿಷ್ಠೆಯ ಸಂಕೇತವಾಗಿರಬಹುದು; ಆದರೆ ಮಹನೀಯರಿಗೆ ಅದು ದೇಶಸೇವೆಯ ಪವಿತ್ರ ಹೊಣೆಗಾರಿಕೆ. ಅಧಿಕಾರದ ಉತ್ತುಂಗಕ್ಕೇರಿದರೂ ಸರಳತೆಯನ್ನು ಕೈಬಿಡದೆ, ಪ್ರಧಾನಮಂತ್ರಿಯಂತಹ ಅತ್ಯುನ್ನತ ಹುದ್ದೆಯಲ್ಲಿದ್ದರೂ ಸಾಮಾನ್ಯನಂತೆ ಬದುಕಿದ ಅಪರೂಪದ ವ್ಯಕ್ತಿತ್ವ ಲಾಲ್ ಬಹದ್ದೂರ್ ಶಾಸ್ತ್ರಿಯವರದ್ದು. ಅವರ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಾಮಾಣಿಕತೆ, ಸರಳತೆ, ಶಿಸ್ತು, ಕರ್ತವ್ಯನಿಷ್ಠೆ ಮತ್ತು ದೇಶಪ್ರೇಮ ಅನಾವರಣಗೊಳ್ಳುತ್ತವೆ.

ಭಾರತದ ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಧ್ರುವತಾರೆಯಂತೆ ಕಂಗೊಳಿಸುತ್ತಾರೆ. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಗಾದೆಯನ್ನು ಸಾರ್ಥಕಗೊಳಿಸಿದ ಅವರು, ಸರಳ-ಸಜ್ಜನಿಕೆಯ ಜೀವನ ಹಾಗೂ ಉನ್ನತ ಚಿಂತನೆಗಳಿಂದ ಭಾರತದ ಎರಡನೇ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದರು. ಪ್ರಧಾನಿಯಾಗಿದ್ದ ಅವಧಿ ಅಲ್ಪವಾದರೂ, ಅವರು ಕೈಗೊಂಡ ದೃಢ ನಿರ್ಧಾರಗಳು ದೇಶವು ಸಂಕಷ್ಟದ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲಲು ನೆರವಾದವು.

ಇಂದು ಅಧಿಕಾರ ಸಿಕ್ಕೊಡನೆ ಸ್ವಾರ್ಥ ಮತ್ತು ಸಂಪತ್ತಿನ ಹಿಂದೆ ಓಡುವ ಪ್ರವೃತ್ತಿ ಹೆಚ್ಚಿರುವ ಈ ಕಾಲಘಟ್ಟದಲ್ಲಿ, ಸ್ವಂತ ಮನೆ ಹಾಗೂ ಕಾರು ಇಲ್ಲದೆಯೇ ಪ್ರಧಾನಮಂತ್ರಿಯಾಗಿ ಬದುಕಿದ ಶಾಸ್ತ್ರಿಯವರ ಜೀವನವು ನಿಜವಾದ ಸಾರ್ವಜನಿಕ ಸೇವೆಯ ಅರ್ಥವನ್ನು ತಿಳಿಸಿಕೊಡುತ್ತದೆ. ಅವರು ಬದುಕಿದ್ದು ಅಧಿಕಾರಕ್ಕಲ್ಲ, ದೇಶಕ್ಕಾಗಿ; ಗಳಿಸಿದ್ದು ಸಂಪತ್ತನ್ನಲ್ಲ, ಕೋಟ್ಯಂತರ ಭಾರತೀಯರ ಗೌರವ ಮತ್ತು ವಿಶ್ವಾಸವನ್ನು. ದೇಶಸೇವೆಯೇ ಮೂಲ ಧೇಯವೆಂದು ಬದುಕಿದ ಇಂತಹ ಮಹಾನ್ ವ್ಯಕ್ತಿಯನ್ನು ಮತ್ತೆ ಕಾಣುವುದು ಕಷ್ಟ.

ಲಾಲ್ ಬಹದ್ದೂರ್ ಶಾಸ್ತ್ರಿಯವರು 1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮುಘಲ್ ಸರಾಯ್‌ನಲ್ಲಿ ಶಾರದಾ ಪ್ರಸಾದ್ ಮತ್ತು ರಾಮದುಲಾರಿದೇವಿಯವರ ಮಗನಾಗಿ ಜನಿಸಿದರು. ತಂದೆ ಶಿಕ್ಷಕ ವೃತ್ತಿಯಲ್ಲಿದ್ದರೆ, ತಾಯಿ ಸದ್ಗುಣಸಂಪನ್ನೆ ಹಾಗೂ ವಾತ್ಸಲ್ಯಮಯಿಯಾಗಿದ್ದರು. ಅವರಲ್ಲಿದ್ದ ರಾಷ್ಟ್ರಪ್ರೇಮ ಮತ್ತು ಸಚ್ಚಾರಿತ್ರ್ಯವು ಮುಂದೆ ಶಾಸ್ತ್ರಿಯವರ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಯಿತು. ಶಾಸ್ತ್ರಿಯವರು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು.

ಬಾಲಕನಾಗಿದ್ದಾಗ ಒಮ್ಮೆ ತೋಟಕ್ಕೆ ನುಗ್ಗಿ ಹಣ್ಣು ಕದಿಯಲು ಹೋಗಿ ಸಿಕ್ಕಿಬಿದ್ದರು. ತಂದೆಯಿಲ್ಲದ ಮಗನೆಂದು ಕನಿಕರಗೊಂಡ ತೋಟದ ಮಾಲೀಕನು ಅವರನ್ನು ಕ್ಷಮಿಸಿ, “ಶ್ರೀಮಂತನಾಗುವುದಾಗಲಿ, ಬೇರೆ ಏನಾದರೂ ಆಗುವುದಾಗಲಿ ಸುಲಭ; ಆದರೆ ಸತ್ಯವಂತ ಮತ್ತು ಪ್ರಾಮಾಣಿಕನಾಗುವುದು ಬಹಳ ಕಷ್ಟ. ಉಸಿರು ಹೋದರೂ ಹೆಸರು ಉಳಿಯುವಂತಹ ಕೆಲಸ ಮಾಡಬೇಕು” ಎಂದು ಬುದ್ಧಿವಾದ ಹೇಳಿದರು. ಆ ಮಾತುಗಳು ಬಾಲಕ ಶಾಸ್ತ್ರಿಯವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿದವು. ಮುಂದೆ ಅವರ ಬದುಕಿನುದ್ದಕ್ಕೂ ಸತ್ಯ, ಪ್ರಾಮಾಣಿಕತೆ ಮತ್ತು ಸರಳತೆ ಮಾರ್ಗದರ್ಶಕ ಮೌಲ್ಯಗಳಾದವು.

ಆಕಾರದಲ್ಲಿ ವಾಮನನಂತಿದ್ದರೂ, ಧೈರ್ಯ, ಸಾಹಸ, ಸಹನೆ, ಸಂಯಮ, ವಿನಯ ಹಾಗೂ ಪರೋಪಕಾರದ ಗುಣಗಳಲ್ಲಿ ಅವರು ಎತ್ತರದ ವ್ಯಕ್ತಿಯಾಗಿದ್ದರು. 1921ರಲ್ಲಿ ಅಸಹಕಾರ ಚಳವಳಿ ಆರಂಭವಾದಾಗ ಮಹಾತ್ಮ ಗಾಂಧೀಜಿಯವರ ವಿಚಾರಗಳಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ವಾರಾಣಸಿಯ ಕಾಶಿ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿ ‘ಶಾಸ್ತ್ರಿ’ ಎಂಬ ಪದವಿಯನ್ನು ಪಡೆದರು. ಮುಂದೆ ಅದೇ ಅವರ ಹೆಸರಿನ ಅವಿಭಾಜ್ಯ ಭಾಗವಾಯಿತು.

1927ರಲ್ಲಿ ಲಲಿತಾದೇವಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರು, ವರದಕ್ಷಿಣೆಯಾಗಿ ಚರಕ ಮತ್ತು ನೂಲನ್ನು ಮಾತ್ರ ಸ್ವೀಕರಿಸಿದರು. ಅವರ ಸಂಸಾರವೂ ನಿರಾಡಂಬರ ಮತ್ತು ಮೌಲ್ಯಾಧಾರಿತವಾಗಿತ್ತು. ಗಾಂಧೀಜಿಯವರ ಅನುಯಾಯಿಯಾಗಿ 1930ರ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು. ಕುಟುಂಬದ ಸುಖಕ್ಕಿಂತ ದೇಶದ ಸ್ವಾತಂತ್ರ್ಯವೇ ಅವರಿಗೆ ಮುಖ್ಯವಾಗಿತ್ತು.

ಶಿಸ್ತು ಮತ್ತು ಸಂಯಮಕ್ಕೆ ಹೆಸರಾದ ಶಾಸ್ತ್ರಿಗಳು ಕಾಂಗ್ರೆಸ್ ಪಕ್ಷದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದರು. ಉತ್ತರ ಪ್ರದೇಶದಲ್ಲಿ ಶಾಸನಸಭಾ ಸದಸ್ಯರಾಗಿ, ನಂತರ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದರು. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ ಜವಾಹರಲಾಲ್ ನೆಹರು ಅವರು ಅವರಿಗೆ ಕೇಂದ್ರ ಸರ್ಕಾರದಲ್ಲಿ ಅವಕಾಶ ಕಲ್ಪಿಸಿದರು. ಅವರು ರೈಲ್ವೆ ಮತ್ತು ಸಾರಿಗೆ ಸಚಿವರಾಗಿ ಸಮರ್ಥವಾಗಿ ಸೇವೆ ಸಲ್ಲಿಸಿದರು.

ಶಾಸ್ತ್ರಿಗಳು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಧಿಕಾರದ ಸ್ಥಾನಕ್ಕಿಂತ ನೈತಿಕ ಹೊಣೆಗಾರಿಕೆಗೆ ಹೆಚ್ಚಿನ ಮಹತ್ವ ನೀಡಿದ ಈ ನಡೆ, ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಯಿತು.

1964ರಲ್ಲಿ ಜವಾಹರಲಾಲ್ ನೆಹರು ಅವರ ನಿಧನದ ನಂತರ, ಜೂನ್ 9ರಂದು ಭಾರತದ ಎರಡನೇ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅತ್ಯುನ್ನತ ಹುದ್ದೆಯಲ್ಲಿದ್ದರೂ ಸರಳತೆಯನ್ನು ಎಂದಿಗೂ ಮರೆಯಲಿಲ್ಲ. ಜನಸಾಮಾನ್ಯರ ಕಷ್ಟಗಳನ್ನು ತಮ್ಮದೇ ಸಮಸ್ಯೆಗಳೆಂದು ಭಾವಿಸಿ ಕಾರ್ಯನಿರ್ವಹಿಸಿದರು. 1965ರ ದಶಕದಲ್ಲಿ ಭಾರತ ಆಹಾರದ ಕೊರತೆಯನ್ನು ಎದುರಿಸಿದಾಗ, ದೇಶದ ಜನರಲ್ಲಿ ಆತ್ಮನಿರ್ಭರತೆಯ ಮನೋಭಾವ ಮೂಡಿಸಲು ಕರೆ ನೀಡಿದರು. ತಾವೂ ವಾರದಲ್ಲಿ ಒಂದು ದಿನ ಉಪವಾಸವಿದ್ದು, ಜನರೂ ಆಹಾರ ಉಳಿತಾಯಕ್ಕಾಗಿ ಉಪವಾಸ ಆಚರಿಸುವಂತೆ ಮನವಿ ಮಾಡಿದರು. ತಾವು ಹೇಳಿದ್ದನ್ನು ಮೊದಲು ತಾವೇ ಪಾಲಿಸುವ ಗುಣ ಅವರಲ್ಲಿತ್ತು.

1965ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಎದೆಗುಂದದ ಶಾಸ್ತ್ರಿಗಳು, “ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆಯ ಮೂಲಕ ಸೈನಿಕರಿಗೆ ಹಾಗೂ ರೈತರಿಗೆ ಸಮಾನ ಮಹತ್ವ ನೀಡುವ ಸಂದೇಶ ಸಾರಿದರು. ಕೇವಲ ಹದಿನೆಂಟು ತಿಂಗಳು ಪ್ರಧಾನಮಂತ್ರಿಯಾಗಿದ್ದರೂ, ಯುದ್ಧ, ಆಹಾರದ ಕೊರತೆ ಹಾಗೂ ಆಂತರಿಕ ಸವಾಲುಗಳಂತಹ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿದರು. ಹಿಂದಿ-ಇಂಗ್ಲಿಷ್ ಭಾಷಾ ಗೊಂದಲ ಬಗೆಹರಿಸಿದರು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದರು. ಚೀನಾದ ಕುತಂತ್ರಕ್ಕೆ ಬಗ್ಗದೆ, ಅಮೆರಿಕದ ಬೆದರಿಕೆಗೆ ಜಗ್ಗದೆ ದೃಢ ನಿರ್ಧಾರಗಳನ್ನು ತೆಗೆದುಕೊಂಡರು.

ಶಾಸ್ತ್ರಿಯವರ ಸರಳತೆಗೆ ಸಂಬಂಧಿಸಿದ ಅನೇಕ ಘಟನೆಗಳು ಜನಮನದಲ್ಲಿವೆ. ಒಮ್ಮೆ ಲೋಕಸಭೆಯಲ್ಲಿ ವಿಪರೀತ ಸೆಕೆಯಾದಾಗ ಸದಸ್ಯರು ಕೋಟನ್ನು ತೆಗೆಯಲು ಸೂಚಿಸಿದರೂ ಅವರು ಒಪ್ಪಲಿಲ್ಲ. ಕೊನೆಗೆ ಎಲ್ಲರ ಒತ್ತಾಯಕ್ಕೆ ಮಣಿದು ಮೇಲಿನ ಕೋಟನ್ನು ತೆಗೆದಾಗ ಅವರ ಶರ್ಟ್ ಅಲ್ಲಲ್ಲಿ ಹರಿದಿತ್ತು! ಇದನ್ನು ಕಂಡ ಸದಸ್ಯರೆಲ್ಲರೂ ಮೌನವಾಗಿ ಕರತಾಡನ ಮಾಡಿದರು. ಪ್ರಧಾನಿಯಾಗಿದ್ದರೂ ಮಕ್ಕಳ ಬಳಿ, “ನೀನು ಪ್ರಧಾನಿಯ ಮಗನೆಂದು ಎಲ್ಲಿಯೂ ಹೇಳಬಾರದು; ಸ್ವಂತ ಸಾಮರ್ಥ್ಯದ ಮೇಲೆ ಮುಂದೆ ಬರಬೇಕು” ಎಂದು ಬೋಧಿಸುತ್ತಿದ್ದರು.

ಯುದ್ಧದಿಂದ ನಾಶವೇ ಹೊರತು ಶಾಶ್ವತ ಲಾಭವಿಲ್ಲ ಎಂಬುದನ್ನು ಅರಿತಿದ್ದ ಅವರು ಶಾಂತಿಗೆ ಹೆಚ್ಚಿನ ಮಹತ್ವ ನೀಡಿದರು. ಸೋವಿಯತ್ ಒಕ್ಕೂಟದ ತಾಷ್ಕೆಂಟ್‌ನಲ್ಲಿ ನಡೆದ ಮಾತುಕತೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆದರೆ ದುರದೃಷ್ಟವಶಾತ್, 1966ರ ಜನವರಿ 11ರಂದು ತಾಷ್ಕೆಂಟ್‌ನಲ್ಲಿಯೇ ಶಾಸ್ತ್ರಿಗಳು ನಿಧನರಾದರು.

ಅಲ್ಪಾವಧಿಯಲ್ಲೇ ದೇಶದ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಸರಳತೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮದ ಪ್ರತೀಕ. ಅಧಿಕಾರವೆಂದರೆ ಸ್ವಾರ್ಥದ ಸಾಧನವಲ್ಲ, ಜನಸೇವೆಯ ಹೊಣೆಗಾರಿಕೆ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಜನ್ಮದಿನದ ಈ ಸಂದರ್ಭದಲ್ಲಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.

— ಅಂಜಿನಪ್ಪ. ಡಿ, ಉಪನ್ಯಾಸಕರು, ಕೊಟ್ಟೂರು.

Please follow and like us: