November 27, 2026

Hampi times

Kannada News Portal from Vijayanagara

‘ಸೇವಾ ಸಂಕಲ್ಪ’ ಅಭಿಯಾನ, ಅಂಗನವಾಡಿ – ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಹೊಸಪೇಟೆ:  ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ಆಡಳಿತದ ನೆನಪಿಗಾಗಿ “ಸೇವಾ ಸಂಕಲ್ಪ” ಅಭಿಯಾನದ ಅಂಗವಾಗಿ, ಭಾರತೀಯ ಜನತಾ ಪಕ್ಷದ ವತಿಯಿಂದ ನಗರದ ಕೌಲ್ ಪೇಟೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ವಿಜಯನಗರ ಜಿಲ್ಲಾಧ್ಯಕ್ಷರಾದ ಸಂಜೀವ್ ರೆಡ್ಡಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪಾಲನೆಯಲ್ಲಿ ಎರಡನೇ ತಾಯಿಯಂತೆ ಕಾರ್ಯನಿರ್ವಹಿಸುತ್ತಾರೆ. ಅಂಗವಾಡಿಗೆ ಬರುವ ಸಣ್ಣ ಮಕ್ಕಳ ಆರೋಗ್ಯ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದರ ಜತೆಗೆ, ಶಾಲೆಯಲ್ಲಿರುವಷ್ಟು ಹೊತ್ತು ಮಗುವಿನ ಲಾಲನೆ-ಪಾಲನೆ ಮಾಡುತ್ತಾರೆ. 0 ಯಿಂದ 6 ವರ್ಷದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಮತ್ತು ಲಸಿಕೆಯ ಮಾಹಿತಿ ನೀಡುವುದು, ಮಕ್ಕಳಲ್ಲಿ ಆರಂಭಿಕ ಕಲಿಕೆಗೆ ಸಹಾಯ ಮಾಡುವುದು ಹಾಗೂ ಮಾತೃ ವಂದನ ಮತ್ತು ಭಾಗ್ಯಲಕ್ಷ್ಮಿಯಂತಹ ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವ ಇವರ ನಿಸ್ವಾರ್ಥ ಸೇವೆಯನ್ನು ಗೌರವಿಸುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಬಿಜೆಪಿ ಮುಖಂಡರಾದ ಚನ್ನಬಸವನಗೌಡ, ಶಂಕರ್ ಮೇಟಿ, ಕೆ.ಎಸ್. ರಾಘವೇಂದ್ರ ಹಾಗೂ ಕೃಷ್ಣ ನಾಯಕ್ ಅವರು ಕಾರ್ಯಕರ್ತೆಯರನ್ನು  ಸನ್ಮಾನಿಸಿದರು. ಅಲ್ಲದೆ, ಅಂಗನವಾಡಿ ಕೇಂದ್ರಕ್ಕೆ ಕಪ್ಪು ಹಲಗೆ, ಸೀಮೆಸುಣ್ಣದ ಪೆಟ್ಟಿಗೆ, ಡಸ್ಟರ್ ಹಾಗೂ ಮಾರ್ಕರ್‌ಗಳನ್ನು ವಿತರಿಸಲಾಯಿತು ಮತ್ತು ಮಕ್ಕಳಿಗೆ ಚಾಕೊಲೇಟ್ ಹಾಗೂ ಉಪಹಾರ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ್, ಭಾಗ್ಯಮ್ಮ, ಸೌಮ್ಯ, ಅನುರಾಧಾ, ಪಂಪಾಪತಿ, ಶ್ರೀಕಾಂತ್ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us: