
ದೇಶಗಳ ನಡುವಿನ ನೇರ ವಾಯು ಸಂಪರ್ಕವು ಕೇವಲ ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ಪ್ರವಾಸೋದ್ಯಮ, ವಾಣಿಜ್ಯ ಹಾಗೂ ವೈದ್ಯಕೀಯ ರಂಗಗಳ ಬೆಳವಣಿಗೆಗೆ ಪ್ರಮುಖ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಭಾರತ ಮತ್ತು ಮಂಗೋಲಿಯಾ ನಡುವೆ ಐತಿಹಾಸಿಕ ನೇರ ತಡೆರಹಿತ ವಿಮಾನ ಸೇವೆ ಅಧಿಕೃತವಾಗಿ ಆರಂಭಗೊಂಡಿದೆ. ನವದೆಹಲಿ ಮತ್ತು ಮಂಗೋಲಿಯಾದ ರಾಜಧಾನಿ ಉಲಾನ್‌ಬಾತರ್ ನಡುವೆ ನಿಯಮಿತ ವಿಮಾನ ಕಾರ್ಯಾಚರಣೆ ಇಂದಿನಿಂದ ಶುರುವಾಗಿದ್ದು, ಈ ಹೊಸ ಮಾರ್ಗದಿಂದಾಗಿ ಉಭಯ ದೇಶಗಳ ರಾಜಧಾನಿಗಳ ನಡುವಿನ ಪ್ರಯಾಣದ ಅವಧಿ ಕೇವಲ ಐದು ಗಂಟೆಗಳಿಗೆ ಇಳಿಕೆಯಾಗಲಿದೆ. ಈ ಸೇವೆಯನ್ನು ಮಂಗೋಲಿಯಾದ ಪ್ರಮುಖ ವಿಮಾನಯಾನ ಸಂಸ್ಥೆಯಾದ ‘ಹುನ್ನೂ ಏರ್’ ನಿರ್ವಹಿಸುತ್ತಿದ್ದು, ವಾರದಲ್ಲಿ ಪ್ರತಿ ಸೋಮವಾರ ಈ ವಿಮಾನ ಸಂಚರಿಸಲಿದೆ.

ಹಿಂದೆ ಭಾರತದಿಂದ ಮಂಗೋಲಿಯಾಕ್ಕೆ ತೆರಳಲು ಚೀನಾದ ಬೀಜಿಂಗ್ ಅಥವಾ ದಕ್ಷಿಣ ಕೊರಿಯಾದ ಇಂಚಿಯಾನ್ ಮೂಲಕ ಸಂಪರ್ಕ ವಿಮಾನಗಳನ್ನು ಅವಲಂಬಿಸಬೇಕಿತ್ತು. ಇದರಿಂದಾಗಿ ಬರೋಬ್ಬರಿ 13 ರಿಂದ 18 ಗಂಟೆಗಳ ಸುದೀರ್ಘ ಪ್ರಯಾಣ ಅನಿವಾರ್ಯವಾಗಿತ್ತು. ಇದೀಗ ಆರಂಭವಾಗಿರುವ ನೇರ ವಿಮಾನದಿಂದ ಪ್ರಯಾಣಿಕರಿಗೆ ಸಮಯದ ಉಳಿತಾಯವಾಗಲಿದ್ದು, ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸ ಮತ್ತು ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಜೊತೆಗೆ ಸರಕು ಸಾಗಣೆ (ಕಾರ್ಗೋ) ಇನ್ನಷ್ಟು ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಸಾಗಲು ನೆರವಾಗಲಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಂಗೋಲಿಯಾ ಅಧ್ಯಕ್ಷ ಯು. ಖುರೆಲ್‌ಸುಖ್ ಈ ಮಹತ್ವದ ವಿಮಾನ ಸೇವೆಯನ್ನು ಜಂಟಿಯಾಗಿ ಘೋಷಿಸಿದ್ದರು. ಉಭಯ ದೇಶಗಳ ಪ್ರಜೆಗಳಿಗೆ ಈಗಾಗಲೇ ಪರಸ್ಪರ ವೀಸಾ-ಮುಕ್ತ ಪ್ರಯಾಣ ಹಾಗೂ ಇ-ವೀಸಾ ಸೌಲಭ್ಯ ಲಭ್ಯವಿರುವುದರಿಂದ, ಈ ನೂತನ ನೇರ ವಿಮಾನ ಸಂಪರ್ಕವು ಭಾರತ ಮತ್ತು ಮಂಗೋಲಿಯಾ ನಡುವಿನ ಸ್ನೇಹ ಹಾಗೂ ಆರ್ಥಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.


More Stories
ಸಮಗ್ರ ಸಾರಿಗೆ ಪ್ರಾಧಿಕಾರ ಸ್ಥಾಪನೆ
ದೇಶದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಕ್ರಾಂತಿ: ಗಂಟೆಗಟ್ಟಲೆ ಪ್ರಯಾಣದ ಅವಧಿ ನಿಮಿಷಗಳಿಗೆ ಕಡಿತ
ರೈತ ಪ್ರಾಣ ಕಾಪಾಡಿದರೆ, ನೇಕಾರ ಮಾನ ಕಾಪಾಡುತ್ತಾನೆ.