October 12, 2026

Hampi times

Kannada News Portal from Vijayanagara

ಭಾರತ-ಯುಎಇ ದ್ವಿಪಕ್ಷೀಯ ವ್ಯಾಪಾರ ದಾಖಲೆ

ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳನ್ನು ಬಲಪಡಿಸಿಕೊಳ್ಳುವುದು ದೇಶದ ಆರ್ಥಿಕ ಪ್ರಗತಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಅತ್ಯಂತ ನಿರ್ಣಾಯಕವಾಗಿದೆ.

ಭಾರತ ಮತ್ತು ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ನಡುವಿನ ದ್ವಿಪಕ್ಷೀಯ ವ್ಯಾಪಾರವು 2025-26ರ ಆರ್ಥಿಕ ವರ್ಷದಲ್ಲಿ ದಾಖಲೆಯ 101.25 ಶತಕೋಟಿ ಡಾಲರ್‌ಗೆ ತಲುಪಿದೆ. ಮುಂಬೈನಲ್ಲಿ ನಡೆದ ಹೂಡಿಕೆಗಳ ಮೇಲಿನ ಭಾರತ-ಯುಎಇ ಉನ್ನತ ಮಟ್ಟದ ಜಂಟಿ ಕಾರ್ಯಪಡೆಯ 14ನೇ ಸಭೆಯಲ್ಲಿ ಈ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯ ಜಂಟಿ ಅಧ್ಯಕ್ಷತೆಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ವ್ಯವಸ್ಥಾಪಕ ನಿರ್ದೇಶಕ ಶೇಖ್ ಹಮೀದ್ ಬಿನ್ ಜಾಯೆದ್ ಅಲ್ ನಹ್ಯಾನ್ ವಹಿಸಿದ್ದರು.

ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಅಡಿಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರವು ದುಪ್ಪಟ್ಟಾಗಿದ್ದು, 2032ರ ವೇಳೆಗೆ ಇದನ್ನು 200 ಶತಕೋಟಿ ಡಾಲರ್‌ಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಒಡಿಶಾದಲ್ಲಿ ಉದ್ದೇಶಿತ 11.5 ಶತಕೋಟಿ ಡಾಲರ್ ವೆಚ್ಚದ ಸಮಗ್ರ ಅಲ್ಯೂಮಿನಿಯಂ ಸಂಕೀರ್ಣ, ಗುಜರಾತ್‌ನ ಆಹಾರ ಪಾರ್ಕ್ ಮತ್ತು ಧೋಲೆರಾದಲ್ಲಿ ವಾಯುಯಾನ ಹಾಗೂ ಲಾಜಿಸ್ಟಿಕ್ಸ್ ಹಬ್ ಸ್ಥಾಪನೆಯ ಯೋಜನೆಗಳ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದವು. ಇದೇ ವೇಳೆ ಭಾರತದ ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಎಮಿರೇಟ್ಸ್ ಎನ್‌ಬಿಡಿ ಮಾಡಿರುವ ಮೂರು ಶತಕೋಟಿ ಡಾಲರ್ ಹೂಡಿಕೆಯನ್ನು ಜಂಟಿ ಕಾರ್ಯಪಡೆ ಸ್ವಾಗತಿಸಿದೆ.

ವ್ಯಾಪಾರ ವಹಿವಾಟುಗಳನ್ನು ಪರಸ್ಪರರ ಸ್ಥಳೀಯ ಕರೆನ್ಸಿಗಳಲ್ಲಿ ಇತ್ಯರ್ಥಪಡಿಸುವುದು, ಡಿಜಿಟಲ್ ಪಾವತಿ ವ್ಯವಸ್ಥೆಗಳ ಸಮನ್ವಯ ಹಾಗೂ ಯುಪಿಐ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ಸಮ್ಮತಿಸಲಾಯಿತು. ಆಹಾರ ಸಂಸ್ಕರಣಾ ವಲಯದಲ್ಲಿನ ಈ ಬಾಂಧವ್ಯವು ಭಾರತೀಯ ಕೃಷಿಕರಿಗೆ ಸುಭದ್ರ ಮಾರುಕಟ್ಟೆ ಒದಗಿಸಲಿದ್ದು, ಯುವಕರು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಜತೆಗೆ, ಹಡಗು ನಿರ್ಮಾಣ, ಇಂಧನ ಭದ್ರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಇನ್ನಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದೆ.

Please follow and like us:

 

 

Translate »
[t4b-ticker]