https://youtu.be/NHc6OMSu0K4?si=SI_K4goOPEgwo6h2



ನವದೆಹಲಿ: ದೇಶದ ಗ್ರಾಮೀಣ ಭಾಗದ ಬಡ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಉದ್ದೇಶದಿಂದ ಮುಂದಿನ ತಿಂಗಳಿಂದ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 70,000 ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರದ ಪ್ರಾಯೋಜಿತ ಮಹತ್ವಾಕಾಂಕ್ಷೆಯ ‘ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ’ (DDU-GKY) 2.0 ಅಡಿಯಲ್ಲಿ ಈ ತರಬೇತಿ ಕಾರ್ಯಕ್ರಮ ಜಾರಿಯಾಗಲಿದೆ. ಗ್ರಾಮೀಣ ಭಾಗದ ಬಡ ಯುವಜನರಿಗೆ ವೃತ್ತಿಪರ ಕೌಶಲ್ಯಗಳನ್ನು ಕಲಿಸಿ, ನೇರವಾಗಿ ಉದ್ಯೋಗ ದೊರಕಿಸಿಕೊಡುವ (ಪ್ಲೇಸ್‌ಮೆಂಟ್ ಲಿಂಕ್ಡ್) ಗುರಿಯನ್ನು ಈ ಯೋಜನೆ ಹೊಂದಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಯಾ ವೃತ್ತಿಪರ ವಿಭಾಗಗಳಿಗೆ ಅನುಗುಣವಾಗಿ ಕನಿಷ್ಠ 3 ತಿಂಗಳಿಂದ ಗರಿಷ್ಠ 12 ತಿಂಗಳವರೆಗೆ ಗುಣಮಟ್ಟದ ತರಬೇತಿ ನೀಡಲಾಗುತ್ತದೆ.
ಈ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿರುವ ಒಟ್ಟು 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಎರಡು ವರ್ಷಗಳ ಅವಧಿಗಾಗಿ ಒಟ್ಟಾರೆಯಾಗಿ 9 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ. ಗ್ರಾಮೀಣ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿಗೆ ವೇಗ ನೀಡಿ, ನಿರುದ್ಯೋಗ ನಿವಾರಿಸಿ ಯುವಜನರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಈ ಕ್ರಮ ಸಹಕಾರಿಯಾಗಲಿದೆ.


More Stories
ಭಾರತಕ್ಕೆ ಶೇ. 7.8 ಬೆಳವಣಿಗೆ
ಸೆ.27ರ ಭಾನುವಾರ ಬ್ಯಾಂಕ್ಗಳು ತೆರೆದಿರುತ್ತವೆ: ಹಣಕಾಸು ಸಚಿವಾಲಯ
ಪಳೆಯುಳಿಕೆಯೇತರ ವಿದ್ಯುತ್ ಸಾಮರ್ಥ್ಯ ಹೆಚ್ಚಳ