https://youtu.be/NHc6OMSu0K4?si=SI_K4goOPEgwo6h2



ಅದು 1885 ರ ಕಾಲ ಫಿಲಡಲ್ಫಿಯದಲ್ಲಿ ತೆಗೆದ ಆ ಚಿತ್ರದಲ್ಲಿ ಆ ಮೂರು ಜನ ಮಹಿಳಾ ವೈದ್ಯರು ಪರಸ್ಪರ ಭುಜಕ್ಕೆ ಆತುಕೊಂಡು ಪೋಸು ಕೊಟ್ಟಿದ್ದರು. ಭಾರತದಿಂದ ವಿದೇಶಕ್ಕೆ ಪ್ರಯಾಣ ಮಾಡಿದ ಭಾರತದ ಮೊಟ್ಟ ಮೊದಲ ಮಹಿಳಾ ವೈದ್ಯೆ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡ ಆನಂದಿಬಾಯಿ ಜೋಶಿ ಅವರಲ್ಲಿ ಒಬ್ಬರು. ಯಾವೊಬ್ಬ ತಾಯಿಯೂ ಕೂಡ ಭರಿಸಲಾರದ ಯಾತನೆಯನ್ನು ಆಕೆ ಹೊತ್ತು ದೂರದ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಳು.
ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಹುಟ್ಟಿದ ಪುಟ್ಟ ಮಗುವನ್ನು ಕಂಕುಳಲ್ಲಿ ಹೊತ್ತು ಆಕೆ ಅತ್ಯಂತ ಆರ್ತಳಾಗಿ ವೈದ್ಯಕೀಯ ಚಿಕಿತ್ಸೆಗೆ ಹಾತೊರೆದಿದ್ದಳು… ಆದರೆ ಅಂದಿನ ದಿನಮಾನದಲ್ಲಿ ಹೆಣ್ಣು ಮಕ್ಕಳಿಗೆ ಚಿಕಿತ್ಸೆ ನೀಡಲು ಆಕೆ ವಾಸಿಸುತ್ತಿದ್ದ ಭಾಗದಲ್ಲಿ ಯಾರೂ ತಯಾರಿರಲಿಲ್ಲ. ಹಾಗೆ ತನ್ನ ಮಗುವನ್ನು ಆಕೆ ಕಳೆದುಕೊಂಡದ್ದೆ ಮುಂದೆ ಆಕೆಯ ಬದುಕಿನ ಇಂಧನವಾಗಿ ಪರಿಣಮಿಸಿತು. ತನ್ನ ಪರಿಸ್ಥಿತಿ ಮತ್ತಾವ ಮಹಿಳೆಗೂ ಬರಬಾರದು, ಯಾವೊಬ್ಬ ತಾಯಿಯು ತನ್ನ ಮಗುವಿನ ರಕ್ಷಣೆಗೆ ಕಣ್ಣೀರಿಡಬಾರದು ಎಂಬುದು ಆಕೆಯ ನಿಲುವಾಗಿತ್ತು. ಆ ಕಾರಣಕ್ಕಾಗಿ ಸಮುದ್ರ ದಾಟಿ ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯುವ ಆಶಯವನ್ನು ಹೊತ್ತು ಆಕೆ ಫಿಲಡೆಲ್ಫಿಯಾಗೆ ಬಂದಿದ್ದಳು.
ಆಕೆಯ ಪಕ್ಕದಲ್ಲಿ ಇದ್ದ ಇನ್ನೊಬ್ಬಾಕೆ ಒಕಾಮಿ ಎಂಬ ಜಪಾನೀ ಮಹಿಳೆ… ಕೇವಲ ವೈದ್ಯಕೀಯವನ್ನು ಓದುವುದು ಆಕೆಯ ಆಶಯವಾಗಿರಲಿಲ್ಲ ಬದಲಾಗಿ ಹೆಣ್ಣು ಮಕ್ಕಳು ಕೂಡ ಅಷ್ಟೇ ನುರಿತ ಶಸ್ತ್ರಚಿಕಿತ್ಸಕರಾಗಬಲ್ಲರು ಎಂಬುದನ್ನು ಸಿದ್ಧಮಾಡುವ ಆಶಯವನ್ನು ಹೊತ್ತು ಆಕೆ ಅಲ್ಲಿಗೆ ಬಂದಿದ್ದಳು.
ಇವರ ಜೊತೆಗೆ ಇದ್ದಾಕೆ ಸಿರಿಯ ದೇಶದ ಸಭಾತ್ ಇಸ್ಲಾಂ ಬೌಲಿ ತನ್ನ ದೇಶಕ್ಕೆ ಆಧುನಿಕ ವೈದ್ಯಕೀಯ ಜ್ಞಾನವನ್ನು ಹೊತ್ತೊಯ್ಯಲು ಬಂದಾಕೆ.
ಮಹಿಳೆಯರಿಗಾಗಿಯೇ ಪೆನ್ಸಿಲ್ವೇನಿಯದಲ್ಲಿ ಇದ್ದ ವೈದ್ಯಕೀಯ ಕಾಲೇಜು ಅವರ ಯುದ್ಧ ಭೂಮಿಯಾಗಿತ್ತು…. ಕಾರಣ ಅಮೆರಿಕಾದಂತಹ ಮುಂದುವರೆದ ದೇಶದಲ್ಲಿಯೂ ಕೂಡ ಹೆಣ್ಣು ಮಕ್ಕಳು ಅತ್ಯಂತ ಜಾಣ್ಮೆಯನ್ನು ಬಯಸುವ ವೈದ್ಯಕೀಯ ವೃತ್ತಿಯನ್ನು ಓದುವ ಸಾಮರ್ಥ್ಯ ಹೆಣ್ಣು ಮಕ್ಕಳಲ್ಲಿ ಇದೆಯೇ? ಎಂದು ಚರ್ಚಿಸುತ್ತಿದ್ದ ಕಾಲದಲ್ಲಿ ಈ ಮೂರು ಜನ ಹೆಣ್ಣು ಮಕ್ಕಳು ಅಲ್ಲಿಯ ವೈದ್ಯಕೀಯ ಕಾಲೇಜಿನಲ್ಲಿ ಕಾಪಿಟ್ಟ ಶವಗಳನ್ನು ವೈದ್ಯಕೀಯ ವಿಧಾನದಂತೆ ಕತ್ತರಿಸಿ ದೇಹದ ವಿವಿಧ ಭಾಗಗಳನ್ನು ಗುರುತಿಸಲು ಆರಂಭಿಸಿದ್ದರು. ಶಸ್ತ್ರಚಿಕಿತ್ಸೆಯ ಎಲ್ಲ ತಂತ್ರಗಳನ್ನು ಕಲಿಯುತ್ತಲೇ ಕರಗತ ಮಾಡಿಕೊಂಡಿದ್ದರು. ತಮ್ಮ ದೇಶದ ಸಾಂಪ್ರದಾಯಿಕ ಉಡುಪಿನಲ್ಲಿಯೇ ಶರೀರ ರಚನಾ ಶಾಸ್ತ್ರದಲ್ಲಿ ಪಾರಂಗತರಾಗಿದ್ದರು.
ಅಲ್ಲಿನ ಉಳಿದ ವಿದ್ಯಾರ್ಥಿಗಳ ಪಾಲಿಗೆ ಅವರು ಪರದೇಶದಿಂದ ಬಂದವರು…. ಅದರಲ್ಲೂ ಮಹಿಳೆಯರಾಗಿ ವೈದ್ಯಕೀಯ ಕಲಿಯಲು ಬಂದವರು ಎಂಬ ಅಸಡ್ಡೆ ಇತ್ತು. ಅವರೆಲ್ಲರ ಮುಂದೆ ಪದವಿ ಪಡೆಯುವುದು ಇವರಿಗೆ ಯಾವುದೇ ವಿಜಯೋತ್ಸವಕ್ಕೆ ಕಡಿಮೆಯಾಗಿರಲಿಲ್ಲ. ಬದಲಾಗಿ ಪದವಿ ಎಂಬುದು ಈ ಮೂರು ಜನ ವೈದ್ಯರಿಗೆ ಮೂರು ವಿಭಿನ್ನ ರೇಖೆಗಳ, ಮೂರು ವಿಭಿನ್ನ ವಿಧಿಗಳ ಹಾದಿಯನ್ನು ತೋರುವ ಆರಂಭಿಕ ಗೆರೆಯಾಗಿತ್ತು.

ಡಾಕ್ಟರ್ ಆನಂದಿಬಾಯಿ ಜೋಶಿಯವರ ಕಥೆ ಕೇಳಿದರೆ ಹೃದಯ ಹಿಂಡಿದಂತಾಗಬಹುದು. ಭಾರತದ ಮೊಟ್ಟ ಮೊದಲ ತಜ್ಞ ವೈದ್ಯರಾಗಿ ಆಕೆ ವಿದೇಶದಿಂದ ತನ್ನ ಬದುಕಿನ ಉದ್ದೇಶವನ್ನು ಪೂರೈಸಲು ಮರಳಿದರು…. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಆಕೆಗೆ ಟಿ ಬಿ ಎಂಬ ಕ್ಷಯದ ಮಾರಿ ಜೊತೆಯಾಗಿತ್ತು. ತನ್ನ ಕನಸನ್ನು ಸಾಕಾರಗೊಳಿಸುವ ವೈದ್ಯಕೀಯ ವೃತ್ತಿಯನ್ನು ಆರಂಭಿಸುವ ಮುನ್ನವೇ ಆಕೆ ತನ್ನ 21ನೇ ವಯಸ್ಸಿನಲ್ಲಿ ತೀವ್ರ ಕ್ಷಯ ರೋಗಕ್ಕೆ ಬಲಿಯಾದಳು.
ಒಕಾಮಿ ತನ್ನ ದೇಶ ಜಪಾನ್ ಗೆ ಮರಳಿದಳು.ತನ್ನ ದೇಶದ ಒಂದಿಡೀ ಹೆರಿಗೆ ಇಲಾಖೆಯನ್ನು ಆಕೆ ಮುನ್ನಡೆಸಿದಳು. ಬದುಕಿನಲ್ಲಿ ತಾನು ಏನಾಗಬೇಕೆಂದು ಬಯಸಿದ್ದಳೋ ಅದನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳಲು ಆಕೆಗೆ ಸಾಧ್ಯವಾಯಿತು…. ಆದರೆ ಜಪಾನ್ ದೇಶದ ಚಕ್ರವರ್ತಿ ಆಕೆಯನ್ನು ಭೇಟಿಯಾಗಲು ನಿರಾಕರಿಸಿದ. ಕಾರಣವೇನು ಗೊತ್ತೆ?… ಆಕೆ ಮಹಿಳೆ ಎಂಬ ಏಕೈಕ ಕಾರಣಕ್ಕೆ ಆತ ಆಕೆಯನ್ನು ಭೇಟಿಯಾಗಲು ಒಪ್ಪಲಿಲ್ಲ. ಆಕೆಯ ವಿರುದ್ಧದ ಎಲ್ಲಾ ಪ್ರತಿಭಟನೆಗಳ ವಿರುದ್ಧ ಆಕೆ ಯಾವುದೇ ರಾಜಿಗೊಳಗಾಗದೆ ತನ್ನ ಆತ್ಮ ಗೌರವವನ್ನು ಕಾಯ್ದುಕೊಂಡಳು.
ಸಿರಿಯಾದ ಇಸ್ಲಾಂ ಬೌಲಿ… ತನ್ನ ಬದುಕಿನದ್ದಕ್ಕೂ ವೈದ್ಯಕೀಯ ಸೇವೆ ಸಲ್ಲಿಸಿದಳು. ಆಟೋಮನ್ ಸಾಮ್ರಾಜ್ಯದ ಎಲ್ಲಾ ಕಡೆ ಆಕೆ ತಿರುಗಾಡಿ ಚಿಕಿತ್ಸೆ ನೀಡಿದಳು. ದಮಾಸ್ಕಸ್ ನಿಂದ ಕೈರೋದವರೆಗೆ ಆಕೆ ಹಲವಾರು ದಶಕಗಳ ಕಾಲ ಜನರ ರೋಗಗಳಿಗೆ ಚಿಕಿತ್ಸೆ ನೀಡುತ್ತಾ ಸಾವಿರಾರು ಜನರನ್ನು ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡಿದಳು. 1941ರವರೆಗೆ ಆಕೆ ನುರಿತ ತಜ್ಞ ವೈದ್ಯೆಯಾಗಿ ಕಾರ್ಯನಿರ್ವಹಿಸಿದಳು.
ಮೂರು ಜನ ಮಹಿಳೆಯರು, ಮೂರು ವಿಭಿನ್ನ ಖಂಡಗಳು, ಮೂರು ವಿಭಿನ್ನ ಸಾಂಪ್ರದಾಯಿಕ ಹಿನ್ನೆಲೆಯ ಬದುಕಿನ ಯುವತಿಯರು ….ಆದರೆ ಮೂವರ ಉದ್ದೇಶ ಒಂದೇ ಆಗಿತ್ತು. ಆ ಮೂವರನ್ನು ಕೇವಲ ಒಂದು ಫ್ರೇಮ್ ನಲ್ಲಿ ಹಿಡಿದಿಟ್ಟ ಅತ್ಯಂತ ವಿರಳವಾದ ಚಿತ್ರ ಅವರ ಬದುಕಿನ ಕಥೆಯನ್ನು ಹೇಳುತ್ತದೆ… ಆ ಮೂರು ಜನ ಮಹಿಳೆಯರು ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದು ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕು ನೀಡುವ ಮುನ್ನವೇ, ಹೆಣ್ಣು ಮಕ್ಕಳನ್ನು ಈ ಜಗತ್ತು ನಂಬುವ ಮುನ್ನವೇ ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಡ್ರೆಕ್ಸೆಲ್ ವಿಶ್ವವಿದ್ಯಾಲಯದವರು ಬಿಡುಗಡೆ ಮಾಡಿದ ಈ ಚಿತ್ರ ಆ ಮೂವರು ಮಹಿಳೆಯರ ಅಸೀಮ ಸಾಧನೆಯ
ಹೆಜ್ಜೆ ಗುರುತುಗಳ ದಾಖಲೆಯಾಗಿದೆ ಎಂದರೆ ತಪ್ಪಿಲ್ಲ.



More Stories
ಮಲೇಷ್ಯಾದಲ್ಲಿ ಕೆಲಸ: ಹೈಕಮಿಷನ್ ಎಚ್ಚರಿಕೆ
ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ