November 22, 2026

Hampi times

Kannada News Portal from Vijayanagara

ಗ್ರಾಮೀಣ ಬದುಕಿನ ತಲ್ಲಣಗಳು

ಭಾರತ ದೇಶವು ಹಳ್ಳಿಗಳಿಂದ ಕೂಡಿದ ದೇಶ. ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ವೈವಿಧ್ಯಮಯ ಬದುಕು, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ಈ ನೆಲದ ಸೊಗಡು, ಜನರ ಆತ್ಮೀಯತೆ ಹಾಗೂ ಶ್ರಮದ ಸಂಸ್ಕೃತಿಯಿಂದಲೇ ಭಾರತೀಯ ಜೀವನದ ಬೇರುಗಳು ಗಟ್ಟಿಯಾಗಿ ನೆಲೆಯೂರಿವೆ. ದೇಶಕ್ಕೆ ಅನ್ನ ನೀಡುವ ಕೈಗಳು ಗ್ರಾಮೀಣ ಜನರವು. ಮಹಾನಗರಗಳ ಹೊಟ್ಟೆ ತುಂಬಿಸುವುದರ ಹಿಂದೆ ಅವರ ಪರಿಶ್ರಮವೇ ಅಡಗಿದೆ. ಆದರೆ, ಇಂತಹ ಅನ್ನದಾತರ ಬದುಕು ಇಂದು ಆಧುನಿಕತೆ ಮತ್ತು ಜಾಗತೀಕರಣದ ಬದಲಾವಣೆಗಳ ನಡುವೆ ತತ್ತರಿಸುತ್ತಿದೆ. ಯುವಜನತೆ ನಗರ ಜೀವನಶೈಲಿಗೆ ಆಕರ್ಷಿತರಾಗಿ ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದು ಕೃಷಿ ಸಂಸ್ಕೃತಿಯ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ, ಗ್ರಾಮೀಣ ಬದುಕಿನ ಸಂಕಷ್ಟವು ಕೇವಲ ಹಳ್ಳಿಗಳ ಸಮಸ್ಯೆಯಾಗದೆ, ದೇಶದ ಭವಿಷ್ಯದ ಕುರಿತು ಚಿಂತಿಸುವಂತೆ ಮಾಡುವ ಗಂಭೀರ ವಿಚಾರವಾಗಿದೆ.
ಹಳ್ಳಿ ಎಂದಾಕ್ಷಣ ನಮ್ಮ ಕಣ್ಣಮುಂದೆ ಮೂಡುವುದು ಅಲ್ಲಿನ ಜನರ ಕಸುಬು, ಆಚರಣೆಗಳು, ಆತ್ಮೀಯ ಸಂಬಂಧಗಳು, ಆಡಂಬರವಿಲ್ಲದ ಜೀವನ, ತೃಪ್ತಿ, ಸ್ವಾವಲಂಬನೆ, ವಸ್ತು ವಿನಿಮಯ ಪದ್ಧತಿ, ಸಾಕುಪ್ರಾಣಿಗಳ ಒಡನಾಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸೊಬಗು. ಇವೆಲ್ಲವೂ ಗ್ರಾಮೀಣ ಬದುಕಿನ ಸರಳತೆ ಮತ್ತು ವೈಶಿಷ್ಟ್ಯವನ್ನು ಸಾರುತ್ತವೆ. ಹಳ್ಳಿಗಳು ಕೇವಲ ವಾಸಸ್ಥಳಗಳಲ್ಲ; ಅವು ನಮ್ಮ ಸಂಸ್ಕೃತಿಯ ತೊಟ್ಟಿಲುಗಳು. ಅಲ್ಲಿನ ಮಣ್ಣಿನ ವಾಸನೆ, ಜನರ ಆತ್ಮೀಯತೆ ಮತ್ತು ಬದುಕಿನ ಸಹಜತೆ ಭಾರತೀಯ ಸಂಸ್ಕೃತಿಯ ಜೀವಂತ ಪ್ರತಿಬಿಂಬಗಳಾಗಿವೆ. ತಲೆಮಾರುಗಳಿಂದ ಹರಿದುಬಂದ ಈ ಪರಂಪರೆ ನಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದೆ.
ಇಂದು ದೇಶವು ತಾಂತ್ರಿಕವಾಗಿ ಎಷ್ಟೇ ಉನ್ನತ ಮಟ್ಟಕ್ಕೇರಿದರೂ, ಅನ್ನ ಮಾತ್ರ ಮಣ್ಣಿನಿಂದಲೇ ಬರಬೇಕು. ಯಾವ ತಂತ್ರಜ್ಞಾನವೂ ಮಣ್ಣಿನ ಮಹತ್ವವನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ. ಆದರೂ ದೇಶದ ಅನೇಕ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಳ್ಳುತ್ತಿವೆ. ಕಾರ್ಮಿಕರ ಕೊರತೆ, ಸಕಾಲಕ್ಕೆ ಮಳೆ ಬಾರದಿರುವುದು, ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಸಮಸ್ಯೆಗಳು ರೈತರ ಬದುಕನ್ನು ಕಂಗೆಡಿಸುತ್ತಿವೆ. ಒಂದು ವರ್ಷ ಅತಿಯಾದ ಮಳೆಯಾದರೆ ಮತ್ತೊಂದು ವರ್ಷ ಮಳೆಯ ಕೊರತೆ ಎದುರಾಗುತ್ತದೆ. ಪ್ರಕೃತಿಯ ಈ ಏರುಪೇರುಗಳು ಅನ್ನದಾತನನ್ನು ನಿರಂತರ ಚಿಂತೆಯಲ್ಲಿ ಮುಳುಗಿಸುತ್ತಿವೆ.
ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಇಳುವರಿಯ ಮೇಲೂ ಪರಿಣಾಮ ಬೀರುತ್ತಿದೆ. ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ ಬೆಳೆದ ಬೆಳೆಗೆ ಮಾತ್ರ ತಕ್ಕ ಬೆಲೆ ದೊರೆಯದೆ ರೈತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಉತ್ಪಾದನಾ ವೆಚ್ಚ ಹೆಚ್ಚಿ, ಆದಾಯ ಕಡಿಮೆಯಾಗುತ್ತಿರುವುದು ಜನರು ಕೃಷಿಯಿಂದ ವಿಮುಖರಾಗಲು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳ ಕೊರತೆಯೂ ಯುವಜನತೆಯನ್ನು ನಗರಗಳತ್ತ ಸೆಳೆಯುತ್ತಿದೆ.
ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅನಿವಾರ್ಯತೆಯಿಂದ ಯುವಕರು ನಗರಗಳತ್ತ ವಲಸೆ ಹೋಗುತ್ತಿರುವಂತೆ, ಅನೇಕ ಹಳ್ಳಿಗಳು ನಿಧಾನವಾಗಿ ವೃದ್ಧರ ಬೀಡುಗಳಾಗುತ್ತಿವೆ. ಒಮ್ಮೆ ಮಕ್ಕಳ ನಗು, ಜಾನುವಾರುಗಳ ಕೂಗು ಮತ್ತು ಕೃಷಿ ಚಟುವಟಿಕೆಗಳಿಂದ ಕಂಗೊಳಿಸುತ್ತಿದ್ದ ಊರುಗಳು ಇಂದು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತಿರುವ ದೃಶ್ಯ ಮನಕಲಕುತ್ತದೆ. ಕೆಲವರು ತಮ್ಮ ಜಮೀನುಗಳನ್ನು ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವರು ಕೃಷಿಭೂಮಿಯನ್ನು ಲೇಔಟ್‌ಗಳಾಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಕೃಷಿಭೂಮಿ ಕ್ಷೀಣಿಸುತ್ತಿದ್ದು, ಭವಿಷ್ಯದ ಅನ್ನಭದ್ರತೆಯೇ ಪ್ರಶ್ನಾರ್ಹವಾಗುತ್ತಿದೆ.
ಗ್ರಾಮೀಣ ಬದುಕಿನ ಮತ್ತೊಂದು ದೊಡ್ಡ ಸವಾಲು ಪರಿಸರದ ಅಸಮತೋಲನ. ಮನುಷ್ಯನ ಅತಿಯಾದ ದುರಾಸೆ ಮತ್ತು ಪ್ರಕೃತಿಯ ಮೇಲಿನ ನಿರ್ಲಕ್ಷ್ಯದಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಅರಣ್ಯನಾಶ, ನೀರಿನ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಅನಿಯಮಿತ ಮಳೆಯಂತಹ ಸಮಸ್ಯೆಗಳು ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತಿವೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕಾದ ಮನುಷ್ಯನೇ ಅದರ ಮೇಲೆ ನಿರಂತರ ಒತ್ತಡ ಹೇರುತ್ತಿರುವುದು ಭವಿಷ್ಯದ ಪೀಳಿಗೆಗಳಿಗೆ ಅಪಾಯದ ಮುನ್ಸೂಚನೆಯಾಗಿದೆ.
ಸರ್ಕಾರಗಳು ಗ್ರಾಮೀಣ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಮತ್ತು ಭರವಸೆಗಳನ್ನು ನೀಡುತ್ತಿವೆ. ಆದರೆ ಅವು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಯಾದಾಗ ಮಾತ್ರ ನಿರೀಕ್ಷಿತ ಬದಲಾವಣೆ ಸಾಧ್ಯ. ಸ್ಥಳೀಯ ಮಟ್ಟದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ಕೃಷಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಿ, ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕುವಂತೆ ಮಾಡಬೇಕು. ರೈತರಿಗೆ ಮಾರುಕಟ್ಟೆ, ನೀರಾವರಿ, ಸಂಗ್ರಹಣಾ ಸೌಲಭ್ಯ ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ನೆರವು ದೊರೆತರೆ ಕೃಷಿಯನ್ನು ಮತ್ತಷ್ಟು ಲಾಭದಾಯಕವಾಗಿಸಬಹುದು.
“ಭಾರತದ ಆತ್ಮ ಇರುವುದು ಹಳ್ಳಿಗಳಲ್ಲಿ” ಎಂಬುದು ಮಹಾತ್ಮ ಗಾಂಧೀಜಿಯವರ ಬಲವಾದ ನಂಬಿಕೆಯಾಗಿತ್ತು. ದೇಶದ ನಿಜವಾದ ಪ್ರಗತಿಯು ಕೇವಲ ನಗರಗಳ ಕೈಗಾರಿಕೀಕರಣದಲ್ಲಿಲ್ಲ; ಗ್ರಾಮೀಣ ಬದುಕಿನ ಸಬಲೀಕರಣದಲ್ಲಿದೆ ಎಂದು ಅವರು ಪ್ರತಿಪಾದಿಸಿದರು. ಹಳ್ಳಿಗಳ ಅಭಿವೃದ್ಧಿಗೆ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿದ ಉದ್ಯೋಗಗಳಿಗೆ ಆದ್ಯತೆ ನೀಡಬೇಕು. ಕೃಷಿಯ ಜೊತೆಗೆ ಹೈನುಗಾರಿಕೆ, ಕರಕುಶಲ, ಸಣ್ಣ ಕೈಗಾರಿಕೆಗಳು ಹಾಗೂ ಕೌಶಲ್ಯಾಧಾರಿತ ಉದ್ಯೋಗಗಳಿಗೆ ಉತ್ತೇಜನ ನೀಡಿದಾಗ ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ. ಹಳ್ಳಿಗಳಲ್ಲಿಯೇ ಬದುಕು ಕಟ್ಟಿಕೊಳ್ಳುವ ಅವಕಾಶಗಳು ದೊರೆತಾಗ ಜನರು ತಮ್ಮ ನೆಲದೊಂದಿಗೆ ಬೆಸೆದುಕೊಂಡು, ದೇಶದ ಸಮಗ್ರ ಪ್ರಗತಿಗೆ ಕೊಡುಗೆ ನೀಡಬಲ್ಲರು.
ಆಧುನಿಕತೆಯ ಕಾಲದ ಒತ್ತಡಕ್ಕೆ ಸಿಲುಕಿ ಬಳಲುತ್ತಿರುವ ಹಳ್ಳಿಗಳ ಬದುಕಿಗೆ ಹೊಸ ಚೈತನ್ಯ ತುಂಬಬೇಕಿದೆ. ಕೃಷಿಯನ್ನು ಕೇವಲ ಜೀವನೋಪಾಯವಲ್ಲ, ಗೌರವಯುತ ಮತ್ತು ಭದ್ರವಾದ ವೃತ್ತಿಯನ್ನಾಗಿ ರೂಪಿಸಬೇಕು. ಯುವಜನತೆ ತಮ್ಮ ನೆಲದಲ್ಲಿಯೇ ಭವಿಷ್ಯವನ್ನು ಕಟ್ಟಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಬೇಕು. ರೈತರ ಪರಿಶ್ರಮಕ್ಕೆ ಗೌರವ, ಕೃಷಿಗೆ ಭದ್ರತೆ, ಗ್ರಾಮೀಣ ಯುವಕರಿಗೆ ಉದ್ಯೋಗ ಮತ್ತು ಹಳ್ಳಿಗಳಿಗೆ ಅಗತ್ಯ ಸೌಲಭ್ಯಗಳು ದೊರೆತಾಗ ಮಾತ್ರ ಗ್ರಾಮೀಣ ಬದುಕು ಮತ್ತೆ ಸಮೃದ್ಧಿಯ ಹಾದಿಗೆ ಮರಳಬಹುದು.
ಗ್ರಾಮೀಣ ಬದುಕಿನ ತಲ್ಲಣಗಳನ್ನು ನಿವಾರಿಸುವುದು ಕೇವಲ ರೈತರ ಜವಾಬ್ದಾರಿಯಲ್ಲ; ಅದು ಇಡೀ ಸಮಾಜದ ಕರ್ತವ್ಯ. ಏಕೆಂದರೆ ಹಳ್ಳಿಗಳು ಉಳಿದಾಗ ಕೃಷಿ ಉಳಿಯುತ್ತದೆ; ಕೃಷಿ ಉಳಿದಾಗ ಅನ್ನದ ಭದ್ರತೆ ಉಳಿಯುತ್ತದೆ; ಅನ್ನದ ಭದ್ರತೆ ಉಳಿದಾಗ ದೇಶದ ಭವಿಷ್ಯ ಸುರಕ್ಷಿತವಾಗಿರುತ್ತದೆ. ಆದ್ದರಿಂದ ಗ್ರಾಮೀಣ ಬದುಕನ್ನು ಉಳಿಸಿ ಬೆಳೆಸುವುದು ಎಂದರೆ ಕೇವಲ ಹಳ್ಳಿಗಳನ್ನು ಸಂರಕ್ಷಿಸುವುದಲ್ಲ, ಭಾರತದ ಆತ್ಮವನ್ನೇ ಸಂರಕ್ಷಿಸುವುದು.
ಅಂಜಿನಪ್ಪ ಡಿ., ಉಪನ್ಯಾಸಕರು ಕೊಟ್ಟೂರು 
Please follow and like us: