https://youtu.be/NHc6OMSu0K4?si=SI_K4goOPEgwo6h2



ನಮ್ಮ ಮನದಲ್ಲಿ ಮೂಡುವ ಪ್ರತಿಯೊಂದು ಭಾವವು ಕೂಡ ಒಂದು ಅನುಭೂತಿಯನ್ನು ಉಂಟುಮಾಡುತ್ತದೆ. ಪ್ರತಿಯೊಂದು ನಕಾರಾತ್ಮಕ ಸಂದೇಶವು ನಮಗೆ ಒಂದು ಸತ್ಯವನ್ನು ಬಹಿರಂಗಪಡಿಸುತ್ತದೆ. ಆ ಸಂದೇಶದ ಭಾವನೆಯನ್ನು ಲಕ್ಷ್ಯ ಕೊಟ್ಟು ಕೇಳಬೇಕು, ಅರಿಯಬೇಕು ಮತ್ತು ಬೆಳೆಯಬೇಕು ಎಂಬುದು ಈ ಲೇಖನದ ಉದ್ದೇಶ. ಕೋಪ…..ಕೆಲವೊಮ್ಮೆ ನಮಗೆ ವಿಪರೀತ ಕೋಪ ಬರುತ್ತದೆ ಇದಕ್ಕೆ ಕಾರಣವೂ ಸ್ಪಷ್ಟ… ಮಿತಿಯನ್ನು ಮೀರಿ ಅತಿಯಾಗಿ ವರ್ತಿಸಿದಾಗ, ಅತಿಕ್ರಮಣ ಮಾಡಿದಾಗ ಕೋಪ ಬರುವುದು ಅತ್ಯಂತ ಸಹಜ.
ಈ ಕೋಪವನ್ನು ನಿಯಂತ್ರಿಸಲು ಆರೋಗ್ಯಕರ ಮಿತಿಗಳನ್ನು ಹಾಕಿಕೊಳ್ಳಬೇಕು. ಇತರರು ನಮ್ಮ ವೈಯುಕ್ತಿಕ ಪರಿಧಿಯನ್ನು ಪ್ರವೇಶಿಸದಂತೆ ಎಚ್ಚರವನ್ನು ವಹಿಸಬೇಕು. ನಾವು ಕೂಡ ಇತರರ ವೈಯುಕ್ತಿಕತೆಯನ್ನು ಗೌರವಿಸಬೇಕು.
ಭಯ…. ನಮ್ಮ ಅಸಾಮರ್ಥ್ಯವೇ ನಮ್ಮ ಭಯಕ್ಕೆ ಕಾರಣ. ನಮ್ಮ ಮನಸ್ಸು ನಮ್ಮನ್ನು ರಕ್ಷಿಸಲು ಪ್ರಯತ್ನಿಸುವುದು ಕೂಡ ಈ ಭಯಕ್ಕೆ. ನಮಗೆ ಭಯ ಹುಟ್ಟಿಸುವ ದೊಡ್ಡ ದೊಡ್ಡ ಕಾರ್ಯಗಳನ್ನು ಸಾಧಿಸುವಾಗ ಒಂದೊಂದೇ ಹಂತಗಳಲ್ಲಿ ಯಶಸ್ಸನ್ನು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅತ್ಯುತ್ತಮವಾದದನ್ನು ಕೊಟ್ಟೇ ಕೊಡುತ್ತೇವೆ ಎಂಬ ಹಠತೊಟ್ಟು ಕಾರ್ಯ ಸಾಧಿಸಬೇಕು.
ನೋವು…. ನಮ್ಮ ಮನಸ್ಸು ಮತ್ತು ಹೃದಯ ನೋವಿನಿಂದ ಒದ್ದಾಡುತ್ತದೆ. ಇದಕ್ಕೆ ಕಾರಣ ನಾವು ಬದಲಾವಣೆಯನ್ನು ಒಪ್ಪಿಕೊಳ್ಳದೆ ಇರುವುದು.ಎಂತದ್ದೇ ನೋವನ್ನು ಮಾಯಿಸುವ ಶಕ್ತಿ ಕಾಲಕ್ಕೆ ಇದೆ ಆದ್ದರಿಂದ ಕೆಲ ವಿಷಯಗಳನ್ನು ಕಾಲನ ಪರಿಧಿಗೆ ಬಿಟ್ಟುಬಿಡಬೇಕು. ಅನುಭವದಿಂದ ಪಕ್ವವಾಗಬೇಕು. ನೋವು ನಮ್ಮನ್ನು ನುಂಗಲಾಗದಷ್ಟು ಬಲಿಷ್ಠವಾದ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು. ಅವಮಾನ… ನಾವು ಪ್ರೀತಿಸುವವರ ಮೇಲಿನ ಪ್ರೀತಿಗಿಂತ ಹೆಚ್ಚು ನಮ್ಮನ್ನು ನಾವು ಕಠಿಣವಾಗಿ ನಡೆಸಿಕೊಳ್ಳುತ್ತೇವೆ.ಸಾಧ್ಯವಾದಷ್ಟು ನಮ್ಮ ವೈಯುಕ್ತಿಕ ತೊಳಲಾಟಗಳನ್ನು ಎಲ್ಲರಿಗೂ ಜಾಹೀರು ಮಾಡಬಾರದು. ಯಾರಿಗೆ ಗೊತ್ತು ನಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡ ಸ್ನೇಹಿತರಲ್ಲಿ ಈ ರೀತಿಯ ಭಾವನೆ ಇರದೆ ನಮ್ಮ ಮಾತುಗಳನ್ನು ತಮ್ಮಲ್ಲಿಯೇ ಮುಚ್ಚಿಟ್ಟುಕೊಳ್ಳದೆ ಎಲ್ಲರಿಗೂ ಹೇಳಿಬಿಡಬಹುದು. ಮುಂದೆ ಯಾವುದೋ ಒಂದು ಸಮಯದಲ್ಲಿ ಅದು ನಮಗೆ ಮುಜುಗರವನ್ನು ಉಂಟು ಮಾಡಬಹುದು ಕೂಡ.
ಅದು ನಮಗೆ ಅವಮಾನವನ್ನು ಕೂಡ ಹೊತ್ತು ತರಬಲ್ಲದು. ತಪ್ಪಿತಸ್ಥ ಭಾವನೆ… ಗೊತ್ತಿದ್ದು ಇಲ್ಲ ಗೊತ್ತಿಲ್ಲದೇ ನಾವು ತಪ್ಪಿತಸ್ಥ ಭಾವನೆಯನ್ನು ಹೊಂದಿರಬಹುದು… ಅದು ನಮ್ಮನ್ನು ಕೀಳರಿಮೆಗೆ ಒಳಪಡಿಸುತ್ತದೆ. ಅಂದುಕೊಂಡ ಸಮಯಕ್ಕೆ ಮಾಡಲಾಗದ ಕೆಲಸ, ಎಲ್ಲವನ್ನು ಮುಂದೂಡುವ ಸ್ವಭಾವ, ನಮ್ಮಿಂದಾಗಿ ಇತರರು ತೊಂದರೆಗೊಳಗಾಗುತ್ತಿದ್ದಾರೆ ಎಂಬ ಭಾವ ನಮ್ಮಲ್ಲಿನ ನೋವು ಬೇಸರಗಳಿಗೆ ಕಾರಣವಾಗಬಹುದು…. ಆದರೆ ನೆನಪಿಡಿ ಕೇವಲ ಆ ಭಾವವನ್ನು ಹೊತ್ತ ಮಾತ್ರಕ್ಕೆ ಎಲ್ಲಕ್ಕೂ ನಾವು ಮಾತ್ರವೇ ಹೊಣೆಯಲ್ಲ. ನಮ್ಮನ್ನು ನಾವು ಕ್ಷಮಿಸಿ. ತಪ್ಪನ್ನು ಒಪ್ಪಿಕೊಳ್ಳಬೇಕು.
ನಮ್ಮನ್ನು ನಾವು ತಿದ್ದಿಕೊಳ್ಳಬೇಕು ಹಾಗೂ ಹೊಸದಾಗಿ ಕಲಿಯಬೇಕು.ಪದೇ ಪದೇ, ಪುನಃ ಪುನಃ ಕಲಿಯಬೇಕು ಈ ರೀತಿಯ ನಿರಂತರ ಕಲಿಕೆಯು ನಮ್ಮಲ್ಲಿ ಹೊಂದಾಣಿಕೆಯ ಭಾವವನ್ನು ಉಂಟುಮಾಡುತ್ತದೆ.
ನಿರಾಸಕ್ತಿ… ಬಹುತೇಕ ಸಮಯ ನಮ್ಮಲ್ಲಿನ ನಿರಾಸಕ್ತಿಯು ನಮ್ಮ ಹಿನ್ನಡೆಗೆ ಕಾರಣವಾಗಿರುತ್ತದೆ. ಆಗಬೇಕಾದ ಸಮಯಕ್ಕೆ ಕೆಲಸಗಳು ಆಗುತ್ತಿದ್ದರೆ ಯಶಸ್ಸು ಸಾಧ್ಯವಾಗುತ್ತದೆ…. ಸದಾ ಮಾಡುವ ಕೆಲಸಗಳನ್ನು ಮುಂದೂಡುತ್ತ ಹೋದರೆ ವಿಳಂಬ ಪ್ರವೃತ್ತಿ ನಮ್ಮಲ್ಲಿ ಹೆಚ್ಚಾಗಿ ಕಾರ್ಯಸಿದ್ಧಿ ಆಗುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಕರಾರುವಕ್ಕಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಫಲಾಫಲಗಳು ಏನೇ ಇರಲಿ, ನಾವು ಮಾಡಿರುವ ಕೆಲಸದ ಕುರಿತು ಸ್ವತಹ ನಮಗೆ ತೃಪ್ತಿ ಇರುವಂತ ಕೆಲಸ ಮಾಡುವುದು ಒಳಿತು.
ಇತರರ ಕುರಿತು ಯೋಚಿಸುತ್ತಾ ನಮ್ಮನ್ನು ನಾವು ಬರಿದು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ನಮ್ಮ ಉತ್ಸಾಹದ ಬ್ಯಾಟರಿ ಸದಾ ಚಾರ್ಜ್ ಆಗುತ್ತಿರಲಿ… ಬಳಸಿದಷ್ಟೂ ಬಾಳಿಕೆ ಬರಲಿ.
ಆದರೆ ಸ್ನೇಹಿತರೆ ನೆನಪಿಡಿ…. ನಾವೇ ಬೇರೆ, ನಮ್ಮ ಭಾವನೆಗಳೇ ಬೇರೆ. ನಮ್ಮ ಭಾವನೆಗಳೇ ನಾವಲ್ಲ. ಅವು ನಮ್ಮ ದೇಹಕ್ಕೆ ನಮ್ಮ ಮನಸ್ಸು ಕೊಡುವ ಸೂಚನೆಗಳು ಸಂಜ್ಞೆಗಳು ಮಾತ್ರ. ಅವು ನಮ್ಮ ವ್ಯಕ್ತಿತ್ವದ ಒಂದು ಭಾಗ ಮಾತ್ರವೇ ಹೊರತು ನಮ್ಮ ಇಡೀ ವ್ಯಕ್ತಿತ್ವವಲ್ಲ.
ಆದ್ದರಿಂದ ನಮ್ಮ ಮಾನಸಿಕ ಭಾವ ಕೊಡುವ ಸೂಚನೆಗಳನ್ನು ಅನುಸರಿಸಬೇಕು. ಲಕ್ಷ ಗೊಟ್ಟು ಕೇಳಿ, ಪ್ರೀತಿಯಿಂದ ಹಾಗೂ ಆಸಕ್ತಿಯಿಂದ ಕಲಿಯಬೇಕು. ಗಾಯಗಳನ್ನು ಸೂಕ್ತ ರಕ್ಷಣೆ ಹಾಗೂ ಪೋಷಣೆಯೊಂದಿಗೆ ಕಾಪಾಡಿಕೊಳ್ಳಬೇಕು… ಕಲಿಯುವ ಮೂಲಕ ಬೆಳವಣಿಗೆಯನ್ನು ಹೊಂದಬೇಕು.
ಏನಂತೀರಾ?

Please follow and like us:


More Stories
ಅನಂತ್ನಾಗ್ಗೆ ಫಾಲ್ಕೆ ಗೌರವ ಸಮರ್ಪಣೆ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ
ವಿಡಿಯೋ ಕಾನ್ಫರೆನ್ಸ್ ಮೂಲಕ 20ನೇ ‘ರೋಜ್ಗಾರ್ ಮೇಳ’ ಯಶಸ್ವಿ ಆಯೋಜನೆ