September 20, 2026

Hampi times

Kannada News Portal from Vijayanagara

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ದಂಪತಿಗೆ ಎರಡನೇ ಹೆಣ್ಣು ಮಗು ಜನನ

https://youtu.be/NHc6OMSu0K4?si=SI_K4goOPEgwo6h2

ಬಾಲಿವುಡ್‌ನ ಜನಪ್ರಿಯ ತಾರಾಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಂಪತಿಯ ಮನೆಗೆ ಮತ್ತೊಬ್ಬ ಹೊಸ ಅತಿಥಿಯ ಆಗಮನವಾಗಿದೆ. ನಟಿ ದೀಪಿಕಾ ಪಡುಕೋಣೆ ಅವರು ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಎರಡೂ ಕುಟುಂಬಗಳಲ್ಲಿ ಸಂಭ್ರಮ ಮನೆಮಾಡಿದೆ.

ತಮಗೆ ಮಗು ಜನಿಸಿರುವ ಸಿಹಿ ಸುದ್ದಿಯನ್ನು ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ‘ಮತ್ತೊಂದು ಹೆಣ್ಣು ಮಗುವನ್ನು ನಮ್ಮ ಕುಟುಂಬಕ್ಕೆ ಪ್ರೀತಿಯಿಂದ ಸ್ವಾಗತಿಸಿದ್ದೇವೆ’ ಎಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಗಣೇಶ ಚತುರ್ಥಿ ಉತ್ಸವದಲ್ಲಿ ಇಬ್ಬರೂ ಜೊತೆಯಾಗಿ ಭಾಗವಹಿಸಿ ಸಂಭ್ರಮಿಸಿದ್ದರು.

2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಗೆ 2024ರಲ್ಲಿ ಮೊದಲ ಹೆಣ್ಣು ಮಗು ಜನಿಸಿದ್ದು, ಆಕೆಗೆ ‘ದುವಾ’ ಎಂದು ಹೆಸರಿಡಲಾಗಿತ್ತು. ಇದೀಗ ದುವಾಗೆ ಪುಟ್ಟ ತಂಗಿಯ ಆಗಮನವಾಗಿದೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ ಇದೇ ವರ್ಷ ಏಪ್ರಿಲ್‌ನಲ್ಲಿ ಅಧಿಕೃತವಾಗಿ ಸಿಹಿ ಸುದ್ದಿಯನ್ನು ಘೋಷಿಸಿದ್ದರು.

 

ದೀಪ್‌ವೀರ್ ದಂಪತಿಗೆ ಮಗು ಜನಿಸಿದ ವಿಷಯ ತಿಳಿಯುತ್ತಿದ್ದಂತೆ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಚಿತ್ರರಂಗದ ತಾರೆಯರಾದ ಸೋನಂ ಕಪೂರ್, ಕೃತಿ ಸನೋನ್, ಕೃತಿ ಕರಬಂಧ, ಸಾರಾ ಅರ್ಜುನ್, ನೇಹಾ ಧೂಪಿಯಾ, ಅದಿತಿ ಪ್ರಭುದೇವ, ಶ್ವೇತಾ ಚೆಂಗಪ್ಪ ಸೇರಿದಂತೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮೊದಲ ಮಗುವಿನ ಜನನದ ನಂತರವೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ದೀಪಿಕಾ, ಕುಟುಂಬ ಮತ್ತು ವೃತ್ತಿಜೀವನವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುತ್ತಿದ್ದಾರೆ. ಇದೀಗ ಎರಡನೇ ಮಗುವಿನ ಆಗಮನದಿಂದ ದಂಪತಿಯ ಸಂಸಾರಕ್ಕೆ ಮತ್ತಷ್ಟು ಮೆರುಗು ಬಂದಿದೆ.

ಚಿತ್ರ ಕೃಪೆ; Instagram/ranveersingh

Please follow and like us:

 

 

Translate »