September 20, 2026

Hampi times

Kannada News Portal from Vijayanagara

ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ‘ಗೊಂದಳ್‌’

https://youtu.be/NHc6OMSu0K4?si=SI_K4goOPEgwo6h2

2027ರ 99ನೇ ಅಕಾಡೆಮಿ ಪ್ರಶಸ್ತಿಗಳ (ಆಸ್ಕರ್) ‘ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ’ ವಿಭಾಗದ ಸ್ಪರ್ಧೆಗೆ ಭಾರತದ ಅಧಿಕೃತ ಪ್ರವೇಶ ಚಿತ್ರವಾಗಿ ಮರಾಠಿಯ ಮನೋವೈಜ್ಞಾನಿಕ ಥ್ರಿಲ್ಲರ್ ‘ಗೊಂದಳ್‌’ (Gondhal) ಆಯ್ಕೆಯಾಗಿದೆ. ಭಾರತೀಯ ಚಲನಚಿತ್ರ ಒಕ್ಕೂಟದ (ಎಫ್‌ಎಫ್‌ಐ) ಆಯ್ಕೆ ಸಮಿತಿಯ ಅಧ್ಯಕ್ಷ, ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅವರು ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ವಿವಿಧ ಭಾರತೀಯ ಭಾಷೆಗಳ 14 ಹಿಂದಿ, 4 ಮರಾಠಿ ಸೇರಿದಂತೆ ಒಟ್ಟು 33 ಅತ್ಯುತ್ತಮ ಸಿನಿಮಾಗಳನ್ನು ವೀಕ್ಷಿಸಿದ 14 ಸದಸ್ಯರ ಜ್ಯೂರಿ ಸಮಿತಿಯು, ಅಂತಿಮವಾಗಿ ‘ಗೊಂದಳ್‌’ ಚಿತ್ರವನ್ನು ಭಾರತವನ್ನು ಪ್ರತಿನಿಧಿಸಲು ಸರ್ವಾನುಮತದಿಂದ ಆಯ್ಕೆ ಮಾಡಿದೆ. ‘ಧುರಂಧರ್’, ‘ಬಾರ್ಡರ್ 2’, ‘ಹನುಮಾನ್ ಅಂಶ್’, ‘ಇಕ್ಕಿಸ್’, ‘ಪೆದ್ದಿ’ ಸೇರಿದಂತೆ ದೇಶದ ಹಲವು ಬಿಗ್ ಬಜೆಟ್ ಮತ್ತು ಜನಪ್ರಿಯ ಸಿನಿಮಾಗಳು ಈ ಸ್ಪರ್ಧೆಯಲ್ಲಿದ್ದವು.

ಗ್ರಾಮೀಣ ಮಹಾರಾಷ್ಟ್ರದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಾಂಪ್ರದಾಯಿಕ ಜಾನಪದ ಆಚರಣೆ ‘ಗೊಂದಳ್‌’ ಹಿನ್ನೆಲೆಯಲ್ಲಿ ಈ ಚಿತ್ರ ಸಾಗುತ್ತದೆ. ಮಾನವ ಸಂಬಂಧಗಳು, ಮಹತ್ವಾಕಾಂಕ್ಷೆ, ಅಪರಾಧ ಪ್ರಜ್ಞೆ ಮತ್ತು ಬಚ್ಚಿಟ್ಟ ಸತ್ಯಗಳ ಸುತ್ತ ಹೆಣೆಯಲಾದ ಗಂಭೀರ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ.

 

ಯುವ ಪ್ರತಿಭೆ ಸಂತೋಷ್ ದವಾಖರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ದಿಗ್ಗಜ ಸಂಗೀತ ನಿರ್ದೇಶಕ ಇಳಯರಾಜಾ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಇಶಿತಾ ದೇಶಮುಖ್, ಕಿಶೋರ್ ಕದಂ, ಯೋಗೇಶ್ ಸೋಹಾನಿ, ನಿಶಾದ್ ಭೋಯಿರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ‘ಶ್ವಾಸ್’ (2005), ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ (2009) ಮತ್ತು ‘ಕೋರ್ಟ್’ (2015) ಚಿತ್ರಗಳ ನಂತರ ಆಸ್ಕರ್ ರೇಸ್‌ಗೆ ಆಯ್ಕೆಯಾದ 4ನೇ ಮರಾಠಿ ಸಿನಿಮಾ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ‘ಗೊಂದಳ್‌’ ಪಾತ್ರವಾಗಿದೆ. ಈಗಾಗಲೇ ಗೋವಾದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ‘ಸಿಲ್ವರ್ ಪೀಕಾಕ್’ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫಿಪ್ರೆಸ್ಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಈ ಚಿತ್ರ ಇದೀಗ ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದೆ.

 

ಚಿತ್ರ ಕೃಪೆ: gondhalfilm

Please follow and like us:

 

 

Translate »
[t4b-ticker]