September 20, 2026

Hampi times

Kannada News Portal from Vijayanagara

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ

https://youtu.be/NHc6OMSu0K4?si=SI_K4goOPEgwo6h2

ನವದೆಹಲಿ: ಭಾರತವು ಶತಮಾನಗಳಿಂದ ಪರಿಸರ ಮತ್ತು ಪ್ರಕೃತಿ ಸಂರಕ್ಷಣೆಯಲ್ಲಿ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದು, ಇಂದಿಗೂ ಜಾಗತಿಕ ಹವಾಮಾನ ಸವಾಲುಗಳಿಗೆ ಸುಸ್ಥಿರ ಪರಿಹಾರಗಳನ್ನು ಒದಗಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆಯೋಜಿಸಿದ್ದ “ಪರಿಸರ ಮತ್ತು ಹವಾಮಾನ ಡೈನಾಮಿಕ್ಸ್‌ನ ಭವಿಷ್ಯ” ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಇಂಗಾಲದ ಹೊರಸೂಸುವಿಕೆಯ ಅಪವಾದವನ್ನು ಅಭಿವೃದ್ಧಿಶೀಲ ದೇಶಗಳ ಮೇಲೆ ಹೊರಿಸುವುದು ಸರಿಯಲ್ಲ ಎಂದರು.

ಭಾರತದ ತಲಾ ಇಂಗಾಲದ ಹೊರಸೂಸುವಿಕೆ ಜಾಗತಿಕ ಸರಾಸರಿಯ ಅರ್ಧಕ್ಕಿಂತ ಕಡಿಮೆಯಿದ್ದು, ಮುಂದುವರಿದ ದೇಶಗಳ ಹೊರಸೂಸುವಿಕೆ ಭಾರತಕ್ಕಿಂತ ಆರು ಪಟ್ಟು ಹೆಚ್ಚಾಗಿದೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಪ್ಯಾರಿಸ್‌ನಲ್ಲಿ ನಡೆದ ಸಿಒಪಿ-21 ಶೃಂಗಸಭೆಯಲ್ಲಿ ನೀಡಿದ ಎಲ್ಲಾ ಬದ್ಧತೆಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಈಡೇರಿಸಿದ ಜಿ-20 ಕೂಟದ ಏಕೈಕ ರಾಷ್ಟ್ರ ಭಾರತ ಎಂದು ಹೆಮ್ಮೆಯಿಂದ ತಿಳಿಸಿದರು.

 

ದೇಶದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆಯನ್ನು ಉಲ್ಲೇಖಿಸಿದ ಪ್ರಧಾನಿ, ಕಳೆದ 12 ವರ್ಷಗಳ ಹಿಂದೆ ಕೇವಲ 2 ಗಿಗಾವ್ಯಾಟ್ ಇದ್ದ ಭಾರತದ ಸೌರಶಕ್ತಿ ಸಾಮರ್ಥ್ಯವು ಇಂದು 160 ಗಿಗಾವ್ಯಾಟ್‌ಗಳನ್ನು ದಾಟಿದೆ ಎಂದರು. ‘ಪಿಎಂ ಸೂರ್ಯ ಘರ್’ ಉಚಿತ ವಿದ್ಯುತ್ ಯೋಜನೆಯಡಿ 50 ಲಕ್ಷಕ್ಕೂ ಅಧಿಕ ಮನೆಗಳಿಗೆ ಸೋಲಾರ್ ರೂಫ್‌ಟಾಪ್‌ಗಳನ್ನು ಅಳವಡಿಸಲಾಗಿದ್ದು,

ಕುಸುಮ್ ಯೋಜನೆಯಡಿ 30 ಲಕ್ಷ ರೈತರಿಗೆ ಸೌರ ಪಂಪ್‌ಗಳನ್ನು ವಿತರಿಸಲಾಗಿದೆ. ಸೌರಶಕ್ತಿಯ ಬಳಕೆಯಿಂದ ದೇಶದಲ್ಲಿ ಸುಮಾರು 20 ಕೋಟಿ ಟನ್ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಲಾಗಿದೆ ಎಂದು ಅಂಕಿಅಂಶ ಸಹಿತ ವಿವರಿಸಿದರು. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಮಾರಾಟವು 12 ವರ್ಷಗಳಲ್ಲಿ ಬರೋಬ್ಬರಿ 950 ಪಟ್ಟು ಹೆಚ್ಚಾಗಿದೆ.

ರೈಲ್ವೆಯ 100 ಪ್ರತಿಶತ ವಿದ್ಯುದ್ದೀಕರಣ, 3,000 ಕಿ.ಮೀ ಉದ್ದದ ಸರಕು ಸಾಗಣೆ ಕಾರಿಡಾರ್ (DFCC), 1,000 ಕಿ.ಮೀಗೂ ಹೆಚ್ಚು ಮೆಟ್ರೋ ಸಂಪರ್ಕ ಹಾಗೂ ಜಲಮಾರ್ಗಗಳು ಪರಿಸರಸ್ನೇಹಿ ಸಂಚಾರಕ್ಕೆ ಹೊಸ ಭಾಷ್ಯ ಬರೆದಿವೆ ಎಂದರು. ಜಲ ಸಂರಕ್ಷಣೆಗಾಗಿ 70,000ಕ್ಕೂ ಹೆಚ್ಚು ಅಮೃತ ಸರೋವರಗಳು ಮತ್ತು 1.5 ಕೋಟಿ ಮಳೆನೀರು ಕೊಯ್ಲು ರಚನೆಗಳನ್ನು ನಿರ್ಮಿಸಲಾಗಿದೆ.

ಅಷ್ಟೇ ಅಲ್ಲದೆ, ಕಳೆದ 12 ವರ್ಷಗಳಲ್ಲಿ ದೇಶದ ಅತಿ ದಟ್ಟ ಅರಣ್ಯ ಪ್ರದೇಶವು ಶೇಕಡಾ 22ಕ್ಕಿಂತ ಹೆಚ್ಚು ವಿಸ್ತರಣೆಯಾಗಿದೆ ಎಂದು ತಿಳಿಸಿದರು. “ಮಾತಾ ಭೂಮಿಃ, ಪುತ್ರೋ ಅಹಂ ಪೃಥಿವ್ಯಾಃ” ಎಂಬ ಭಾರತೀಯ ಸಾಂಸ್ಕೃತಿಕ ಪರಂಪರೆಯಡಿ ಭಾರತವು ಜವಾಬ್ದಾರಿಯುತ ಸುಸ್ಥಿರ ಭವಿಷ್ಯವನ್ನು ನಿರ್ಮಿಸುತ್ತಿದೆ ಎಂದರು. ಈ ಸಮ್ಮೇಳನದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಸೂರ್ಯಕಾಂತ್, ಕೇಂದ್ರ ಸಚಿವ ಭೂಪೇಂದರ್ ಯಾದವ್, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹಾಗೂ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಉಪಸ್ಥಿತರಿದ್ದರು.

Please follow and like us: