https://youtu.be/NHc6OMSu0K4?si=SI_K4goOPEgwo6h2

ಗೃಹಿಣಿ…. ಗಂಡ, ಮನೆ, ಮಕ್ಕಳು ಮನೆ ಕೆಲಸ ಅಂತ ದಿನದ ಮೂರು ಹೊತ್ತು ದುಡಿಯೋದೇ ಆಯಿತು. ಯಾರಿಂದಲೂ ಒಂದು ಒಳ್ಳೆ ಮಾತಿಲ್ಲ. ಇಷ್ಟೆಲ್ಲಾ ಮಾಡ್ತೀವಿ ಅಂದ್ರೆ ಒಂದು ಕಾಳಜಿ ಇಲ್ಲ.. ಏನಾದ್ರೂ ಸಿಟ್ಟು ಮಾಡಿದ್ರೆ ದಿನ ಎಲ್ಲ ಮನೆಯಲ್ಲಿ ಇರ್ತೀಯ ಅಷ್ಟು ಕೆಲಸ ಮಾಡೋಕಾಗಲ್ವಾ ಎಂಬ ಕೊಂಕು ಬೇರೆ. ಇನ್ನು ಸಾಯಂಕಾಲ ಒಂದ್ ಅರ್ಧ ಗಂಟೆ ಹೊರಗಡೆ ಹೋಗಿ ಒಳ್ಳೆ ಗಾಳಿ ತೊಗೊಳೋಣ ಅಂದ್ರೆ ಗಂಡ ಮಕ್ಕಳು ಆಫೀಸ್, ಶಾಲೆಯಿಂದ ಮನೆಗೆ ಬಂದು ತಿಂಡಿ ಕಾಫಿ ಅಂತ ಗಲಾಟೆ ಮಾಡುತ್ತಾರೆ ಇಲ್ಲ ಆ ಹೊತ್ತಿಗೆ ಸರಿಯಾಗಿ ಯಾರಾದರೂ ಮನೆಗೆ ಬರ್ತಾರೆ.
ಹೋಗ್ಲಿ ನೆಮ್ಮದಿಯಿಂದ ಒಂದು ನಾಲ್ಕು ದಿನ ತವರು ಮನೆಗೆ ಹೋಗೋಣ ಅಂದ್ರೆ ಅದೂ ಕೂಡ ಸಾಧ್ಯ ಆಗೋದಿಲ್ಲ. ಅದೇನು ಅಂತ ಬದುಕು ನಮ್ಮದು. ಮಲ್ಕೊಂಡಿರೋ ಏಳೆಂಟು ಗಂಟೆ ಬಿಟ್ಟರೆ ಉಳಿದೆಲ್ಲ ಸಮಯ ಕುಟುಂಬಕ್ಕೆ ಮೀಸಲು. ಎಲ್ಲಾದ್ರೂ ಹೊರಗಡೆ ಹೋಗಿ ಬರೋಣ ನನಗೂ ನಾಲ್ಕು ಕಡೆ ಸುತ್ತಾಡಬೇಕು ಅಂತ ಆಸೆ ಅಂತ ಗಂಡನ ಮುಂದೆ ಆಸೆಯನ್ನ ತೋಡಿಕೊಂಡ್ರೆ ಹೊರಗೆ ದುಡಿದು ಬಾ ನಿನಗೆ ಗೊತ್ತಾಗುತ್ತೆ ದುಡ್ಡಿನ ಬೆಲೆ.
ಮನೇಲಿ ಯಾರ ಕಿರಿಕಿರಿಯಿಲ್ದೆ ಹಾಯಾಗಿ ಕೆಲಸ ಮಾಡ್ಕೊಂಡು ಇರ್ತಿಯಲ್ಲ ಅದಕ್ಕೆ ಹೀಗೆಲ್ಲಾ ಆಸೆಗಳು ಹುಟ್ಟುತ್ತವೆ ಎಂದು ಗಂಡ ಕೊಂಕಾಡಿದರೆ, ಮಕ್ಕಳು ಅಮ್ಮ ನಾವು ನಮ್ಮ ಫ್ರೆಂಡ್ಸ್ ಜೊತೆ ಹೋಗ್ಬೇಕು ಅಂತ ಈಗಾಗಲೇ ಪ್ಲಾನ್ ಮಾಡ್ಕೊಂಡಿದೀವಿ ನೀನು ಇಲ್ಲದ್ದನ್ನ ಹೇಳಿ ಅಪ್ಪನ ತಲೆ ಕೆಡಿಸ್ಬೇಡ ಎಂದು ಮಕ್ಕಳು ಕಿರಿಕಿರಿ ಮಾಡುತ್ತವೆ. ಅಪ್ಪ ಆಫೀಸ್ ನವರ ಜೊತೆ ಟ್ರಿಪ್ ಹೋದ್ರೆ ಮಕ್ಕಳು ತಮ್ಮ ಸ್ನೇಹಿತರ ಜೊತೆ. ನಾನಿನ್ನೇನು ಮಾಡಲಿ. ನಿಟ್ಟುಸಿರು ಬಿಡುತ್ತಾ ಮನೇಲೇ ಇರೋದು ನನ್ನ ಹಣೆ ಬರಹದಲ್ಲಿ ಬರೆದಿದೆ.
ಎದುರು ಮನೆ ರಾಣಿ ಬದುಕೆ ಚೆನ್ನಾಗಿದೆ… ಪ್ರತಿದಿನ ಮುಂಜಾನೆ ಟಿಕ್ ಟಾಕ್ ಆಗಿ ಅಲಂಕಾರ ಮಾಡಿಕೊಂಡು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ಸ್ಕೂಟಿ ತಗೊಂಡು ಕೆಲಸಕ್ಕೆ ಹೊರಟರೆ ಮತ್ತೆ ಬರೋದು ಸಾಯಂಕಾಲನೆ. ಇನ್ನು ರಜಾ ದಿನಗಳಲ್ಲಿ ಫ್ರೆಂಡ್ಸ್, ಪಾರ್ಟಿ, ಟ್ರಿಪ್ ಅಂತ ಹೋಗ್ತಾನೇ ಇರ್ತಾರೆ.
ನಾನು ಕೂಡ ಪದವಿ ಪಡೆದಿದ್ದೆ. ಮದುವೆಯಾದ ಕೂಡಲೇ ನನಗೂ ಉದ್ಯೋಗ ಮಾಡಬೇಕು ಅನ್ನೋ ಆಸೆ ಇತ್ತು ಆದರೆ ಮದುವೆಯಾದ ಒಂದೇ ವರ್ಷದಲ್ಲಿ ಒಂದು ಮಗು, ಮತ್ತೊಂದೆರಡು ವರ್ಷದಲ್ಲಿ ಮತ್ತೊಂದು ಮಗು ಹೀಗೆ ನನ್ನ ಜವಾಬ್ದಾರಿಗಳು ಬೆಳೀತಾ ಹೋಯ್ತು. ಇದೀಗ ಕೆಲಸ ಮಾಡೋಕೆ ಆಗದೆ ಮನೆಯಲ್ಲಿ ಇರೋಕೂ ಆಗದೆ ಒದ್ದಾಡೋ ಹಾಗಾಗಿದೆ ನಾಲ್ಕು ಗೋಡೆಗಳ ನಡುವೆ ಉಸಿರು ಕಟ್ಟಿಕೊಂಡಿದೆ…. ಈ ಎಲ್ಲಾ ಜಂಜಾಟಗಳಿಂದ ಮುಕ್ತಿ ಸಿಕ್ಕರೆ ಸಾಕಪ್ಪ ಅನ್ನುವ ಹಾಗಾಗಿದೆ. ಆದ್ರೆ ಏನ್ ಮಾಡೋದು… ಇದೆಲ್ಲ ಬದುಕಲ್ಲಿರೋದೆ ಅಲ್ವಾ ?
ಎದುರು ಮನೆಯ ರಾಣಿ…. ಅಬ್ಬ … ಅದೆಷ್ಟು ಚಂದ ರಂಗೋಲಿ ಬಿಡುತ್ತಿದ್ದಾರೆ ಮುಂದಿನ ಮನೆ ಅಕ್ಕ. ಪ್ರತಿಯೊಂದು ಹಬ್ಬ ಹುಣ್ಣಿಮೆಗಳನ್ನ ಅದೆಷ್ಟು ಸಂಭ್ರಮದಿಂದ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ನನಗೋ ಈ ಆಫೀಸು ಕೆಲಸ, ಮನೆ, ಮಕ್ಕಳು,ಗಂಡ ಇವರ ಜಂಜಾಟದಲ್ಲಿ ಇದಕ್ಕೆಲ್ಲ ಸಮಯ ಸಿಗೋದೇ ಇಲ್ಲ. ಹಬ್ಬದ ಅಡುಗೆ ಇರಲಿ ಒಂದು ಚಿತ್ರಾನ್ನ ಕಲಸೋಕು ಒದ್ದಾಡುವಂತಹ ಪರಿಸ್ಥಿತಿ. ಯಾರಿಗೆ ಬೇಕಿತ್ತು ಈ ಕೆಲಸ ಅನ್ನೋ ಹಾಗಾಗಿದೆ. ಬರುವ ಪೂರ್ತಿ ಸಂಬಳದಲ್ಲಿ ಮುಕ್ಕಾಲು ಭಾಗ ಮನೆಯ ಕಂತಿಗೆ ಕಟ್ಟುವ ಗಂಡ ಏನನ್ನಾದರೂ ಕೇಳಿದರೆ ನಾನೇನು ಹಾಳು ಮಾಡುತ್ತಿದ್ದೇನಾ? ನಿನ್ನ ಹೆಸರಲ್ಲೇ ಮನೆ ಖರೀದಿಸಿಲ್ವಾ ಎಂದು ನನ್ನ ಬಾಯಿ ಮುಚ್ಚಿಸುತ್ತಾರೆ. ಆಫೀಸಿನಲ್ಲಿ ಮಣಭಾರದ ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಒಂದಷ್ಟು ನಿರಾಳವಾಗಿ ಕಾಲು ಚಾಚಿ ಕೂಡುವ ಹಾಗೆಯೇ ಇಲ್ಲ.
ಶಾಲೆಯಿಂದ ಬರುವ ಮಕ್ಕಳ ಮನೆ ಪಾಠ, ಮುಂಜಾನೆಯ ಅವಸರದಲ್ಲಿ ಬಿಟ್ಟು ಹೋದ ಅಡುಗೆ ಮನೆ ಕೆಲಸ, ಎಲ್ಲರಿಗೂ ಸಾಯಂಕಾಲದ ತಿಂಡಿ ಕಾಫಿ ಪೂರೈಸುವ ಕೆಲಸ ಶುರುವಾದ್ರೆ ಎಲ್ಲ ಮುಗಿಸಿ ಮಲಗೋ ಹೊತ್ತಿಗೆ ರಾತ್ರಿ 12 ಹೊಡೆದಿರುತ್ತೆ.
ಆಫೀಸಿಂದ ಬರುವ ಗಂಡ ಕೈಯಲ್ಲಿ ಪೇಪರ್ ಹಿಡಿದು ಆರಾಮವಾಗಿ ಕುಳಿತುಕೊಳ್ಳುತ್ತಾರೆ. ನಾನು ಕೂಡ ಅವರ ಹಾಗೆ ಎಂಟು ಗಂಟೆ ಕೆಲಸ ಮಾಡಿ ಬಂದಿದ್ದೀನಿ ನನಗೂ ಕೂಡ ದಣಿವಾಗಿರುತ್ತೆ ಅಂತ ನನಗೆ ಕೊಂಚ ಹೆಲ್ಪ್ ಮಾಡೋದು ಬೇಡ ಕನಿಷ್ಠ ಪಕ್ಷ ತಮಗೆ ಬೇಕಾದ ಒಂದು ಲೋಟ ನೀರು ತಾವೇ ತಗೊಂಡು ಕುಡಿತಾರೆ ಅದು ಇಲ್ಲ ಅದನ್ನು ಕೂಡ ನನ್ನಿಂದಲೇ ಕೇಳಿ ಪಡೆಯುತ್ತಾರೆ. ಹೋಗಲಿ ಬಿಡು ತಾವು ಮಕ್ಕಳಿಗೆ ಹೋಂವರ್ಕ್ ಮಾಡಿಸಿದರೆ ನಾನು ಆರಾಮಾಗಿ ಅಡುಗೆ ಮಾಡಬಹುದು ಅಂದುಕೊಂಡರೆ ಅದು ಕೂಡ ಇಲ್ಲ. ಅದೆಲ್ಲಾ ತಲೆನೋವು ನನ್ನ ತಲೆಗೆ ಕಟ್ಟಬೇಡ ನೀನು ಎಂದು ನಿಷ್ಟುರವಾಗಿ ಹೇಳಿ ಹೊರಗೆ ಹೊರಟುಬಿಡ್ತಾರೆ.
ನೋಡುವವರ ಕಣ್ಣಿಗೆ ಅವರೇನಪ್ಪ ಗಂಡ ಹೆಂಡತಿ ಇಬ್ಬರೂ ಕೈ ತುಂಬಾ ಸಂಪಾದನೆ ಮಾಡ್ತಾರೆ. ಆರಾಮಾಗಿ ಓಡಾಡ್ಕೊಂಡು ಉಂಡುಟ್ಟು ಹಾಯಾಗಿದ್ದಾರೆ ಅನ್ಸುತ್ತೆ ಆದ್ರೆ ನಾನು ಹಾಯಾಗಿ ಇರೋದು ಮರೀಚಿಕೆನೇ ಸರಿ. ಇನ್ನು ಆಗಾಗ ಬರುವ ಅತ್ತೆ ಮಾವ ಮನೆಯಲ್ಲಿ ಇಲ್ಲದ ಕೊಂಕುಗಳನ್ನು ಹುಡುಕುತ್ತಾರೆ. ಮನೆ ಕೆಲಸ, ಆಫಿಸ್ ಕೆಲಸ, ಮಕ್ಕಳ ಓದು ವಿದ್ಯಾಭ್ಯಾಸ ಎಲ್ಲವನ್ನೂ ನೋಡಿಕೊಂಡು ನಾನೊಬ್ಬಳೇ ಎಷ್ಟಂತ ಮಾಡಿ ಪೂರೈಸೋಕೆ ಸಾಧ್ಯ! ಕೊಂಚ ನಿಮ್ಮ ಮಗನಿಗೂ ಸಹಾಯ ಮಾಡೋಕೆ ಹೇಳಿ ಅಂತ ನಾನೇನಾದರೂ ಹೇಳಿದ್ರೆ ಅಯ್ಯೋ! ನಮ್ಮ ಮನೇಲಿ ಗಂಡಸರು ಒಂದು ಕಡ್ಡಿ ಎತ್ತಿಟ್ಟಿಲ್ಲಮ್ಮ ಅಂತ ಅತ್ಯಂತ ನಯವಾಗಿ ನಮ್ಮ ಅತ್ತೆ ತಲೆ ಕೊಡವುತ್ತಾರೆ…. ಯಾರಿಗೆ ಬೇಕಪ್ಪ ಈ ವರ್ಕ್ ಲೈಫು ಮತ್ತೆ ಫ್ಯಾಮಿಲಿ ಬ್ಯಾಲೆನ್ಸ್ ಮಾಡೋ ಮಧ್ಯದಲ್ಲಿ ನನ್ ಬದುಕೇ ತಾಳ ತಪ್ತಾ ಇದೆ. ಆದ್ರೆ ಏನ್ ಮಾಡೋದು…. ಇದ್ದುದರಲ್ಲಿ ಅಡ್ಜಸ್ಟ್ ಆಗ್ಬೇಕು ಅಷ್ಟೇ !
ಕೆಲಸಕ್ಕೆ ಹೋಗೋ ಗಂಡಸರು…. ಮುಂಜಾನೆ ಬೇಗ ಎದ್ದು ಸಮಯಕ್ಕೆ ಸರಿಯಾಗಿ ಆಫೀಸಿಗೆ ಹೋಗಬೇಕು. ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ತೋರಿಸಿದರೆ ಸಾಕು ನಮ್ಮ ಬಾಸ್ ಖುಷಿಯಾಗಿರುತ್ತಾನೆ. ಅಕಸ್ಮಾತ್ ಒಂಚೂರು ಎಡವಟ್ಟಾದ್ರೂ ರುದ್ರಾವತಾರ ತಾಳಿಬಿಡ್ತಾನೆ… ಮುಖ ಮೂತಿ ನೋಡ್ದೆ ಬೈದ್ಬಿಡ್ತಾನೆ. ಮೊದಲೇ ಟ್ರಾಫಿಕ್ ಅಲ್ಲಿ ಸಿಕ್ಕಾಕ್ಕೊಂಡು ತಲೆ ಕೆಟ್ಟು ಹೋಗಿರುತ್ತೆ. ಅಂತದ್ರಲ್ಲಿ ಆಫೀಸಿಗೆ ಬಂದ ಕೂಡಲೇ ಬಾಸ್ನ ಕಿರಿಕಿರಿ. ಒಂದೊಂದ್ ಸಾರಿ ಇದೆಲ್ಲಾ ಮಾಡೋದಕ್ಕಿಂತ ಊರಿಗೆ ಹೋಗಿ ನಮ್ಮ ಹೊಲದಲ್ಲಿ ಗೆಯ್ಕೊಂಡ್ ತಿನ್ನೋದು ಚೆನ್ನಾಗಿರುತ್ತೆ ಅಂತ ಅನ್ಸುತ್ತೆ. ಅಲ್ಲಿ ಹೇಳೋರು ಕೇಳೋರು ಯಾರೂ ಇರಲ್ಲ ನಮ್ದೇ ಸಾಮ್ರಾಜ್ಯ. ಸ್ವಚ್ಛವಾದ ಗಾಳಿ, ಪರಿಸರ, ಟ್ರಾಫಿಕ್ಕಿನ ಗೌಜಿ ಗದ್ದಲ ಯಾವುದೇ ತೊಂದರೆ ಇಲ್ಲದೆ ಆರಾಮಾಗಿ ಇರಬಹುದು.
ಆದರೆ ಏನು ಮಾಡೋದು… ಸಾಕಷ್ಟು ವರ್ಷದಿಂದ ಇದೇ ಊರಲ್ಲಿ ಇದ್ದೇವೆ. ಮನೆ ಕೂಡ ಕಟ್ಟಿ ಅದರ ಸಾಲವನ್ನ ಕಂತಿನಲ್ಲಿ ತೀರಿಸ್ತಾ ಇದ್ದೀನಿ, ಮಕ್ಕಳ ಎಜುಕೇಶನ್ ಕೂಡ ಚೆನ್ನಾಗಿ ನಡೀತಾ ಇದೆ. ಬೈಸ್ಕೊಂಡ್ರು ಪರ್ವಾಗಿಲ್ಲ ಇಷ್ಟು ದಿನ ಇದ್ದ ಹಾಗೆ ಈಗ್ಲೂ ಅಡ್ಜಸ್ಟ್ ಮಾಡ್ಕೊಂಡು ಬಿಡಬೇಕು. ಇಲ್ಲಾದರೆ ಕಣ್ಣು ಮುಚ್ಚಿ ತೆರೆಯೋದ್ರೊಳಗೆ ತಿಂಗಳ ಸಂಬಳ ಕೈಗೆ ಬರುತ್ತೆ…. ಊರಿಗೆ ಹೋದ್ರೆ ಇಷ್ಟೆಲ್ಲಾ ಮಾಡೋದಕ್ಕೆ ಸಾಧ್ಯ ಆಗ್ತಿತ್ತಾ. ಹಳ್ಳಿಯಲ್ಲಿರುವ ಅವರ ಸಹೋದರರು…. ಅದೆಷ್ಟು ಮಜಾ ಮಾಡ್ತಾರಪ್ಪ ಈ ಸಿಟಿಲಿರೋ ಜನ. ನಾನು ಚೆನ್ನಾಗಿ ಓದಿ ಡಿಗ್ರಿ ತಗೊಂಡಿದ್ರೆ ಯಾವುದಾದರೂ ಸಣ್ಣ ಪುಟ್ಟ ಕೆಲಸಕ್ಕೆ ಸೇರಿ ಕೈ ತುಂಬಾ ಸಂಬಳ ಎಣಿಸ್ತಾ ಆರಾಮಾಗಿ ಸಿಟೀಲಿ ಇರ್ತಾ ಇದ್ದೆ. ಈಗ ಊರಲ್ಲಿ ಇರುವ ಆಸ್ತಿ ನೋಡಿಕೊಂಡು ಇಲ್ಲೇ ಇರಬೇಕಾಗಿದೆ. ಅದೂ ಆಸ್ತಿ ಅಂದ್ರೆ ಕೋಟಿಗಟ್ಟಲೆ ಇದೆಯಾ ಒಂದು ತುಂಡು ಭೂಮಿ.
ಹೆಸರಿಗೆ ಹೇಳೋಕೆ ಒಂದು ಬಾವಿ ಇದೆ ಆದರೆ ಅದರಲ್ಲಿ ನೀರೇ ಇಲ್ಲ.. ಇನ್ನು ನೂರಾರು ಅಡಿ ಬೋರ್ ಕೊರೆಸಿದ್ರು ಬಂದದ್ದು ಅರ್ಧ ಇಂಚು ನೀರು ಯಾವ ಮೂಲೆಗೂ ಸಾಕಾಗಲ್ಲ. ಮಳೆ ಮೇಲೆ ಹೊಲದ ಬದುಕು ಸಾಗಿಸುವ ನಮಗೆ ಸರಿಯಾದ ಪ್ರಮಾಣದಲ್ಲಿ ಬೆಳೆ ಬರೋದಿಲ್ಲ. ಇನ್ನು ಹೊಲದಲ್ಲಿ ಸಾಗುವಳಿ ಮಾಡೋಕೆ ಆಳು ಸಿಗಲ್ಲ, ಏನೆಲ್ಲ ಗುದ್ದಾಡಿ ಆಳನ್ನು ಹೊಂಚಿದರೆ ಅವರ ನಖರಾ ಸಹಿಸಬೇಕು. ಅಂತೂ ಇಂತೂ ಬಿತ್ತಿ, ಬೆಳೆ ಬೆಳೆದು ಫಸಲನ್ನು ಕೊಯ್ದು ರಾಶಿ ಮಾಡಿದ್ರೆ ಗಟ್ಟಿ ಕಾಳಿಗಿಂತ ಜೊಳ್ಳಿನ ರಾಶಿಯೇ ದೊಡ್ಡದಾಗಿರುತ್ತೆ.ನಂತರ ಮಾರುಕಟ್ಟೆಗೆ ತೊಗೊಂಡು ಹೋಗಿ ಮಾರಾಟ ಮಾಡಿದರೆ ನಾವು ಮಾಡಿದ ಖರ್ಚಿಗಿಂತ ಕಡಿಮೆ ಆದಾಯ ಇರುತ್ತೆ ಹೀಗಾದರೆ ನಾವು ರೈತರು ಬದುಕೋದು ಹೇಗೆ ? ಈ ಹಿಂದೆ ಮಕ್ಕಳು ಚಿಕ್ಕವರಿದ್ರು ಹೇಗೋ ನಡೆದುಕೊಂಡು ಹೋಗ್ತಿತ್ತು. ಇದೀಗ ಮಕ್ಕಳು ಬೆಳಿತಾ ಇದ್ದಾರೆ.
ಅವರ ಶಾಲೆ ಫೀಸು ಸಮವಸ್ತ್ರ, ಶೂಸು ಅಂತ ಸಾಕಷ್ಟು ಹಣ ಕೈಬಿಡುತ್ತದೆ…. ಅದಕ್ಕೆಲ್ಲ ಸಾಲ ಮಾಡಿ ಹಣ ಹೊಂಚಬೇಕು. ಮನೆಯ ಮಾಡು ಸೋರ್ತಾ ಇದೆ. ಮನೆಗೆ ಹೊಸ ಹೆಂಚು ಹಾಕಿಸಬೇಕು. ಅಲ್ಲಲ್ಲಿ ಬಿರುಕು ಬಿಟ್ಟ ಗೋಡೆಗಳನ್ನು ರಿಪೇರಿ ಮಾಡಿಸಿ ಗಟ್ಟಿ ಮಾಡಬೇಕು.
ಇದೆಲ್ಲ ನೋಡ್ತಾ ಇದ್ರೆ ಯಾವಾಗ ನನ್ನ ಸಮಸ್ಯೆಗಳು ಮುಗಿಯುತ್ತೆ ಅಂತ ಬೇಸರವಾಗುತ್ತೆ ಆದರೆ ಏನು ಮಾಡೋದು? ಬದುಕು ನಡೆಸಲೇಬೇಕಲ್ವಾ.

Please follow and like us:



More Stories
ಕ್ರೀಡಾ ಜಗತ್ತಿಗೆ ಸ್ಫೂರ್ತಿ ಭಾರತದ ಮಹಿಳಾ ಆರ್ಚರಿ ಪಟು ಪಾಯಲ್ ನಾಗ್
ಆಪತ್ತಿನಲ್ಲಿ ಆದವನೇ ನಿಜವಾದ ಸ್ನೇಹಿತ
ಸ್ನೇಹಿತರ ಹಿತವಚನ ಪಾಲಿಸಿ