April 17, 2026

Hampi times

Kannada News Portal from Vijayanagara

ಬದುಕು ಬದಲಿಸುವ ಕಥೆಗಳು

https://youtu.be/NHc6OMSu0K4?si=SI_K4goOPEgwo6h2

ಹೀಗೊಂದು ಬದುಕಿನ ‘ಈವೆಂಟ್ ಮ್ಯಾನೇಜ್ಮೆಂಟ್’ ಇಂದಿನ ವೇಗದ ಯುಗದಲ್ಲಿ ನಾವು ಜೀವನವನ್ನು ಅರ್ಥಮಾಡಿ ಕೊಳ್ಳುವುದಕ್ಕಿಂತ ಅದನ್ನು ಸಾಗಿಸುವುದರಲ್ಲೇ ಹೆಚ್ಚು ಬ್ಯುಸಿಯಾಗಿದ್ದೇವೆ. ಹಣ, ಹುದ್ದೆ, ಸೌಲಭ್ಯಗಳ ಹಿಂದೆ ಓಡುತ್ತಾ, ಬದುಕಿನ ನಿಜವಾದ ಅರ್ಥವನ್ನು ಮರೆತುಬಿಡುತ್ತಿದ್ದೇವೆ.  ಆದರೆ ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗಳ ಅಸಾಮಾನ್ಯ ಬದುಕು ನಮಗೆ ದೊಡ್ಡ ಪಾಠಗಳನ್ನು ಕಲಿಸುತ್ತದೆ. ಅಂತಹದೇ ಒಂದು ಮನಮುಟ್ಟುವ ಕಥೆ  ಒಬ್ಬ ಅಜ್ಜಿ ಮತ್ತು ಆಕೆಯ ಜೀವನದ ವಿಶಿಷ್ಟ “ಈವೆಂಟ್ ಮ್ಯಾನೇಜ್ಮೆಂಟ್”.

ಇದನ್ನೂ ಓದಿ :  ಎಲ್ಲರಿಗೂ ಅಂಬೇಡ್ಕರ್ ಬದುಕು ಸ್ಫೂರ್ತಿದಾಯಕ

ಸಿಂದಗಿ ನಗರದಲ್ಲಿ ಒಂದು ಸಾಯಂಕಾಲ. ನಾನು PES ಪಿಯು ಕಾಲೇಜಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದೆ. ದಿನದ ದಣಿವು ಇದ್ದರೂ ಮನಸ್ಸು ಶಾಂತವಾಗಿತ್ತು. ಅಷ್ಟರಲ್ಲಿ ಪರಿಚಯದ ಒಬ್ಬ ಹುಡುಗ ಸಿಕ್ಕ. ಅವನು ನಮ್ಮ ಊರಿನ ಸೂಪರ್ ಮಾರ್ಕೆಟ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಅವನ ಮುಖದಲ್ಲಿ ಏನೋ ಆಲೋಚನೆ, ಸ್ವಲ್ಪ ಗಂಭೀರತೆ ಕಾಣಿಸಿತು. “ಏನ್ ರಿ, ಇಷ್ಟು ಯೋಚನೆ?” ಅಂತ ಕೇಳಿದೆ.

ಅವನು ಸ್ವಲ್ಪ ನಗುತ್ತಾ, “ಸಾರ್, ಒಂದು ಕಥೆ ಹೇಳ್ತೀನಿ… ಕೇಳ್ತೀರಾ?” ಅಂದ. ನನಗೂ ಕುತೂಹಲ ಆಯಿತು. ನಾವು ರಸ್ತೆ ಬದಿಯಲ್ಲಿ ನಿಂತು ಮಾತು ಶುರು ಮಾಡಿದೆವು. “ಸಾರ್, ನನಗೆ ಪ್ರತಿದಿನ ಸಂಜೆ ಒಂದೇ ಟೈಮ್‌ಗೆ ಒಂದು ಆರ್ಡರ್ ಬರುತ್ತದೆ. ಸಿಂದಗಿಯ ಹತ್ತಿರದ ಒಂದು ಅಪಾರ್ಟ್‌ಮೆಂಟ್‌ನಿಂದ… 500 ಗ್ರಾಂ ಬಾದಾಮಿ, 500 ಗ್ರಾಂ ಪಿಸ್ತಾ. ಮೂರು ತಿಂಗಳಿಂದ ಪ್ರತಿದಿನವೂ ಅದೇ ಆರ್ಡರ್. ಅದೂ ಒಬ್ಬ 80 ವರ್ಷದ ಅಜ್ಜಿ ಇಂದ.” ನನಗೂ ಆಶ್ಚರ್ಯ ಆಯಿತು. “ಹಾಗಿದ್ರೆ?” ಅಂತ ಕೇಳಿದೆ.

“ಮೊದಲಿಗೆ ನನಗೂ ಏನೋ ಅನಿಸ್ಲಿಲ್ಲ ಸಾರ್. ಆದರೆ ಪ್ರತಿದಿನ ಅದೇ ಆಗ್ತಾ ಇದ್ದಾಗ ಕುತೂಹಲ ಆಯ್ತು. ಒಂದು ದಿನ ಸ್ವಲ್ಪ ತಡವಾಗಿ ಡೆಲಿವರಿ ಕೊಟ್ಟೆ. ಅಜ್ಜಿ ಬಾಗಿಲು ತೆರೆದರು. ಒಳಗೆ ಕೆಲವು ಮಕ್ಕಳು ಇದ್ದರು. ನಾನು ಕೇಳಿದೆ – ‘ಮೊಮ್ಮಕ್ಕಳಾ?’ ಅಂತ… ಅಜ್ಜಿ ನಕ್ಕು ‘ಹೌದು, ಒಂದು ರೀತಿಯಲ್ಲಿ’ ಅಂದರು.”
ಅವನು ಹೇಳುತ್ತಿದ್ದಂತೆ ನಾನು ಅವನ ಮುಖವನ್ನು ಗಮನದಿಂದ ನೋಡುತ್ತಿದ್ದೆ.

“ನಾನು ಮತ್ತೆ ಕೇಳಿದೆ ಸಾರ್… ‘ನಿಮಗೆ ಡ್ರೈ ಫ್ರೂಟ್ಸ್ ಅಷ್ಟು ಇಷ್ಟವಾ?’ ಅಂತ… ಅಜ್ಜಿ ನಗುತ್ತಾ ತಮ್ಮ ಹಲ್ಲಿನ ಸೆಟ್ ತೆಗೆದು ತೋರಿಸಿ ‘ನನಗೆ ಹಲ್ಲೇ ಇಲ್ಲ ಮಗ… ಇವು ನನಗಲ್ಲ’ ಅಂದರು.” ಆ ಮಾತು ಕೇಳಿದ ಕ್ಷಣ ನನ್ನ ಮನಸ್ಸೇ ಮೌನವಾಗಿಬಿಟ್ಟಿತು. “ಅಲ್ಲಿದ್ದ ಮಕ್ಕಳು ಪಕ್ಕದ ಸ್ಲಂನವರು ಸಾರ್. ಪ್ರತಿದಿನ ಸಂಜೆ ಬರುತ್ತಾರೆ. ಒಂದು ಗಂಟೆ ಅಜ್ಜಿ ಅವರ ಜೊತೆ ಕಳೆಯುತ್ತಾರೆ. ಅಜ್ಜಿ ಅವರಿಗೆ ಪಿಸ್ತಾ, ಬಾದಾಮಿ ಕೊಡ್ತಾರೆ. ಅವರು ನಗುತ್ತಾ ತಿಂದು ಬಿಟ್ಟು ಹೋದ ಮೇಲೆ  ಅಜ್ಜಿ ಮತ್ತೆ ಒಬ್ಬಳೇ.”

 

ನನಗೆ ಆ ದೃಶ್ಯ ಕಣ್ಣ ಮುಂದೆ ನಿಂತಂತಾಯಿತು. “ಆದ್ರೆ ಸಾರ್, ನನಗೆ ಒಂದು ಸಂದೇಹ ಬಂತು. ಅಜ್ಜಿ ಇಷ್ಟು ದುಬಾರಿ ವಸ್ತು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳೋದು ಯಾಕೆ? ಕೆಳಗಡೆ ಅಂಗಡಿಯಿಂದ ತಗೊಂಡ್ರೆ ಕಡಿಮೆ ಆಗತ್ತೆ ಅಲ್ವಾ ಅಂತ ಯೋಚಿಸಿ ಮತ್ತೆ ಹೋದೆ.” ಅವನು ಇಲ್ಲಿ ಸ್ವಲ್ಪ ನಿಂತ. ಅವನ ಧ್ವನಿ ಭಾರವಾಗಿತ್ತು. “ನಾನು ಕೇಳ್ದೆ ಸಾರ್ – ‘ಅಜ್ಜಿ, ನೀವು ಕೆಳಗಡೆ ಅಂಗಡಿಯಿಂದ  ಹೊಲಸೇಲ ಆಗಿ ಒಮ್ಮೆಲೇ  ತೆಗೆದುಕೊಳ್ಳಬಹುದಲ್ಲಾ?ಅಂದೆ …” “ಅಜ್ಜಿ ನಕ್ಕರು … ಆದರೆ ಆ ನಗುವಿನ ಹಿಂದೆ ತುಂಬಾ ನೋವು ಇತ್ತು. ‘ನನಗೆ ಹಣದ ಕೊರತೆ ಇಲ್ಲ ಮಗ… ಜನರ ಕೊರತೆ ಇದೆ’ ಅಂದರು.”
ಆ ಮಾತು ನನ್ನ ಹೃದಯಕ್ಕೆ ನೇರವಾಗಿ ತಟ್ಟಿತು.

“ಅವರು ಹೇಳಿದ್ರು – ಗಂಡ ಇಲ್ಲ, ಮಗ ದೂರ ಹೋಗಿದ್ದಾನೆ… ವರ್ಷಗಳಿಂದ ಯಾವುದೇ ಸುದ್ದಿ ಇಲ್ಲ. ‘ನನ್ನ ಬದುಕಿನಲ್ಲಿ ಈಗ ಯಾರೂ ಇಲ್ಲ’ ಅಂದರು ಸಾರ್. ಆದರೆ ಅದನ್ನೇ ಅವರು ದುಃಖವನ್ನಾಗಿ    ಮಾಡಿಕೊಳ್ಳಲಿಲ್ಲ… ತಮ್ಮ ಬದುಕನ್ನೇ ಹೊಸದಾಗಿ ಕಟ್ಟಿಕೊಂಡಿದ್ದಾರೆ.”
ನಾನು ಅವನ ಮಾತುಗಳನ್ನು ನಿಶ್ಶಬ್ದವಾಗಿ ಕೇಳುತ್ತಿದ್ದೆ.

“ಅವರು ಒಂದು ಹಳೆಯ ಪತ್ರಿಕೆ ತೋರಿಸಿದ್ರು ಸಾರ್… ದೆಹಲಿಯಲ್ಲಿ ಒಬ್ಬ ಅಜ್ಜಿ ಸತ್ತು 5 ದಿನಗಳ ನಂತರ ಗೊತ್ತಾದ ಸುದ್ದಿ. ‘ನನಗೂ ಹಾಗಾಗ್ಬಾರದು’ ಅಂದರು.” ನನಗೆ ಅಂಜಿಕೆ ಮೂಡಿತು. “ನಾನು 20ನೇ ಮಹಡಿಯಲ್ಲಿ ಇರುತ್ತೇನೆ… ಆದ್ದರಿಂದ ಪ್ರತಿದಿನ ನಿನಗೆ ಆರ್ಡರ್ ಕೊಡ್ತೀನಿ. ಕನಿಷ್ಠ ನೀನಾದರೂ ಬರುವೆ… ನಾನು ಇಲ್ಲದಿದ್ದರೆ ಗೊತ್ತಾಗತ್ತೆ…’ ಅಂದರು ಸಾರ್…” ನಾವು ಇಬ್ಬರೂ ಕೆಲ ಹೊತ್ತು ಮಾತಿಲ್ಲದೆ ನಿಂತಿದ್ದೆವು. “ನಾನು ಮತ್ತೆ ಕೇಳ್ದೆ ಸಾರ್  ‘ಸಂಜೆ ಸತ್ತರೆ ಸರಿ… ಬೇರೆ ಸಮಯದಲ್ಲಿ ಏನು?’ ಅಂತ… ಅಜ್ಜಿ ನಕ್ಕು ‘ಆ ಮಕ್ಕಳೇ ಬರುತ್ತಾರೆ… ಅವರಿಗೆ ಗೊತ್ತಾಗತ್ತೆ’ ಅಂದರು.”
ಅವನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು.

“ಸಾರ್… ಇನ್ನೊಂದು ವಿಷಯ ಗೊತ್ತಾಯ್ತು. ಆ ಮಕ್ಕಳು ಎಲ್ಲರೂ ಅದೇ ಸ್ಲಂನವರು. ಅಜ್ಜಿ ಅವರನ್ನು ಹಾಗೇ ಆಯ್ಕೆ ಮಾಡಿಲ್ಲ… ಜಾಣ್ಮೆಯಿಂದ ಆಯ್ಕೆ ಮಾಡಿಕೊಂಡಿದ್ದಾರೆ. ಯಾಕೆಂದರೆ ಅವರು ಖಂಡಿತ ಬರುತ್ತಾರೆ… ಯಾರಿಗಾದರೂ ಹೇಳ್ತಾರೆ…” ಆ ಮಾತು ಕೇಳಿ ನಾನು ನಿಂತಲ್ಲೇ ನಿಂತೆ.
ಒಬ್ಬ ವೃದ್ಧೆ… ತನ್ನ ಏಕಾಂತವನ್ನು ದುಃಖವನ್ನಾಗಿ ಮಾಡಿಕೊಳ್ಳದೆ, ಅದನ್ನೇ ಪ್ರೀತಿಯಿಂದ ತುಂಬಿಸಿಕೊಂಡಿದ್ದಾಳೆ. ತನ್ನ ಬದುಕನ್ನೇ ಒಂದು ಕಾರ್ಯಕ್ರಮದಂತೆ ರೂಪಿಸಿಕೊಂಡಿದ್ದಾಳೆ. ಕೊನೆಯ ಕ್ಷಣಕ್ಕೂ ಗೌರವ ಸಿಗಲೆಂದು ಯೋಚಿಸಿದ್ದಾಳೆ. ಮನೆಗೆ ಹೋಗುತ್ತಾ ನನ್ನ ಮನಸ್ಸಿನಲ್ಲಿ ಒಂದೇ ಪ್ರಶ್ನೆ ತಿರುಗುತ್ತಿತ್ತು,  ನಾವು ಬದುಕುತ್ತಿದ್ದೇವಾ… ಅಥವಾ ಕೇವಲ ದಿನಗಳನ್ನು ಕಳೆಯುತ್ತಿದ್ದೇವಾ? ಆ ಅಜ್ಜಿ ನಮಗೆ ಏನೂ ಉಪದೇಶ ಮಾಡಲಿಲ್ಲ… ಆದರೆ ಅವರ ಬದುಕೇ ಒಂದು ಪಾಠವಾಗಿತ್ತು. ಜೀವನ ಅಂದರೆ ಕೇವಲ ಉಸಿರಾಟವಲ್ಲ…

ಅದು ಪ್ರೀತಿ ಹಂಚುವುದು, ಸಂಬಂಧಗಳನ್ನು ಕಟ್ಟುವುದು, ಕೊನೆಯ ಕ್ಷಣಕ್ಕೂ ಅರ್ಥ ನೀಡುವುದು. ಆ ದಿನದಿಂದ ನಾನು ಒಂದು ನಿರ್ಧಾರ ಮಾಡಿಕೊಂಡೆ  ಜೀವನವನ್ನು ಕೇವಲ ಸಾಗಿಸಬಾರದು… ಅದನ್ನು ಅರ್ಥಪೂರ್ಣವಾಗಿ ರೂಪಿಸಬೇಕು.
ಯಾಕೆಂದರೆ ಕೊನೆಗೆ ಉಳಿಯುವುದೇನು ಅಂದ್ರೆ ನಾವು  ಸಂಪಾದಿಸಿದ ಹಣವಲ್ಲ… ನಾವು ಹಂಚಿದ ಪ್ರೀತಿ. ❤️

 

ಪ್ರಶಾಂತ ಕುಲಕರ್ಣಿ, ಸಿಂದಗಿ   

Please follow and like us:

 

 

 

 

 

Translate »
[t4b-ticker]
error: Content is protected !!