https://youtu.be/NHc6OMSu0K4?si=SI_K4goOPEgwo6h2

ಹರಪನಹಳ್ಳಿ: ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ಈ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ಉಪ ವಿಭಾಗದ ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್ ಎಚ್ಚರಿಸಿದರು.
ನಗರದ ಹರಪನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ 37ನೇ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಹಾಗೂ ಹೆಲ್ಮೆಟ್ ಧರಣೆಯ ಅರಿವು ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚಾಲಕರ ನಿರ್ಲಕ್ಷ್ಯ ಹಾಗೂ ಕ್ಷಣಿಕ ಆವೇಶವೇ ಅಪಘಾತಗಳಿಗೆ ಕಾರಣವಾಗುತ್ತಿದ್ದು, ಇದರಿಂದ ಜೀವನವೇ ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು. 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಪಾಲಕರು ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು. ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಜನರಲ್ಲಿ ಅರಿವು ಕೊರತೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಎಂದು ಹೇಳಿದರು.

ಸಿಪಿಐ ಮಹಾಂತೇಶ್ ಜಿ. ಸಜ್ಜನ್ ಮಾತನಾಡಿ, ಮೊಬೈಲ್ ಬಳಕೆಯ ಅತಿಯಾದ ಗೀಳಿನಿಂದ ಜನರು ತಮ್ಮ ಜೀವಕ್ಕೆ ಮಹತ್ವ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ವಿಮೆ ಇಲ್ಲದೆ ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಿಸುವುದು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು. “ನಿಮ್ಮ ಮೇಲೆ ನಿಮ್ಮ ಕುಟುಂಬ ಅವಲಂಬಿಸಿರುವುದರಿಂದ ನಿಮ್ಮ ಜೀವ ಅಮೂಲ್ಯ” ಎಂದು ತಿಳಿಸಿ, ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹರಪನಹಳ್ಳಿ ಪೊಲೀಸರು ಹೆಲ್ಮೆಟ್ ಧರಿಸಿ ಪೊಲೀಸ್ ಠಾಣೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ಹಳೆ ಬಸ್ ನಿಲ್ದಾಣ, ಇಜಾರಿ ಶಿರಸಪ್ಪ ವೃತ್ತ, ಹರಿಹರ ಸರ್ಕಲ್, ಬಸ್ ನಿಲ್ದಾಣ, ನಗರಸಭೆ ರಸ್ತೆ ಹಾಗೂ ಹೊಸಪೇಟೆ ರಸ್ತೆ ಮೂಲಕ ಮಿನಿ ವಿಧಾನಸೌಧದವರೆಗೆ ಜಾಥಾ ನಡೆಸಿದರು. ಮೈಕ್ ಮೂಲಕ ರಸ್ತೆ ಸುರಕ್ಷತಾ ಕಾನೂನುಗಳ ಕುರಿತು ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಹರಪನಹಳ್ಳಿ ಪಿ.ಎಸ್.ಐ ಶಂಭುಲಿಂಗ್ ಸಿ. ಹೀರೆಮಠ್, ಹಲವಾಗಲು ಪಿ.ಎಸ್.ಐ ಕಿರಣ್ ಕುಮಾರ್, ಅರಸೀಕೆರೆ ಪಿ.ಎಸ್.ಐ ವಿಜಯ ಕೃಷ್ಣ, ಚಿಗಟೇರಿ ಪಿ.ಎಸ್.ಐ ನಾಗರತ್ನ, ಕ್ರೈಂ ವಿಭಾಗದ ಮೀನಾಕ್ಷಿ, ಎ.ಎಸ್.ಐ, ಹೆಚ್.ಸಿ ಹಾಗೂ ವೃತ್ತದ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಸಮಾಜ ಸುಧಾರಣೆಯ ಯುಗಪುರುಷ – ಸ್ವಾಮಿ ವಿವೇಕಾನಂದರು