October 26, 2026

Hampi times

Kannada News Portal from Vijayanagara

ದುಶ್ಚಟಗಳಿಂದ ಯುವಜನತೆ ದೂರವಿರಿ

ರಾಯಚೂರು : ಯುವ ಜನಾಂಗವು ಕುಡಿತ ಮತ್ತು ಮಾದಕ ದ್ರವ್ಯಗಳಂತಹ ದುಶ್ಚಟಗಳಿಂದ ದೂರವಿದ್ದು, ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶ ಹಾಗೂ ಜೀವನ ಚರಿತ್ರೆಯಿಂದ ಪ್ರೇರಣೆ ಪಡೆಯಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಶಾಪೂರ ರಸ್ತೆಯ ವಾಲ್ಮೀಕಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರಲ್ಲಿ ಹೆಚ್ಚುತ್ತಿರುವ ದುಶ್ಚಟಗಳು ಸಾಮಾಜಿಕ ಅಶಾಂತಿ ಹಾಗೂ ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದ್ದು, ಯುವಕರು ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಜೀವ ರಕ್ಷಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಉಪನ್ಯಾಸ ನೀಡಿದ ಡಾ. ಬಸವರಾಜ, ರಾಯಚೂರು ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿ, ಸರ್ಕಾರ ನೀಡುವ ಶೈಕ್ಷಣಿಕ ಪ್ರೋತ್ಸಾಹಧನ ಹಾಗೂ ಸವಲತ್ತುಗಳನ್ನು ಸಮುದಾಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಪಂ ಸಿಇಒ ಈಶ್ವರ ಕುಮಾರ್ ಕಾಂದೂ ಹಾಗೂ ಗಣ್ಯರು ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು.

Please follow and like us:

 

 

 

 

 

 

 

 

 

 

Translate »
[t4b-ticker]