November 27, 2026

Hampi times

Kannada News Portal from Vijayanagara

ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ ಶ್ಲಾಘಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌: ಹೂಡಿಕೆ ಒಪ್ಪಂದಗಳ ಹೊಸ ಚೌಕಟ್ಟು ಶೀಘ್ರ

ನವದೆಹಲಿ: ಭಾರತ-ಯುರೋಪಿಯನ್ ಒಕ್ಕೂಟದ (EU) ಮುಕ್ತ ವ್ಯಾಪಾರ ಒಪ್ಪಂದವನ್ನು ಶ್ಲಾಘಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದು ಅಂತಾರಾಷ್ಟ್ರೀಯ ವ್ಯಾಪಾರ ಮಾತುಕತೆಗಳಲ್ಲಿ ದೇಶದ ಬದ್ಧತೆ ಹಾಗೂ ಕಾರ್ಯವಿಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ವರ್ಷದ ಡಿಸೆಂಬರ್ ವೇಳೆಗೆ ಕನಿಷ್ಠ ಮೂರು ದೇಶಗಳೊಂದಿಗೆ ದ್ವಿಪಕ್ಷೀಯ ಹೂಡಿಕೆ ಸಂರಕ್ಷಣಾ ಒಪ್ಪಂದಗಳನ್ನು ಅಂತಿಮಗೊಳಿಸಲು ಭಾರತ ಸಜ್ಜಾಗಿದೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಮ್ಯೂನಿಚ್ ಭದ್ರತಾ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಹೂಡಿಕೆದಾರ ಸ್ನೇಹಿಯನ್ನಾಗಿಸಲು ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳಿಗೆ (BIT) ಹೊಸ ಚೌಕಟ್ಟನ್ನು (ಟೆಂಪ್ಲೇಟ್) ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಕೇಂದ್ರ ಸಂಪುಟದ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದರು.

ಹೊಸ ಚೌಕಟ್ಟಿನಡಿ ಎರಡೂ ಕಡೆಯ ಹೂಡಿಕೆದಾರರಿಗೆ ಹೆಚ್ಚಿನ ಹಾಗೂ ಸ್ಪಷ್ಟ ಕಾನೂನು ರಕ್ಷಣೆ ಸಿಗಲಿದೆ ಎಂದು ತಿಳಿಸಿದ ಸಚಿವರು, ಈಗಾಗಲೇ ಯುಎಇ, ಒಮಾನ್ ಹಾಗೂ ಕೆಲವು ಮಧ್ಯ ಏಷ್ಯಾದ ದೇಶಗಳೊಂದಿಗೆ ಭಾರತ ಇಂತಹ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ನೆನಪಿಸಿದರು. ಅಲ್ಲದೆ, ಕೆನಡಾ ಮತ್ತು ರಷ್ಯಾ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಹೂಡಿಕೆ ರಕ್ಷಣಾ ಒಪ್ಪಂದಗಳ ಕುರಿತು ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

Please follow and like us: