
ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ರಾಜ್ಯದ ದೀರ್ಘಕಾಲೀನ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಸೂಕ್ತ ಅನುಮತಿಗಳನ್ನು ನೀಡಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಸೋಮವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಅವರು, ರಾಜ್ಯದ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ವಿಸ್ತೃತ ಮನವಿ ಪತ್ರಗಳನ್ನು ಹಸ್ತಾಂತರಿಸಿದರು.
ಬೆಂಗಳೂರಿನ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿರುವ ಜಮೀನುಗಳ ಬಳಕೆ ಮತ್ತು ಅನುಮತಿ ಕೋರಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಡಿ.ಕೆ. ಶಿವಕುಮಾರ್ ಪ್ರಸ್ತಾವನೆ ಸಲ್ಲಿಸಿದರು. ಇಬ್ಬಲೂರು ಫೈರಿಂಗ್ ರೇಂಜ್ ಬಳಿ ಬಳಕೆಯಾಗದೆ ಉಳಿದಿರುವ ಸುಮಾರು 730 ಎಕರೆ ಜಮೀನಿನಲ್ಲಿ ಸಾರ್ವಜನಿಕ ಉದ್ಯಾನವನ ಹಾಗೂ ಹಸಿರು ವಲಯ ರೂಪಿಸಲು ಅನುಮತಿ ನೀಡುವಂತೆ ಕೋರಿದರು. ಜೊತೆಗೆ ನಗರದ 10 ಅಧಿಸೂಚಿತ ಕೊಳಚೆ ಪ್ರದೇಶಗಳು ಸುಮಾರು 43.838 ಎಕರೆ ರಕ್ಷಣಾ ಜಾಗದಲ್ಲಿದ್ದು, ಅವುಗಳ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಪರ್ಯಾಯವಾಗಿ ಸಮಾನ ವಿಸ್ತೀರ್ಣದ ಸರ್ಕಾರಿ ಜಮೀನು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಹೆಚ್ಎಎಲ್ ಹಾಗೂ ಯಲಹಂಕ ವಾಯುನೆಲೆಗಳ ಸುತ್ತಲಿನ 20 ಕಿಲೋಮೀಟರ್ ವ್ಯಾಪ್ತಿಯ ಕಡ್ಡಾಯ ಎನ್ಒಸಿ ನಿಯಮದಿಂದಾಗಿ ನಗರಾಭಿವೃದ್ಧಿಗೆ ತೀವ್ರ ಅಡ್ಡಿಯಾಗುತ್ತಿದ್ದು, ಈ ಮಿತಿಯನ್ನು 15 ಕಿಲೋಮೀಟರ್ಗೆ ಇಳಿಸಬೇಕು ಎಂದು ಒತ್ತಾಯಿಸಿದರು. ಜತೆಗೆ ಹೆಲಿಕಾಪ್ಟರ್ ಪರೀಕ್ಷಾ ಚಟುವಟಿಕೆಗಳನ್ನು ತುಮಕೂರಿನ ಘಟಕಕ್ಕೆ ಸ್ಥಳಾಂತರಿಸಲು ಕೋರಿದರು. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೂರಕವಾಗಿ ಅಗರ-ಸರ್ಜಾಪುರ ಸಂಪರ್ಕ ರಸ್ತೆಗೆ 13.709 ಎಕರೆ, ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್ ಅಗಲೀಕರಣಕ್ಕೆ 0.775 ಎಕರೆ ಹಾಗೂ ಸರೋವರ ಲೇಔಟ್ ಲಿಂಕ್ ರಸ್ತೆಗೆ 6.837 ಎಕರೆ ರಕ್ಷಣಾ ಜಮೀನು ಹಸ್ತಾಂತರಿಸಲು ಮನವಿ ಮಾಡಿದರು. ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗಿನ ಅವಳಿ ಸುರಂಗ ಯೋಜನೆಗೆ ವಿಧಿಸಲಾಗಿರುವ ಶೇ. 33ರಷ್ಟು (60.72 ಕೋಟಿ ರೂ.) ದುಬಾರಿ ಲೈಸೆನ್ಸ್ ಶುಲ್ಕವನ್ನು ಶೇ. 2ಕ್ಕೆ ಇಳಿಸಬೇಕು ಎಂದು ರಕ್ಷಣಾ ಸಚಿವರ ಗಮನಕ್ಕೆ ತಂದರು.
ಇನ್ನೊಂದೆಡೆ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿ ರಾಜ್ಯದ ಜಲ ಹಕ್ಕುಗಳ ರಕ್ಷಣೆ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಕುಡಿಯುವ ನೀರಿನ ಅಗತ್ಯತೆ ಪೂರೈಸುವ 16,745 ಕೋಟಿ ರೂಪಾಯಿ ಮೊತ್ತದ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ವಿಸ್ತೃತ ವರದಿಗೆ (ಡಿಪಿಆರ್) ಯಾವುದೇ ಕಾನೂನು ತೊಡಕುಗಳಿಲ್ಲದ ಕಾರಣ, ಕೇಂದ್ರ ಜಲ ಆಯೋಗದಿಂದ ಆದ್ಯತೆ ಮೇರೆಗೆ ತೀರುವಳಿ ಕೊಡಿಸಬೇಕು ಎಂದು ಕೋರಿದರು. ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ-3) ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ನವೆಂಬರ್ 4 ರಂದು ವಿಚಾರಣೆ ನಡೆಯಲಿದ್ದು, ಅಧಿಸೂಚನೆ ಹೊರಡಿಸಲು ಕೇಂದ್ರ ಜಲಶಕ್ತಿ ಸಚಿವಾಲಯವೇ ಮಧ್ಯಂತರ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯ 21,167.93 ಕೋಟಿ ರೂಪಾಯಿ ಪರಿಷ್ಕೃತ ಅಂದಾಜನ್ನು ಪಿಎಂಕೆಎಸ್ವೈ ಅಡಿಯಲ್ಲಿ ಸೇರಿಸಲು 16ನೇ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಬೇಕು ಹಾಗೂ ಈ ಹಿಂದೆ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಗೋದಾವರಿ-ಕಾವೇರಿ ಹಾಗೂ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗಳಲ್ಲಿ ಇತರ ಫಲಾನುಭವಿ ರಾಜ್ಯಗಳಿಗೆ ನೀಡಿದಂತೆ ಕರ್ನಾಟಕಕ್ಕೂ ನ್ಯಾಯಸಮ್ಮತ ಸಮಪಾಲು ಹಂಚಿಕೆ ಮಾಡಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ (ಎನ್ಡಬ್ಲ್ಯೂಡಿಎ) ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಕೇಂದ್ರ ಸಚಿವರಲ್ಲಿ ಡಿ.ಕೆ. ಶಿವಕುಮಾರ್ ವಿನಂತಿಸಿದರು.


More Stories
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್
ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ಶಕ್ತಿಯ ಕೇಂದ್ರ: ಕೊಪ್ಪಳ ಗವಿಶ್ರೀಗಳು