October 12, 2026

Hampi times

Kannada News Portal from Vijayanagara

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ಹೊಸಪೇಟೆ : ಕೇಂದ್ರ ಚುನಾವಣಾ ಆಯುಕ್ತ  ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಮತದಾರರ ಪಟ್ಟಿಯ ಎಸ್.ಐ.ಆರ್. ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಿ, ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ. ರವಿಕುಮಾರ್ ಅವರ ನೇತೃತ್ವದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟನಾ ಜಾಥಾ ನಡೆಸಲಾಯಿತು. ಬಳಿಕ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ – ಮುಖಂಡರ ಆರೋಪ:

“ಭಾರತೀಯ ಚುನಾವಣಾ ಆಯೋಗವು ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಸಾಂವಿಧಾನಿಕ ಸಂಸ್ಥೆಯಾಗಿದೆ. ಆದರೆ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಡವಳಿಕೆಗಳು ಚುನಾವಣಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಸಿಯುವಂತೆ ಮಾಡಿವೆ. ಬಿಜೆಪಿ ಅಧಿಕಾರ ಹಿಡಿಯಲು ದೇಶಾದ್ಯಂತ ಕೋಟ್ಯಂತರ ಮತದಾರರ ಹೆಸರನ್ನು ಅಳಿಸಿಹಾಕುವ ಸಂಚು ರೂಪಿಸಿದೆ. ಕರ್ನಾಟಕದ ಜಯನಗರ, ಬಳ್ಳಾರಿ, ಚಿಕ್ಕಮಗಳೂರಿನ ಕೊಪ್ಪ ಸೇರಿದಂತೆ ಹಲವೆಡೆ ನಮೂನೆ-7 ದುರ್ಬಳಕೆ ಮಾಡಿಕೊಂಡು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಮತಗಳನ್ನು ತೆಗೆದುಹಾಕಲು ಯತ್ನಿಸಿರುವುದು ಬಹಿರಂಗವಾಗಿದೆ. ಆದ್ದರಿಂದ ನ್ಯಾಯಸಮ್ಮತ ಚುನಾವಣೆಗಾಗಿ ಜ್ಞಾನೇಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು ಮತ್ತು ಎಸ್.ಐ.ಆರ್. ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು,” ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಕಮಲಾಪುರ ಬ್ಲಾಕ್ ಅಧ್ಯಕ್ಷ ಅಲ್ಲಾಭಕ್ಷಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ. ವೆಂಕಟರಮಣ, ಪ.ಜಾ. ಘಟಕದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ, ನಗರಸಭೆ ಸದಸ್ಯ ಕೆ. ಮಹೇಶ್, ವಕೀಲ ಕೆ. ಮಹೇಶ್, ಮಹಿಳಾ ಘಟಕದ ಅಧ್ಯಕ್ಷೆ ಯೋಗಲಕ್ಷ್ಮಿ, ನಗರಸಭೆ ಮಾಜಿ ಸದಸ್ಯರಾದ ಬಡಾವಲಿ, ಪಲ್ಲೆದ ಸಿದ್ದೇಶ್, ಗಿಂಜಿ ಮಂಜುನಾಥ, ಗುಜ್ಜಲ್ ನಿಂಗಪ್ಪ, ಅನಿತಾ ಎಸ್., ಕಾರಿಗನೂರು ಕೊಟ್ರಸ್ವಾಮಿ, ಸಣ್ಣಮಾರೆಪ್ಪ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಶಿವಕುಮಾರ್, ಮುಖಂಡರಾದ ರಾಜಸಾಬ್, ರಾಘವೇಂದ್ರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Please follow and like us: