ಕೆಲವು ವರ್ಷಗಳ ಹಿಂದೆ ಟೈಟಾನಿಕ್ ಎಂಬ ಚಲನಚಿತ್ರ ಬಿಡುಗಡೆಯಾಗಿ ಚಲನಚಿತ್ರ ರಂಗದ ದಿಕ್ಕನ್ನೇ ಬದಲಾಯಿಸಿತು ನೂರು ವರ್ಷಗಳ ಹಿಂದೆ ಐಷಾರಾಮಿ ಹಡಗೊಂದು ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ ಮುಳುಗಿದ ಘಟನೆಯನ್ನು ಚಲನಚಿತ್ರವನ್ನಾಗಿಸಲಾಗಿತ್ತು. ಮನುಕುಲದ ಇತಿಹಾಸದಲ್ಲಿಯೇ ಅತ್ಯಂತ ದುರಂತ ಅಂತ್ಯ ಕಂಡ ಹಡಗಿನ ಕಥೆ ಇದಾಗಿತ್ತು.
ಚಲನಚಿತ್ರದಲ್ಲಿ ಶ್ರೀಮಂತ ವರ್ಗದ ನಾಯಕಿ ಹಾಗೂ ಅತ್ಯಂತ ಬಡ ಕುಟುಂಬದ ನಾಯಕನ ನಡುವೆ ಕೇವಲ ಒಂದೇ ದಿನದಲ್ಲಿ ಪ್ರೇಮಾಂಕುರವಾಗುತ್ತದೆ. ಆ ಪ್ರೇಮವು ಫಲಿತವಾಗಿ ಹೋಗಿ ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಸಮಯದಲ್ಲಿ
ಕೇವಲ ಒಂದೂವರೆ ದಿನದಲ್ಲಿ ಹಡಗು ಬೃಹತ್ತಾದ ನೀರ್ಗಲ್ಲೊಂದಕ್ಕೆ ಬಡಿಯುತ್ತದೆ. ಪರಿಣಾಮವಾಗಿ ಹಡಗಿನಲ್ಲಿ ಬಿರುಕು ಬಿಡುತ್ತದೆ.
ಸಾವಿರಾರು ಜನರು ಇರುವ ಐಷಾರಾಮಿ ಹಡಗಿನಲ್ಲಿ ಮೊದಲು ಶ್ರೀಮಂತ ವರ್ಗದವರನ್ನು ರಕ್ಷಿಸಲು ಪ್ರಯತ್ನಿಸಿ ಯಶಸ್ವಿಯಾಗುತ್ತಾರೆ. ಆ ಹಡಗಿನ ಕ್ಯಾಪ್ಟನ್ ನಿಂದ ಹಿಡಿದು ಅಲ್ಲಿ ಅಡುಗೆ ಮಾಡುವ ಕುಕ್ ನವರೆಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆಯುವ ವೈವಿಧ್ಯಮಯ ಕಥೆಗಳನ್ನು ನಾವು ಕೇಳಿದ್ದೇವೆ.
ಹಡಗಿನ ಮುಖ್ಯ ಕಪ್ತಾನ ತಾನು ಬಯಸಿದ್ದರೆ ಅಲ್ಲಿಂದ ಸುರಕ್ಷಿತವಾಗಿ ತಪ್ಪಿಸಿಕೊಂಡು ಹೋಗಬಹುದಿತ್ತು ಆದರೆ ಆತ ತ ಅಂತಿಮ ಕ್ಷಣದವರೆಗೆ ತನ್ನ ಕೋಣೆಯಲ್ಲಿಯೇ ಕುಳಿತು ಸಾಕಷ್ಟು ಜನರನ್ನು ರಕ್ಷಿಸಲು ಅವಶ್ಯಕ ಕಾರ್ಯಗಳನ್ನು ಕೈಗೊಳ್ಳುತ್ತಾನೆ. ಹಡಗಿನಲ್ಲಿ ಮುಖ್ಯ ಅಡುಗೆಕಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಕುಕ್ ಒಬ್ಬ ಹಡಗು ಮುಳುಗುವ ಅಂತಿಮ ಕ್ಷಣದವರೆಗೂ ಆಹಾರದ ತುಣುಕುಗಳನ್ನು ಅವರಿಗೆ ನೀಡುವ ಕೆಲಸದಲ್ಲಿ ಮಗ್ನನಾಗುತ್ತಾನೆ.
ಆದರೆ ಹಡಗಿನ ಟಿಕೆಟ್ ಪಡೆದು ಹಡಗನ್ನು ಏರಿ ಅಲ್ಲಿಯ ಎಲ್ಲಾ ಐಷಾರಾಮವನ್ನು ಕಣ್ತುಂಬ ನೋಡಿ ಸವಿದು ಯಾತ್ರೆಯನ್ನು ಕೈಗೊಳ್ಳದೆ ಇರುವ ತಮ್ಮ ದುರದೃಷ್ಟಕ್ಕಾಗಿ ಒಂದು ಕುಟುಂಬ ಬೇಸರಪಟ್ಟುಕೊಂಡು ಕೆಳಗಿಳಿಯುತ್ತದೆ. ಆದರೆ ಮುಂದಿನ ಎರಡೇ ದಿನಗಳಲ್ಲಿ ಅದೇ ಕುಟುಂಬ ತಮ್ಮ ಅದೃಷ್ಟವನ್ನು ನೆನೆದು ಹಿರಿ ಹಿರಿ ಹಿಗ್ಗಿ ಸಂತಸ ಪಡುತ್ತದೆ.
ಘಟನೆಯ ವಿವರ ಹೀಗಿದೆ…. ಓರ್ವ ಮೇಲ್ಮಧ್ಯಮ ವರ್ಗದ ರೈತ ರಜಾ ದಿನಗಳನ್ನು ಕಳೆಯಲು ಹಾಗೂ ಹಡಗಿನ ಐಷಾರಾಮವನ್ನು ಅನುಭವಿಸಲು ಇಚ್ಚಿಸುತ್ತಾನೆ. ಪತ್ನಿ ಮೂವರು ಮಕ್ಕಳ ಸಮೇತ ಎಲ್ಲರಿಗೂ ಮುಂಗಡವಾಗಿ ಟಿಕೆಟ್ ಖರೀದಿಸುತ್ತಾನೆ.
ಪ್ರಯಾಣಕ್ಕೆ ಎಲ್ಲ ತಯಾರಿಗಳು ಭರದಿಂದ ನಡೆಯುತ್ತವೆ, ಆದರೆ ಪ್ರಯಾಣಕ್ಕೆ ಇನ್ನೊಂದೆರಡು ದಿನಗಳು ಇವೆ ಎನ್ನುವಾಗ ಆತನ ಕಿರಿಯ ಮಗನಿಗೆ ಅವರೇ ಸಾಕಿದ ನಾಯಿ ಕಚ್ಚುತ್ತದೆ…. ಮಗುವಿನ ಆರೈಕೆಯಲ್ಲಿ ತಾಯಿ ನಿರತಳಾಗುತ್ತಾಳೆ .
ಮಕ್ಕಳನ್ನು ಕರೆದುಕೊಂಡು ನೀವು ಹಡಗಿನ ಪ್ರಯಾಣದ ಸಂತಸವನ್ನು ಅನುಭವಿಸಿ ಬನ್ನಿ ನಾನು ಮನೆಯಲ್ಲಿಯೇ ಇದ್ದು ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಪತ್ನಿ ಪತಿಗೆ ಸಲಹೆ ನೀಡುತ್ತಾಳೆ. ಮನೆಯಲ್ಲಿ ಮಗನ ಆರೋಗ್ಯ ವಿಷಮಿಸಿರುವಾಗ ಆತನ ಕಾಳಜಿ ಮಾಡುವ ಬದಲು ಹಡಗಿನ ಪ್ರವಾಸ ಕೈಗೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬ ಜಿಜ್ಞಾಸೆ ಉಂಟಾಗಿ ತಂದೆ ಪ್ರವಾಸವನ್ನು ಕ್ಯಾನ್ಸಲ್ ಮಾಡುತ್ತಾನೆ.
ದುಬಾರಿ ಬೆಲೆಯ ಟಿಕೆಟ್ ಗಳನ್ನು ಖರೀದಿಸಿಯೂ ಪ್ರವಾಸಕ್ಕೆ ಹೋಗಲಾಗದ ಕಾರಣಕ್ಕೆ ಅವರು ಬೇಸರ ಪಟ್ಟು ಕೊಳ್ಳುತ್ತಾರೆ. ಆದರೆ ಮುಂದಿನ ಎರಡೇ ದಿನಗಳಲ್ಲಿ ಟೈಟಾನಿಕ್ ನ ದುರಂತ ಅಂತ್ಯದ ಕುರಿತು ಪತ್ರಿಕೆ ಹಾಗೂ ರೇಡಿಯೋಗಳಲ್ಲಿ ವರದಿಯಾಯಿತು. ಕೂಡಲೇ ಆತ ತಮ್ಮ ಪ್ರಯಾಣ ರದ್ದಾಗಲು ಕಾರಣವಾಗಿದ್ದು ತಮ್ಮ ಮನೆಯ ನಾಯಿ.
ಅದು ತಮ್ಮ ಮಗನನ್ನು ಕಚ್ಚಿದ್ದರಿಂದಲೇ ತಾವು ಪ್ರಯಾಣವನ್ನು ರದ್ದುಪಡಿಸಿದ ಕಾರಣ ಇಂದು ತಮ್ಮ ಕುಟುಂಬ ಸುರಕ್ಷಿತವಾಗಿದೆ ಎಂಬ ಭಾವದಿಂದ ತಮ್ಮ ಮನೆಯ ಸಾಕು ನಾಯಿಯನ್ನು ಅಪ್ಪಿ ಮುದ್ದಾಡಿ ಆತ ಕೃತಜ್ಞತೆ ವ್ಯಕ್ತಪಡಿಸುತ್ತಾನೆ. ಇದನ್ನೇ ಅಲ್ಲವೇ ಸ್ನೇಹಿತರೆ ನಾವು ಅದೃಷ್ಟ ಎನ್ನುವುದು… ನಮ್ಮ ಕೈ ಮೀರಿದ ಕೆಲ ಸಂಗತಿಗಳು ನಮ್ಮ ಬದುಕಿನಲ್ಲಿ ನಮಗರಿವಿಲ್ಲದೆ ಘಟಿಸುತ್ತವೆ ನಮಗೆ ಅನುಕೂಲಕರವಾದ ಈ ಘಟನೆಗಳನ್ನು ನಾವು ಅದೃಷ್ಟ ಎಂದು ಕರೆದರೆ ಅನನುಕೂಲವಾದ ಘಟನೆಗಳನ್ನು ಅವಕಾಶಗಳನ್ನು ದುರಾದೃಷ್ಟ ಎಂದು ಕರೆಯುತ್ತೇವೆ.
ಆದರೆ ಒಂದು ವಿಷಯವಂತೂ ಅತ್ಯಂತ ಸ್ಪಷ್ಟ… ನಾವು ಮಾಡಿರುವ ಕರ್ಮಗಳ ಫಲವೇ ನಮಗೆ ದೊರೆಯುತ್ತದೆ. ಒಳ್ಳೆಯ ಕರ್ಮಗಳ ಫಲ ಒಳ್ಳೆಯದೇ ಆಗಿದ್ದರೆ ಕೆಟ್ಟ ಕರ್ಮಗಳ ಫಲ ಅಷ್ಟೇನೂ ಚೆನ್ನಾಗಿ ಇರುವುದಿಲ್ಲ. ಎಷ್ಟೋ ಬಾರಿ ಕೆಲವರು ತಮ್ಮ ಬದುಕನ್ನು ಸುಧಾರಿಸಿಕೊಳ್ಳುವ ಒಂದೇ ಒಂದು ಪ್ರಯತ್ನವನ್ನೂ ಮಾಡದೆ, ಕೇವಲ ಒಂದೆರಡು ವಿಷಯಗಳಲ್ಲಿ ನಿರಾಸೆ ಹೊಂದಿದಾಗ ಬದುಕಿನಲ್ಲಿ ನಿರಾಸೆ ಹೊಂದಿ ತಮ್ಮ ಅದೃಷ್ಟವನ್ನು ಹಳಿಯುತ್ತಾರೆ ಮತ್ತೆ ಕೆಲವರು ನಿರಂತರ ಪ್ರಯತ್ನವನ್ನು ಜಾರಿಯಲ್ಲಿಟ್ಟು ತಮ್ಮ ಅದೃಷ್ಟದ ಬಾಗಿಲನ್ನು ತಾವೇ ತೆಗೆಯುತ್ತಾರೆ…ಅಂತಹವರಿಗೆ ಯಶಸ್ಸು ಖಂಡಿತ ಸಾಧ್ಯ.
ಏನಂತೀರಾ ಸ್ನೇಹಿತರೇ ??

Please follow and like us:


More Stories
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡಿಗರ ಏಕೀಕರಣ ಹೋರಾಟ
ಕೆರೆಯ ಪುನರುಜ್ಜೀವನಕ್ಕಾಗಿ ಶ್ರಮಿಸಿದ ಅಂಚೆ ಕೊಟ್ರೇಶ್
ದುರ್ಗಾಷ್ಟಮಿ….ಒಂದು ಕಥೆ