
ಹೊಸಪೇಟೆ: ಕಾರಾಗೃಹದ ಬಂದಿಗಳಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಅವರಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸ ಬೆಳೆಸಲು ಕ್ರೀಡೆಗಳು ಅತ್ಯಂತ ಸಹಕಾರಿಯಾಗಿವೆ ಎಂದು ಜಿಲ್ಲಾ ವಯಸ್ಕರ ಕಾರ್ಯಕ್ರಮ ಸಹಾಯಕ ಮಧುಸೂದನ್ ತಿಳಿಸಿದರು.
ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರ ನಿರ್ದೇಶನದಂತೆ, ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಸೋಮವಾರ ನಗರದ ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳ ಮನೋರಂಜನೆಗಾಗಿ ಆಯೋಜಿಸಲಾಗಿದ್ದ ಒಳಾಂಗಣ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು. ತಪ್ಪನ್ನು ತಿದ್ದಿಕೊಂಡು ಸಮಾಜದ ಮುಖ್ಯವಾಹಿನಿಗೆ ಮರಳಲು ಬಂದಿಗಳಿಗೆ ಕ್ರೀಡಾ ಮನೋಭಾವ ಹಾಗೂ ಮಾನಸಿಕ ನೆಮ್ಮದಿ ಅಗತ್ಯ. ಇಂತಹ ಹಬ್ಬ-ಹರಿದಿನಗಳಲ್ಲಿ ಕ್ರೀಡೆಗಳನ್ನು ಹಮ್ಮಿಕೊಳ್ಳುವುದರಿಂದ ಅವರಲ್ಲಿ ಹೊಸ ಚೈತನ್ಯ ಹಾಗೂ ಸೌಹಾರ್ದತೆ ಮೂಡುತ್ತದೆ ಎಂದು ತಿಳಿಸಿದರು.
ಕಾರಾಗೃಹದ ಆವರಣದಲ್ಲಿ ಸ್ಥಳಾವಕಾಶದ ಕೊರತೆಯಿದ್ದ ಕಾರಣ ಬಂದಿಗಳಿಗೆ ಚೆಸ್, ಕೇರಂ ಹಾಗೂ ಮ್ಯೂಸಿಕಲ್ ಚೇರ್‌ನಂತಹ ಒಳಾಂಗಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.


ಕಾರಾಗೃಹ ಅಧೀಕ್ಷಕ ಎಫ್.ಜಿ. ಬಾರಿಕೇರ್ ಅವರ ಮಾರ್ಗದರ್ಶನದಲ್ಲಿ ನಡೆದ ಸ್ಪರ್ಧೆಗಳನ್ನು ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಜಯಕುಮಾರಿ, ದೈಹಿಕ ಶಿಕ್ಷಕರಾದ ಶ್ರೀ ಚೈತನ್ಯ ಶಾಲೆಯ ಗೋಪಿ, ಟಿ.ಬಿ. ಡ್ಯಾಂ ಚಿನ್ಮಯಿ ಶಾಲೆಯ ಮಲ್ಲಿಕಾರ್ಜುನ ಹಾಗೂ ಕಮಲಾಪುರ ಮೌಲಾನಾ ಆಜಾದ್ ಶಾಲೆಯ ಮನೋಜ್ ನಡೆಸಿಕೊಟ್ಟರು.
ವಿವಿಧ ಆಟಗಳಲ್ಲಿ ವಿಜೇತರಾದ ಬಂದಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಜೈಲರ್‌ಗಳಾದ ಎಸ್.ಎಸ್. ಲಚ್ಯಾಣ, ಕೆ. ರಿಯಾಜ್, ಭಾರತೀಯ ಸೇನೆಯ ಸೈನಿಕ ಭೀಮೇಶ್ ಹಾಗೂ ಕಾರಾಗೃಹದ ಸಿಬ್ಬಂದಿ ವರ್ಗದವರು ಹಾಜರಿದ್ದರು.


More Stories
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ಶಕ್ತಿಯ ಕೇಂದ್ರ: ಕೊಪ್ಪಳ ಗವಿಶ್ರೀಗಳು