October 11, 2026

Hampi times

Kannada News Portal from Vijayanagara

ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ಶಕ್ತಿಯ ಕೇಂದ್ರ: ಕೊಪ್ಪಳ ಗವಿಶ್ರೀಗಳು

  • ಚಾಮುಂಡಿ ಬೆಟ್ಟದಲ್ಲಿ ನಂದಿಧ್ವಜ ಹಾಗೂ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ

  • ಸಿಎಂ ಡಿ.ಕೆ. ಶಿವಕುಮಾರ್‌ಗೆ ಮೈಸೂರು ಪೇಟ ತೊಡಿಸಿ ಹರಸಿದ ಶ್ರೀಗಳು

ಮೈಸೂರು:  ದಸರಾ ಮಹೋತ್ಸವವು ಭೂತ, ಭವಿಷ್ಯ ಮತ್ತು ವರ್ತಮಾನದ ತ್ರಿವೇಣಿ ಸಂಗಮವಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರವು ‘ಟವರ್ ಆಫ್ ಪವರ್’ (ಶಕ್ತಿಯ ಕೇಂದ್ರ) ಇದ್ದಂತೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಚಾಮುಂಡಿ ಬೆಟ್ಟದಲ್ಲಿ ನವರಾತ್ರಿಯ ಮೊದಲ ದಿನ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ತಾಯಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾವನ್ನು ಶ್ರೀಗಳು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀಗಳು, “ಆಳುವವರು ಉನ್ನತ ಸ್ಥಾನದಲ್ಲಿದ್ದರೂ ಕೆಳಗಿರುವ ಸಾಮಾನ್ಯ ಜನರ ಅಳಲನ್ನು ಆಲಿಸುವುದೇ ನಿಜವಾದ ಧರ್ಮ” ಎಂದು ಆಡಳಿತಕ್ಕೆ ಮಾರ್ಗದರ್ಶನ ನೀಡಿದರು. 300ಕ್ಕೂ ಹೆಚ್ಚು ಸ್ವಾಮೀಜಿಗಳು ಹಾಗೂ ಸರ್ವಧರ್ಮ ಗುರುಗಳು ಭಾಗವಹಿಸಿದ್ದ ಈ ಸಮಾರಂಭದಲ್ಲಿ, ಗವಿಶ್ರೀಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮೈಸೂರು ಪೇಟ ತೊಡಿಸಿ ಆಶೀರ್ವದಿಸಿದರು.

ಶ್ರೀಗಳ ಸಂದೇಶಕ್ಕೆ ದನಿಗೂಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜನರ ಮನೆಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಲು ಪ್ರಜಾಸೇವೆ ಇಲಾಖೆ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು. “ಹಬ್ಬಗಳಿರುವಲ್ಲಿ ಸಂಸ್ಕೃತಿ, ಸಂಸ್ಕೃತಿ ಇರುವಲ್ಲಿ ಸರಸ್ವತಿ, ಸರಸ್ವತಿ ಇರುವಲ್ಲಿ ಕಲೆ ಹಾಗೂ ಕಲೆ ಇರುವಲ್ಲಿ ಬೆಲೆ ನೆಲೆಸುತ್ತದೆ; ಇದಕ್ಕೆ ದಸರಾವೇ ಸಾಕ್ಷಿ” ಎಂದು ಬಣ್ಣಿಸಿದರು. 1902ರ ಶಿವನಸಮುದ್ರ ಜಲವಿದ್ಯುತ್ ಇತಿಹಾಸ ಹಾಗೂ ಮೈಸೂರಿನ ವಿದ್ವತ್ ಪರಂಪರೆಯನ್ನು ಸ್ಮರಿಸಿದ ಅವರು, ಮೈಸೂರು ರೇಷ್ಮೆ, ಶ್ರೀಗಂಧ ಹಾಗೂ ಕಲೆಗಳಿಗೆ ಜಾಗತಿಕ ಮನ್ನಣೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ವಿದುಷಿ ಪ್ರೊ. ನಾಗಮಣಿ ಶ್ರೀನಾಥ್ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಅಂಬಾವಿಲಾಸ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಪ್ಪಣ್ಣ ಪಾರ್ಕ್‌ನ ಪುಷ್ಪ ವಿಧಾನಸೌಧ, ದೇವರಾಜ ಅರಸು ಕ್ರೀಡಾಂಗಣದ ಸಾಂಪ್ರದಾಯಿಕ ಕುಸ್ತಿ ಕಣ ಹಾಗೂ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ ದೊರೆಯಿತು. ಸಶಸ್ತ್ರ ಪಡೆಗಳ ಬ್ಯಾಂಡ್ ವಾದನ ಮುಂದಿನ ವರ್ಷದಿಂದ ಅರಮನೆ ಆವರಣದಲ್ಲೇ ನಡೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Please follow and like us:

 

 

Translate »